ಇಡೀ ಮನುಕುಲವನ್ನು ಏಕಚಾವಣಿಯ ಅಡಿ ತರುವಲ್ಲಿ ಹತ್ತು ಹಲವು ಸಂಗತಿಗಳು ಪ್ರಭಾವ ಬೀರಿವೆ. ಹಾಗೆ ಪ್ರಭಾವ ಬೀರಿದ ಮುಖ್ಯ ಸಂಗತಿಗಳಲ್ಲಿ ಸಂಗೀತ–ಕಲೆಗಳ ಜತೆಗೆ ಕ್ರೀಡೆಯೂ ಸೇರಿದೆ. ಮಾನವೀಯ ಮೌಲ್ಯಗಳ ತಳಹದಿಯಲ್ಲಿ ವಿಭಿನ್ನ ದೇಶ–ಸಮುದಾಯಗಳ ನಡುವೆ ಸ್ನೇಹ ಅರಳಿಸುವಂತಹ ಕಾರ್ಯದಲ್ಲಿ ಕ್ರೀಡೆ ತುಂಬಾ ಮಹತ್ತರ ಪಾತ್ರವನ್ನು ವಹಿಸುತ್ತಾ ಬಂದಿದೆ. ಆದರೆ, ಸೋಮವಾರ ಸಿಡ್ನಿಯಲ್ಲಿ ಮುಕ್ತಾಯವಾದ ಬಾರ್ಡರ್–ಗಾವಸ್ಕರ್ ಟ್ರೋಫಿ ಸರಣಿಯ ಮೂರನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಕೆಲವು ಪ್ರೇಕ್ಷಕರು ಭಾರತದ ಆಟಗಾರರನ್ನು ಗುರಿಯಾಗಿಸಿಕೊಂಡು ಜನಾಂಗೀಯ ನಿಂದನೆ ಮಾಡಿದ್ದು ಸಭ್ಯರ ಆಟ ಕ್ರಿಕೆಟ್ನ ಘನತೆಗೆ ಮಾತ್ರವಲ್ಲ, ಕ್ರೀಡಾಸ್ಫೂರ್ತಿಗೂ ಮಸಿ ಬಳಿಯುವಂಥದ್ದು. ಮನುಷ್ಯನ ಮೈಬಣ್ಣ, ಧರ್ಮ, ಜಾತಿ ಮತ್ತು ದೇಶದ ಹಿನ್ನೆಲೆಯನ್ನು ಅವಹೇಳನ ಮಾಡುವುದು ಅಮಾನವೀಯ. ಕೊರೊನಾ ನಂತರದ ಈ ಕಾಲಘಟ್ಟದಲ್ಲಿ ಜಗತ್ತು ಮಾನವೀಯ ಮೌಲ್ಯಗಳಿಗಾಗಿ ಹಂಬಲಿಸುತ್ತಿರುವಾಗ ನಡೆದಿರುವ ಅಹಿತಕರ ಘಟನೆ ಇದು. ಪ್ರಸ್ತುತ ನಡೆಯುತ್ತಿರುವ ಸರಣಿಯ ಆರಂಭದಲ್ಲಿಯೇ ಸ್ಥಳೀಯ ಮೂಲನಿವಾಸಿಗಳಿಗೆ ಬೆಂಬಲ ಸೂಚಿಸಿ ಆಸ್ಟ್ರೇಲಿಯಾ ಆಟಗಾರರು ಮೂಲಸಂಸ್ಕೃತಿ ಬಿಂಬಿಸುವ ಪೋಷಾಕು ಧರಿಸಿ ಕಣಕ್ಕಿಳಿದಿದ್ದರು. ‘ಬ್ಲ್ಯಾಕ್ ಲೈವ್ಸ್ ಮ್ಯಾಟರ್’ ಅಭಿಯಾನಕ್ಕೆ ಉಭಯ ತಂಡಗಳ ಆಟಗಾರರೂ ಸಾಂಕೇತಿಕ ಬೆಂಬಲ ವ್ಯಕ್ತಪಡಿಸಿದ್ದರು. ಇಂತಹ ಮಾನವೀಯ ಸಂದೇಶಗಳಿಗೆ ವೇದಿಕೆಯಾದ ಸರಣಿಗೆ ಈಗ ಕೆಲವರು ಕಳಂಕ ಮೆತ್ತಿದ್ದು ಖಂಡನೀಯ. ಪಂದ್ಯದ ಮೂರನೇ ದಿನ ಪಾನಮತ್ತನೊಬ್ಬ ಭಾರತದ ಆಟಗಾರರಾದ ಮೊಹಮ್ಮದ್ ಸಿರಾಜ್ ಮತ್ತು ಜಸ್ಪ್ರೀತ್ ಬೂಮ್ರಾ ಅವರನ್ನು ‘ಕೋತಿ’ ಎಂದು ನಿಂದನೆ ಮಾಡಿದ. ಈ ಕುರಿತು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ರೆಫರಿಗೆ ದೂರು ನೀಡಿದೆ. ದೂರು ನೀಡಿದ ಮರುದಿನವೇ ಈ ಪಿಡುಗು ಉಲ್ಬಣಿಸಿದ್ದು ಆಘಾತಕಾರಿ. ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಕೆಲವರು ಸಿರಾಜ್ ಅವರನ್ನು ‘ದೊಡ್ಡ ಕೋತಿ’ ಮತ್ತು ‘ಕಂದುನಾಯಿ’ ಎಂದು ಹೀಯಾಳಿಸಿದ ಕುರಿತು ವರದಿಯಾಗಿದೆ. ಆರು ಜನ ಕಿಡಿಗೇಡಿಗಳನ್ನು ಪೊಲೀಸರು ಕ್ರೀಡಾಂಗಣದಿಂದ ಹೊರಹಾಕಿದ್ದಾರೆ.

ಸಿಡ್ನಿಯಲ್ಲಿ ನಡೆದ ಟೆಸ್ಟ್ ಪಂದ್ಯಗಳ ವೇಳೆ ಅನೇಕ ಬಾರಿ ಜನಾಂಗೀಯ ನಿಂದನೆ ಪ್ರಕರಣಗಳು ವರದಿಯಾಗಿವೆ. 2011–12ರಲ್ಲಿ ಭಾರತ ತಂಡದೊಂದಿಗೆ ಮೊದಲ ಬಾರಿ ಆಸ್ಟ್ರೇಲಿಯಾ ಪ್ರವಾಸ ಮಾಡಿದ ವಿರಾಟ್ ಕೊಹ್ಲಿ ಪ್ರೇಕ್ಷಕರ ನಿಂದನೆಯಿಂದ ಸಿಟ್ಟಿಗೆದ್ದು ಸಂಜ್ಞೆ ಮಾಡಿದ್ದಕ್ಕೆ ಶಿಸ್ತುಕ್ರಮ ಎದುರಿಸಬೇಕಾಯಿತು. 2007–08ರಲ್ಲಿ ಹರಭಜನ್ ಸಿಂಗ್ ಮತ್ತು ಮ್ಯಾಥ್ಯೂ ಹೇಡನ್ ನಡುವಿನ ‘ಮಂಕಿಗೇಟ್’ ಪ್ರಕರಣವೂ ಇದೇ ಮೈದಾನದಲ್ಲಿ ನಡೆದಿತ್ತು. ಏಷ್ಯಾ ಮತ್ತು ಆಫ್ರಿಕಾ ಖಂಡದ ತಂಡಗಳ ಆಟಗಾರರನ್ನು ಮಾನಸಿಕವಾಗಿ ಕುಗ್ಗಿಸಲು ಅಲ್ಲಿಯ ಆಟಗಾರರು ಅಂಗಳದೊಳಗೆ ಸ್ಲೆಡ್ಜಿಂಗ್ (ಬೈಗುಳದ ಮೂಲಕ ಕೆಣಕುವುದು) ಮಾಡಿದರೆ, ಹೊರಗೆ ಪ್ರೇಕ್ಷಕರು ಜನಾಂಗೀಯ ನಿಂದನೆ ಮಾಡುವ ತಂತ್ರ ಹೊಸದೇನಲ್ಲ. ಜನಾಂಗೀಯ ನಿಂದನೆ ಪ್ರಕರಣಗಳು ಬೇರೆ ದೇಶಗಳಲ್ಲೂ ವರದಿಯಾಗಿವೆ. ಇಂಗ್ಲೆಂಡ್ನಲ್ಲಿ ಈ ಹಿಂದೆ ಸರಣಿ ನಡೆದಾಗ ಆಟಗಾರ ಮೋಯಿನ್ ಅಲಿ ಅವರನ್ನು ‘ಭಯೋತ್ಪಾದಕ ಒಸಾಮಾ’ ಎಂದು ಆಸ್ಟ್ರೇಲಿಯಾದ ಆಟಗಾರನೊಬ್ಬ ಕರೆದಿದ್ದು ವಿವಾದವಾಗಿತ್ತು. ಇಂಗ್ಲೆಂಡ್ ಆಟಗಾರ ಜೋಫ್ರಾ ಆರ್ಚರ್ ನ್ಯೂಜಿಲೆಂಡ್ನಲ್ಲಿ ನಿಂದನೆಗೊಳಗಾಗಿದ್ದರು. ವೆಸ್ಟ್ ಇಂಡೀಸ್ನ ಮಾಜಿ ಆಟಗಾರ ಡ್ಯಾರೆನ್ ಸಾಮಿ ತಾವು ಐಪಿಎಲ್ನಲ್ಲಿ ಆಡುವಾಗ ಕೆಲವು ಭಾರತೀಯ ಆಟಗಾರರೇ ‘ಕಾಲೂ’ ಎಂದು ಕರೆಯುತ್ತಿದ್ದರೆಂದು ಆರೋಪಿಸಿದ್ದರು. ಪ್ರಕರಣ ನಡೆದಾಗ ಚರ್ಚೆಗಳು ಜೋರಾಗಿ ನಡೆದು, ನಂತರ ತಣ್ಣಗಾಗುತ್ತವೆ. ಆದರೆ, ಈ ಸಮಸ್ಯೆಯನ್ನು ಬುಡಸಮೇತ ಕಿತ್ತುಹಾಕಲೇಬೇಕು. ಕ್ರಿಕೆಟ್ ಎಂದಿಗೂ ತಾರತಮ್ಯ ಮಾಡುವುದಿಲ್ಲ. ಬ್ಯಾಟು–ಚೆಂಡುಗಳು ತಮ್ಮನ್ನು ಹಿಡಿದ ವ್ಯಕ್ತಿಯ ಪ್ರತಿಭೆಯನ್ನು ಗುರುತಿಸುತ್ತವೆಯೇ ವಿನಾ ಆತನ ಧರ್ಮ, ಬಣ್ಣ, ದೇಶವನ್ನು ನೋಡುವುದಿಲ್ಲ. ಇದನ್ನು ಅರಿಯದವರಿಗೆ ಕ್ರೀಡಾಂಗಣದಲ್ಲಿ ಜಾಗವಿಲ್ಲ. ಈ ಕುರಿತು ಸ್ಪಷ್ಟ ಸಂದೇಶ ಹೋಗುವಂತಹ ಕ್ರಮವನ್ನು ಕೈಗೊಳ್ಳಬೇಕು. ಜನರ ಮನಃಸ್ಥಿತಿ ಬದಲಿಸುವ ದಿಸೆಯಲ್ಲಿ ಶಿಕ್ಷಣವನ್ನೂ ನೀಡಬೇಕು. ಇಂತಹ ಪ್ರಕರಣಗಳು ನಡೆದಾಗ ಸ್ಥಳೀಯ ಕ್ರಿಕೆಟ್ ಸಂಸ್ಥೆಯನ್ನೇ ಹೊಣೆ ಮಾಡಬೇಕು. ಕಠಿಣ ಶಿಕ್ಷೆ ವಿಧಿಸಲು ಐಸಿಸಿಗೆ ಯಾವ ಕಾರಣಕ್ಕೂ ಹಿಂಜರಿಕೆ ಸಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.