ಮಲಯಾಳ ಸುದ್ದಿವಾಹಿನಿ ಮೀಡಿಯಾಒನ್ನ ಪ್ರಸಾರ ಹಕ್ಕುಗಳನ್ನು ವಾರ್ತಾ ಮತ್ತು ಪ್ರಸಾರ ಸಚಿವಾಲಯವು ರದ್ದುಪಡಿಸಿದೆ. ಅದನ್ನು ಕೇರಳ ಹೈಕೋರ್ಟ್ ಎತ್ತಿ ಹಿಡಿದಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಗಂಭೀರ ಪರಿಣಾಮವನ್ನು ಬೀರಲಿದೆ. ಜತೆಗೆ, ಮಾಧ್ಯಮದ ಹಕ್ಕುಗಳನ್ನು ಇದು ಮೊಟಕು ಮಾಡುತ್ತದೆ. ಸುದ್ದಿವಾಹಿನಿಯ ಪರವಾನಗಿ ನವೀಕರಣಕ್ಕೆ ಕಳೆದ ತಿಂಗಳು ನಿರಾಕರಿಸಲಾಗಿತ್ತು. ಪರವಾನಗಿ ನವೀಕರಣಕ್ಕೆ ನಿರಾಕರಿಸುವ ಸರ್ಕಾರದ ನಿರ್ಧಾರಕ್ಕೆ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಕಾರಣಗಳು ಇವೆ, ಸರ್ಕಾರದ ಸಮರ್ಥನೆಯು ಮನವರಿಕೆ ಆಗಿದೆ ಎಂದು ಕೇರಳ ಹೈಕೋರ್ಟ್ನ ಏಕಸದಸ್ಯ ಪೀಠವು ಹೇಳಿದೆ. ಗುಪ್ತಚರ ವರದಿಗಳ ಆಧಾರದಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೋರ್ಟ್ಗೆ ಸರ್ಕಾರವು ಹೇಳಿತ್ತು. ಸಹಜವಾಗಿಯೇ ಇಂತಹ ವರದಿಗಳು ಸಾರ್ವಜನಿಕವಾಗಿ ಲಭ್ಯ ಇರುವುದಿಲ್ಲ.

ಪರವಾನಗಿ ನವೀಕರಣಕ್ಕೆ ನಿರಾಕರಿಸಿದ ನಿರ್ಧಾರವು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಜಮಾತ್–ಎ–ಇಸ್ಲಾಮಿ ಸಂಘಟನೆಯ ಬೆಂಬಲ ಈ ಸುದ್ದಿವಾಹಿನಿಗೆ ಇದೆ. ಈ ಸುದ್ದಿವಾಹಿನಿಯಲ್ಲಿಪ್ರಸಾರವಾದ ಯಾವ ಕಾರ್ಯಕ್ರಮ ಅಥವಾ ವಿಚಾರವು ರಾಷ್ಟ್ರೀಯ ಭದ್ರತೆಗೆ ಅಪಾಯ ಒಡ್ಡಿತು ಎಂಬುದನ್ನು ಬಹಿರಂಗಪಡಿಸಲಾಗಿಲ್ಲ. ರಾಷ್ಟ್ರೀಯ ಭದ್ರತೆಯನ್ನು ನೋಡಿಕೊಳ್ಳುವುದು ಕಾರ್ಯಾಂಗದ ಹೊಣೆಗಾರಿಕೆ. ಶಾಸಕಾಂಗ ಮತ್ತು ನ್ಯಾಯಾಂಗವು ‘ಪೂರಕವಾದ ಪಾತ್ರ’ಗಳನ್ನು ಮಾತ್ರ ನಿರ್ವಹಿಸುತ್ತವೆ ಎಂದು ಕೋರ್ಟ್ ಹೇಳಿದೆ. ಪೆಗಾಸಸ್ ಕುತಂತ್ರಾಂಶ ಬಳಸಿ ಬೇಹುಗಾರಿಕೆ ನಡೆಸಲಾಗಿದೆ ಎಂಬ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿದ್ದ ಅಭಿಪ್ರಾಯವು ಪರವಾನಗಿ ರದ್ದತಿ ಪ್ರಕರಣದಲ್ಲಿ ಪ್ರಸ್ತುತ ಅನಿಸದು ಎಂದೂ ಹೈಕೋರ್ಟ್ ಹೇಳಿದೆ. ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ಪ್ರತೀ ಬಾರಿಯೂ ಸರ್ಕಾರವು ನುಣುಚಿಕೊಳ್ಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತ್ತು. ಸುಪ್ರೀಂ ಕೋರ್ಟ್ನ ಅಭಿಪ್ರಾಯವು ಖಾಸಗಿತನದ ಹಕ್ಕಿಗೆ ಅನ್ವಯ ಆಗುತ್ತದೆಯೇ ಹೊರತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಲ್ಲ ಎಂದು ಹೈಕೋರ್ಟ್ ವ್ಯಾಖ್ಯಾನಿಸಿದೆ. ಈ ವ್ಯಾಖ್ಯಾನವೂ ಪ್ರಶ್ನಾರ್ಹವೇ ಆಗಿದೆ.

ಪರಿಣಾಮಗಳು ಅತ್ಯಂತ ಸ್ಪಷ್ಟ: ಸರ್ಕಾರವು ಮೊಹರು ಮಾಡಿದ ಲಕೋಟೆಯಲ್ಲಿನ್ಯಾಯಾಲಯಕ್ಕೆ ಯಾವುದೇ ಮಾಹಿತಿ ಕೊಟ್ಟರೆ ಸರ್ಕಾರ ಮತ್ತು ನ್ಯಾಯಾಲಯದ ನಡುವೆಯೇ ವಿಷಯವು ಇತ್ಯರ್ಥವಾಗಿ ಬಿಡುತ್ತದೆ. ಸುದ್ದಿವಾಹಿನಿಯ ಪ್ರಕರಣದಲ್ಲಿಯೂ ಹಾಗೆಯೇ ಆಗಿದೆ. ಮಾಡಿದ ತಪ್ಪು ಏನು ಎಂಬುದನ್ನು ಸುದ್ದಿವಾಹಿನಿಗೆ ವಿವರಿಸಲಾಗಿಲ್ಲ ಮತ್ತು ಸಮರ್ಥಿಸಿಕೊಳ್ಳುವ ಅವಕಾಶವನ್ನೂ ನೀಡಲಾಗಿಲ್ಲ. ಸಹಜ ನ್ಯಾಯದ ತತ್ವ ಮತ್ತು ನ್ಯಾಯಾಲಯದ ಮಧ್ಯಪ್ರವೇಶಕ್ಕೆ ಇಂತಹ ಪ್ರಕರಣಗಳಲ್ಲಿ ಇರುವ ‘ಪಾತ್ರವು ಬಹಳ ಸೀಮಿತ’ ಎಂದು ನ್ಯಾಯಾಲಯ ಹೇಳಿದೆ. ‘ವಿಷಯವು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ್ದಾಗಿದೆ ಎಂದು ಸರ್ಕಾರವು ಹೇಳಿದರೆ, ಅದಕ್ಕೆ ಸಂಬಂಧಿಸಿದ ವಿಚಾರಗಳನ್ನು ಪ್ರತಿವಾದಿಗೆ ನ್ಯಾಯಾಲಯವು ತಿಳಿಸುವುದಿಲ್ಲ’ ಎಂದೂ ಹೈಕೋರ್ಟ್ ಹೇಳಿದೆ. ಸುದ್ದಿವಾಹಿನಿಗಳ ಮೇಲೆ ತಾತ್ಕಾಲಿಕ ನಿಷೇಧ ಹೇರಿದ್ದ ಪ್ರಕರಣಗಳು ಈ ಹಿಂದೆಯೂ ಆಗಿದ್ದವು.

ಆದರೆ, ಸುದ್ದಿವಾಹಿನಿಯನ್ನು ಕಾಯಂ ಆಗಿ ಮುಚ್ಚುವಂತೆ ನಿರ್ದಿಷ್ಟ ಮತ್ತು ಸ್ಪಷ್ಟ ಕಾರಣ ಕೊಡದೆ ಆದೇಶ ಕೊಟ್ಟಿರುವುದು ಇದೇ ಮೊದಲು. ಸುದ್ದಿವಾಹಿನಿ ಕಡೆಯಿಂದ ನಿಜವಾಗಿಯೂ ತಪ್ಪು ಆಗಿದ್ದರೆ, ಪರವಾನಗಿ ರದ್ದತಿ ನಿರ್ಧಾರವು ಆ ತಪ್ಪಿನ ಪ್ರಮಾಣಕ್ಕೆ ಅನುಗುಣವಾಗಿ ಇದೆಯೇ? ಈ ಪ್ರಕರಣದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಎದುರಾಗಿದೆ. ಹಾಗಾಗಿ ಇದು ಬಹಳ ಮಹತ್ವ ಇರುವ ವಿಚಾರ. ಸರ್ಕಾರ ಅನುಸರಿಸಿದ ಪ್ರಕ್ರಿಯೆ ಮತ್ತು ನ್ಯಾಯಾಲಯವು ತೆಗೆದುಕೊಂಡ ನಿಲುವು ದೇಶದ ಎಲ್ಲ ಮಾಧ್ಯಮ ಸಂಸ್ಥೆಗಳನ್ನೂ ದುರ್ಬಲಗೊಳಿಸುತ್ತವೆ. ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಉಂಟು ಮಾಡಿದೆ ಎಂದು ನ್ಯಾಯಾಲಯಕ್ಕೆ ಹೇಳಿ ಯಾವುದೇ ಪತ್ರಿಕೆ ಅಥವಾ ಸುದ್ದಿವಾಹಿನಿಯನ್ನು ಸರ್ಕಾರವು ಮುಚ್ಚಬಹುದು. ಇದಕ್ಕಾಗಿ ಸರ್ಕಾರವು ಯಾವುದೇ ಪುರಾವೆಯನ್ನೂ ನೀಡಬೇಕಿಲ್ಲ. ಪೌರರ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾಧ್ಯಮ ಸ್ವಾತಂತ್ರ್ಯವು ಸರ್ಕಾರ ಮತ್ತು ನ್ಯಾಯಾಲಯಗಳ ನಡುವಣ ವಿಚಾರ ಮಾತ್ರ ಅಲ್ಲವೇ ಅಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.