ಕೋವಿಡ್-19 ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿರುವ ಹೊತ್ತಿನಲ್ಲಿ, ಮಹಾಸಾಂಕ್ರಾಮಿಕದ ಪರೋಕ್ಷ ಪರಿಣಾಮಗಳು ಒಂದೊಂದಾಗಿ ಗೋಚರಿಸತೊಡಗಿವೆ. ಸೋಂಕಿನ ತೀವ್ರತೆ ಹೆಚ್ಚಾಗಿದ್ದ ದಿನಗಳಲ್ಲಿ ಜೀವದ ಉಳಿವಿಗೆ ಕೊಟ್ಟಷ್ಟು ಗಮನವನ್ನು ಆಡಳಿತ ವ್ಯವಸ್ಥೆಯು ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಪೂರಕವಾದ ಸತ್ವಯುತ ಆಹಾರ ಪೂರೈಕೆಗೆ ಕೊಡದಿರುವುದರ ನೇರ ಪರಿಣಾಮವನ್ನು ರಾಜ್ಯದ ಅಂಗನವಾಡಿ ಮಕ್ಕಳು ಎದುರಿಸುವಂತಾಗಿದೆ.

ಸಾವಿರಾರು ಮಕ್ಕಳು ಅಪೌಷ್ಟಿಕತೆಯಿಂದ ಬಳಲುವಂತಹ ಆತಂಕಕಾರಿ ಸ್ಥಿತಿ ನಿರ್ಮಾಣವಾಗಿದೆ. ಲಾಕ್‌ಡೌನ್ ಸಮಯದಲ್ಲಿ ಮನೆ ಸೇರಿದ ದಿನಗೂಲಿಗಳು, ಆರ್ಥಿಕವಾಗಿ ಹಿಂದುಳಿದವರಿಗೆ ಊಟೋಪಚಾರ, ದವಸ ಧಾನ್ಯ ಹಂಚಿಕೆಯ ವ್ಯವಸ್ಥೆಯನ್ನೇನೋ ಮಾಡಲಾಯಿತು. ಅದು ಅವರ ತುತ್ತಿನ ಚೀಲ ತುಂಬಿಸಿತೇ ವಿನಾ ಆರೋಗ್ಯದ ಅಗತ್ಯಗಳನ್ನು ಪೂರೈಸಲು ಶಕ್ತವಾಗಲಿಲ್ಲ ಎಂಬುದಕ್ಕೆ ಅಂಗನವಾಡಿ ಮಕ್ಕಳ ಈಗಿನ ಸ್ಥಿತಿಯೇ ನಿದರ್ಶನ.

ರಾಜ್ಯದಲ್ಲಿ ಕಳೆದ ವರ್ಷ ಒಟ್ಟು 9,544 ಮಕ್ಕಳು ಅಪೌಷ್ಟಿಕತೆಗೆ ಒಳಗಾಗಿದ್ದರೆ, ಈ ವರ್ಷ ಕೇವಲ ಐದು ತಿಂಗಳಲ್ಲೇ 9,478 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಈ ವರ್ಷದ ಏಪ್ರಿಲ್‌ನಿಂದ ಆಗಸ್ಟ್‌ವರೆಗೆ ನಡೆಸಿದ ಅಧ್ಯಯನದಿಂದ ಈ ಕಳವಳಕಾರಿ ಅಂಕಿಅಂಶ ಹೊರಬಿದ್ದಿದೆ. ಹಾಗಿದ್ದರೆ ಆರು ವರ್ಷದೊಳಗಿನ ಮಕ್ಕಳ ಅಪೌಷ್ಟಿಕತೆ ನಿವಾರಣೆಗೆ ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ವಿವಿಧ ಯೋಜನೆಗಳಡಿ ವ್ಯಯಿಸಿದ ಕೋಟ್ಯಂತರ ರೂಪಾಯಿ ಏನಾಯಿತು? ಅದು ಸದ್ಬಳಕೆ ಆಗದಿರುವುದಕ್ಕೆ ಕಾರಣಗಳಾದರೂ ಏನು? ಇದಕ್ಕೆ ಸ್ಪಷ್ಟ ಉತ್ತರ ಕಂಡುಕೊಳ್ಳಲಾಗದಿದ್ದರೆ, ಅರ್ಹರನ್ನು ತಲುಪುವಲ್ಲಿ ಈ ಯೋಜನೆಗಳೆಲ್ಲ ವಿಫಲವಾಗಿವೆ ಎಂದೇ ಅರ್ಥ.

ಕೋವಿಡ್ ಕಾರಣದಿಂದ ಅಂಗನವಾಡಿ ಕೇಂದ್ರಗಳಿಗೆ ಬಾಗಿಲು ಹಾಕಿದ್ದು ಒಂದೆಡೆಯಾದರೆ, ಅದಾದ ಎಷ್ಟೋ ದಿನಗಳ ಬಳಿಕ ಮಕ್ಕಳ ಪಾಲಿನ ಆಹಾರಧಾನ್ಯವನ್ನು ಮನೆಗಳಿಗೆ ಪೂರೈಕೆ ಮಾಡಲು ವ್ಯವಸ್ಥೆ ಮಾಡಲಾಯಿತು. ಹೀಗೆ ಪೂರೈಕೆಯಾದ ಆಹಾರಧಾನ್ಯವನ್ನು ದೊಡ್ಡವರೂ ಸೇವಿಸುತ್ತಿರುವುದು ಮಕ್ಕಳಲ್ಲಿ ಅಪೌಷ್ಟಿಕತೆಗೆ ಕಾರಣ ಎಂದು ಅಂಗನವಾಡಿ ಮಕ್ಕಳಿಗೆ ಪೌಷ್ಟಿಕ ಆಹಾರ ಪೂರೈಕೆಯ ಹೊಣೆ ಹೊತ್ತ ಅಧಿಕಾರಿಗಳು ಸಮಜಾಯಿಷಿ ನೀಡಿದ್ದಾರೆ. ಇದೊಂದು ಸರಳ ವ್ಯಾಖ್ಯಾನದಂತೆ ಕಂಡರೂ ನಮ್ಮ ಆಹಾರಧಾನ್ಯ ವಿತರಣಾ ವ್ಯವಸ್ಥೆಯಲ್ಲಿನ ಲೋಪದೋಷಗಳತ್ತ ಬೆಳಕು ಚೆಲ್ಲುತ್ತದೆ. ಅಷ್ಟೇ ಅಲ್ಲ, ಎಂತಹ ಸಂಕಷ್ಟದ ಸಮಯದಲ್ಲೂ ಜೀವದ ಉಳಿವಿಗೆ ನೀಡುವಷ್ಟೇ ಮಹತ್ವ, ಜೀವನೋಪಾಯದ ದಾರಿಗಳನ್ನು ತೆರೆಯುವುದಕ್ಕೂ ನೀಡಬೇಕೆಂಬ ಪಾಠವನ್ನು ಸಹ ನಮಗೆ ಹೇಳುತ್ತಿದೆ.

ಒಂದೆಡೆ, ಹೀಗೆ ಹಸಿದ ಹೊಟ್ಟೆಯ, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಂದಿಯಿದ್ದರೆ, ಇನ್ನೊಂದೆಡೆ, ಶಾಲೆಗಳು ಬಂದ್ ಆಗಿದ್ದರಿಂದ ಬಿಸಿಯೂಟ ಪೂರೈಕೆಗೆ ಬಳಕೆಯಾಗುತ್ತಿದ್ದ ಆಹಾರಧಾನ್ಯಗಳೆಲ್ಲ ಗೋದಾಮುಗಳಲ್ಲಿ ಕೊಳೆತು ಇಲಿ- ಹೆಗ್ಗಣಗಳ ಪಾಲಾದ ದುರದೃಷ್ಟಕರ ಸಂಗತಿಯೂ ವರದಿಯಾಯಿತು. ಮಕ್ಕಳಿಗೆ ಪೂರೈಸುವ ದವಸ ಧಾನ್ಯಗಳನ್ನು ಮನೆಮಂದಿಯೆಲ್ಲ ಹಂಚಿಕೊಳ್ಳುವಂತಹ ಪರಿಸ್ಥಿತಿಯನ್ನು ಕೋವಿಡ್ ಸಾಂಕ್ರಾಮಿಕವು ಎಷ್ಟೋ ಮನೆಗಳಲ್ಲಿ ತಂದಿಟ್ಟಿದೆ ಎಂಬುದಕ್ಕೆ ಪ್ರತ್ಯೇಕ ಅಧ್ಯಯನದ ಅವಶ್ಯಕತೆಯೇನೂ ಇರಲಿಲ್ಲ. ಹಾಗಿದ್ದಮೇಲೆ, ಕಣ್ಣಮುಂದೆಯೇ ಪೋಲಾಗುತ್ತಿದ್ದ ಆಹಾರಧಾನ್ಯವನ್ನು ಅಂಗನವಾಡಿ ಮಕ್ಕಳ ಕುಟುಂಬಗಳಿಗೆ ಹೆಚ್ಚುವರಿಯಾಗಿ ಹಂಚಿ, ಇಡೀ ಕುಟುಂಬದ ಆರೋಗ್ಯವನ್ನು ಪೊರೆಯುವ ಮಾನವೀಯ ಧೋರಣೆ, ಸೂಕ್ಷ್ಮ ಮನೋಭಾವ, ಕಷ್ಟಕ್ಕೆ ಮಿಡಿಯುವ ಸಂವೇದನೆ ಆಳುವವರ್ಗಕ್ಕೆ ಇಲ್ಲದೇ ಹೋದದ್ದು ದುರದೃಷ್ಟಕರ.

ಅಪೌಷ್ಟಿಕತೆ, ಮಕ್ಕಳಲ್ಲಿ ಕಡಿಮೆ ತೂಕ ಹಾಗೂ ಶಿಶುಮರಣ– ಇವೆಲ್ಲವೂ ಪರಸ್ಪರ ಸಂಬಂಧ ಹೊಂದಿರುವ ಸಂಗತಿಗಳೇ ಆಗಿವೆ. ಸಮಗ್ರ ಶಿಶು ಅಭಿವೃದ್ಧಿ ಯೋಜನೆಯನ್ನು (ಐಸಿಡಿಎಸ್) ಮಾತ್ರವಲ್ಲ ಆಯಾ ಸಮಯ, ಸಂದರ್ಭಕ್ಕೆ ತಕ್ಕಂತೆ ನಮ್ಮ ಪಡಿತರ ವ್ಯವಸ್ಥೆಯನ್ನೂ ಮಾನವೀಯ ನೆಲೆಯಲ್ಲಿ ಬದಲಿಸಿಕೊಳ್ಳಬೇಕಾದ ಅಗತ್ಯವನ್ನು ಈ ಬೆಳವಣಿಗೆಗಳು ಹೇಳುತ್ತವೆ. ಯಾಂತ್ರಿಕವಾಗಿ ಯೋಜನೆಗಳನ್ನು ಅನುಷ್ಠಾನಗೊಳಿಸಿದರೆ ಮಕ್ಕಳ ಹಸಿವು ನೀಗಿಸಬಹುದೇ ಹೊರತು ಅವರ ಸರ್ವಾಂಗೀಣ ಪ್ರಗತಿಗೆ ಪೂರಕವಾದ ಆರೋಗ್ಯ ರಕ್ಷಣೆ ಸಾಧ್ಯವಿಲ್ಲ.

ಪೌಷ್ಟಿಕಾಂಶಯುಕ್ತ ಆಹಾರವನ್ನು ಪಡೆಯುವುದು ಭವಿಷ್ಯದ ಪ್ರಜೆಗಳ ಮೂಲಭೂತ ಹಕ್ಕು. ಈ ಹಕ್ಕಿನ ರಕ್ಷಣೆ ಆಡಳಿತಕ್ಕೆ ಸಾಧ್ಯವಾಗದಿದ್ದರೆ, ಬೇರೆ ಬೇರೆ ಕ್ಷೇತ್ರಗಳಲ್ಲಿ ಎಷ್ಟೇ ಪ್ರಗತಿ ಸಾಧ್ಯವಾದರೂ ಸಾಂವಿಧಾನಿಕ ಹೊಣೆಗಾರಿಕೆಯ ನಿರ್ವಹಣೆಯಲ್ಲಿ ಅದು ಸೋತಿದೆ ಎಂದೇ ಅರ್ಥ. ಈ ದಿಸೆಯಲ್ಲಿ, ಎಂತಹುದೇ ತುರ್ತುಪರಿಸ್ಥಿತಿಯ ಸಂದರ್ಭದಲ್ಲೂ ಆಹಾರ ಮತ್ತು ಆರೋಗ್ಯವನ್ನು ಎಲ್ಲ ಮಕ್ಕಳಿಗೂ ಖಾತರಿಪಡಿಸುವುದು ಸರ್ಕಾರದ ಆದ್ಯತೆಯಾಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.