ಮಂಗನ ಕಾಯಿಲೆ ಅಥವಾ ಕ್ಯಾಸನೂರು ಫಾರೆಸ್ಟ್ ಡಿಸೀಸ್ (ಕೆಎಫ್‌ಡಿ), ಮಲೆನಾಡಿನ ಜನರ ನಿದ್ದೆ ಕೆಡಿಸಿದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ದಾಳಿ ಇಡುತ್ತಿದ್ದ ಈ ರೋಗ, ಈ ಸಲ ಚಳಿಗಾಲದ ನಡುಘಟ್ಟದಲ್ಲೇ ವ್ಯಾಪಿಸಿರುವುದು ಆತಂಕಕಾರಿ. ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಈ ಸೋಂಕಿನ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿದ್ದವು. ಆದರೆ, ಈ ಬಾರಿ ಸಾಗರ ತಾಲ್ಲೂಕಿನಲ್ಲಿ ಇದರ ತೀವ್ರತೆ ಕಂಡುಬಂದಿದೆ. ನಗರ ಪ್ರದೇಶಗಳಿಗೂ ವ್ಯಾಪಿಸಬಹುದಾದ ಆತಂಕ ಎದುರಾಗಿದೆ.

ಈ ಬಾರಿ 2018ರ ನವೆಂಬರ್‌ನಲ್ಲಿ ಮಂಗನ ಕಾಯಿಲೆಯ ಶಂಕಿತ ಪ್ರಕರಣ ಮೊದಲು ಪತ್ತೆಯಾಗಿತ್ತು. ಡಿಸೆಂಬರ್‌ನಲ್ಲಿಯೇ ಮೊದಲ ಸಾವು ಸಂಭವಿಸಿದ್ದು ರೋಗ ಅವಧಿಗೆ ಮುಂಚೆಯೇ ವ್ಯಾಪಿಸಿದ್ದರ ಮುನ್ಸೂಚನೆ. ಮಂಗನ ಕಾಯಿಲೆ ವೈರಸ್ ದಾಳಿಗೆ ಈ ವರ್ಷ ಇದುವರೆಗೆ 24 ಮಂದಿ ತುತ್ತಾಗಿದ್ದಾರೆ. ಆರು ಮಂದಿ ಜೀವ ತೆತ್ತಿದ್ದಾರೆ. ಈ ಪೈಕಿ ಹದಿನೇಳು ವರ್ಷ ವಯಸ್ಸಿನ ವಿದ್ಯಾರ್ಥಿನಿಯೂ ಸೇರಿರುವುದು ಹೃದಯವಿದ್ರಾವಕ. 2015, 2016 ಹಾಗೂ 2017 ರಲ್ಲಿ ಕ್ರಮವಾಗಿ 1, 2 ಹಾಗೂ 3 ಮಂದಿ ಮಂಗನ ಕಾಯಿಲೆಯಿಂದ ಮಲೆನಾಡಿನ ಭಾಗಗಳಲ್ಲಿ ಮೃತಪಟ್ಟಿದ್ದರು. ಆದರೆ, ಶಂಕಿತ ಮಂಗನ ಕಾಯಿಲೆಯಿಂದ ಬಳಲಿದ್ದವರ ಸಂಖ್ಯೆ ಕ್ರಮವಾಗಿ 15, 24 ಹಾಗೂ 34 ಆಗಿತ್ತು. ಆದರೆ, ಈ ವರ್ಷ ಮಣಿಪಾಲ ಆಸ್ಪತ್ರೆಯೊಂದಕ್ಕೇ 42 ಶಂಕಿತ ಮಂಗನ ಕಾಯಿಲೆ ರೋಗಿಗಳು ದಾಖಲಾಗಿದ್ದಾರೆ. ಸೋಂಕು ಹೆಚ್ಚು ವ್ಯಾಪಿಸಿರುವುದರ ದ್ಯೋತಕ ಇದು.

1957ರ ಮಾರ್ಚ್‌ನಲ್ಲಿ ಕ್ಯಾಸನೂರು ಅರಣ್ಯ ಪ್ರದೇಶದಲ್ಲಿ ಅನೇಕ ಮಂಗಗಳು ಮೃತಪಟ್ಟಾಗ ಮೊದಲಿಗೆ ಮಂಗನ ಕಾಯಿಲೆ ಪತ್ತೆಯಾಗಿತ್ತು. ಮೃತ ಮಂಗಗಳಿಂದ ರಕ್ತಸ್ರಾವವಾಗಿ, ಇಲಿ, ಅಳಿಲು, ಬೆಕ್ಕು ಮೊದಲಾದ ಪ್ರಾಣಿಗಳಿಂದ ಮನುಷ್ಯನ ದೇಹ ಸೇರುವ ವೈರಸ್ ಕಾಡುತ್ತಲೇ ಬಂದಿದೆ. ರೋಗ ತಡೆಗೆ ಮೂರು ಸುತ್ತಿನ ಲಸಿಕೆ ಹಾಕುವ ಪದ್ಧತಿಯೇನೋ ಇದೆ. ಇದರಿಂದ ರೋಗವನ್ನು ಬಹುಮಟ್ಟಿಗೆ ತಡೆಯಬಹುದು ಎಂದು ತಜ್ಞರು ಹೇಳುತ್ತಾರೆ. ಆದರೆ ಸೋಂಕು ಕಾಣಿಸಿಕೊಂಡ ಮೇಲೆ ರೋಗ ನಿವಾರಣೆಗೆ ಯಾವುದೇ ಔಷಧ ಲಭ್ಯವಿಲ್ಲ. ರೋಗ ಹರಡುವುನ್ನು ತಡೆಯಲು ತಕ್ಷಣ ಕ್ರಮ ಕೈಗೊಳ್ಳಲಿಲ್ಲ ಎಂದು ಸಾಗರ ತಾಲ್ಲೂಕಿನ ಹಳ್ಳಿಗರು ನಮ್ಮ ಆರೋಗ್ಯ ವ್ಯವಸ್ಥೆ ಬಗ್ಗೆ ದೂರಿದ್ದಾರೆ.

ಮುಂಜಾಗ್ರತಾ ಕ್ರಮವಾಗಿ ಲಸಿಕೆ ಹಾಕುವುದನ್ನು ಆರೋಗ್ಯ ಇಲಾಖೆ ಪಾಲಿಸಿಕೊಂಡು ಬಂದಿದೆಯಾದರೂ, ಈ ಬಾರಿ ಅವಧಿಗೆ ಮುಂಚಿತವಾಗಿಯೇ ರೋಗ ದಾಳಿ ಇಟ್ಟಿರುವುದು ಆರೋಗ್ಯ ಇಲಾಖೆ ಸಿಬ್ಬಂದಿಯನ್ನೂ ತಬ್ಬಿಬ್ಬುಗೊಳಿಸಿರಬಹುದು. ಬೇಸಿಗೆ ಹೊತ್ತಿಗೆ ಈ ರೋಗ ಇನ್ನಷ್ಟು ಉಲ್ಬಣಿಸಬಹುದು ಎಂಬ ಆತಂಕ ಜನರನ್ನು ಕಾಡುತ್ತಿದೆ. ನಾನಾ ಬಗೆಯ ವದಂತಿಗಳೂ ಜನರ ಧೃತಿಗೆಡಿಸುತ್ತಿವೆ. ಅರಣ್ಯ ಇಲಾಖೆಯು ಜನರಿಗೆ, ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಿದೆ. ತುಂಬುತೋಳಿನ ಅಂಗಿ, ಪ್ಯಾಂಟ್ ಧರಿಸಿಯೇ ಸಂಚರಿಸುವಂತೆ ಜನರಲ್ಲಿ ಜಾಗೃತಿಯನ್ನೂ ಮೂಡಿಸಲಾಗಿದೆ.

ಇದುವರೆಗೆ 2000ಕ್ಕೂ ಹೆಚ್ಚು ಗ್ರಾಮಸ್ಥರಿಗೆ ಲಸಿಕೆ ಹಾಕಲಾಗಿದೆ. ಸಾಗರದಲ್ಲಿನ ಆರೋಗ್ಯ ಕೇಂದ್ರಗಳಲ್ಲಿ ರಕ್ತಪರೀಕ್ಷೆಗೆ ಅಗತ್ಯ ಪರಿಕರಗಳಿಲ್ಲ. ಹೀಗಾಗಿ ರೋಗಪತ್ತೆಗಾಗಿ ರಕ್ತದ ಸ್ಯಾಂಪಲ್‌ಗಳನ್ನು ಮಣಿಪಾಲ, ಬೆಂಗಳೂರಿಗೆ ಕಳುಹಿಸಲಾಗುತ್ತಿದೆ. ಈಗ ಶಿವಮೊಗ್ಗದಲ್ಲೂ ರಕ್ತಪರೀಕ್ಷೆಗೆ ಸೌಲಭ್ಯ ಕಲ್ಪಿಸಿರುವುದು ಉತ್ತಮ ಬೆಳವಣಿಗೆ. ಮೃತ ಮಂಗಗಳ ಕುರಿತು ಮಾಹಿತಿ ನೀಡಿದವರಿಗೆ ₹ 500 ಬಹುಮಾನ ಘೋಷಿಸಿರುವುದೂ ಸದ್ಯದ ಪರಿಸ್ಥಿತಿಯಲ್ಲಿ ಅಗತ್ಯವೇ ಹೌದಾಗಿದೆ. ರೋಗ ನಿಯಂತ್ರಣಕ್ಕೆ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು. ಜನರಿಗೆ ಸಮರ್ಪಕ ಮಾಹಿತಿ ಪೂರೈಸಿ, ಅವರು ಕ್ಷೋಭೆಗೆ ಒಳಗಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಆರೋಗ್ಯ ಹಾಗೂ ಅರಣ್ಯ ಇಲಾಖೆಗಳ ಮೇಲೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.