ಭಾರತೀಯ ದಂಡ ಸಂಹಿತೆ (ಐಪಿಸಿ)– 1860, ಅಪರಾಧ ದಂಡಪ್ರಕ್ರಿಯಾ ಸಂಹಿತೆ (ಸಿಆರ್ಪಿಸಿ) ಹಾಗೂ ಇಂಡಿಯನ್ ಎವಿಡೆನ್ಸ್ ಆ್ಯಕ್ಟ್ನ ಬದಲಾಗಿ ಹೊಸ ಕಾನೂನುಗಳನ್ನು ಜಾರಿಗೆ ತರುವ ಉದ್ದೇಶದ ಮೂರು ಮಸೂದೆಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಲೋಕಸಭೆಯಲ್ಲಿ ಕಳೆದ ವಾರ ಮಂಡಿಸಿದ್ದಾರೆ. ಈಗ ಜಾರಿಯಲ್ಲಿರುವ ಸಿಆರ್ಪಿಸಿ 1973ರಲ್ಲಿ ರೂಪುಗೊಂಡಿರುವುದಾದರೂ, ಅದರ ಮೂಲ ಇರುವುದು 1898ರಲ್ಲಿ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ನೋಟು ರದ್ದತಿಯನ್ನು, ಸಂವಿಧಾನದ 370ನೆಯ ವಿಧಿಯ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದ ತೀರ್ಮಾನವನ್ನು ಹೇಗೆ ದಿಢೀರ್ ಎಂದು ಪ್ರಕಟಿಸಿತ್ತೋ, ಅದೇ ರೀತಿಯಲ್ಲಿ ಈ ಮಸೂದೆಗಳನ್ನು ಕೂಡ ದಿಢೀರನೆ ಮಂಡಿಸಿದೆ. ಈ ಮೂರು ಮಸೂದೆಗಳ ಕರಡು ಸಿದ್ಧಪಡಿಸುವ ಸಮಿತಿಯು ಎರಡು ವರ್ಷಗಳಿಗೂ ಹಿಂದೆ ಕೆಲಸ ಶುರು ಮಾಡಿರಬಹುದಾದರೂ, ಆ ಕೆಲಸಗಳು ಪಾರದರ್ಶಕವಾಗಿ ಇರಲಿಲ್ಲ. ಸಮಿತಿಯಲ್ಲಿ ಪ್ರಾತಿನಿಧ್ಯ ಸರಿಯಾಗಿ ಇಲ್ಲ ಎಂಬ ಟೀಕೆಗಳು ಇವೆ. ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಮಸೂದೆಯನ್ನು ಈಗ ಸಂಸತ್ತಿನ ಸ್ಥಾಯಿ ಸಮಿತಿಯೊಂದರ ಪರಿಶೀಲನೆಗೆ ಒಪ್ಪಿಸಲಾಗಿದೆ.

ದೇಶದ ಅಪರಾಧ ನ್ಯಾಯದಾನ ವ್ಯವಸ್ಥೆಯಲ್ಲಿ ವ್ಯಾಪಕ ಬದಲಾವಣೆಗಳು ಬೇಕಿವೆ ಎಂಬುದರಲ್ಲಿ ಅನುಮಾನ ಇಲ್ಲ. ಬದಲಾವಣೆಗಳು ಆಗಬೇಕು ಎಂದಾದರೆ ಅಪರಾಧ ನ್ಯಾಯದಾನ ವ್ಯವಸ್ಥೆಗೆ ಸಂಬಂಧಿಸಿದ ಕಾನೂನುಗಳಲ್ಲಿ ಬದಲಾವಣೆ ಬೇಕಿದೆ. ಈ ಬೇಡಿಕೆಯು ಬಹುಕಾಲದಿಂದ ಇದೆ. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರದಲ್ಲಿ ಈ ಕಾನೂನುಗಳನ್ನು ಉಳಿಸಿಕೊಳ್ಳುವ ತೀರ್ಮಾನ ಕೈಗೊಂಡಾಗಿನಿಂದಲೂ, ಇವುಗಳಲ್ಲಿ ಬದಲಾವಣೆಗಳು ಆಗಬೇಕು ಎಂಬ ಬೇಡಿಕೆ ಇದೆ. ನ್ಯಾಯಾಲಯಗಳ ತೀರ್ಪು ಹಾಗೂ ಶಾಸಕಾಂಗ ತಂದ ತಿದ್ದುಪಡಿಗಳ ಕಾರಣದಿಂದಾಗಿ ಈ ಕಾನೂನುಗಳಲ್ಲಿ ಬಹಳಷ್ಟು ಬದಲಾವಣೆಗಳು ಆಗಿವೆ ಕೂಡ. ಆದರೆ, ಕೇಂದ್ರ ಸರ್ಕಾರವು ಈಗ ತರಲು ಉದ್ದೇಶಿಸಿರುವ ಬದಲಾವಣೆಗಳಿಗೆ ವಿಸ್ತೃತ ಸಮಾಲೋಚನೆ ಮೂಲಕ ರೂಪ ನೀಡಬೇಕಿತ್ತು. ಎಲ್ಲ ರಾಜ್ಯಗಳ ಜೊತೆ, ವಕೀಲರ ಸಂಘಗಳ ಜೊತೆ, ನ್ಯಾಯಶಾಸ್ತ್ರ ಪರಿಣತರ ಜೊತೆ, ನಿವೃತ್ತ ಪೊಲೀಸ್ ಅಧಿಕಾರಿಗಳ ಜೊತೆ, ಕಾನೂನು ಆಯೋಗ ಹಾಗೂ ನಾಗರಿಕ ಸಂಘಟನೆಗಳ ಪ್ರತಿನಿಧಿಗಳ ಜೊತೆ ಸಮಾಲೋಚನೆ ನಡೆಯಬೇಕಿತ್ತು. ಈ ಮಸೂದೆಗಳ ವಿಚಾರದಲ್ಲಿ ರಾಜ್ಯಗಳ ಹಿತಾಸಕ್ತಿ ಬಹಳ ದೊಡ್ಡದು. ಏಕೆಂದರೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕಿರುವುದು ರಾಜ್ಯಗಳ ಹೊಣೆ. ವಿಸ್ತೃತ ನೆಲೆಯಲ್ಲಿ ಸಮಾಲೋಚನೆ ನಡೆಸಿ ಮಸೂದೆ ರೂಪಿಸಿದ್ದಿದ್ದರೆ, ಅವುಗಳಿಗೆ ಹೆಚ್ಚಿನ ಸ್ವೀಕಾರಾರ್ಹತೆ ಸಿಗುತ್ತಿತ್ತು. ಈ ಕಾನೂನುಗಳು ದೇಶದ ಪ್ರತಿ ನಾಗರಿಕನಿಗೆ ಸಂಬಂಧಿಸಿದವು. ನಾಗರಿಕರ ನಡುವೆ ಪರಸ್ಪರ ಸಂಬಂಧ ಹೇಗಿರುತ್ತದೆ ಎಂಬುದನ್ನು, ನಾಗರಿಕರು ಸಮಾಜದ ಭಾಗವಾಗಿ ಹೇಗೆ ಬಾಳ್ವೆ ನಡೆಸಬೇಕು ಎಂಬುದನ್ನು ಹಾಗೂ ನಿರ್ದಿಷ್ಟ ಕ್ರಿಯೆಗಳಿಗೆ ಪ್ರಭುತ್ವವು ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಈ ಕಾನೂನುಗಳು ತೀರ್ಮಾನಿಸುತ್ತವೆ. ಈಗ ಈ ಮಸೂದೆಗಳನ್ನು ಸ್ಥಾಯಿ ಸಮಿತಿಯು ಪರಿಶೀಲಿಸಲಿರುವುದು ಸ್ವಾಗತಾರ್ಹ. ಸಮಿತಿಯು ಮಸೂದೆಗಳನ್ನು ಕೂಲಂಕಷವಾಗಿ ಪರಿಶೀಲಿಸಲಿದೆ ಎಂಬ ನಿರೀಕ್ಷೆ ಹೊಂದಬಹುದು. ಇನ್ನು ಮುಂದೆ ಈ ಮಸೂದೆಗಳ ವಿಚಾರವಾಗಿ ಸಾರ್ವಜನಿಕ ವೇದಿಕೆಗಳಲ್ಲಿ ಕೂಡ ಚರ್ಚೆಗಳು ನಡೆಯುತ್ತವೆ. ಈ ಚರ್ಚೆಗಳಲ್ಲಿ ವ್ಯಕ್ತವಾಗುವ ಅನಿಸಿಕೆಗಳಿಂದಲೂ ಮಸೂದೆಗಳು ಒಂದಿಷ್ಟು ಒಳ್ಳೆಯ ಅಂಶಗಳನ್ನು ಎತ್ತಿಕೊಳ್ಳಬಹುದು. ಒಳ್ಳೆಯ ಅಂಶಗಳನ್ನು ಎತ್ತಿಕೊಳ್ಳಲು ಸರ್ಕಾರವು ಹಿಂದೇಟು ಹಾಕಬಾರದು.

ಹೊಸದಾಗಿ ರೂಪಿಸಿರುವ ಸಂಹಿತೆಗಳು ಈಗ ಜಾರಿಯಲ್ಲಿ ಇರುವ ಕಾನೂನುಗಳಿಗಿಂತ ಹೆಚ್ಚು ವಿಸ್ತಾರವಾಗಿವೆ. ಇದು ಸಹಜ. ಏಕೆಂದರೆ ಸಮಾಜದಲ್ಲಿ ಬದಲಾವಣೆಗಳು ಆದಂತೆಲ್ಲ, ಕಾನೂನು ಅವುಗಳನ್ನು ಗುರುತಿಸಬೇಕಾಗುತ್ತದೆ. ಹೊಸ ಬಗೆಯ ಅಪರಾಧಗಳನ್ನು ವ್ಯಾಖ್ಯಾನಿಸಿ, ಅವುಗಳಿಗೆ ಶಿಕ್ಷೆ ಏನು ಎಂಬುದನ್ನು ಹೇಳಬೇಕಾಗುತ್ತದೆ. ನ್ಯಾಯದಾನ ಪ್ರಕ್ರಿಯೆಯನ್ನು ಇನ್ನಷ್ಟು ಉತ್ತಮವಾಗಿ ಮಾಡುವುದು ಹೇಗೆ ಎಂಬುದನ್ನು ಕಂಡುಕೊಳ್ಳಬೇಕಾಗುತ್ತದೆ. ಭಾರತೀಯ ನ್ಯಾಯ ಸಂಹಿತೆಯು ಗಂಭೀರ ಸ್ವರೂಪದ್ದಲ್ಲದ ಅಪರಾಧಗಳಿಗೆ ಸಮುದಾಯ ಸೇವೆಯನ್ನು ಶಿಕ್ಷೆಯ ರೂಪದಲ್ಲಿ ನೀಡುವ ಪ್ರಸ್ತಾವ ಹೊಂದಿದೆ. ಆದರೆ, ತೀವ್ರ ಟೀಕೆಗಳಿಗೆ ಗುರಿಯಾಗಿರುವ ಅಂಶಗಳೂ ಈ ಸಂಹಿತೆಯಲ್ಲಿ ಇವೆ. ‘ದೇಶದ್ರೋಹ’ವನ್ನು ಅಪರಾಧಗಳ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಕೇಂದ್ರ ಹೇಳಿದೆ. ಆದರೆ, ಅದನ್ನು ಇನ್ನೊಂದು ಹೆಸರು ಹಾಗೂ ಇನ್ನೊಂದು ರೂಪದಲ್ಲಿ ಸಂಹಿತೆಯಲ್ಲಿ ಸೇರಿಸಿದೆ. ಮೂರೂ ಮಸೂದೆಗಳಲ್ಲಿ ಇರುವ ಅಂಶಗಳು ಮುಂದಿನ ದಿನಗಳಲ್ಲಿ ದೇಶದಲ್ಲಿ ವ್ಯಾಪಕ ಚರ್ಚೆಗಳಿಗೆ ಒಳಗಾಗಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.