ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅವರ ಭಾರತ ಭೇಟಿಯ ಸಂದರ್ಭದಲ್ಲಿ ಭಯೋತ್ಪಾದನೆಯನ್ನು ಖಂಡಿಸುವ ಜಂಟಿ ಹೇಳಿಕೆ ಹೊರಬಿದ್ದಿರುವುದು ಸ್ವಾಗತಾರ್ಹ.

ಕಾಶ್ಮೀರದ ಪುಲ್ವಾಮಾದಲ್ಲಿ ನಮ್ಮ ನಲವತ್ತಕ್ಕೂ ಹೆಚ್ಚು ಮಂದಿ ಸಿಆರ್ಪಿಎಫ್ ಯೋಧರನ್ನು ಬಲಿ ತೆಗೆದುಕೊಂಡ ಭಯೋತ್ಪಾದಕರ ಕೃತ್ಯವನ್ನು ಜಗತ್ತಿನ ಎಲ್ಲ ದೇಶಗಳೂ ಕಟುವಾಗಿ ಖಂಡಿಸುವಂತೆ ಮಾಡುವ ಅಗತ್ಯ ಈಗ ಹಿಂದೆಂದಿಗಿಂತ ಹೆಚ್ಚಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಸಲ್ಮಾನ್ ನಡುವಣ ಮಾತುಕತೆಯಲ್ಲಿ ಈ ಕೃತ್ಯದ ಪ್ರಸ್ತಾಪವಾದದ್ದು ಒಳ್ಳೆಯದೇ. ‘ಭಯೋತ್ಪಾದಕರು ಮತ್ತು ಭಯೋತ್ಪಾದಕ ಸಂಘಟನೆಗಳನ್ನುವಿಶ್ವಸಂಸ್ಥೆಯು ಸಮಗ್ರವಾಗಿ ನಿಷೇಧಿಸುವ ಅಗತ್ಯವಿದೆ.

ಭಯೋತ್ಪಾದನೆಗೆ ಬೆಂಬಲ ನೀಡುವ ರಾಷ್ಟ್ರಗಳ ಮೇಲೆ ಹಾಗೆ ಮಾಡದಂತೆ ಎಲ್ಲ ರೀತಿಯ ಒತ್ತಡಗಳನ್ನು ಹೇರುವ ಅಗತ್ಯವಿದೆ’ ಎಂದು ಭಾರತ ಮತ್ತು ಸೌದಿಯ ಜಂಟಿ ಹೇಳಿಕೆ ತಿಳಿಸಿದೆ. ಆದರೆ ಈ ಹೇಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇಲ್ಲಿ ಪದಜೋಡಣೆಯ ಕಸರತ್ತು ಇರುವುದು ಗೋಚರಿಸುತ್ತದೆ. ಏಕೆಂದರೆ, ಪುಲ್ವಾಮಾ ದಾಳಿಯ ಹೊಣೆ ಹೊತ್ತಿರುವ ಜೈಷ್–ಎ– ಮೊಹಮ್ಮದ್ (ಜೆಇಎಂ) ಸಂಘಟನೆಯ ಬಗ್ಗೆಯಾಗಲೀ ಅಥವಾ ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿರುವ ಗಡಿಯಾಚೆಗಿನ ಇನ್ನಿತರ ಸಂಘಟನೆಗಳ ಬಗ್ಗೆಯಾಗಲೀ ನಿರ್ದಿಷ್ಟವಾಗಿ ಏನನ್ನೂ ಹೇಳಿಲ್ಲ. ಇಲ್ಲಿಗೆ ಬರುವ ಎರಡು ದಿನಗಳ ಹಿಂದೆ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಸಲ್ಮಾನ್, ಅಲ್ಲಿಯ ಪ್ರಧಾನಿಯ ಜೊತೆಗೂ ಜಂಟಿ ಹೇಳಿಕೆಯೊಂದನ್ನು ಪ್ರಕಟಿಸಿದ್ದರು.

ಅದರಲ್ಲಿ ‘ವಿಶ್ವಸಂಸ್ಥೆಯು ಭಯೋತ್ಪಾದಕರ ಪಟ್ಟಿ ಮಾಡುವಾಗ ಅದರಲ್ಲಿ ರಾಜಕಾರಣ ನುಸುಳಬಾರದು’ ಎಂಬರ್ಥದ ವಾಕ್ಯವಿದೆ. ಇದು, ಜೆಇಎಂ ನಾಯಕ ಮಸೂದ್ ಅಜರ್ನನ್ನು ಜಾಗತಿಕ ಭಯೋತ್ಪಾದಕರ ಪಟ್ಟಿಯಲ್ಲಿ ಸೇರಿಸಬಾರದು ಎಂಬ ಪಾಕಿಸ್ತಾನದ ನಿಲುವಿಗೆ ಪೂರಕವಾಗಿದ್ದಂತಿದೆ ಎಂಬ ವ್ಯಾಖ್ಯಾನ ಕೇಳಿಬಂದಿದೆ. ಅಂದರೆ ಸೌದಿಯ ಯುವರಾಜ, ಉಭಯ ದೇಶಗಳ ಮೈತ್ರಿಯಲ್ಲಿ ಸಮತೋಲನ ಕಾಯ್ದುಕೊಳ್ಳುವುದರ ಕಡೆಗೇ ಹೆಚ್ಚು ಗಮನ ಕೊಟ್ಟಿದ್ದಾರೆ ಎಂದು ಹೇಳಬೇಕಾಗುತ್ತದೆ. ಸಲ್ಮಾನ್ ಪಾಕಿಸ್ತಾನ ಭೇಟಿಯ ಬಳಿಕ ಅಲ್ಲಿಂದ ನೇರವಾಗಿ ಭಾರತಕ್ಕೆ ಬರುವುದರ ಬಗ್ಗೆ ನಮ್ಮ ಸರ್ಕಾರವು ಅಸಂತೋಷ ವ್ಯಕ್ತಪಡಿಸಿತ್ತು.

ಆ ಹಿನ್ನೆಲೆಯಲ್ಲಿ ಸೌದಿಯ ಯುವರಾಜ ಪಾಕಿಸ್ತಾನದಿಂದ ರಿಯಾದ್ಗೆ ವಾಪಸ್ ತೆರಳಿ, ಅಲ್ಲಿಂದ ಭಾರತಕ್ಕೆ ಬಂದಿದ್ದಾರೆ. ಅಷ್ಟರಮಟ್ಟಿಗೆ ಅವರ ನಡೆ ಭಾರತಕ್ಕೆ ರಾಜಕೀಯವಾಗಿ ಸಮಾಧಾನ ತಂದಿದೆ.ಪಶ್ಚಿಮ ಏಷ್ಯಾದಲ್ಲಿ ನಮ್ಮ ರಾಜತಾಂತ್ರಿಕ ಸಂಬಂಧ ಬಲಗೊಳ್ಳಬೇಕಾದರೆ ಸೌದಿಯ ಜೊತೆಗೆ ನಿಕಟ ಸಂಬಂಧ ಅನಿವಾರ್ಯ. ಪಾಕಿಸ್ತಾನ ಈಗಾಗಲೇ ಸೌದಿ ಅರೇಬಿಯಾದ ಜೊತೆ ಇಂತಹ ಸಂಬಂಧವನ್ನು ಸ್ಥಾಪಿಸಿಕೊಂಡಿರುವುದು ಗಮನಾರ್ಹ.

ಸೌದಿ ಯುವರಾಜನ ಈ ಭೇಟಿಯಿಂದ ವಾಣಿಜ್ಯರಂಗದಲ್ಲಿ ಭಾರತಕ್ಕೆ ಹೆಚ್ಚು ಲಾಭವಾಗಲಿದೆ. ಉಭಯ ದೇಶಗಳ ನಡುವಣ ವಾಣಿಜ್ಯ ಸಂಬಂಧ ಇನ್ನಷ್ಟು ಬಲಗೊಳ್ಳಬೇಕಿದೆ. ಭಾರತದ ಕಚ್ಚಾ ತೈಲ ಸಂಗ್ರಹದಲ್ಲಿ ಶೇಕಡ 17ರಷ್ಟು ಮತ್ತು ಎಲ್ಪಿಜಿ ಸಂಗ್ರಹದಲ್ಲಿ ಶೇಕಡ 32ರಷ್ಟು ಸೌದಿ ಅರೇಬಿಯಾದಿಂದಲೇ ಬರುತ್ತಿದೆ. ಈ ಭೇಟಿಯ ಸಂದರ್ಭದಲ್ಲಿ ಭಾರತದಲ್ಲಿ 10 ಸಾವಿರ ಕೋಟಿ ಡಾಲರ್ (ಸುಮಾರು ₹7.10 ಲಕ್ಷ ಕೋಟಿ) ಹೂಡಿಕೆಯ ಪ್ರಸ್ತಾವಗಳ ಬಗ್ಗೆ ಸೌದಿ ಅರೇಬಿಯಾ ಸರ್ಕಾರ ಆಸಕ್ತಿ ತೋರಿಸಿದೆ.

ಕೃಷಿ, ಮೂಲ ಸೌಕರ್ಯ, ವಸತಿ, ತಯಾರಿಕಾ ವಲಯ, ಇಂಧನ ಮತ್ತು ಕಚ್ಚಾ ತೈಲ ಸಂಸ್ಕರಣೆಯಂತಹ ಹಲವು ವಲಯಗಳಲ್ಲಿ ಹೂಡಿಕೆ ಮತ್ತು ಸಹಕಾರಕ್ಕೆ ಎರಡೂ ದೇಶಗಳ ನಡುವೆ ಒಡಂಬಡಿಕೆಗಳಾಗಿವೆ. ಸುಮಾರು 30 ಲಕ್ಷ ಭಾರತೀಯರು ಸೌದಿ ಅರೇಬಿಯಾದಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿ ನೆಲೆಸಿರುವ ಭಾರತೀಯ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಈ ಮಾತುಕತೆಯಲ್ಲಿ ಹೆಚ್ಚಿನ ಚರ್ಚೆ ನಡೆದಂತೆ ಕಾಣುತ್ತಿಲ್ಲ. ಆ ನಿಟ್ಟಿನಲ್ಲಿಯೂ ಸರ್ಕಾರ ಗಮನ ಹರಿಸಬೇಕಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.