ಸೋಮವಾರ, 2 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ: ಪೇಪರ್‌ನಲ್ಲಿ ಫೋಟೊ!

Published 17 ಜುಲೈ 2024, 23:18 IST
Last Updated 17 ಜುಲೈ 2024, 23:18 IST
ಅಕ್ಷರ ಗಾತ್ರ

‘ಬೇಗ ರೆಡಿ ಆಗು, ಮದುವೆಗೆ ಹೋಗಬೇಕು. ಹಾಗೇ, ಹೋಗುವಾಗ ಒಂದೊಳ್ಳೆ ಗಿಫ್ಟ್‌ ಬೇರೆ ತಗೊಬೇಕು’.

‘ಎಮ್ಮೆಲ್ಲೆ ಆಗಿ ನೀವೇ ಗಿಫ್ಟ್‌ ಕೊಡೋದಾಯ್ತು’ ಅಸಮಾಧಾನದಲ್ಲಿಯೇ ಹೇಳಿದಳು ಹೆಂಡತಿ. 

‘ಮದುವೆಗೆ ಹೋಗುವವರೇ ಗಿಫ್ಟ್‌
ಕೊಡಬೇಕಲ್ವೇನಮ್ಮ?’  

‘ನೀವು ಎಮ್ಮೆಲ್ಲೆ ಆಗೋ ಬದಲು ಸಿನಿಮಾ ಸ್ಟಾರ್‌ ಅಥವಾ ಕ್ರಿಕೆಟರ್‌ ಆಗಬೇಕಿತ್ತು. ಆಗ ಅಂಬಾನಿ ಮಗನ ಮದುವೆಗೆ ನಿಮ್ಮನ್ನು ಕರೆದಿರೋರು, 2 ಕೋಟಿ ರೂಪಾಯಿ ವಾಚ್‌ ಕೊಟ್ಟಿರೋರು’. ದೊಡ್ಡ ಅವಕಾಶ ತಪ್ಪಿದ
ದುಃಖದಲ್ಲಿದ್ದಳು ಪತ್ನಿ. 

‘ಶಾಸಕನಾಗಿದ್ದೇ ನನ್ನ ಪುಣ್ಯ’.

‘ಏನ್ ಶಾಸಕ ಬಿಡ್ರೀ, ನಮ್ಮ ಮನೆಯವರು ಮತ್ತು ಈ ಕ್ಷೇತ್ರದ ಜನ ಬಿಟ್ಟರೆ ಬೇರೆ ಯಾರಿಗೂ ನಿಮ್ಮ ಹೆಸರು ಕೂಡ ಗೊತ್ತಿಲ್ಲ’ ಚುಚ್ಚಿದಳು ಹೆಂಡತಿ. 

‘ಏನ್‌ ಮಾಡೋದು... ಮಿನಿಸ್ಟರ್‌ ಆಗಿದ್ದರೆ ರಾಜ್ಯಕ್ಕೆಲ್ಲ ಗೊತ್ತಿರ್ತಿದ್ದೆ’ ಎಂದೆ. 

‘ಮಂತ್ರಿ ಆಗದಿದ್ದರೂ ನಿಗಮ–ಮಂಡಳಿ ಅಧ್ಯಕ್ಷನಾದರೂ ಆಗಬಹುದಿತ್ತು, ಆಗಲಾದರೂ ಡೈಲಿ ಪೇಪರ್‌ನಲ್ಲಿ ನಿಮ್ಮ ಹೆಸರು, ಫೋಟೊ ಬಂದಿರೋದು’. 

‘ಎಮ್ಮೆಲ್ಲೆ ಆಗಿದ್ದುಕೊಂಡೂ ಜನರ ಸೇವೆ ಮಾಡಬಹುದು ಬಿಡು’ ಎಂದೆ ದೃಢವಾಗಿ. 

‘ನಿಮ್ ಪುರಾಣ ನಿಲ್ಲಿಸ್ರೀ ಸಾಕು. ಎಮ್ಮೆಲ್ಲೆ ಹೆಂಡತಿಯಾದರೂ ನನ್ನ ಅಕೌಂಟ್‌ನಲ್ಲಿ ಎಷ್ಟು ದುಡ್ಡಿದೆ ಅಂತ ಗೊತ್ತೇನ್ರೀ ನಿಮಗೆ?’ 

‘ನಾನು ನಿಗಮ– ಮಂಡಳಿ ಅಧ್ಯಕ್ಷ
ನಾಗೋದಕ್ಕೂ ನಿನ್ನ ಅಕೌಂಟ್‌ನಲ್ಲಿ ಇರೋ ದುಡ್ಡಿಗೂ ಏನಮ್ಮ ಸಂಬಂಧ’ ತಲೆ ಕೆರೆದುಕೊಂಡೆ. 

‘ನಿಗಮದ ಅಕೌಂಟ್‌ನಿಂದ ನನ್ನ ಅಕೌಂಟ್‌ಗೆ ಒಂದ್ 20 ಕೋಟಿ ರೂಪಾಯಿ ಹಾಕಿಸಿ
ಕೊಳ್ಳಬಹುದಿತ್ತಲ್ವ, ನಾಲ್ಕು ವರ್ಷ ಅದರ ಬಡ್ಡಿ ದುಡ್ಡಿನಲ್ಲಿಯೇ ಮತ್ತ‌ಷ್ಟು ಆಸ್ತಿ ಮಾಡಬಹುದಿತ್ತು’ ದೂರಾಲೋಚನೆಯ ಮಾತು ಆಡಿದಳು ಪತ್ನಿ. 

‘ಸರಿ ಬಿಡು. ನೀನು ಹೇಳಿದಂತೆ, ಆಗ ಡೈಲಿ ನನ್ನ ಫೋಟೊ ಪೇಪರ್‌ನಲ್ಲಿ ಬರ್ತಿತ್ತು. ಆದರೆ ನೀನು ಮುಖ ಮುಚ್ಚಿಕೊಂಡು ಓಡಾಡಬೇಕಾಗ್ತಿತ್ತು’ ಎಂದೆ. 

ಮೌನಕ್ಕೆ ಜಾರಿದಳು ಪತ್ನಿ!  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT