ಹತ್ತು ಸಾವಿರಕ್ಕೂ ಹೆಚ್ಚು ಸಂಖ್ಯೆಯ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಮುಂದಿನ ವರ್ಷಗಳಲ್ಲಿ ಇನ್ನೂ ಹತ್ತಿಪ್ಪತ್ತು ಸಾವಿರ ಶಾಲೆಗಳನ್ನು ಮುಚ್ಚಬೇಕೆಂದು ಸರ್ಕಾರ ನಿರ್ಧರಿಸಬಹುದು. ಸರ್ಕಾರಕ್ಕೆ ಇದು ಅಂತಹ ಆತಂಕದ ವಿಷಯವಾಗಿ ಕಂಡುಬರುತ್ತಿಲ್ಲ. ಮಕ್ಕಳೇ ಬರದಿದ್ದ ಮೇಲೆ ಅಂತಹ ಶಾಲೆಗಳನ್ನು ನಡೆಸುವುದಾದರೂ ಹೇಗೆ; ಆದ್ದರಿಂದ ಆ ಶಾಲೆಗಳನ್ನು ಮುಚ್ಚಲು ನಿರ್ಧರಿಸಿದ್ದೇವೆ ಎಂದು ವಿವರಣೆ ನೀಡಿ ಇಲಾಖೆ ಕೈ ತೊಳೆದುಕೊಳ್ಳುತ್ತದೆ. ಮುಂದೊಂದುದಿನ ಸರ್ಕಾರಿ ಶಾಲೆಗಳೇ ಇಲ್ಲವಾಗಬಹುದು.

ಈ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳು ಉಳಿಯಬೇಕೆಂದು ದನಿ ಎತ್ತುತ್ತಿರುವ ಚಳವಳಿಗಾರರು, ಚಿಂತಕರು ಸರ್ಕಾರಿ ಶಾಲೆಗಳೆಲ್ಲವೂ ಕನ್ನಡ ಶಾಲೆಗಳಾಗಿರುವುದರಿಂದ ಸರ್ಕಾರಿ ಶಾಲೆಗಳನ್ನು ಮುಚ್ಚಬಾರದು, ಈ ಶಾಲೆಗಳು ಉಳಿದರೆ ಕನ್ನಡ ಉಳಿಯುತ್ತದೆ ಎಂಬ ಕನ್ನಡ ಭಾಷೆಯ ಪರವಾದ ವಾದವನ್ನು ಮುಂದಿಡುತ್ತಿದ್ದಾರೆ. ಭಾಷೆಯ ಬಗ್ಗೆ ತಲೆಕೆಡಿಸಿಕೊಳ್ಳದ ನಮ್ಮ ಬಹುಸಂಖ್ಯಾತ ಜನ ಈ ವಾದವನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಆದರೆ ಈ ವಾದ ವಿವಾದಗಳಲ್ಲಿ ಭಾಷೆ ಮತ್ತು ಕಲಿಕೆಗೆ ಇರುವ ಬಿಡಿಸಲಾರದ ಸಂಬಂಧವನ್ನು ಗುರುತಿಸಲಾಗಿಲ್ಲ.

ಇವು ಹೀಗಿವೆ:
* ಮಗು ಮೈಗೂಡಿಸಿಕೊಂಡಿರುವ ಮೊದಲ ಭಾಷೆಗೂ (ಮಾತೃಭಾಷೆ) ಮಗುವಿನ ಕಲಿಕೆಗೂ ಇರುವ ಸಂಬಂಧ.
* ಮಗುವಿನ ಮೊದಲ ಹಂತದ ಗ್ರಹಿಕೆ- ಕಲಿಕೆ ಮತ್ತು ತದನಂತರದ ಶೈಕ್ಷಣಿಕ ಯಶಸ್ಸಿಗೂ ಇರುವ ಸಂಬಂಧ.
* ನಮ್ಮ ಗ್ರಾಮೀಣ ಪ್ರದೇಶಗಳ ಪರಿಸರ ಭಾಷೆ, ಇಂಗ್ಲಿಷ್ ಕಲಿಕೆಗೆ ಪೂರಕವಾಗಿದೆಯೇ ಎಂಬ ಪ್ರಶ್ನೆ.
* ಬೆರಳೆಣಿಕೆಯ ದೊಡ್ಡ ನಗರಗಳನ್ನು ಹೊರತುಪಡಿಸಿ ಉಳಿದ ಪಟ್ಟಣಗಳಲ್ಲಿ, ಗ್ರಾಮಾಂತರ ಪ್ರದೇಶಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ತರಗತಿಗಳನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಬೋಧಿಸಬಲ್ಲ ಅಧ್ಯಾಪಕರು ಇದ್ದಾರೆಯೇ ಎಂಬ ಪ್ರಶ್ನೆ.

ಮಾತು ಬಾರದಿದ್ದರೂ ಮಗು ಶೈಶವದಲ್ಲಿ ತನ್ನ ಸುತ್ತಮುತ್ತಣ ಪರಿಸರವನ್ನು ಗ್ರಹಿಸುತ್ತದೆ. ನಿಧಾನವಾಗಿ ಮಗು ತನ್ನ ಪರಿಸರದಿಂದ ಕಲಿತ ಮೊದಲ ಭಾಷೆಯ ಮೂಲಕ ಈ ಗ್ರಹಿಕೆಯನ್ನು ವ್ಯಕ್ತಪಡಿಸುವುದನ್ನೂ ಕಲಿಯುತ್ತದೆ. ಇದೇ ಭಾಷೆ ಮುಂದಿನ ಹಂತಗಳ ಗ್ರಹಿಕೆ ಮತ್ತು ಕಲಿಕೆಯ ಮೇಲೆ ಪ್ರಭಾವ ಬೀರುತ್ತದೆ. ಹೀಗೆ ಮಗುವಿನ ಮೆದುಳಿನಲ್ಲಿ ಅಚ್ಚಾಗುವ ಅನುಭವದ ಮುದ್ರೆಗಳು ಮಗು ಮೊದಲು ಮೈಗೂಡಿಸಿಕೊಂಡ ಭಾಷೆಯೊಡನೆ (ಮಾತೃಭಾಷೆ) ತಳಕು ಹಾಕಿಕೊಂಡು ಇದೇ ಭಾಷೆಯ ಮೂಲಕ ಗ್ರಹಿಕೆಯ ಒಂದು ಕ್ರಮವನ್ನು ಮೆದುಳಿನಲ್ಲಿ ರೂಪಿಸಿಕೊಳ್ಳುತ್ತದೆ. ಆದ್ದರಿಂದ ಮುಂದಿನ ಕಲಿಕಾ ಸಂದರ್ಭಗಳಲ್ಲಿ ಸುಸಂಬದ್ಧವಾದ ಗ್ರಹಿಕೆ ಉಂಟಾಗಬೇಕಾದರೆ ಮಗು ತಾನು ಕಲಿತ ಮೊದಲ ಭಾಷೆಯನ್ನೇ ಬಳಸಿದರೆ ಒಳಿತು.

ಇವಿಷ್ಟು ಭಾಷೆ- ಗ್ರಹಿಕೆ- ಕಲಿಕೆಗೆ ಸಂಬಂಧಪಟ್ಟ ವಿಷಯಗಳು. ಈ ಸಂಬಂಧವನ್ನು ಹೀಗೆ ಸರಳವಾಗಿ ವಿವರಿಸಿರುವುದು ನಿಜವಾದರೂ ಇದೊಂದು ಅತ್ಯಂತ ಸಂಕೀರ್ಣವಾದ ವಿಷಯ. ಗ್ರಾಮೀಣ ಪೋಷಕರಿಗೆ ಅರ್ಥವಾಗುವುದು ಮಗುವಿನ ಅಂಕಪಟ್ಟಿ ಮಾತ್ರ; ಹೆಚ್ಚೆಂದರೆ ಶಾಲಾಕಲಿಕೆಯಿಂದಾಗಿ ತನ್ನ ಮಗುವಿಗೆ ದೊರೆಯುವ ಸಾಮಾಜಿಕ ಮನ್ನಣೆಯ ಮೂಲಕ ಈ ಪೋಷಕರು ತಮ್ಮ ಮಕ್ಕಳ ಕಲಿಕಾ ಪ್ರಗತಿಯನ್ನು ಅಂದಾಜು ಮಾಡುತ್ತಾರೆ. ಈ ಪೋಷಕರು ಇರಲಿ, ಸರ್ಕಾರಿ ಶಿಕ್ಷಣ ವ್ಯವಸ್ಥೆಯಲ್ಲಿರುವ ಅಧಿಕಾರಿ ವರ್ಗದವರಿಗೂ ಭಾಷೆ ಮತ್ತು ಗ್ರಹಿಕೆಯ ನಡುವೆ ಇರುವ ಅಂತರ್ ಸಂಬಂಧದ ಸಂಕೀರ್ಣತೆಯ ಅರಿವು ಇರಲಾರದು. ಭಾಷೆಯ ಕುರಿತಾಗಿ ನಿರ್ಣಾಯಕ ತೀರ್ಪು ಕೊಡುವ ನ್ಯಾಯಾಲಯಕ್ಕಂತೂ ಈ ವಿಷಯಗಳ ಹಿನ್ನೆಲೆಯೂ ಇರುವುದಿಲ್ಲ; ತಮ್ಮ ತೀರ್ಪಿನ ದೀರ್ಘಗಾಮಿ ಪರಿಣಾಮವೂ ತಿಳಿಯುವುದಿಲ್ಲ.

ನಮ್ಮ ಗ್ರಾಮೀಣ ಪೋಷಕರು ಸಂಕೀರ್ಣವಾದ ಈ ಶೈಕ್ಷಣಿಕ ವಿಷಯಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಅವರ ಶಾಲಾ ಆಯ್ಕೆಯಲ್ಲಿ ಈ ಅಂಶಗಳ ಪಾತ್ರವೇ ಇಲ್ಲ. ಆದರೂ ನಮ್ಮ ಪೋಷಕರು ಉಚಿತ ಸರ್ಕಾರಿ ಶಾಲೆಗಳನ್ನು ಬಿಟ್ಟು ತಗಡಿನ ಶೆಡ್‌ಗಳಲ್ಲಿ ನಡೆಯುವ ಈ ದುಬಾರಿ ಖಾಸಗಿ ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಲು ಕಾರಣವೇನು? ಖಾಸಗಿ ಶಾಲೆಗಳು ಎಂದರೆ ಭವ್ಯ ಕಟ್ಟಡಗಳಲ್ಲಿ ನಡೆಯವ ಶಾಲೆಗಳಲ್ಲ! ಇವು ತಗಡಿನ ಶೆಡ್‌ಗಳಲ್ಲಿ ನಡೆಯುವ ಶಾಲೆಗಳು. ಸರ್ಕಾರಿ ಶಾಲೆಗಳಲ್ಲಿ ಕಾಣದ ಯಾವ ಗುಣಾತ್ಮಕ ಅಂಶ ಅವರಿಗೆ ಈ ಕಳಪೆ ಖಾಸಗಿ ಶಾಲೆಗಳಲ್ಲಿ ಕಂಡುಬರುತ್ತಿದೆ, ಈ ಪೋಷಕರ ಕಲ್ಪನೆಯ ‘ಒಳ್ಳೆಯ ಶಿಕ್ಷಣ’ ಯಾವುದು? ಹೀಗೆ ಹಲವಾರು ಪ್ರಶ್ನೆಗಳು ಎದುರಾದವು.

ಇದನ್ನು ಸರಿಯಾಗಿ ಅರಿಯಲು ನಾವು ನಮ್ಮ ಗಡಿಜಿಲ್ಲೆ ಚಾಮರಾಜನಗರದ ಸುತ್ತಮುತ್ತಲ ಗ್ರಾಮಗಳಲ್ಲಿ ಪೋಷಕರನ್ನು ಸಂದರ್ಶಿಸಿ ಅವರ ಅನಿಸಿಕೆಗಳೇನು? ಅವರ ಕಾಳಜಿಗಳೇನು? ಸರ್ಕಾರಿ ಶಾಲೆಗಳ ಮೇಲೆ ಅಸಮಾಧಾನ ಏಕೆ? ಖಾಸಗಿ ಶಾಲೆಗಳಲ್ಲಿ ಅವರು ಕಾಣುತ್ತಿರುವ ಗುಣಾತ್ಮಕ ಅಂಶಗಳಾವುವು ಎಂಬ ವಿಷಯ ಮುಂದಿಟ್ಟುಕೊಂಡು ಅಧ್ಯಯನ ನಡೆಸಿದೆವು.

ಸರ್ಕಾರಿ ಶಾಲೆಗಳ ವೈಫಲ್ಯಕ್ಕೆ ಕಾರಣ ಹುಡುಕುವ ಅನೇಕ ತಜ್ಞರು ಈ ಶಾಲೆಗಳ ಶೌಚಾಲಯ, ಆಟದ ಮೈದಾನ, ಶಿಥಿಲವಾದ ಕಟ್ಟಡ ಇತ್ಯಾದಿಯಾಗಿ ಮೂಲ ಸೌಕರ್ಯ ಕೊರತೆಗಳನ್ನು ಮಾತ್ರ ಪಟ್ಟಿ ಮಾಡುತ್ತಿದ್ದಾರೆ. ಆದರೆ ನಮ್ಮ ಸರ್ಕಾರಿ ಶಾಲೆಗಳು ಗ್ರಾಮೀಣ ಪೋಷಕರ ನಂಬಿಕೆಯನ್ನು ಏಕೆ ಕಳೆದುಕೊಂಡಿವೆ, ಅದಕ್ಕೆ ನಿಜವಾದ ಕಾರಣ ಏನು ಎಂಬುದನ್ನು ಹುಡುಕಿ ತೆಗೆಯುತ್ತಿಲ್ಲ. ಖಾಸಗಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಶಿಕ್ಷಣ ಕೊಡುತ್ತಿರುವುದರಿಂದ ಪೋಷಕರು ಇಂಗ್ಲಿಷ್‌ಗೆ ಮುಗಿಬಿದ್ದಿದ್ದಾರೆ ಎಂಬ ಒಂದು ಊಹೆಯನ್ನು ಹರಿಯಬಿಟ್ಟಿದ್ದಾರೆ. ಆದರೆ ನಿಜವಾದ ಕಾರಣ ಬೇರೆಯೇ ಇದೆ.

ತಗಡಿನ ಶೆಡ್‌ಗಳಲ್ಲಿ ನಡೆಯುತ್ತಿರುವ ಈ ಯಾವ ಖಾಸಗಿ ಶಾಲೆಗೂ ಇಂಗ್ಲಿಷ್ ಮಾಧ್ಯಮಕ್ಕೆ ಅಧಿಕೃತ ಅನುಮತಿ ಇಲ್ಲ. ವರ್ಷಕ್ಕೆ ಹದಿಮೂರು– ಹದಿನಾಲ್ಕು ಸಾವಿರ ರೂಪಾಯಿ ಶುಲ್ಕ ವಸೂಲಿ ಮಾಡುವ ಈ ಶಾಲೆಗಳು ಕನ್ನಡ ಮಾಧ್ಯಮ ಶಾಲೆಗಳು. ಹೆಸರು ಮಾತ್ರ ‘ಇಂಗ್ಲಿಷ್ ಮೀಡಿಯಂ ಶಾಲೆ’. ಇದು ಪೋಷಕರಿಗೂ ತಿಳಿದಿದೆ. ಅಲ್ಲದೆ ಈ ಶಾಲೆಗಳ ಅಧ್ಯಾಪಕರಿಗೆ ಕನಿಷ್ಠ ಮಟ್ಟದ ಇಂಗ್ಲಿಷ್ ಕೂಡ ಗೊತ್ತಿಲ್ಲ. ಈ ಅಧ್ಯಾಪಕರಿಗೆ ತರಬೇತಿಯೂ ಇಲ್ಲ, ಅವರ ವಿದ್ಯಾರ್ಹತೆ ಸರ್ಕಾರಿ ಶಾಲೆಯ ಅಧ್ಯಾಪಕರ ವಿದ್ಯಾರ್ಹತೆಗಿಂತ ಕೆಳಮಟ್ಟದ್ದಾಗಿದೆ.

ನಿಜಸ್ಥಿತಿ ಇದಾಗಿದ್ದರೂ ನಮ್ಮ ಪೋಷಕರು ಈ ಕಳಪೆ ಕಾನ್ವೆಂಟ್ ಮಾದರಿಯ ಖಾಸಗಿ ಶಾಲೆಗಳನ್ನು ಏಕೆ ಆಯ್ಕೆ ಮಾಡಿಕೊಂಡಿದ್ದಾರೆ? ಸರಳವಾಗಿ ಹೇಳುವುದಾದರೆ ಇದು ನಂಬಿಕೆ ಅಪನಂಬಿಕೆಯ ಪ್ರಶ್ನೆಯಾಗಿದೆ. ಅವರಿಗೆ ಸರ್ಕಾರಿ ಶಾಲೆಗಳ ಮೇಲೆ, ಅದರ ಕಾರ್ಯವೈಖರಿಯ ಮೇಲೆ ತೀವ್ರ ಅಪನಂಬಿಕೆ ಬಂದಿದೆ. ಮಧ್ಯಾಹ್ನದ ಊಟ, ಮೂಲ ಸೌಕರ್ಯಗಳೆಲ್ಲವೂ ಇದ್ದರೂ ಈ ಸರ್ಕಾರಿ ವ್ಯವಸ್ಥೆಯಲ್ಲಿ ವಾರಸುದಾರನೊಬ್ಬನ ಕೊರತೆ ಎದ್ದು ಕಾಣುತ್ತದೆ. ತರಗತಿಗೊಬ್ಬನಂತೆ ಅಧ್ಯಾಪಕರೂ ಇಲ್ಲ. ಹಾಗಾಗಿ ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ಗಮನಿಸುವವರು ಯಾರೂ ಇಲ್ಲ, ಇಂತಹ ಶಾಲೆಗೆ ಮಕ್ಕಳನ್ನು ಹಾಕಿದರೆ ಅವರು ಓದು ಕಲಿಯದೆ ತಮ್ಮಂತೆಯೇ ಬವಣೆಯ ಜೀವನ ನಡೆಸಬೇಕಾದೀತು ಎಂಬುದು ಈ ಪೋಷಕರ ಅಳಲು. ‘ಶಾಲೆಯಲ್ಲಿ ಅಧ್ಯಾಪಕರಿದ್ದರೂ ಪಾಠ ಮಾಡುವುದಿಲ್ಲ’ ಎಂಬುದು ಅವರ ಮುಖ್ಯ ಅಪಾದನೆ. ‘ನನ್ನ ಮಗನಿಗೆ ಓದಲು ಬರುವುದಿಲ್ಲ, ಗಣಿತ ಬರುವುದಿಲ್ಲ’ ಎಂದು ಅಧ್ಯಾಪಕನನ್ನು ಕೇಳಿದರೆ ‘ಅದಕ್ಕೆ ನಾನೇನು ಮಾಡಲಿ’ ಎಂದು ಉಡಾಫೆ ಉತ್ತರ ಕೊಡುವ ಮುಖ್ಯೋಪಾಧ್ಯಾಯರು, ಅಧ್ಯಾಪಕರು ಪೋಷಕರ ಅಪನಂಬಿಕೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಒಳ್ಳೆ ಅಧ್ಯಾಪಕರಿಲ್ಲ ಎಂದಲ್ಲ; ಆದರೆ ಅಂತಹ ಶಾಲೆಗಳು ಅಪರೂಪ ಎನ್ನುವುದು ಪೋಷಕರ ಅಭಿಪ್ರಾಯ.

ಇದಕ್ಕೆ ಪ್ರತಿಯಾಗಿ ಖಾಸಗಿ ಶಾಲೆಗಳವರು ಮಕ್ಕಳ ಶೈಕ್ಷಣಿಕ ವಿಚಾರವಾಗಿ ಆಗಿಂದಾಗ್ಗೆ ಪೋಷಕರನ್ನು ಶಾಲೆಗೆ ಕರೆಸಿ ಸಲಹೆಗಳನ್ನು ನೀಡುತ್ತಾರೆ. ಮನೆಯಲ್ಲಿ ಚೆನ್ನಾಗಿ ಓದಿಸಿ ಎಂದು ಒತ್ತಾಯ ಮಾಡುತ್ತಾರೆ; ಅಥವಾ ಡೈರಿಯಲ್ಲಿ ಮಗುವಿನ ಕಲಿಕೆಯ ಕುರಿತಾಗಿ ಬರೆದು ಕಳುಹಿಸುತ್ತಾರೆ ಅಥವಾ ಎಸ್.ಎಂ.ಎಸ್ ಕಳುಹಿಸುತ್ತಾರೆ. ಮಕ್ಕಳ ನೋಟ್ಸ್‌ಗಳನ್ನು ಕೆಂಪುಶಾಯಿಯಲ್ಲಿ ತಿದ್ದಿ ಪೋಷಕರಿಗೆ ತೋರಿಸಿ ಅವರ ಸಹಿ ಪಡೆದು ಬರುವಂತೆ ಮಕ್ಕಳಿಗೆ ಹೇಳುತ್ತಾರೆ. ಒಟ್ಟಾರೆಯಾಗಿ ಪೋಷಕರಿಗೆ ಶಾಲೆ ತನ್ನ ಮಗುವಿನ ಶೈಕ್ಷಣಿಕ ಪ್ರಗತಿಯ ಬಗ್ಗೆ ಅಪಾರ ಕಾಳಜಿ ಹೊಂದಿದೆ ಎಂಬ ನಂಬಿಕೆ ಹುಟ್ಟುವಂತೆ ಮಾಡುತ್ತಾರೆ. ಜೊತೆಗೆ ಬಹಳಷ್ಟು ಖಾಸಗಿ ಶಾಲೆಗಳಿಗೆ ವಾಹನ ವ್ಯವಸ್ಥೆ ಇದೆ. ಹಾಗಾಗಿ ಶಾಲೆಗಳು ಎಂಟು – ಹತ್ತು ಕಿಲೋಮೀಟರ್ ದೂರವಿದ್ದರೂ, ವಾಹನ ಶುಲ್ಕ ತೆತ್ತು ಈ ಶಾಲೆಗೆ ಕಳುಹಿಸುತ್ತಾರೆ. ಖಾಸಗಿ ಶಾಲೆಗೆ ಕಳುಹಿಸುವುದು ಹೆಮ್ಮೆಯ, ಕುಟುಂಬ ಗೌರವದ ಪ್ರಶ್ನೆಯಾಗಿ ಕೂಲಿಕಾರ್ಮಿಕರಾಗಿರುವ ಕೆಲವು ಪೋಷಕರು ಸಾಲ ಮಾಡಿ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ನಾವು ಪೋಷಕರನ್ನು ಸಂದರ್ಶಿಸಿ ‘ಒಂದುವೇಳೆ ಸರ್ಕಾರಿ ಶಾಲೆಯ ಅಧ್ಯಾಪಕರೂ ನಿಮ್ಮ ಮಕ್ಕಳ ಶಿಕ್ಷಣಕ್ಕೆ ಖಾಸಗಿ ಶಾಲೆಗಳಂತೆ ಹೆಚ್ಚು ಗಮನ ವಹಿಸಿ ಪಾಠ ಹೇಳಿಕೊಟ್ಟರೆ ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುತ್ತೀರ’ ಎಂದು ಕೇಳಿದೆವು. ಬಹಳಷ್ಟು ಪೋಷಕರು ‘ಖಂಡಿತಾ ಸೇರಿಸುತ್ತೇವೆ. ಖಾಸಗಿ ಶಾಲೆಗಳ ದುಬಾರಿ ಶುಲ್ಕ ನಮಗೆ ಭಾರವಾಗಿದೆ’ ಎಂದು ಉತ್ತರಿಸಿದರು. ಅಷ್ಟೇ ಅಲ್ಲ, ಸರ್ಕಾರಿ ಶಾಲೆಗಳ ಪರವಾಗಿ ನಾವು ಪ್ರಚಾರ ಮಾಡುತ್ತೇವೆ ಎಂದೂ ಹೇಳಿದರು.

ಕೆಲವು ಚಮತ್ಕಾರಗಳ ಮೂಲಕ ಈ ಖಾಸಗಿ ಶಾಲೆಗಳು ಪೋಷಕರನ್ನು ಆಕರ್ಷಿಸಿದರೂ ಅಲ್ಲಿ ಮಕ್ಕಳಿಗೆ ಸಿಗುತ್ತಿರುವುದು ಅತ್ಯಂತ ಕಳಪೆ ಮಟ್ಟದ ಶಿಕ್ಷಣ. ಮಕ್ಕಳ ಮೇಲೆ ಅತಿಯಾದ ಒತ್ತಡ ಹೇರುವ, ಶಿಕ್ಷೆ ನೀಡುವ ಈ ಕಾನ್ವೆಂಟ್ ಮಾದರಿ ಖಾಸಗಿ ಶಾಲೆಗಳು ಮುಗ್ಧ ಮಕ್ಕಳನ್ನು ಹಿಂಸಿಸುವ ಕೇಂದ್ರಗಳಾಗಿವೆ. ಜೊತೆಗೆ ನಮ್ಮ ಸಂವಿಧಾನದ ಸಮಾನ ಶಿಕ್ಷಣದ ಆಶಯಕ್ಕೆ ವಿರುದ್ಧವಾಗಿವೆ. ಇದು ಸಮಸ್ಯೆಯ ಒಂದು ಮುಖವಾದರೆ ಸರ್ಕಾರಿ ಕನ್ನಡ ಶಾಲೆಯ ಉಳಿವಿಗೆ ಹೋರಾಡುತ್ತಿರುವ ತಜ್ಞರು ಪದೇ ಪದೇ ಶಾಲೆಯ ಮೂಲ ಸೌಕರ್ಯ ಮತ್ತು ಭಾಷೆಯ ಸಂಬಂಧದ ವಿವಾದವನ್ನು ಮಾತ್ರ ಮುಂದಿಟ್ಟುಕೊಂಡು ವಾದ ಮಂಡಿಸುತ್ತಿದ್ದಾರೆ. ನಮಗೆ ಈಗ ತುರ್ತಾಗಿ ಬೇಕಾಗಿರುವುದು ಪೋಷಕರ ನಂಬಿಕೆ ಗಳಿಸುವಂತಹ, ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಕಾಳಜಿಯನ್ನು ಅಂತರಂಗದಲ್ಲಿ ಬೆಳೆಸಿಕೊಂಡು ಬಹಿರಂಗದಲ್ಲೂ ಸ್ಪಷ್ಟವಾಗಿ ವ್ಯಕ್ತಪಡಿಸುವ ಸರ್ಕಾರಿ ಶಾಲಾ ವ್ಯವಸ್ಥೆ. ಇಂಗ್ಲಿಷ್ ಮಾಧ್ಯಮವನ್ನು ಸರ್ಕಾರಿ ಶಾಲೆಗಳಲಿ ಪ್ರಾರಂಭಿಸಿದಾಕ್ಷಣ ಸಮಸ್ಯೆ ಪರಿಹಾರವಾಗಿ ಬಿಡುವುದಿಲ್ಲ.

ಮೊದಮೊದಲು ಇದು ಪೋಷಕರನ್ನು ಆಕರ್ಷಿಸಬಹುದು. ಆದರೆ ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿಯನ್ನು ಸ್ಪಷ್ಟವಾಗಿ ವ್ಯಕ್ತಪಡಿಸದ ಶಾಲಾವ್ಯವಸ್ಥೆ ಮುಂದುವರಿದರೆ ಪುನಃ ಪೋಷಕರು ಸರ್ಕಾರಿ ಶಾಲೆಗಳನ್ನು ತಿರಸ್ಕರಿಸುತ್ತಾರೆ. ಪೋಷಕರ ನಂಬಿಕೆಯನ್ನು ಗಳಿಸಲು ಕೆಲವು ಸರಳ ವಿಧಾನಗಳನ್ನು ಅನುಸರಿಸಬಹುದು. ಸರ್ಕಾರಿ ಶಾಲಾ ಅಧ್ಯಾಪಕರಿಗೆ ಕೆಲವು ಕಟ್ಟುನಿಟ್ಟಿನ ಶಾಲಾಶಿಸ್ತನ್ನು ಅನುಸರಿಸಲು ಆದೇಶಿಸಬಹುದು. ಈ ಕುರಿತು ವಿಶೇಷ ತರಬೇತಿಗಳು, ಅನುಷ್ಠಾನ ಸಾಧ್ಯ ಕಾರ್ಯಕ್ರಮಗಳನ್ನು ಶಿಕ್ಷಣ ಇಲಾಖೆ ಹಾಕಿಕೊಂಡು ಸಮರೋಪಾದಿಯಲ್ಲಿ ಪೋಷಕರ ನಂಬಿಕೆ ಗಳಿಸುವ ಪ್ರಯತ್ನ ಮಾಡಬಹುದು. ಈ ಕುರಿತು ಚರ್ಚೆ ನಡೆಯಬೇಕು, ಸರ್ಕಾರಿ ಶಾಲೆಗಳು ನಂಬಿಕೆ ಉಳಿಸಿಕೊಳ್ಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.