ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಭೇಟಿಯು ಭಾರಿ ಯಶಸ್ಸು ಪಡೆದಿದೆ ಎಂದು ಸರ್ಕಾರ ಹೇಳಿಕೊಳ್ಳುತ್ತಿದೆ. ಈ ಭೇಟಿಯಲ್ಲಿ ಹಲವು ದುರ್ಬಲ ಅಂಶಗಳೂ ಇದ್ದವು. ಶ್ವೇತ ಭವನದಲ್ಲಿ ನಡೆದ ಮಾಧ್ಯಮಗೋಷ್ಠಿ ಅವುಗಳಲ್ಲಿ ಒಂದು. ಅಮೆರಿಕದ ಅಧ್ಯಕ್ಷ ಜೋ ಬೈಡನ್ ಮತ್ತು ಮೋದಿ ಅವರು ವರದಿಗಾರರು ಕೇಳಿದ ಎರಡು ಪ್ರಶ್ನೆಗಳಿಗೆ ಉತ್ತರ ನೀಡಿದರು. ಭಾರತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ, ಅಲ್ಪಸಂಖ್ಯಾತರನ್ನು ಗುರಿ ಮಾಡಲಾಗುತ್ತಿದೆ ಹಾಗೂ ತಾರತಮ್ಯದಿಂದ ನೋಡಲಾಗುತ್ತಿದೆ ಎಂಬ ಆರೋಪವನ್ನು ಅಮೆರಿಕ ಕಡೆಗಣಿಸಿದೆಯೇ ಎಂಬ ಪ್ರಶ್ನೆಯನ್ನು ಬೈಡನ್ ಅವರಿಗೆ ಕೇಳಲಾಗಿದೆ. ಇದೇ ಪ್ರಶ್ನೆಗೆ ಪ್ರತಿಕ್ರಿಯೆ ನೀಡುವಂತೆ ಮೋದಿ ಅವರನ್ನೂ ಕೇಳಲಾಗಿದೆ. ಅಲ್ಪಸಂಖ್ಯಾತರ ಹಕ್ಕುಗಳು ಮತ್ತು ವಾಕ್ ಸ್ವಾತಂತ್ರ್ಯವನ್ನು ರಕ್ಷಿಸಲು ಸರ್ಕಾರವು ಯಾವ ಕ್ರಮಗಳನ್ನು ಕೈಗೊಂಡಿದೆ ಎಂಬುದು ಮೋದಿ ಅವರಿಗೆ ಕೇಳಲಾದ ಮತ್ತೊಂದು ಪ್ರಶ್ನೆಯಾಗಿತ್ತು. ಎರಡೂ ದೇಶಗಳು ಪ್ರಜಾಪ್ರಭುತ್ವವನ್ನು ಹೊಂದಿವೆ ಮತ್ತು ಡಿಎನ್ಎಯಲ್ಲಿಯೇ ಪ್ರಜಾತಂತ್ರವು ಸೇರಿಹೋಗಿದೆ ಎಂದು ಬೈಡನ್ ಹೇಳಿದರು. ಮುಕ್ತತೆ ಮತ್ತು ಸಹಿಷ್ಣುತೆ, ಸಂವಾದಕ್ಕೆ ವಿಪುಲ ಅವಕಾಶ ಹಾಗೂ ವೈವಿಧ್ಯಕ್ಕೆ ಗೌರವ ನೀಡುವ ಪ್ರಜಾಪ್ರಭುತ್ವದ ಲಕ್ಷಣಗಳನ್ನು ಎರಡೂ ದೇಶಗಳು ಹೊಂದಿವೆ ಎಂದು ಬೈಡನ್ ಹೇಳಿದರು.

ಎರಡೂ ದೇಶಗಳ ಡಿಎನ್ಎಯಲ್ಲಿಯೇ ಪ್ರಜಾಪ್ರಭುತ್ವ ಸೇರಿಕೊಂಡಿದೆ ಎಂಬ ಬೈಡನ್ ಅವರ ಹೇಳಿಕೆಯನ್ನೇ ಉಲ್ಲೇಖಿಸುವ ಮೂಲಕ ಪ್ರಧಾನಿ ಮೋದಿ ಅವರು ಆರೋಪಗಳನ್ನು ಅಲ್ಲಗಳೆದರು. ಪ್ರಜಾಪ್ರಭುತ್ವದ ಎಲ್ಲ ಮೂಲ ತತ್ವಗಳನ್ನು ಭಾರತದ ಸಂವಿಧಾನವು ಅಳವಡಿಸಿಕೊಂಡಿದೆ ಎಂದರು. ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇರುವುದರಿಂದ ಮಾನವ ಹಕ್ಕುಗಳೂ ಇವೆ. ಜಾತಿ, ಧರ್ಮ, ಜನಾಂಗ, ಲಿಂಗದ ಆಧಾರದಲ್ಲಿ ತಾರತಮ್ಯ ಇಲ್ಲವೇ ಇಲ್ಲ ಎಂದರು. ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಇರುವ ವ್ಯಾಖ್ಯೆಗಳು ಹಾಗೂ ಸಾಮಾನ್ಯ ತತ್ವಗಳನ್ನು ಮುಂದಿರಿಸಿಕೊಂಡು ಮೋದಿ ಅವರು ಈ ಸಮರ್ಥನೆ ಮಾಡಿಕೊಂಡಿದ್ದಾರೆ. ಆದರೆ, ವಾಸ್ತವದಲ್ಲಿ ಇರುವ ಪ್ರಶ್ನೆ ಏನು ಎಂದರೆ, ಮೋದಿ ನೇತೃತ್ವದ ಸರ್ಕಾರವು ಸಂವಿಧಾನ ಮತ್ತು ಅದರ ಮೂಲ ತತ್ವಗಳನ್ನು ಏಕೆ ಪಾಲಿಸುತ್ತಿಲ್ಲ ಎಂಬುದಾಗಿದೆ. ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಲು ಸರ್ಕಾರವು ಯಾವ ಕ್ರಮ ಕೈಗೊಂಡಿದೆ ಎಂಬ ಪ್ರಶ್ನೆಗೆ ಮೋದಿ ಅವರು ಉತ್ತರ ನೀಡಲಿಲ್ಲ. ಏಕೆಂದರೆ, ಹಕ್ಕುಗಳ ಉಲ್ಲಂಘನೆ ಮತ್ತು ತಾರತಮ್ಯ ಆಗುತ್ತಿದೆ ಎಂಬುದನ್ನೇ ಅವರು ನಿರಾಕರಿಸಿದ್ದಾರೆ. ಅಲ್ಪಸಂಖ್ಯಾತರನ್ನು ತಾರತಮ್ಯದಿಂದ ನೋಡಲಾಗುತ್ತಿದೆ ಮತ್ತು ಭಿನ್ನಮತವನ್ನು ದಮನ ಮಾಡಲಾಗುತ್ತಿದೆ ಎಂಬುದನ್ನು ಮೋದಿ ಮತ್ತು ಅವರ ನೇತೃತ್ವದ ಸರ್ಕಾರವು ನಿರಂತರವಾಗಿ ಅಲ್ಲಗಳೆಯುತ್ತಲೇ ಬಂದಿದೆ. ತಪ್ಪು ನೀತಿಗಳು ಮತ್ತು ಪದ್ಧತಿಗಳಿಂದಾಗಿ ಲೋಪಗಳು ಆಗಿವೆ ಮತ್ತು ಅವುಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳುವ ನಾಯಕ ಅತ್ಯಂತ ವಿರಳ. ಅಂತರರಾಷ್ಟ್ರೀಯ ವೇದಿಕೆಯೊಂದರಲ್ಲಿ ಇಂತಹ ಪ್ರಶ್ನೆಗಳನ್ನು ತಮಗೆ ಕೇಳಿದ್ದರ ಹಿಂದಿನ ಕಾರಣಗಳೇನು ಎಂಬುದರ ಬಗ್ಗೆ ಮೋದಿ ಅವರು ಚಿಂತನೆ ನಡೆಸಬೇಕು. ಆ ದೇಶದ ಹಲವು ವರ್ಗಗಳು– ಮಾಧ್ಯಮ ಅಷ್ಟೇ ಅಲ್ಲ ಸಂಸತ್ತಿನ ಕೆಲವು ಸದಸ್ಯರು ಕೂಡ ಇದೇ ಪ್ರಶ್ನೆಯನ್ನು ಕೇಳಿದ್ದಾರೆ ಮತ್ತು ಬೈಡನ್ ಹಾಗೂ ಸರ್ಕಾರದ ಗಮನಕ್ಕೆ ತಂದಿದ್ದಾರೆ ಎಂಬುದನ್ನು ಕೂಡ ನೋಡಬೇಕು. ಭಾರತದ ಅಲ್ಪಸಂಖ್ಯಾತರನ್ನು ಸಂರಕ್ಷಿಸದಿದ್ದರೆ ದೇಶ ಮುನ್ನಡೆಯಲು ಸಾಧ್ಯವಿಲ್ಲ ಮತ್ತು ಈ ವಿಚಾರವನ್ನು ಬೈಡನ್ ಅವರು ಮೋದಿ ಜೊತೆಗೆ ಪ್ರಾಮಾಣಿಕವಾಗಿ ಮಾತನಾಡಬೇಕು ಎಂದು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರೂ ಸಂದರ್ಶನವೊಂದರಲ್ಲಿ ಹೇಳಿದ್ದರು. ವರದಿಗಾರರು ಈ ಪ್ರಶ್ನೆ ಕೇಳಿದ್ದು ತಮಗೆ ಅಚ್ಚರಿಯಾಯಿತು ಎಂದು ಮೋದಿ ಅವರು ಹೇಳಿದ್ದಾರೆ. ತಮಗೆ ಪ್ರಶ್ನೆ ಕೇಳಲು ಯಾರೊಬ್ಬರಿಗೂ ಈವರೆಗೆ ಅವಕಾಶವನ್ನೇ ನೀಡದಿದ್ದುದು ಮೋದಿ ಅವರಿಗೆ ಅಚ್ಚರಿ ಆಗಲು ಕಾರಣ.

ಮನವೊಲಿಕೆಯ ಬಳಿಕವೇ ಮೋದಿ ಅವರು ಮಾಧ್ಯಮವನ್ನು ಎದುರಿಸಲು ಒಪ್ಪಿದ್ದರು ಎಂಬ ವರದಿಗಳಿವೆ. ಭಾರತದಲ್ಲಿಯೂ ಮಾಧ್ಯಮದ ಪ್ರಶ್ನೆಯನ್ನು ಎದುರಿಸಲು ಮೋದಿ ಅವರು ಒಪ್ಪಿದರೆ ಮುಂದೆ ಅವರಿಗೆ ಪ್ರಶ್ನೆಗಳು ಎದುರಾದಾಗ ಇಷ್ಟೊಂದು ಆಶ್ಚರ್ಯ ಆಗುವುದಿಲ್ಲ. ಅಧಿಕಾರ ಸ್ಥಾನದಲ್ಲಿ ಇರುವವರು ಪ್ರಶ್ನೆಗಳಿಗೆ ಉತ್ತರಿಸಬೇಕಾದುದು ಪ್ರಜಾಪ್ರಭುತ್ವದಲ್ಲಿ ಅನಿವಾರ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.