ಜನಪ್ರಿಯ ಸಿನಿಮಾ ನಟರು ಮೃತಪಟ್ಟ ಬಳಿಕ ಅವರ ಹೆಸರಿನಲ್ಲಿ ಸರ್ಕಾರವೇ ಸ್ಮಾರಕ ನಿರ್ಮಿಸಬೇಕೇ?

ಜನರ ಅಭಿಮಾನ ಅನೇಕ ಬಾರಿ ಅತಿರೇಕಕ್ಕೆ ಎಡೆ ಮಾಡುವುದುಂಟು. ಅಂಥದ್ದೇ ಒಂದು ಅತಿರೇಕದ ವಿದ್ಯಮಾನವೆಂದರೆ ಸಾರ್ವಜನಿಕ ಸ್ಥಳಗಳನ್ನು ಸ್ಮಶಾನಗಳಾಗಿ ಪರಿವರ್ತಿಸುವುದು!

ರಾಷ್ಟ್ರನಾಯಕರೋ, ಸಮಾಜದ ಹಿತಕ್ಕಾಗಿ ಮಹತ್ತರ ಕೊಡುಗೆ ನೀಡಿದವರೋ ಮರಣ ಹೊಂದಿದಾಗ ಅವರ ನೆನಪಿನಲ್ಲಿ ಸಮಾಧಿ ನಿರ್ಮಿಸುವುದು, ಆ ಸ್ಥಳಗಳನ್ನು ಸ್ಮಾರಕಗಳಾಗಿ, ಪ್ರವಾಸಿಗರ ತಾಣಗಳಾಗಿ ಅಭಿವೃದ್ಧಿಪಡಿಸುವುದು ಸಹಜ. ಅದರಲ್ಲೂ ನಮ್ಮ ದೇಶವಂತೂ ವ್ಯಕ್ತಿಪೂಜೆಯಲ್ಲಿ ಎತ್ತಿದ ಕೈ! ಹಾಗೆ ಮಾಡುವ ಮೂಲಕ ಆ ದೊಡ್ಡ ವ್ಯಕ್ತಿಗಳ ಸಾಧನೆಗೆ, ಆ ಮೂಲಕ ಅವರು ಗಳಿಸಿದ ಜನಪ್ರೀತಿಗೆ ಮೂರ್ತರೂಪ ಕೊಟ್ಟು ನೆನಪನ್ನು ಶಾಶ್ವತಗೊಳಿಸುವ ಆಶಯ ಇರುತ್ತದೆ. ಅಷ್ಟಕ್ಕೂ ಆ ನೆನಪನ್ನು ಜೀವಂತವಾಗಿಡುವುದರ ಉದ್ದೇಶವಾದರೂ ಏನು? ಆ ಮಹನೀಯರ ಬಾಳು ಮುಂದಿನ ಪೀಳಿಗೆಗೆ ಸ್ಫೂರ್ತಿದಾಯಕವಾಗಲಿ, ಅವರ ಹಾದಿ ಇನ್ನಷ್ಟು ಜನರನ್ನು ಪ್ರೇರೇಪಿಸಲಿ ಎಂಬುದಷ್ಟೇ.

ಇದನ್ನೂ ಓದಿ:ಕಲಾವಿದರ ನೆನಪು ಹಸಿರಾಗಿಸುವ ಕೆಲಸ ಸರ್ಕಾರ ಮಾಡಿದರೆ ಅರ್ಥಪೂರ್ಣ: ದೊಡ್ಡಣ್ಣ

ಆದರೆ ನಮ್ಮದು ಮೂಲತಃ ವಿಪರ್ಯಾಸಮಯ ಸಮಾಜ!

ಯಾವುದೇ ವ್ಯಕ್ತಿಯ ನೆನಪನ್ನು ನಾವು ಫೋಟೊ, ಪುತ್ಥಳಿ, ಸ್ಮಾರಕಗಳಲ್ಲಿ ಬಂಧಿಸಿಟ್ಟ ಕೂಡಲೇ ಅವರನ್ನು ಜೀವಂತವಾಗಿರಿಸುವ ಜವಾಬ್ದಾರಿಯಿಂದ ಸಲೀಸಾಗಿ ತಪ್ಪಿಸಿಕೊಳ್ಳುತ್ತೇವೆ! ಅಂದರೆ ಅವರ ಸಂದೇಶ, ಸಾಧನೆಗಳಿಂದ ಯಾವುದೇ ಅಳುಕಿಲ್ಲದೆ ದೂರವಾಗುತ್ತ ಹೋಗುತ್ತೇವೆ. ಈಗ ದೇಶದ ಮೂಲೆ ಮೂಲೆಗಳಲ್ಲಿ ಮಹಾತ್ಮ ಗಾಂಧಿ ರಸ್ತೆಗಳಿವೆ, ಮೂರ್ತಿಗಳಿವೆ, ಅವರ ಹೆಸರಿನ ಅಸಂಖ್ಯ ಸ್ಮಾರಕಗಳಿವೆ. ಈ ಎಲ್ಲ ಸ್ಮಾರಕಗಳು, ಗಾಂಧಿ ತತ್ವಗಳನ್ನು ಹೂತುಹಾಕಿದ ನಮ್ಮ ಪಾಪಪ್ರಜ್ಞೆಗೆ ಮುಸುಕೆಳೆಯುವುದರ ಹೊರತು ಬೇರೇನು ಸಾಧಿಸಿವೆ?

ನಿಜವಾಗಿಯೂ ದೇಶ ಕಟ್ಟಿದ ನಾಯಕರ ಕಥೆ ಹೀಗಾದರೆ ಜನಪ್ರಿಯ ವ್ಯಕ್ತಿಗಳ ಪಾಡು ಇನ್ನೂ ಅಧ್ವಾನ!

ಈ ಜನಪ್ರಿಯರು- ಉದಾಹರಣೆಗೆ ಸಿನಿಮಾ ನಟರು- ಇವರಿಗಿರುವುದು ಅಭಿಮಾನಿಗಳೇ ಹೊರತು ಹಿಂಬಾಲಕರಲ್ಲ. ಅಂದರೆ ಅವರ ನಾಯಕ ಅವರ ಭಾವಕೋಶದಲ್ಲಿ ಸ್ಥಾನ ಪಡೆದ ಒಂದು ಮೂರ್ತಿಯೇ ಹೊರತು ಆತನೇನೂ ಅಭಿಮಾನಿಯ ಪಾಲಿಗೆ ಅನುಕರಣೀಯ ವ್ಯಕ್ತಿ ಆಗಿರಬೇಕೆಂದಿಲ್ಲ. ಹಾಗಾಗಿ ಅಭಿಮಾನಿಯಿಂದ ಉದ್ವಿಗ್ನ ಭಾವಾವೇಶ ನಿರೀಕ್ಷಿಸಬಹುದೇ ಹೊರತು ಸುಸಂಬದ್ಧ ನಡವಳಿಕೆಯನ್ನಲ್ಲ. ಇಂಥ ಭಾವಾವೇಶಕ್ಕೆ ಸಣ್ಣ ಪ್ರಚೋದನೆ ಸಿಕ್ಕರೂ ಸಾಕು, ಅದು ಎಲ್ಲರ ಹತೋಟಿ ತಪ್ಪಿ ಹೋಗಲು ಸಾಧ್ಯ.

ಈ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರಿಡಬೇಕು; ಈ ವಿಶ್ವವಿದ್ಯಾಲಯಕ್ಕೆ ಬಸವಣ್ಣನವರ ಹೆಸರಿಡಬೇಕು- ಇಂಥ ಆಗ್ರಹಗಳು ಹುಟ್ಟುವುದು ಕೂಡ ಇಂಥ ಅಭಿಮಾನದಿಂದಲೇ. ಅಷ್ಟಾದರೂ ಅದು ‘ಸ್ಮಶಾನಸದೃಶ’ ಅಭಿಮಾನದಷ್ಟು ಅಪಾಯಕಾರಿಯಲ್ಲ. ಅದು ಹೇಗೇ ಆಗಲಿ, ನಮ್ಮನ್ನು ಆಳುವವರೂ ಅಷ್ಟೇ ಅವಿವೇಕಿಗಳಾಗಿದ್ದಾರೆ! ಅದೇ ನಮ್ಮ ದುರದೃಷ್ಟ.

ಒಬ್ಬ ಜನಪ್ರಿಯ ನಟನ ಸಾವಾಯಿತು. ಸರ್ಕಾರ ಹಿಂದು ಮುಂದು ನೋಡದೆ ಸರ್ಕಾರಿ ಗೌರವದೊಂದಿಗೆ ಅವರ ಅಂತ್ಯ ಸಂಸ್ಕಾರ ನೆರವೇರಿಸಲು ಸರ್ಕಾರಿ ಜಾಗವನ್ನೇ ಆರಿಸಿಕೊಳ್ಳುತ್ತದೆ, ಅದೂ ನಿರ್ದಿಷ್ಟ ಉದ್ದೇಶಕ್ಕೆ ಬಳಕೆಯಾಗುತ್ತಿರುವ ಸಂಸ್ಥೆಯೊಂದರ ಆವರಣ! ಆ ಮೂಲಕ ಕೆಟ್ಟ ಮೇಲ್ಪಂಕ್ತಿಯೊಂದನ್ನು ಹಾಕಿಕೊಡುತ್ತದೆ. ಯಾಕೆಂದರೆ ಒಬ್ಬರಿಗೆ ಈ ಅವಕಾಶ ಕೊಟ್ಟಮೇಲೆ ಇನ್ನೊಬ್ಬರಿಗೆ ನಿರಾಕರಿಸುವುದು ಹೇಗೆ?

ನಾಳೆ ಇನ್ನೊಬ್ಬ ಜನಪ್ರಿಯ ನಟ ತೀರಿಕೊಂಡ ಕೂಡಲೇ ಮೊದಲನೆಯ ಉದಾಹರಣೆ ಕಣ್ಣಮುಂದೆಯೇ ಇದೆಯಲ್ಲ? ಅವರ ಅಭಿಮಾನಿಗಳಿಂದ ಒತ್ತಡ ಆರಂಭವಾಗುತ್ತದೆ. ಅವರಿಗೆ ಅಲ್ಲಿ ಜಾಗ ಕೊಟ್ಟಿರಿ, ಇವರಿಗೇಕಿಲ್ಲ?

ಸಿನಿಮಾ ನಟರ ಅಭಿಮಾನಿಗಳೆಂದರೆ ಆಡಳಿತಾರೂಢರಿಗೆ ಯಾವಾಗಲೂ ಭಯ. ಅವರನ್ನು ಎದುರು ಹಾಕಿಕೊಳ್ಳುವುದು ಹೇಗೆ? ಎಲ್ಲಿ ಅದು ದೊಂಬಿ ಗಲಭೆಗೆ ಕಾರಣವಾಗುವುದೋ, ಯಾವ ಜಾತಿ, ಪಂಗಡಗಳ ಬೆಂಬಲ ಕಳೆದುಕೊಳ್ಳಬೇಕಾಗುವುದೋ ಎಂಬ ಆತಂಕ... ರಾಜಕೀಯವೆಂದರೇನೇ ಲೆಕ್ಕಾಚಾರ. ಹಾಗಾಗಿ ಒಬ್ಬರ ಸಂಸ್ಕಾರಕ್ಕೆ
ಜಾಗ ಕೊಟ್ಟ ಮೇಲೆ ಎರಡನೆಯವರಿಗೂ ಕೊಡಬೇಕು. ಎರಡನೆಯವರಾದ ಮೇಲೆ ಮೂರನೆಯವರು, ನಾಲ್ಕನೆಯವರು... ಮುಂದಕ್ಕೆ ಸಲೀಸು.
ಸಾರ್ವಜನಿಕ ಸಂಸ್ಥೆಯೊಂದು ಸ್ಮಶಾನವಾಗಿ ಪರಿವರ್ತನೆಯಾಗಿಬಿಡುತ್ತದೆ. ಕಂಠೀರವ ಸ್ಟುಡಿಯೊ ಆವರಣವಾಗಿರಲಿ, ಕಲಾಗ್ರಾಮವಾಗಿರಲಿ... ಕಾಲ ಕಳೆದಂತೆ ಅದರ ಹೆಸರನ್ನು ‘ಪ್ರತಿಷ್ಠಿತರ ರುದ್ರಭೂಮಿ’ ಎಂದು ಬದಲಾಯಿಸಬೇಕಾಗುತ್ತದೆ!

ಜನಪ್ರಿಯ ಚಿತ್ರನಟರ ವಿಷಯದಲ್ಲಿ ಆವೇಶ, ರೋಷಗಳು ಸಾಮಾನ್ಯವಾದರೂ ಆ ವಿಷಯದಲ್ಲಿ ಸಾಹಿತಿಗಳು ಕೂಡ ಕಡಿಮೆಯಿಲ್ಲ!

ಮೊನ್ನೆ ಮೊನ್ನೆ ಯು.ಆರ್. ಅನಂತಮೂರ್ತಿ ಮುಂತಾದವರ ಅಂತಿಮಯಾತ್ರೆಯ ತಾಣವಾಗಿರುವ ಕಲಾಗ್ರಾಮದಲ್ಲಿ ಅವರ ಸಮಾಧಿಗಳನ್ನು ಸರಿಯಾಗಿ ನಿರ್ವಹಿಸಿಲ್ಲ ಎಂದು ಕೆಲವು ಸಾಹಿತ್ಯ ಪ್ರೇಮಿಗಳು ಕರಸೇವೆ ಮಾಡಿ ಆ ಜಾಗವನ್ನು ಅಚ್ಚುಕಟ್ಟು ಮಾಡಿದ ಸುದ್ದಿ ನೋಡಿದ್ದೇವೆ. ಒಮ್ಮೆ ಒಂದು ಮೇಲ್ಪಂಕ್ತಿ ಹಾಕಿಕೊಟ್ಟ ಮೇಲೆ ಮುಂದಕ್ಕೆ ನಿರ್ವಾಹವಿಲ್ಲ. ಒಬ್ಬರಾದ ಮೇಲೊಬ್ಬರು,
ಅವರಾದ ಮೇಲೆ ಮತ್ತೊಬ್ಬರು... ಅಲ್ಲಿಯೂ ಪಟ್ಟಿ ಮುಂದುವರಿಯುತ್ತದೆ.

ಅಲ್ಲಿಗೆ ಆಯಾ ಸಾರ್ವಜನಿಕ ತಾಣಗಳ ಮೂಲ ಉದ್ದೇಶವೇ ಮಣ್ಣುಪಾಲಾಗುತ್ತದೆ. ಮತ್ತು ಅದೇ ತರ್ಕ ವಿಸ್ತರಿಸುತ್ತ ಹೋದರೆ ನಾಳೆ ಕಬ್ಬನ್ ಪಾರ್ಕ್, ಲಾಲ್‍ಬಾಗ್‍ಗಳೇಕೆ ಸ್ಮಶಾನವಾಗಿ ಬದಲಾಗಬಾರದು ಎಂಬ ಪ್ರಶ್ನೆಯೂ ಏಳುತ್ತದೆ!

ಯಾವುದೇ ಸಾರ್ವಜನಿಕ ವ್ಯಕ್ತಿ ತಂತಮ್ಮ ಖಾಸಗಿ ಜಾಗಗಳಲ್ಲಿ ಸಮಾಧಿಯನ್ನೋ, ಸ್ಮಾರಕವನ್ನೋ ನಿರ್ಮಿಸಿಕೊಳ್ಳಲು ಇರುವ ಅಡ್ಡಿ ಏನು? ಗಿರೀಶ ಕಾರ್ನಾಡರು ತೀರಿಕೊಂಡಾಗ ಅವರ ಅಂತ್ಯಸಂಸ್ಕಾರವನ್ನು ತೀರಾ ಖಾಸಗಿ ವ್ಯವಹಾರವಾಗಿ ನಡೆಸಬೇಕೆಂದು ಅವರೇ ಆಶಿಸಿ ಅವರ ಕುಟುಂಬವರ್ಗವೂ ಹಾಗೇ ನಡೆದುಕೊಳ್ಳಲಿಲ್ಲವೇ? ಅದು ನಡೆಯಬೇಕಾದ್ದೂ ಹಾಗೇ ಅಲ್ಲವೇ? ಅದಕ್ಕೆ ಸಾರ್ವಜನಿಕ ಆಚರಣೆಯ ವಿಜೃಂಭಣೆಯೇಕೆ? ಈ ಪ್ರದರ್ಶನದ ಮೂಲಕ ಸಾವಿನ ಘನತೆಯನ್ನೇ ಕುಂದಿಸಿದಂತೆ ಆಗಲಾರದೇ? ಹಾಗೂ ಒಂದು ವೇಳೆ ವಿಜೃಂಭಣೆಯ ಸ್ಮಾರಕವೇ ಬೇಕೆಂದಾದರೂ ಅದಕ್ಕೆ ಸರ್ಕಾರಿ ಜಾಗವೇಕೆ? ಅದರಲ್ಲೂ ಬೇರೊಂದು ಉದ್ದೇಶಕ್ಕೆ ಬಳಕೆಯಾಗುತ್ತಿರುವ ಸಂಸ್ಥೆಯ ಅತಿಕ್ರಮಣವೇಕೆ?

ಈ ವಿಷಯದಲ್ಲಿ ಮೊದಲ ತಪ್ಪು ಸರ್ಕಾರದ್ದು. ಅದನ್ನು ತಿದ್ದಿಕೊಳ್ಳುವ ಹೊಣೆಯೂ ಸರ್ಕಾರದ್ದೇ. ಇನ್ನು ಮುಂದಾದರೂ ಯಾವುದೇ ಪ್ರತಿಷ್ಠಿತ ವ್ಯಕ್ತಿಯ ಸಮಾಧಿಯೋ, ಸ್ಮಾರಕವೋ ಅವರವರ ಖಾಸಗಿ ಜಾಗದಲ್ಲಿ ನೆರವೇರಲಿ. ಇಲ್ಲ, ಸರ್ಕಾರಿ ಸ್ಥಳದಲ್ಲೇ ನಡೆಯಬೇಕಾದ ಅನಿವಾರ್ಯತೆಯಿದ್ದರೆ ಅದಕ್ಕಾಗಿ ಪ್ರತ್ಯೇಕ ತಾಣ ಮೀಸಲಿರಿಸಲಿ. ಸಾರ್ವಜನಿಕ ಸ್ಥಳಗಳೇಕೆ ಸ್ಮಶಾನವಾಗಬೇಕು? ನಮ್ಮ ನಾಯಕರುಗಳು ಅಷ್ಟಾದರೂ ಲಜ್ಜೆಯನ್ನು ಪ್ರದರ್ಶಿಸಬಾರದೇ?

ಲೇಖಕ: ಸಿನಿಮಾ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.