ಭಾರತದಲ್ಲಿ ಮಹಿಳೆಯರ ಕ್ರಿಕೆಟ್ ಎಂದರೆ ಜನರು ಮೂಗು ಮುರಿಯುತ್ತಿದ್ದ ಕಾಲಘಟ್ಟದಲ್ಲಿ ಕಣಕ್ಕಿಳಿ ದವರು ಜೂಲನ್ ಗೋಸ್ವಾಮಿ. ಭರ್ತಿ ಎರಡು ದಶಕಗಳ ಕಾಲ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ‘ವೇಗದ ರಾಣಿ’ಯಾಗಿ ಮೆರೆದರು. ಮಹಿಳಾ ಕ್ರಿಕೆಟ್‌ನ ಮಧ್ಯಮವೇಗದ ಬೌಲಿಂಗ್‌ನಲ್ಲಿ ಸುವರ್ಣ ಅಧ್ಯಾಯವೊಂದಕ್ಕೆ ಕಾರಣರಾಗಿ ಈಗ ನಿವೃತ್ತರಾಗಿದ್ದಾರೆ. ಪಶ್ಚಿಮ ಬಂಗಾಳದ ಚಕ್ಡಾ ಎಂಬ ಪುಟ್ಟ ಊರಿನ ಪ್ರತಿಭೆ ಜೂಲನ್. ತಮ್ಮ ಮನೆಯ ಎದುರಿನ ಅಂಗಣದಲ್ಲಿ ಹುಡುಗರೊಂದಿಗೆ ಕ್ರಿಕೆಟ್ ಆಡಲು ಆರಂಭಿಸಿದವರು. ಅಂದು ವ್ಯಂಗ್ಯವಾಡಿದವರ ಮುಂದೆಯೇ ದಂತಕಥೆಯಾಗಿ ಬೆಳೆದರು. ‘ಕ್ರಿಕೆಟ್ ಕಾಶಿ’ ಲಾರ್ಡ್ಸ್ ಅಂಗಳದಲ್ಲಿ ಅವರು ತಮ್ಮ ವೃತ್ತಿಜೀವನದ ಕೊನೆಯ ಅಂತರರಾಷ್ಟ್ರೀಯ ಏಕದಿನ ಪಂದ್ಯವನ್ನು ಆಡಿದರು. ಬಲಾಢ್ಯ ಇಂಗ್ಲೆಂಡ್ ತಂಡವನ್ನು ಅದರ ನೆಲದಲ್ಲಿಯೇ ಸರಣಿ ಕ್ಲೀನ್‌ಸ್ವೀಪ್ ಮಾಡಿದ ಹರ್ಮನ್‌ಪ್ರೀತ್ ಕೌರ್ ಬಳಗವು ಜೂಲನ್‌ಗೆ ಅರ್ಹ ರೀತಿಯಲ್ಲಿ ‘ವಿದಾಯದ ಉಡುಗೊರೆ’ ನೀಡಿತು. 2002ರಲ್ಲಿ ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಪದಾರ್ಪಣೆ ಮಾಡಿದ ಜೂಲನ್ ಅದೇ ತಂಡದ ಎದುರು ಕೊನೆಯ ಪಂದ್ಯವನ್ನೂ ಆಡಿದ್ದು ವಿಶೇಷ. ಕ್ರಿಕೆಟ್ ಲೋಕದ ಬಹಳಷ್ಟು ದಿಗ್ಗಜರಿಗೂ ಒಲಿಯದ ಅಪರೂಪದ ಸನ್ಮಾನದೊಂದಿಗೆ ಜೂಲನ್ ನಿರ್ಗಮಿಸಿದರು. 1997ರಲ್ಲಿ ಕೋಲ್ಕತ್ತದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದಿದ್ದ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವಣ ಮಹಿಳಾ ವಿಶ್ವಕಪ್ ಪಂದ್ಯದಲ್ಲಿ ಬೌಂಡರಿ ಗೆರೆಯಾಚೆ ಚೆಂಡು ಸಂಗ್ರಹಿಸಿ ಕೊಡುವ ಬಾಲಕಿಯಾಗಿದ್ದ ಜೂಲನ್ ಹಲವಾರು ಬಾಲಕಿಯರು ಮಧ್ಯಮವೇಗದ ಬೌಲರ್‌ಗಳಾಗಲು ಸ್ಫೂರ್ತಿಯಾಗಿ ಬೆಳೆದರು.

ಕನ್ನಡತಿ ಶಾಂತಾ ರಂಗಸ್ವಾಮಿ ಅವರ ನೇತೃತ್ವದಲ್ಲಿ ಭಾರತ ಮಹಿಳಾ ತಂಡವು ಹಾಕಿದ ಬುನಾದಿಯ ಮೇಲೆ ಭವ್ಯಸೌಧ ಕಟ್ಟಿದವರಲ್ಲಿ ಜೂಲನ್ ಹಾಗೂ ಮಿಥಾಲಿ ರಾಜ್ ಪ್ರಮುಖರು. ಬ್ಯಾಟಿಂಗ್‌ನಲ್ಲಿ ಮಿಥಾಲಿ ರನ್ ಹೊಳೆ ಹರಿಸಿದರು. ಬೌಲಿಂಗ್‌ನಲ್ಲಿ ಜೂಲನ್ ವಿಕೆಟ್‌ಗಳ ರಾಶಿ ಹಾಕಿದರು. ಅದಕ್ಕಾಗಿಯೇ ಮೂರು ಮಾದರಿಗಳಲ್ಲಿಯೂ ಸೇರಿ ಜೂಲನ್ 355 ವಿಕೆಟ್‌ಗಳನ್ನು ಗಳಿಸಿದ್ದಾರೆ. ಈ ಪೈಕಿ 204 ಏಕದಿನ ಪಂದ್ಯಗಳಲ್ಲಿ 255 ವಿಕೆಟ್ ಪಡೆದಿರುವ ಅಗ್ರಮಾನ್ಯ ಬೌಲರ್ ಆಗಿದ್ದಾರೆ. ಮಧ್ಯಮವೇಗದ ಬೌಲರ್ ಆಗಿ ಇಷ್ಟು ದೀರ್ಘ ಕಾಲ ಆಡುವುದು ಸಾಮಾನ್ಯ ಸಂಗತಿ ಅಲ್ಲ. ಏಕೆಂದರೆ, ವೇಗದ ಬೌಲರ್‌ಗಳು ಗಾಯಗಳಿಗೆ ತುತ್ತಾಗುವುದು ಸರ್ವೇಸಾಮಾನ್ಯ. ಅಂತಹ ಗಾಯಗಳು ಜೂಲನ್ ಅವರನ್ನೂ ಕಾಡಿವೆ. ಫಿಸಿಯೊ, ಟ್ರೇನರ್ ಹಾಗೂ ಉನ್ನತಮಟ್ಟದ ತರಬೇತಿ ಸೌಲಭ್ಯಗಳಿಲ್ಲದಿದ್ದರೂ ಅವರು ಅಳುಕಲಿಲ್ಲ. ಇನ್ನೇನು ವೃತ್ತಿಜೀವನವೇ ಅಂತ್ಯವಾಯಿತು ಎಂಬ ಸಂದರ್ಭಗಳಿಂದ ಫೀನಿಕ್ಸ್ ಹಕ್ಕಿಯಂತೆ ಎದ್ದು ಬಂದ ಹಲವು ಉದಾಹರಣೆಗಳು ಅವರ ಜೀವನದಲ್ಲಿವೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಜೂಲನ್ ಪ್ರಯೋಗಿಸಿದ ಒಟ್ಟು 13,622 ಎಸೆತಗಳು ಅವರ ಭುಜಬಲ ಹಾಗೂ ಆತ್ಮಬಲಕ್ಕೆ ಸಾಕ್ಷಿಯಾಗಿವೆ. ಮಹಿಳಾ ಕ್ರಿಕೆಟ್‌ನಲ್ಲಿ ಬಲಾಢ್ಯವಾಗಿರುವ ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ಬ್ಯಾಟರ್‌ಗಳಿಗೆ ಸದಾ ಸಿಂಹಸ್ವಪ್ನವಾಗಿದ್ದವರು. ಕೊನೆಯ ಪಂದ್ಯದಲ್ಲಿಯೂ ಅವರ ಸಾಧನೆ (10–3–30–2) ಗಮನ ಸೆಳೆಯುವಂತಹುದು. ಇದು ಅವರ ಸಿದ್ಧತೆ ಹಾಗೂ ಬದ್ಧತೆಯನ್ನು ಬಿಂಬಿಸುತ್ತದೆ. ಅವರ ಈ ಗುಣ ಹೊಸತಲೆಮಾರಿನ ಕ್ರಿಕೆಟಿಗರಿಗೆ ಆದರ್ಶವಾಗ ಬೇಕು. ಮಹಿಳಾ ಕ್ರಿಕೆಟ್ ಇವತ್ತು ಈ ಮಟ್ಟದ ಬೆಳವಣಿಗೆ ಕಾಣಲು ಜೂಲನ್, ಮಿಥಾಲಿ, ಶಾಂತಾ ರಂಗಸ್ವಾಮಿ, ಡಯಾನಾ ಎಡುಲ್ಜಿ, ಕಲ್ಪನಾ, ಅಂಜುಮ್ ಚೋಪ್ರಾ, ಮಮತಾ ಮಾಬೆನ್ ಅವರಂತಹ ಆಟಗಾರ್ತಿಯರ ಶ್ರಮವೇ ಕಾರಣ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೂಡ ಮಹಿಳಾ ಐಪಿಎಲ್ ಸೇರಿದಂತೆ ದೇಶಿ ಟೂರ್ನಿಗಳನ್ನು ಹೆಚ್ಚಿಸುವತ್ತ ಹೆಜ್ಜೆ ಇಟ್ಟಿದೆ. ಮಹಿಳಾ ಕ್ರಿಕೆಟ್‌ಗೆ ಇನ್ನಷ್ಟು ಬಲ ತುಂಬುವ ಹೊಣೆ ಯುವಪೀಳಿಗೆಯ ಮೇಲೆ ಇದೆ. ತಾವು ಆಡಿದ್ದ ತಂಡವು ಎರಡು ಬಾರಿ ವಿಶ್ವಕಪ್ ಟೂರ್ನಿಗಳ ಫೈನಲ್ ಪ್ರವೇಶಿಸಿತ್ತು. ಆದರೆ ಕಪ್ ಜಯಿಸಲಿಲ್ಲವೆಂಬ ಕೊರಗು ಇದೆ ಎಂದು ಜೂಲನ್ ಹೇಳಿದ್ದಾರೆ. ಇತ್ತೀಚೆಗಷ್ಟೇ ನಿವೃತ್ತರಾದ ಮಿಥಾಲಿ ಕೂಡ ಇದೇ ಮಾತು ಹೇಳಿದ್ದರು. ಈ ಉತ್ಕೃಷ್ಟ ಪ್ರತಿಭೆಗಳ ಕನಸನ್ನು ಸಾಕಾರಗೊಳಿಸುವ ಹೊಣೆ ಭಾರತ ತಂಡದ ಯುವಪೀಳಿಗೆಯ ಮುಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.