ಕೊರೊನಾ ಸೋಂಕಿನ ಕಾರಣದಿಂದಾಗಿ ಮನೆಮಂದಿಯೆಲ್ಲ ಮನೆಯಲ್ಲಿಯೇ ಉಳಿಯಬೇಕಾಗಿ ಬಂದಿರುವ ಸಾಮಾಜಿಕ ಸಂದರ್ಭವು ಕೌಟುಂಬಿಕ ಅನುಬಂಧವನ್ನು ಗಾಢಗೊಳಿಸಲಿಕ್ಕೆ ಸಹಕಾರಿ ಎನ್ನುವ ನಿರೀಕ್ಷೆಯನ್ನು ಹುಸಿಗೊಳಿಸುವ ಪ್ರಕರಣಗಳು ದೇಶದ ವಿವಿಧ ಭಾಗಗಳಿಂದ ವರದಿಯಾಗುತ್ತಿವೆ. ಜನರೆಲ್ಲ ಮನೆಯಲ್ಲಿಯೇ ಉಳಿಯುವುದು ಅನಿವಾರ್ಯವಾಗಿರುವ ಸಂದರ್ಭದಲ್ಲಿ ಒಟ್ಟಾರೆ ಅಪರಾಧಗಳ ಸಂಖ್ಯೆ ಕೆಳಮುಖವಾಗಿದ್ದರೂ, ಕೌಟುಂಬಿಕ ಹಿಂಸೆಯ ಘಟನೆಗಳು ಹೆಚ್ಚಾಗಿರುವುದು ಕಳವಳಕಾರಿ. ದೌರ್ಜನ್ಯಕ್ಕೊಳಗಾದ ದೂರುಗಳು ಸಾಮಾನ್ಯ ಸಂದರ್ಭಗಳಿಗಿಂತಲೂ ದುಪ್ಪಟ್ಟು ಪ್ರಮಾಣದಲ್ಲಿ ವರದಿಯಾಗುತ್ತಿರುವುದಾಗಿ ರಾಷ್ಟ್ರೀಯ ಮಹಿಳಾ ಆಯೋಗ ಹೇಳಿದೆ. ರಾಜ್ಯಗಳಲ್ಲಿನ ಮಹಿಳಾ ಆಯೋಗಗಳಿಗೂ ಸಂತ್ರಸ್ತ ಮಹಿಳೆಯರ ದುಃಖದುಮ್ಮಾನದ ಬಹಳಷ್ಟು ದೂರುಗಳು ತಲುಪಿವೆ. ಲಾಕ್‌ಡೌನ್ ಸಂದರ್ಭದಲ್ಲಿ ಹೆಚ್ಚಾಗಿರುವ ಕೌಟುಂಬಿಕ ದೌರ್ಜನ್ಯಗಳ ಸಂಗತಿಯನ್ನು ಕೆಲವು ವಕೀಲರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಗಮನಕ್ಕೂ ತಂದಿದ್ದಾರೆ. ಸಾಮಾನ್ಯ ಸಂದರ್ಭಗಳಲ್ಲಾದರೆ ಕೌಟುಂಬಿಕ ದೌರ್ಜನ್ಯ ಕುರಿತಾದ ದೂರುಗಳ ಹಿನ್ನೆಲೆಯಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ದಾರಿಗಳಿದ್ದವು. ಆದರೆ, ಇಡೀ ಪೊಲೀಸ್ ವ್ಯವಸ್ಥೆಯು ಲಾಕ್‌ಡೌನ್ ಜಾರಿಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಟೊಂಕ ಕಟ್ಟಿ ನಿಂತಿರುವಾಗ, ಮನೆವಾರ್ತೆಗಳ ಬಗ್ಗೆ ಗಮನಹರಿಸಲು ಅವರಿಗೆ ಪುರಸತ್ತಾಗುತ್ತಿಲ್ಲ. ಸಂತ್ರಸ್ತ ಹೆಣ್ಣುಮಕ್ಕಳ ನೆರವಿಗೆ ಧಾವಿಸುವುದು ಬಂಧುಮಿತ್ರರಿಗೂ ಸಾಧ್ಯವಾಗುತ್ತಿಲ್ಲ.

ಕೌಟುಂಬಿಕ ದೌರ್ಜನ್ಯ ಹೆಚ್ಚಳಕ್ಕೆ ಕಾರಣಗಳು ಒಂದೆರಡಲ್ಲ. ಕೊರೊನಾ ಬಿಕ್ಕಟ್ಟಿನ ಮುಂದುವರಿಕೆಯಿಂದಾಗಿ, ಹೊರಗೆ ಹೋಗಿ ದುಡಿಯುವವರು ಮನೆಗಳಲ್ಲಿಯೇ ಉಳಿಯುವಂತಾಗಿರುವುದು ಸಾಮಾಜಿಕ ಮತ್ತು ಆರ್ಥಿಕ ಬಿಕ್ಕಟ್ಟುಗಳಿಗೆ ಕಾರಣವಾಗಿದೆ. ಆಯಾ ದಿನದ ದುಡಿಮೆಯನ್ನೇ ಅನ್ನದ ಮಾರ್ಗವಾಗಿಸಿಕೊಂಡವರ ಆರ್ಥಿಕ ಮೂಲಗಳೇ ಬತ್ತಿಹೋಗಿವೆ. ಸಂಬಳ ಕಡಿತ, ಉದ್ಯೋಗ ನಷ್ಟದ ಸಂಕಷ್ಟ–ಭೀತಿಯನ್ನು ಎದುರಿಸುತ್ತಿರುವವರ ಸಂಖ್ಯೆ ದೊಡ್ಡದಿದೆ. ಪ್ರಸಕ್ತ ಬಿಕ್ಕಟ್ಟು ಯಾವಾಗ ಬಗೆಹರಿಯುತ್ತದೆ ಎನ್ನುವುದು ಸ್ಪಷ್ಟವಾಗದೆ, ನಾಳೆಗಳ ನಿರೀಕ್ಷೆ ಅಸಹನೀಯವಾಗಿ ಪರಿಣಮಿಸಿರುವ ಹಿನ್ನೆಲೆಯಲ್ಲಿ ಕೆಲವರು ಮಾನಸಿಕ ಸ್ಥಿಮಿತ ಕಳೆದುಕೊಳ್ಳುತ್ತಿದ್ದಾರೆ. ಆರ್ಥಿಕ ಅಸ್ಥಿರತೆಯು ಒತ್ತಡಕ್ಕೆ ಕಾರಣವಾಗಿ, ಅಸಹಾಯಕತೆಗೆ ತುತ್ತಾಗುವವರು ತಮ್ಮ ಕೋಪವನ್ನು ಹೆಂಡತಿ, ಮಕ್ಕಳ ಮೇಲೆ ವ್ಯಕ್ತಪಡಿಸುತ್ತಿದ್ದಾರೆ. ಮದ್ಯವ್ಯಸನಿಗಳಂತೂ ಕುಡಿತಕ್ಕೆ ಸರಕು ದೊರೆಯದ ಹತಾಶೆಯನ್ನು ಮನೆಮಂದಿಯ ಮೇಲೆ ಹರಿಹಾಯುವ ಮೂಲಕ ವ್ಯಕ್ತಪಡಿಸುತ್ತಿರುವ ಸಾಧ್ಯತೆಗಳೂ ಇಲ್ಲದಿಲ್ಲ. ಮನೆಯಲ್ಲಿನ ಗಂಡಸರ ನೆಮ್ಮದಿಗೆ ಸಂಚಕಾರ ಉಂಟಾದಾಗಲೆಲ್ಲ ಅದರ ಪರಿಣಾಮವು ಮಕ್ಕಳು– ಮಹಿಳೆಯರ ಮೇಲೆ ಉಂಟಾಗುವುದು ಭಾರತೀಯ ಸಮಾಜದಲ್ಲಿ ಹೊಸತೇನಲ್ಲ. ಪ್ರಸಕ್ತ ಬಿಕ್ಕಟ್ಟಂತೂ ಜಗತ್ತು ಹಿಂದೆಂದೂ ಕಂಡು ಕೇಳರಿಯದಷ್ಟು ಗಂಭೀರವಾದುದು. ಇಂಥ ಸಂದರ್ಭದಲ್ಲಿ ಅನೇಕ ಮಹಿಳೆಯರ ಬದುಕು ಮತ್ತೂ ದುಸ್ತರವಾಗಿದೆ. ಕೆಲವು ಅಮಾಯಕ ಮಹಿಳೆಯರಿಗೆ ತಾವು ಹಿಂಸೆಗೊಳಗಾದಾಗ ಯಾರಿಗೆ ದೂರು ಸಲ್ಲಿಸಬೇಕೆನ್ನುವುದೂ ತಿಳಿದಿಲ್ಲ. ಮನೆಯಿಂದ ಹೊರಗೆ ಬರುವುದು ಸಾಧ್ಯವಾಗದ ಸಂದರ್ಭದಲ್ಲಿ ಸುರಕ್ಷಿತ ಸ್ಥಳಗಳಿಗೆ ತೆರಳುವುದೂ ಅವರಿಗೆ ಸಾಧ್ಯವಾಗುತ್ತಿಲ್ಲ. ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರಿಗೆ ರಕ್ಷಣೆ ಒದಗಿಸುವುದು ಸರ್ಕಾರದ ಆದ್ಯತೆಯ ಸಂಗತಿಗಳಲ್ಲೊಂದಾಗಬೇಕು. ಮಕ್ಕಳು–ಮಹಿಳೆಯರ ಮೇಲಿನ ದೌರ್ಜನ್ಯವು ಭಾರತಕ್ಕೆ ಸೀಮಿತವಾದ ವಿದ್ಯಮಾನವೇನಲ್ಲ. ಕೊರೊನಾ ವೈರಾಣುವಿನ ಕಾರಣದಿಂದಾಗಿ ಲಾಕ್‌ಡೌನ್ ಆಗಿರುವ ವಿಶ್ವದ ನಾನಾ ಭಾಗಗಳಿಂದ ಕೌಟುಂಬಿಕ ದೌರ್ಜನ್ಯದ ಪ್ರಕರಣಗಳು ವರದಿಯಾಗುತ್ತಿವೆ. ಆ ಕಾರಣದಿಂದಾಗಿಯೇ, ‘ಕೋವಿಡ್–19ರ ವಿರುದ್ಧ ಹೋರಾಟ ನಡೆಸುವ ಈ ಸಂದರ್ಭದಲ್ಲಿ, ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗಟ್ಟುವುದನ್ನು
ಕೂಡ ಎಲ್ಲ ಸರ್ಕಾರಗಳು ಆದ್ಯತೆಯ ವಿಷಯವನ್ನಾಗಿ ಪರಿಗಣಿಸಬೇಕು’ ಎಂದು ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಹೇಳಿದ್ದಾರೆ. ಸಮಾಜದ ಅತ್ಯಂತ ಅಶಕ್ತ ವರ್ಗವಾದ ಮಕ್ಕಳು–ಮಹಿಳೆಯರು ತಮ್ಮ ಮನೆಗಳಲ್ಲಿಯೇ ಶೋಷಣೆಗೊಳಗಾಗುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಕ್ರಮಗಳನ್ನು ಕೈಗೊಳ್ಳಬೇಕು. ದೌರ್ಜನ್ಯದ ಘಟನೆಗಳು ನಡೆದಾಗ ಸಂತ್ರಸ್ತರು ಸಹಾಯ ಪಡೆಯಲಿಕ್ಕಾಗಿ ಏನು ಮಾಡಬಹುದೆನ್ನುವುದರ ಕುರಿತು ಜಾಗೃತಿ ಮೂಡಿಸುವ ಕೆಲಸ ವ್ಯಾಪಕವಾಗಿ ನಡೆಯಬೇಕಾಗಿದೆ. ಕೌಟುಂಬಿಕ ಸೌಹಾರ್ದವನ್ನು ಕಾಪಾಡಿಕೊಳ್ಳುವ ದಿಸೆಯಲ್ಲಿ ಸ್ವಯಂ ಸೇವಾ ಸಂಸ್ಥೆಗಳ ನೆರವನ್ನೂ ಪಡೆಯಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.