ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ: ಕಾಪಾಡು ದೇವ!

Published 16 ಆಗಸ್ಟ್ 2024, 23:45 IST
Last Updated 16 ಆಗಸ್ಟ್ 2024, 23:45 IST
ಅಕ್ಷರ ಗಾತ್ರ

‘ಕಾಪಾಡು ಶ್ರೀಸತ್ಯನಾರಾಯಣ... ಪನ್ನಗ ಶಯನ, ಪಾವನ ಚರಣ, ನಂಬಿಹೆ ನಿನ್ನ...’ ಎಂದು ಭಕ್ತಿಪೂರ್ವಕವಾಗಿ ಹಾಡುತ್ತಿದ್ದರು ಕನ್ನಡ ಚಿತ್ರರಂಗದ ಸೀನಿಯರ್ ಪ್ರೊಡ್ಯೂಸರ್ ವಿಜಿ. 

‘ಏನ್ ಪ್ರಾಬ್ಲಂ ಸರ್’ ಕೇಳಿದ ವಿತರಕ ಮುದ್ದಣ್ಣ. 

‘ನಮ್ ಚಂದನವನದ ಮೇಲೆ ಯಾರದೋ ವಕ್ರದೃಷ್ಟಿ ಬಿದ್ದಿದೆ ಅನಿಸುತ್ತೆ ಮುದ್ದಣ್ಣ. ಒಂದಾದ ಮೇಲೊಂದರಂತೆ ಅಹಿತಕರ ಘಟನೆಗಳು ನಡೀತಾನೇ ಇವೆ. ಅದಕ್ಕೆ, ಹೋಮವನ್ನೋ ಯಾಗವನ್ನೋ ಮಾಡಿಸಬೇಕಂತಿದೀನಿ’ ಕಣ್ತುಂಬಿಕೊಂಡು ಹೇಳಿದರು ವಿಜಿ. 

ಸ್ವರ್ಗದಿಂದಲೇ ಇದನ್ನೆಲ್ಲ ಗಮನಿಸುತ್ತಿದ್ದ ಶ್ರೀಮನ್ ನಾರಾಯಣ ತಕ್ಷಣವೇ ನಾರದ ಮುನಿಗಳನ್ನು ಕರೆದು, ‘ಭೂಲೋಕಕ್ಕೆ ಹೋಗಿ, ಕನ್ನಡ ಚಿತ್ರರಂಗದ ಬಗ್ಗೆ ಯಾರು ಏನು ಹೇಳುತ್ತಾರೆ ಕೇಳಿಕೊಂಡು ಬರುವಂತವರಾಗಿ’ ಎಂದರು.

‘ಆಗಲಿ ದೇವ’ ಎಂದವರೇ ಧರೆಗಿಳಿದು ಮನೆಯೊಂದರ ಎದುರು ನಿಂತರು ನಾರದ ಮುನಿ. 

‘ಯಾವಾಗಲೂ ಸಿನಿಮಾ ಅಂತೀಯಲ್ಲ ನೀನು. ಈಗ ಮನೆ ಬಳಿಯ ಥಿಯೇಟರ್ ಮುಚ್ಚಿದೆ. ದೂರದ ಮಾಲ್‌ಗೆ ಹೋಗಬೇಕು. ನಾವು ನಾಲ್ಕು ಜನ ಇರೋದ್ರಿಂದ ಆಟೊ ಬದಲು ಕ್ಯಾಬ್ ಮಾಡಲೇಬೇಕು. ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಿದ್ರೆ ಸರ್ವಿಸ್ ಚಾರ್ಜ್ ಅಂತ ಎಕ್ಸ್‌ಟ್ರಾ ದುಡ್ಡು ತಗೊಳ್ತಾರೆ. ಇನ್ನು, ಸ್ನ್ಯಾಕ್ಸ್‌ಗೆಲ್ಲ ಸೇರಿ ಸಾವಿರಾರು ರೂಪಾಯಿ ಬೇಕು, ಈ ತಿಂಗಳು ಫಿಲಂ ಕ್ಯಾನ್ಸಲ್’ ಹೆಂಡತಿಗೆ ಹೇಳುತ್ತಿದ್ದ ಗೃಹಸ್ಥ. 

ನಿರ್ಮಾಪಕರ ಮನೆ ಮುಂದೆ ಬಂದ ಮುನಿಗಳಿಗೆ, ‘ಮೊದಲೆಲ್ಲ ನಿರ್ಮಾಪಕರಿಗೆ ಅನ್ನದಾತ ಅಂತಿದ್ರು, ಈಗಿನ ಹೀರೊಗಳು ತಗಡು ಅಂತಾರೆ. ಚಿತ್ರರಂಗವನ್ನ ದೇವರೇ ಕಾಪಾಡಬೇಕು’ ಎಂದು ಮಾತಾಡಿದ್ದು ಕೇಳಿಸಿತು. 

‘ಕರ್ನಾಟಕ, ಕನ್ನಡ, ಕಾವೇರಿ ಅಂದ ಕೂಡಲೆ ಚಿತ್ರರಂಗವೇ ಎದ್ದು ನಿಲ್ಲೋದು. ಈಗ ಅವರವರ ಸಿನಿಮಾ ಬಿಡುಗಡೆ ವೇಳೆ ಮಾತ್ರ ಕಾಣಿಸಿಕೊಳ್ತಾರೆ’ ಅಸಮಾಧಾನದಿಂದ ಹೇಳುತ್ತಿದ್ದರು ಕನ್ನಡಪರ ಹೋರಾಟಗಾರರೊಬ್ಬರು. ಇದೆಲ್ಲವನ್ನೂ ಶ್ರೀಹರಿಗೆ ತಲುಪಿಸಿದರು ನಾರದಮುನಿ. 

‘ನಾನು ಚಿತ್ರರಂಗದ ಸಮಸ್ಯೆ ಪರಿಹರಿಸುವುದಿರಲಿ. ಇವರು ನನ್ನ ತಂಟೆಗೆ ಬಾರದಿರಲು ನಾನೇ ಯಾವುದಾದರೂ ಯಾಗ ಮಾಡಿಸಬೇಕಷ್ಟೇ’ ಎಂದು ನಕ್ಕರು ಶ್ರೀಮನ್ ನಾರಾಯಣ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT