ಶನಿವಾರ, 29 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಣ್ಣೆ ರಾಜು: ಕನ್ನಡ ತುತ್ತೂರಿ

Published 25 ಜೂನ್ 2024, 19:22 IST
Last Updated 25 ಜೂನ್ 2024, 19:22 IST
ಅಕ್ಷರ ಗಾತ್ರ

‘ನಮ್ಮ ಸಂಸದರು ಕನ್ನಡದಲ್ಲಿ ಪ್ರಮಾಣ ಮಾಡಿ ಪಾರ್ಲಿಮೆಂಟಿನಲ್ಲಿ ಕನ್ನಡ ಕಹಳೆ ಊದಿ ಪುಳಕಿತರಾದರು ಕಣ್ರೀ...’ ಸುಮಿಯೂ ರೋಮಾಂಚನಗೊಂಡಳು.

‘ಆಗಲೇಬೇಕು. ಅದರ್ ಟಂಗ್ ಪರಿಸರದಲ್ಲಿ ಮದರ್ ಟಂಗ್ ಯಾವತ್ತೂ ಮುದ ನೀಡುತ್ತದೆ’ ಎಂದ ಶಂಕ್ರಿ.

‘ದೆಹಲಿಯಲ್ಲಿ ಕನ್ನಡ ಊದಿದರೆ ಸಾಲದು, ಕನ್ನಡ ನಾಡಿನಲ್ಲಿ ನಿತ್ಯ ಕನ್ನಡದ ಕಹಳೆ ಮೊಳಗಬೇಕು. ಅನ್ಯಭಾಷಿಕರು ಕಡ್ಡಾಯವಾಗಿ ಕನ್ನಡ ಕಲಿಯಬೇಕು ಎಂದು ಮುಖ್ಯಮಂತ್ರಿ ಹೇಳಿದ್ದಾರೆ’.

‘ಕಲಿಯಬೇಕು ಎಂದರೆ ಸಾಕೆ? ಕಲಿಸುವವರೂ ಬೇಕಲ್ವೆ? ವಯಸ್ಕರ ಶಿಕ್ಷಣದಂತೆ ಸರ್ಕಾರ ಕನ್ನಡೇತರರಿಗೆ ಅ ಆ ಇ ಈ ಕಲಿಸುವ ಕಾರ್ಯಕ್ರಮ ಹಾಕಿಕೊಳ್ಳಬೇಕು’.

‘ಇರುವ ಶಾಲಾಕಾಲೇಜಿನ ಮಕ್ಕಳಿಗೆ ಪಾಠ ಕಲಿಸಿ, ಪರೀಕ್ಷೆ ನಡೆಸಲೇ ಸರ್ಕಾರಕ್ಕೆ ಸಾಕಾಗುತ್ತದೆ. ಎಲ್ಲದಕ್ಕೂ ಸರ್ಕಾರವನ್ನೇ ನಂಬಿ ಕೂರಬಾರದು. ಅನ್ಯಭಾಷಿಕರಿಗೆ ನಾವೇ ಕನ್ನಡ ಕಲಿಸಬೇಕು. ಮರ ಬೆಳೆಸಿದರೆ, ಕನ್ನಡ ಕಲಿಸಿದರೆ ನಮ್ಮ ಸುತ್ತಲಿನ ಪರಿಸರ ಉತ್ತಮವಾಗುತ್ತದೆ’.

‘ಹೌದು, ಹಾಗಾಗಿಯೇ ಸಕ್ಕರೆ, ಕಾಫಿಪುಡಿ ನೆಪದಲ್ಲಿ ನಾನು ಆಗಾಗ ನೆರೆಹೊರೆಯ ಅನ್ಯಭಾಷಿಕರ ಮನೆಗೆ ಹೋಗಿ ಅವರಿಗೆ ಒಂದು ಬಟ್ಟಲು ಕನ್ನಡ ಕೊಟ್ಟು ಸವಿಯಲು ಹೇಳುತ್ತಿದ್ದೇನೆ’.

‘ಹಾಗೇ ಮಾಡು, ಕನ್ನಡೇತರರ ಕಿವಿ ಮೇಲೆ ಪದೇಪದೇ ಕನ್ನಡ ಬೀಳುತ್ತಿದ್ದರೆ ಅದು ಬಾಯಿಂದ ಹೊರಬರುತ್ತದೆ. ಈ ಪ್ರಕ್ರಿಯೆಯಲ್ಲಿ ಅವರು ಕನ್ನಡದತ್ತ ಹೊರಳುತ್ತಾರೆ’.

‘ನಮ್ಮ ಮಕ್ಕಳನ್ನು ಅವರ ಮಕ್ಕಳ ಜೊತೆ ಆಟವಾಡಲು ಕಳಿಸಿ, ಕನ್ನಡ ಹೇಳಿಕೊಡಲು ಹೇಳಿದ್ದೇನೆ. ಪಕ್ಕದ ಮನೆಯ ಪರಭಾಷಿ ಗಂಡ-ಹೆಂಡತಿ ಕನ್ನಡದಲ್ಲೇ ಜಗಳವಾಡುವಷ್ಟು ಸುಧಾರಿಸಿದ್ದಾರೆ ಕಣ್ರೀ...’ ಸುಮಿಗೆ ಆನಂದ.

‘ವರಮಹಾಲಕ್ಷ್ಮಿ, ಸಂಕ್ರಾಂತಿ ಹಬ್ಬಕ್ಕೆ ನೆರೆ ಭಾಷಿಕರನ್ನು ಕುಂಕುಮಕ್ಕೆ ಕರೆದು ಕನ್ನಡದ ತಾಂಬೂಲ ಕೊಡು. ಕನ್ನಡದತ್ತ ಹೊರಳಿಕೊಂಡು ಅವರು ಕನ್ನಡಕ್ಕಾಗಿ ಕೈ ಎತ್ತಲಿ, ನಾವು ತಲೆ ಎತ್ತೋಣ...’ ಅಂದ ಶಂಕ್ರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT