ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯು ಸೋಮವಾರ ನಡೆದ ತನ್ನ 54ನೇ ಸಭೆಯಲ್ಲಿ ಕೆಲವು ನಿರೀಕ್ಷಿತ ಹಾಗೂ ಸ್ವಾಗತಾರ್ಹ ತೀರ್ಮಾನಗಳನ್ನು ಕೈಗೊಂಡಿದೆ. ಇನ್ನು ಕೆಲವು ಪ್ರಸ್ತಾವಗಳ ಕುರಿತ ತೀರ್ಮಾನವನ್ನು ಮುಂದಕ್ಕೆ ಹಾಕಿದೆ. ಹಲವು ಉತ್ಪನ್ನಗಳ ಮೇಲಿನ ತೆರಿಗೆ ದರದಲ್ಲಿ ಒಂದಿಷ್ಟು ಹೊಂದಾಣಿಕೆಗಳನ್ನು ತರಲು ನಿರ್ಧರಿಸಿದೆ. ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸುವ ಕೆಲವು ಔಷಧಗಳ ಮೇಲಿನ ತೆರಿಗೆಯ ಪ್ರಮಾಣವನ್ನು ಈಗಿನ ಶೇಕಡ 12ರ ಪ್ರಮಾಣದಿಂದ ಶೇ 5ಕ್ಕೆ ಇಳಿಕೆ ಮಾಡಲು ತೀರ್ಮಾನಿಸಿದೆ. ಕೆಲವು ಕೈಗಾರಿಕಾ ಉತ್ಪನ್ನಗಳ ಮೇಲಿನ ತೆರಿಗೆ ಪ್ರಮಾಣ ಶೇ 18ರಷ್ಟು ಇರುವುದನ್ನು ಶೇ 12ಕ್ಕೆ ತಗ್ಗಿಸಲು ಕೂಡ ಮಂಡಳಿ ತೀರ್ಮಾನಿಸಿದೆ. ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳಿಗೆ ಖಾಸಗಿ ಹಾಗೂ ಸರ್ಕಾರಿ ವಲಯದಿಂದ ಸಂಶೋಧನೆ ಮತ್ತು ಅಭಿವೃದ್ಧಿ ಉದ್ದೇಶಕ್ಕೆ ಸಿಗುವ ಅನುದಾನವನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿರಿಸಲು ತೀರ್ಮಾನಿಸುವ ಮೂಲಕ ಮಂಡಳಿಯು ಸ್ವಾಗತಾರ್ಹ ಕೆಲಸ ಮಾಡಿದೆ. ಈ ಬಗೆಯ ಅನುದಾನದ ವಿಚಾರವಾಗಿ, ಜಿಎಸ್‌ಟಿ ಪಾವತಿ ಆಗಿಲ್ಲ ಎಂದು ಹಲವು ಸಂಸ್ಥೆಗಳಿಗೆ ನೋಟಿಸ್ ನೀಡಲಾಗಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ. ಈ ಬಗೆಯ ನೋಟಿಸ್‌ಗಳು ಸಂಶೋಧನೆ ಮತ್ತು ಅಭಿವೃದ್ಧಿ ಕೆಲಸಗಳ ವಿಚಾರವಾಗಿ ಸರ್ಕಾರದ ಧೋರಣೆ ಏನು ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದ್ದವು. ಜಿಎಸ್‌ಟಿ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿ ಆಗಿಸುವ ಹಾಗೂ ತೆರಿಗೆ ಸಂಗ್ರಹವನ್ನು ಸುಧಾರಿಸುವ ಉದ್ದೇಶದಿಂದ ಮಂಡಳಿಯು ಕೆಲವು ನಿರ್ಧಾರಗಳನ್ನು ಕೈಗೊಂಡಿದೆ.

ಕೆಲವು ವಿಷಯಗಳ ಬಗ್ಗೆ ವಿಸ್ತೃತವಾದ ಅಧ್ಯಯನದ ಅಗತ್ಯವಿದೆ ಎಂದು ಮಂಡಳಿಯು ಅಭಿಪ್ರಾಯಪಟ್ಟಿದೆ. ಆ ಹೊಣೆಯನ್ನು ಸಚಿವರ ತಂಡಗಳಿಗೆ ವಹಿಸಲಾಗಿದೆ. ಅವು ನೀಡುವ ಶಿಫಾರಸುಗಳನ್ನು ಆಧರಿಸಿ ಅಂತಿಮ ನಿರ್ಣಯ ಕೈಗೊಳ್ಳಲಾಗುತ್ತದೆ. ವಿಮಾ ಉತ್ಪನ್ನಗಳ ಮೇಲೆ ವಿಧಿಸುತ್ತಿರುವ ಜಿಎಸ್‌ಟಿ ಅಂತಹ ವಿಷಯಗಳಲ್ಲಿ ಒಂದು. ಈ ಬಗ್ಗೆ ಈಚಿನ ದಿನಗಳಲ್ಲಿ ಬಹಳಷ್ಟು ಚರ್ಚೆಗಳು ಆಗಿವೆ. ವಿಮಾ ಪ್ರೀಮಿಯಂ ಪಾವತಿ ಮೇಲೆ ಶೇ 18ರಷ್ಟು ಜಿಎಸ್‌ಟಿ ವಿಧಿಸುತ್ತಿರುವುದನ್ನು ಪುನರ್ ಪರಿಶೀಲನೆಗೆ ಒಳಪಡಿಸಬೇಕು, ತೆರಿಗೆ ಪ್ರಮಾಣವನ್ನು ಕಡಿಮೆ ಮಾಡಬೇಕು ಎಂಬ ಬೇಡಿಕೆ ಬಹಳ ಬಲವಾಗಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಬಿಜೆಪಿಯ ಕೆಲವು ಮಿತ್ರಪಕ್ಷಗಳ ಪ್ರಮುಖರು ಕೂಡ ಈ ಬೇಡಿಕೆಯನ್ನು ಮಂಡಿಸಿದ್ದಾರೆ. ಈಗ ಈ ವಿಚಾರವಾಗಿ ಕೇಂದ್ರ ಸರ್ಕಾರದ ನಿಲುವು ಕೂಡ ಬದಲಾಗಿರುವಂತೆ ಕಾಣುತ್ತಿದೆ. ಸಚಿವರ ಹೊಸ ತಂಡವೊಂದು ಇದರ ಬಗ್ಗೆ ಕೆಲವು ವಾರಗಳಲ್ಲಿ ಶಿಫಾರಸು ಮಾಡುವ ನಿರೀಕ್ಷೆ ಇದೆ. ಈ ಶಿಫಾರಸುಗಳನ್ನು ಜಿಎಸ್‌ಟಿ ಮಂಡಳಿಯು ನವೆಂಬರ್‌ನಲ್ಲಿ ನಡೆಯಲಿರುವ ಸಭೆಯಲ್ಲಿ ಪರಿಗಣನೆಗೆ ತೆಗೆದುಕೊಳ್ಳಲಿದೆ. ದೇಶದಲ್ಲಿ ಆರೋಗ್ಯ ವಿಮೆಗಳನ್ನು ಪಡೆದುಕೊಳ್ಳುವವರ ಪ್ರಮಾಣವು ಬಹಳ ಕಡಿಮೆ ಇದೆ. ವಿಮೆಯ ಪ್ರೀಮಿಯಂ ಮೊತ್ತ ಹೆಚ್ಚಿರುವುದು ಸೇರಿದಂತೆ ಇದಕ್ಕೆ ಹಲವು ಕಾರಣಗಳಿವೆ. ದೇಶದ ಸಾರ್ವಜನಿಕ ಆರೋಗ್ಯ ಸೇವಾ ಮೂಲಸೌಕರ್ಯವು ಯಾವುದಕ್ಕೂ ಸಾಲದ ಸ್ಥಿತಿಯಲ್ಲಿದೆ. ಕೋವಿಡ್ ಸಾಂಕ್ರಾಮಿಕದ ನಂತರದ ಅವಧಿಯಲ್ಲಿ, ಆಸ್ಪತ್ರೆಗೆ ದಾಖಲಾದಾಗ ಆಗುವ ವೆಚ್ಚಗಳು ಹೆಚ್ಚಾಗಿವೆ. ಪ್ರೀಮಿಯಂ ಮೇಲಿನ ತೆರಿಗೆಯಲ್ಲಿ ಯಾವ ರೀತಿಯಲ್ಲಿ ಬದಲಾವಣೆಗಳನ್ನು ತರಬೇಕು ಎಂಬ ವಿಚಾರವಾಗಿ ಹಲವು ಸಲಹೆಗಳು ಇವೆ. ಅತಿಹೆಚ್ಚು ಜನರಿಗೆ ನೆರವಾಗುವ ರೀತಿಯಲ್ಲಿ ತೀರ್ಮಾನವೊಂದನ್ನು ಜಿಎಸ್‌ಟಿ ಮಂಡಳಿ ತೆಗೆದುಕೊಳ್ಳುತ್ತದೆ ಎಂಬ ನಿರೀಕ್ಷೆಯನ್ನು ಈಗ ಇಟ್ಟುಕೊಳ್ಳಬಹುದು.

ಜಿಎಸ್‌ಟಿ ಪರಿಹಾರ ಸೆಸ್ ಹಾಗೂ ತೆರಿಗೆ ದರಗಳಲ್ಲಿ ಕೆಲವು ಬದಲಾವಣೆಗಳು ಕೂಡ ಮಂಡಳಿಯ ಪರಿಗಣನೆಯಲ್ಲಿ ಇವೆ. ವರಮಾನದಲ್ಲಿ ಆಗುವ ಕೊರತೆಗೆ ರಾಜ್ಯಗಳಿಗೆ ಪರಿಹಾರ ನೀಡುವ ಉದ್ದೇಶದಿಂದ ಪರಿಹಾರ ಸೆಸ್ ಸಂಗ್ರಹಿಸುವುದು ಆರಂಭವಾಯಿತು. ಇದನ್ನು 2022ರ ಜೂನ್‌ವರೆಗೆ ಸಂಗ್ರಹಿಸಬೇಕಿತ್ತು. ಆದರೆ, ಕೋವಿಡ್ ಅವಧಿಯಲ್ಲಿ ರಾಜ್ಯಗಳು ಎದುರಿಸಿದ ವರಮಾನ ಖೋತಾಕ್ಕೆ ಪರಿಹಾರ ಒದಗಿಸಲು ಪಡೆದ ಸಾಲ ಹಿಂದಿರುಗಿಸುವ ಉದ್ದೇಶದಿಂದ ಇದನ್ನು 2026ರ ಮಾರ್ಚ್‌ವರೆಗೆ ವಿಸ್ತರಿಸಲಾಗಿದೆ. ಈಗ, 2026ರ ಮಾರ್ಚ್ ನಂತರವೂ ಈ ಸೆಸ್ ಮುಂದುವರಿಯಲಿದೆಯೇ ಎಂಬುದನ್ನು ಹಾಗೂ ಮುಂದುವರಿಯುತ್ತದೆ ಎಂದಾದರೆ ಯಾವ ಸ್ವರೂಪದಲ್ಲಿ ಎಂಬುದನ್ನು ಮಂಡಳಿಯು ತೀರ್ಮಾನಿಸಬೇಕಿದೆ. ಈ ಬಗ್ಗೆ ಪರಿಶೀಲನೆ ನಡೆಸಲು ಸಚಿವರ ತಂಡವೊಂದನ್ನು ರಚಿಸಲಾಗಿದೆ. ಜಿಎಸ್‌ಟಿ ವ್ಯವಸ್ಥೆಯಲ್ಲಿನ ವಿವಿಧ ತೆರಿಗೆ ಪ್ರಮಾಣಗಳ ವಿಚಾರವಾಗಿ ಹಲವು ಅಭಿಪ್ರಾಯಗಳು ಇವೆ. ಬೇರೆ ಬೇರೆ ಪ್ರಮಾಣದ ತೆರಿಗೆ ವ್ಯವಸ್ಥೆಯು ಜಿಎಸ್‌ಟಿಯನ್ನು ಇನ್ನಷ್ಟು ಸಂಕೀರ್ಣಗೊಳಿಸಿದೆ, ಇದು ಜಿಎಸ್‌ಟಿ ಜಾರಿಗೊಳಿಸಿದ ಉದ್ದೇಶಕ್ಕೇ ವಿರುದ್ಧವಾಗಿದೆ ಎಂಬ ಅಭಿಪ್ರಾಯವೂ ಬಲವಾಗಿದೆ. ಈ ವಿಚಾರದ ಬಗ್ಗೆ ಸಚಿವರ ತಂಡವು ತೀರ್ಮಾನವೊಂದನ್ನು ಕೈಗೊಳ್ಳುವ ನಿರೀಕ್ಷೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.