ಉತ್ತರಾಖಂಡದ ಮುಖ್ಯಮಂತ್ರಿ ತೀರಥ್ ಸಿಂಗ್ ರಾವತ್ ಅವರು ಹೆಣ್ಣುಮಕ್ಕಳ ಕುರಿತು ವಿವಾದಾಸ್ಪದ ಹೇಳಿಕೆಗಳನ್ನು ನೀಡುತ್ತಿರುವುದು ಮೇಲ್ನೋಟಕ್ಕೆ ತಮಾಷೆಯಾಗಿ ಕಾಣಿಸಬಹುದು. ಆದರೆ, ಇಂತಹ ಹೇಳಿಕೆಗಳನ್ನು ಪ್ರಜ್ಞಾವಂತರು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿದೆ. ಸಮಾಜದಲ್ಲಿ ಮಹಿಳೆಯರ ಕುರಿತು ಇರುವ ಪೂರ್ವಗ್ರಹ ಮತ್ತು ಸಂಕುಚಿತ ಮನೋಭಾವವನ್ನು ರಾವತ್ ಅವರ ಹೇಳಿಕೆಗಳು ಪ್ರತಿಬಿಂಬಿಸುತ್ತವೆ ಮತ್ತು ಮುಖ್ಯಮಂತ್ರಿಯವರೇ ಅವುಗಳನ್ನು ಸಮರ್ಥಿಸಿದಂತೆ ಕಾಣಿಸುತ್ತಿದೆ. ‘ಹರಿದ ಜೀನ್ಸ್ ತೊಡುವ ಪರಿಪಾಟ ಮಹಿಳೆಯರಲ್ಲಿ ಹೆಚ್ಚುತ್ತಿದೆ. ಇದು ನಮ್ಮ ಸಂಸ್ಕೃತಿಯೇ? ಇಂತಹ ಬಟ್ಟೆ ಧರಿಸುವ ಪೋಷಕರಿಂದ ಮಕ್ಕಳು ಯಾವ ರೀತಿಯ ಸಂಸ್ಕೃತಿ ಕಲಿಯಬಲ್ಲರು? ಇದರಿಂದ ಸಮಾಜಕ್ಕೆ ಎಂತಹ ಸಂದೇಶ ರವಾನೆಯಾಗುತ್ತದೆ?’ ಎಂಬರ್ಥದಲ್ಲಿಕೆಲವು ದಿನಗಳ ಹಿಂದೆ ಅವರು ನೀಡಿದ ಹೇಳಿಕೆ ವಿವಾದದ ಕಿಡಿ ಹೊತ್ತಿಸಿತ್ತು. ಈ ಹೇಳಿಕೆಗೆ ಸಮಾಜದ ವಿವಿಧ ಸ್ತರಗಳಿಂದ ತೀವ್ರ ಆಕ್ರೋಶವೂ ವ್ಯಕ್ತವಾಯಿತು. ಅದು ತಣ್ಣಗಾಗುವ ಮೊದಲೇ ಮತ್ತೊಂದು ವಿವಾದಾತ್ಮಕ ಹೇಳಿಕೆಯು ಅವರಿಂದ ಹೊರಬಿದ್ದಿದೆ. ‘ಕೋವಿಡ್ ಪಿಡುಗಿನ ಈ ಸಮಯದಲ್ಲಿ ಹೆಚ್ಚು ಪಡಿತರ ಪಡೆಯುವ ಸಲುವಾಗಿ ಜನರು ಹೆಚ್ಚು ಮಕ್ಕಳನ್ನು ಹೆರಬೇಕಿತ್ತು...’ ಎಂದಿದ್ದಾರೆ. ಈ ಮಾತು ರವಾನಿಸುವಂತಹ ಸಂದೇಶ ಎಂತಹುದು?

ಮುಖ್ಯಮಂತ್ರಿ ರಾವತ್ ನೀಡಿರುವ ಎರಡೂ ಹೇಳಿಕೆಗಳು ಮಹಿಳಾವಿರೋಧಿ ಮಾತ್ರವಲ್ಲ, ಮುಖ್ಯಮಂತ್ರಿ ಹುದ್ದೆಯ ಘನತೆಗೂ ಚ್ಯುತಿ ತರುವಂತಿವೆ. ಕೆಲವು ಗುಂಪುಗಳು ಅನೈತಿಕ ಪೊಲೀಸ್ಗಿರಿ ಪ್ರದರ್ಶಿಸುವ ಮೂಲಕ ಸಮಾಜದಲ್ಲಿ ಅಶಾಂತಿಗೆ ಕಾರಣವಾಗುತ್ತಿರುವ ಘಟನೆಗಳು ಇತ್ತೀಚೆಗೆ ಉತ್ತರಾಖಂಡದಲ್ಲಿ ಹೆಚ್ಚಾಗಿವೆ. ಅಂತಹ ಕೃತ್ಯಗಳಿಗೆ ಕುಮ್ಮಕ್ಕು ಕೊಡುವಂತೆ ಮುಖ್ಯಮಂತ್ರಿಯವರೇ ಹೇಳಿಕೆಗಳನ್ನು ನೀಡುತ್ತಿರುವುದು ಎಷ್ಟು ಸರಿ? ಮಹಿಳೆಯರು ಯಾವ ರೀತಿಯ ಬಟ್ಟೆಗಳನ್ನು ಎಷ್ಟು ಮತ್ತು ಹೇಗೆ ತೊಡಬೇಕು ಎನ್ನುವುದರ ಕುರಿತು ಸರ್ಕಾರ ಮುನ್ನಡೆಸುವ ಮುಖ್ಯಸ್ಥರೇ ಹೇಳಿಕೆ ನೀಡುವುದನ್ನು ಎಳ್ಳಷ್ಟೂ ಒಪ್ಪಲು ಸಾಧ್ಯವಿಲ್ಲ. ಯಾವುದೇ ಪರಿಸ್ಥಿತಿಯಲ್ಲಿ ಎಲ್ಲ ಮಹಿಳೆಯರಿಗೂ ಸುರಕ್ಷಿತವೆನ್ನಿಸುವಂತಹ ಸಾಮಾಜಿಕ ವಾತಾವರಣವನ್ನು ಉಂಟು ಮಾಡುವುದು ಸರ್ಕಾರದ ಸಂವಿಧಾನಬದ್ಧ ಕರ್ತವ್ಯ. ಆ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸುವುದನ್ನು ಬಿಟ್ಟು ಮುಖ್ಯಮಂತ್ರಿಯವರೇ ಬೇಕಾಬಿಟ್ಟಿ ಹೇಳಿಕೆಗಳನ್ನು ಕೊಡುವುದರಿಂದ, ಮಹಿಳೆಯರ ವಿರುದ್ಧ ಅಪರಾಧ ಪ್ರಕರಣಗಳು ಹೆಚ್ಚಲು ಪೂರಕ ವಾತಾವರಣ ಸೃಷ್ಟಿಯಾಗುವ ಅಪಾಯವಿದೆ. ‘ಹೆಚ್ಚು ಪಡಿತರ ಪಡೆಯುವ ಸಲುವಾಗಿ ಹೆಚ್ಚು ಮಕ್ಕಳನ್ನು ಹೆರಬೇಕಾಗಿತ್ತು. ನೀವ್ಯಾಕೆ 20 ಮಕ್ಕಳನ್ನು ಹೆರಲಿಲ್ಲ?’ ಎನ್ನುವ ಅವರ ಹೇಳಿಕೆಯು ಪಾಳೆಗಾರಿಕೆ ಮನೋಭಾವದ ದ್ಯೋತಕವಾಗಿದೆ. ಮಹಿಳೆಯರು ಮಕ್ಕಳನ್ನು ಹೆರುವ ಯಂತ್ರ ಎನ್ನುವ ರೂಢಿಗತ ಅನಿಸಿಕೆಯನ್ನು ರಾವತ್ ಸಮರ್ಥಿಸಿದ್ದಾರೆ. ಅಲ್ಲದೆ, ಪಡಿತರ ವಿತರಣಾ ವ್ಯವಸ್ಥೆಗೆ ಇರುವ ಸಾಮಾಜಿಕ ಘನತೆಯನ್ನೂ ಲೇವಡಿ ಮಾಡಿದ್ದಾರೆ. ಸರ್ಕಾರದ ಪಡಿತರ ನೀತಿಯ ಔಚಿತ್ಯದ ಬಗ್ಗೆಯೇ ಅವರಿಗೆ ವಿಶ್ವಾಸ ಇಲ್ಲ ಎನ್ನುವಂತಿದೆ ಈ ಹೇಳಿಕೆ. ಜೊತೆಗೆ ಕುಟುಂಬ ಯೋಜನೆಗೆ ಸಂಬಂಧಿಸಿ ಸರ್ಕಾರದ ನೀತಿ–ನಿಲುವಿನ ಬಗ್ಗೆಯೂ ಅವರು ಅವಿಶ್ವಾಸ ಪ್ರಕಟಿಸಿದಂತೆ ಆಗುತ್ತದೆ. ರಾಜ್ಯವೊಂದರ ಮುಖ್ಯಮಂತ್ರಿ ಹುದ್ದೆಯನ್ನು ನಿರ್ವಹಿಸುವವರು ಇಂತಹ ಅಪಕ್ವ, ಅಸಂಬದ್ಧ ಹೇಳಿಕೆಗಳನ್ನು ನೀಡಬಾರದು. ಕೋವಿಡ್ನಿಂದಾಗಿ ಅರ್ಥವ್ಯವಸ್ಥೆ ಹಳಿ ತಪ್ಪಿದೆ. ಅದನ್ನು ಸರಿಪಡಿಸುವುದು ಆಳುವವರ ಆದ್ಯತೆಯಾಗಬೇಕು. ರಾಜ್ಯದ ಜನರ ಬದುಕಿನ ಪ್ರಶ್ನೆಗಳ ಕುರಿತು ಚಿಂತಿಸಲಿ. ಅದಕ್ಕೆ ಸಂಬಂಧಿಸಿದ ಪರಿಹಾರ ಕ್ರಮಗಳನ್ನು ಜಾರಿಗೊಳಿಸಲಿ. ಮಹಿಳೆಯರ ಉಡುಗೆ–ತೊಡುಗೆ ಹೇಗಿರಬೇಕು, ಯಾರು ಎಷ್ಟು ಮಕ್ಕಳನ್ನು ಹೆರಬೇಕು ಎಂಬಂತಹ ವಿಷಯಗಳ ಕುರಿತ ಬಾಯಿಬಡುಕತನವನ್ನು ಇನ್ನಾದರೂ ನಿಲ್ಲಿಸುವುದು ಒಳ್ಳೆಯದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.