‘ನ್ಯೂ ಸ್ಟಾರ್ಟ್’ ಎಂದು ಕರೆಯಲಾಗುವ ನ್ಯೂ ಸ್ಟ್ರಾಟೆಜಿಕ್ ಆರ್ಮ್ಸ್ ರಿಡಕ್ಷನ್ ಟ್ರೀಟಿಯನ್ನು (ಸಮರ ಶಸ್ತ್ರಾಸ್ತ್ರ ಕಡಿತ ಹೊಸ ಕರಾರು) ಅಮಾನತಿನಲ್ಲಿ ಇರಿಸುವುದಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಘೋಷಿಸಿದ್ದಾರೆ. ಇದರೊಂದಿಗೆ ಅಮೆರಿಕ–ರಷ್ಯಾ ನಡುವೆ ಆಗಿದ್ದ ಅಣ್ವಸ್ತ್ರ ಕಡಿತದ ಕೊನೆಯ ಒಪ್ಪಂದ ಕೂಡ ಗಂಡಾಂತರಕ್ಕೆ ಸಿಲುಕಿದೆ. ಶೀತಲ ಸಮರ ಕಾಲದಲ್ಲಿ ಅಣು ಯುದ್ಧದ ಭೀತಿಯಲ್ಲಿದ್ದ ಜಗತ್ತಿಗೆ ಇಂತಹ ಒಪ್ಪಂದಗಳು ಚಿತ್ತಸ್ವಾಸ್ಥ್ಯ ಮತ್ತು ಸ್ಥಿರತೆ ತಂದಿದ್ದವು; ಪಾರದರ್ಶಕತೆ ಮತ್ತು ಪರಸ್ಪರ ವಿಶ್ವಾಸವನ್ನೂ ಮೂಡಿಸಿದ್ದವು.

ಎರಡೂ ದೇಶಗಳು ಒಂದರ ನಂತರ ಒಂದರಂತೆ ಒಪ್ಪಂದಗಳಿಂದ ಹಿಂದೆ ಸರಿಯುವ ಮೂಲಕ ಈ ಮೊದಲೇ ಅತ್ಯಂತ ನಾಜೂಕು ಸ್ಥಿತಿಯಲ್ಲಿದ್ದ ಸ್ಥಿರತೆಯನ್ನು ವ್ಯವಸ್ಥಿತವಾಗಿ ಹಾಳು ಮಾಡಿವೆ. ಡೊನಾಲ್ಡ್ ಟ್ರಂಪ್ ಅವರು ಅಧ್ಯಕ್ಷರಾಗಿದ್ದಾಗ ಮಧ್ಯಂತರ ಅಣ್ವಸ್ತ್ರ ಬಳಕೆ ನಿಷೇಧ ಒಪ್ಪಂದದಿಂದ ಅಮೆರಿಕ ಹಿಂದಕ್ಕೆ ಸರಿಯಿತು. ಜೋ ಬೈಡನ್ ಅವರು ಅಮೆರಿಕದ ಅಧ್ಯಕ್ಷರಾದ ಬಳಿಕ ಓಪನ್ ಸ್ಕೈಸ್ ಟ್ರೀಟಿಯನ್ನು (ಸದಸ್ಯ ರಾಷ್ಟ್ರಗಳು ಪರಸ್ಪರರ ವಾಯು ಪ್ರದೇಶದಲ್ಲಿ ಶಸ್ತ್ರಾಸ್ತ್ರ ರಹಿತ ವಿಮಾನಗಳ ಮೂಲಕ ಪರಿಶೀಲನೆ ನಡೆಸುವ ಅವಕಾಶ) ನವೀಕರಿಸಲು ನಿರಾಕರಿಸಿದರು. ಈಗ, ಪುಟಿನ್ ಅವರು ನ್ಯೂ ಸ್ಟಾರ್ಟ್ ಕರಾರಿನಿಂದ ಹೊರಗೆ ಬಂದಿದ್ದಾರೆ.

1991ರಲ್ಲಿ ಸಹಿ ಮಾಡಲಾಗಿದ್ದ ‘ಸ್ಟಾರ್ಟ್’ ಒಪ್ಪಂದದ ಬದಲಿಗೆ ನ್ಯೂ ಸ್ಟಾರ್ಟ್ ಒಪ್ಪಂದಕ್ಕೆ ಅಮೆರಿಕ ಮತ್ತು ರಷ್ಯಾ 2010ರಲ್ಲಿ ಸಹಿ ಹಾಕಿದ್ದವು. ಅದರ ಮರು ವರ್ಷ ಅದು ಜಾರಿಗೆ ಬಂದಿತ್ತು. ಅಣ್ವಸ್ತ್ರಗಳು ಮತ್ತು ಉಡ್ಡಯನ ವೇದಿಕೆಗಳ ಸಂಖ್ಯೆಯನ್ನು ಎರಡೂ ದೇಶಗಳು ಕ್ರಮವಾಗಿ 1,550 ಮತ್ತು 700ಕ್ಕೆ ಸೀಮಿತಗೊಳಿಸಿಕೊಳ್ಳಬೇಕು ಎಂಬುದು ಈ ಒಪ್ಪಂದದ ಗುರಿಯಾಗಿದೆ. ಈ ಒಪ್ಪಂದವನ್ನು ಐದು ವರ್ಷಗಳ ಅವಧಿಗೆ 2021ರಲ್ಲಿ ವಿಸ್ತರಿಸಲಾಗಿತ್ತು. ಹಾಗಿದ್ದರೂ ಈ ಕರಾರು ಉಳಿಯುವ ವಿಚಾರವು ಅನಿಶ್ಚಿತವೇ ಆಗಿತ್ತು. ಈ ಒಪ್ಪಂದವು ಯುದ್ಧರಂಗವಲ್ಲದ ಕಡೆಯೂ ದಾಳಿ ನಡೆಸಲು ಬಳಸುವ ಅಣ್ವಸ್ತ್ರಗಳಿಗೆ ಅನ್ವಯವಾಗುತ್ತದೆಯೇ ಹೊರತು ಯುದ್ಧರಂಗದಲ್ಲಿ ಬಳಸುವ ಅಣ್ವಸ್ತ್ರಗಳಿಗೆ ಅಲ್ಲ. ಈ ಕಾರಣಕ್ಕಾಗಿಯೇ ಒಪ್ಪಂದವನ್ನು ಮರುರೂಪಿಸಬೇಕು ಎಂದು ಟ್ರಂಪ್ ಬಯಸಿದ್ದರು. ಉಕ್ರೇನ್ ಮೇಲೆ ಯುದ್ಧ ಆರಂಭಿಸಿದ ಬಳಿಕ, ತನ್ನ ನೆಲೆಗಳ ಪರಿಶೀಲನೆಗೆ ಅಮೆರಿಕಕ್ಕೆ ಅವಕಾಶ ಕೊಡಲು ರಷ್ಯಾ ಹಿಂದೇಟು ಹಾಕುತ್ತಿದೆ.

ನ್ಯೂ ಸ್ಟಾರ್ಟ್ ಕರಾರು ಯಶಸ್ವಿ ಆಗಿತ್ತು. ಕರಾರಿನಲ್ಲಿ ನಿಗದಿ ಮಾಡಲಾಗಿದ್ದ 2018ರ ಗಡುವಿನ ಹೊತ್ತಿಗೆ ಎರಡೂ ದೇಶಗಳು ನಿಯೋಜಿಸಿದ್ದ ಅಣ್ವಸ್ತ್ರಗಳು ಮತ್ತು ಕ್ಷಿಪಣಿಗಳನ್ನು ಒಪ್ಪಿತ ಸಂಖ್ಯೆಗೆ ಇಳಿಸಿದ್ದವು. ಹಾಗಾಗಿಯೇ ಈ ಕರಾರು ಸ್ಥಗಿತಗೊಂಡಿರುವುದು ದುರದೃಷ್ಟಕರ ಎನಿಸುತ್ತದೆ. ಹಾಗಿದ್ದರೂ ಸನ್ನಿವೇಶವು ನಿರಾಶಾದಾಯಕವೇನೂ ಅಲ್ಲ. ರಷ್ಯಾವು ಕರಾರನ್ನು ಅಮಾನತಿನಲ್ಲಿ ಇರಿಸಿದೆಯೇ ಹೊರತು ಅದರಿಂದ ಹೊರಗೆ ಬಂದಿಲ್ಲ. ಕರಾರನ್ನು ಅಮಾನತಿನಲ್ಲಿ ಇರಿಸಿದ ನಿರ್ಧಾರದಿಂದ ಹಿಂದಕ್ಕೆ ಸರಿಯುವ ಅವಕಾಶ ಇದೆ ಎಂಬುದನ್ನೂ ರಷ್ಯಾ ಸ್ಪಷ್ಟಪಡಿಸಿದೆ. ಅಂದರೆ, ಕರಾರನ್ನು ಮರಳಿ ಜಾರಿಗೆ ತರುವುದಕ್ಕಾಗಿ ಸಂಧಾನ ನಡೆಸಲು ಅವಕಾಶ ಇದೆ ಎಂದು ಅರ್ಥ. ಉಕ್ರೇನ್ ಜೊತೆಗೆ ತಾವು ನಡೆಸುತ್ತಿರುವ ಯುದ್ಧವನ್ನು ತಮಗೆ ಬೇಕಿರುವ ರೀತಿಯಲ್ಲಿ ಕೊನೆಗೊಳಿಸಲು ಸಹಾಯಕವಾಗುವಂತೆ ಸಂಧಾನ ನಡೆಸಲು ಅಮೆರಿಕದ ಮೇಲೆ ಒತ್ತಡ ಹೇರುವುದು ಪುಟಿನ್ ಅವರ ತಂತ್ರ ಎಂಬಂತೆ ಕಾಣಿಸುತ್ತಿದೆ.

ರಷ್ಯಾ ಈಗ ಕರಾರನ್ನು ಸ್ಥಗಿತ ಮಾಡಿರುವ ಕಾರಣ ನ್ಯೂ ಸ್ಟಾರ್ಟ್ ಕರಾರಿನ ಮರುಸಂಧಾನವನ್ನು ಅಮೆರಿಕ ಆರಂಭಿಸಲು ಅವಕಾಶ ಇದೆ. ಅಣ್ವಸ್ತ್ರ ಸಂಗ್ರಹವನ್ನು ಹೆಚ್ಚಿಸುತ್ತಲೇ ಇರುವ ಚೀನಾ ಕೂಡ ಅಣು ಒಪ್ಪಂದಗಳ ಭಾಗವಾಗಬೇಕು ಎಂಬ ಇಚ್ಛೆಯನ್ನು ಅಮೆರಿಕ ಹೊಂದಿದೆ. ಅಮೆರಿಕ ಮತ್ತು ರಷ್ಯಾಕ್ಕೆ ಪರಿಹರಿಸಿಕೊಳ್ಳಲೇಬೇಕಾದ ಹಲವು ಕಳವಳಗಳು ಇವೆ. ಒಂದು ಕರಾರು ರದ್ದಾದರೆ ಮತ್ತೊಂದನ್ನು ರೂಪಿಸಿಕೊಳ್ಳುವುದು ಸುಲಭವೇನೂ ಅಲ್ಲ. ಹಾಗಾಗಿಯೇ ಕರಾರನ್ನು ಅಮಾನತುಗೊಳಿಸುವುದು ಅಥವಾ ಕೈಬಿಡುವುದು ಮುಂದಕ್ಕೆ ಸಾಗುವುದಕ್ಕೆ ಇರುವ ಸರಿಯಾದ ದಾರಿ ಅಲ್ಲ. ಅಣ್ವಸ್ತ್ರ ನಿಯಂತ್ರಣ ಕರಾರುಗಳನ್ನು ಸ್ಥಗಿತಗೊಳಿಸುವುದು ಹೊಣೆಗಾರಿಕೆಯ ನಡೆಯೇ ಅಲ್ಲ. ಅದರಲ್ಲೂ ಅಮೆರಿಕ ಮತ್ತು ರಷ್ಯಾ ಸಂಬಂಧವು ಅತ್ಯಂತ ಬಿಗುವಿನಿಂದ ಕೂಡಿರುವ ಈ ಹೊತ್ತಿನಲ್ಲಂತೂ ಹೀಗೆ ಮಾಡಲೇಬಾರದು. ನ್ಯೂ ಸ್ಟಾರ್ಟ್ ಕರಾರಿನ ಸ್ಥಿತಿಯು ಡೋಲಾಯಮಾನವಾದರೆ, ಅದರ ಪರಿಣಾಮವು ಜಾಗತಿಕವಾಗಿರುತ್ತದೆ. ಅಮೆರಿಕ ಮತ್ತು ರಷ್ಯಾವು ಶೀತಲ ಸಮರ ಕಾಲದ ಅಣ್ವಸ್ತ್ರ ಪೈಪೋಟಿಗೆ ದೌಡಾಯಿಸಲೇಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.