ಶರವೇಗದಲ್ಲಿ ಬೆಳೆಯುತ್ತಿರುವ ಬೆಂಗಳೂರಿನಲ್ಲೂ ಮುಂಬೈ ಮಾದರಿಯಲ್ಲೇ ಉಪನಗರ ರೈಲು ವ್ಯವಸ್ಥೆಯನ್ನು ಹೊಂದಬೇಕು ಎಂಬುದು ಸರಿಸುಮಾರು ನಾಲ್ಕು ದಶಕಗಳ ಕನಸು. ನಗರದ ಸಂಚಾರ ದಟ್ಟಣೆ ಹಾಗೂ ವಾಹನಗಳಿಂದ ಉಂಟಾಗುತ್ತಿರುವ ವಾಯು ಮಾಲಿನ್ಯದ ಪ್ರಮಾಣವನ್ನು ತಗ್ಗಿಸಲು ಉಪನಗರ ರೈಲು ಸೇವೆಯು ಮಹತ್ತರ ಪಾತ್ರ ವಹಿಸಲಿದೆ ಎಂಬುದರಲ್ಲಿ ಎರಡು ಮಾತಿಲ್ಲ. ರಸ್ತೆ ಸಾರಿಗೆ ಹಾಗೂ ಮೆಟ್ರೊ ಸಾರಿಗೆಗೆ ಹೋಲಿಸಿದರೆ ಇದು ತೀರಾ ಅಗ್ಗ ಕೂಡ. ‘ನಮ್ಮ ಮೆಟ್ರೊ’ ಯೋಜನಾ ಗಾತ್ರವನ್ನು ನೋಡಿದರೆ ಉಪನಗರ ರೈಲು ಯೋಜನೆಯ ಅನುಷ್ಠಾನಕ್ಕೆ ಬೇಕಾಗುವ ಬಂಡವಾಳವೂ ಕಡಿಮೆ. ಬೆಂಗಳೂರಿಗೆ ಸೀಮಿತವಾಗಿ ಪ್ರಯಾಣಿಕ ರೈಲು ಮಾರ್ಗ ಜಾಲವನ್ನು ನಿರ್ಮಿಸುವ ಪ್ರಸ್ತಾವ, 1983ರಲ್ಲೇ ರೈಲ್ವೆ ಇಲಾಖೆಯ ಮುಂದಿತ್ತು. ರೈಲ್ ಇಂಡಿಯಾ ತಾಂತ್ರಿಕ ಮತ್ತು ಆರ್ಥಿಕ ಸೇವಾ ಸಂಸ್ಥೆ (ರೈಟ್ಸ್), ಬೆಂಗಳೂರು ನಗರಕ್ಕೆ ಪ್ರತ್ಯೇಕ ರೈಲು ವ್ಯವಸ್ಥೆ ಹೊಂದುವ ಬಗ್ಗೆ 1998ರಲ್ಲಿ ಸರ್ವೇ ನಡೆಸಿತ್ತು. ಯೋಜನೆಯ ಶೇ 50ರಷ್ಟು ವೆಚ್ಚವನ್ನು ಭರಿಸುವುದಾಗಿ ರಾಜ್ಯ ಸರ್ಕಾರವು ಕೇಂದ್ರಕ್ಕೆ ಭರವಸೆಯನ್ನೂ ನೀಡಿತ್ತು. ಆದರೂ ಈ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಮುಂದಾಗಿರಲಿಲ್ಲ. ಯೋಜನೆ ಅನುಷ್ಠಾನದಲ್ಲಿ ಆಗುತ್ತಿರುವ ವಿಳಂಬದ ವಿರುದ್ಧ ‘ಚುಕುಬುಕು ಬೇಕು’ ಎಂಬ ಹೋರಾಟವೂ ತೀವ್ರಗೊಂಡಿತು. ಅದರ ಪರಿಣಾಮವೆಂಬಂತೆ, 2018–19ರ ಕೇಂದ್ರ ಬಜೆಟ್ನಲ್ಲಿ ಈ ಯೋಜನೆಯೂ ಸ್ಥಾನ ಪಡೆಯಿತು. ಆದರೆ,ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ ₹ 10 ಕೋಟಿ ಅನುದಾನವನ್ನು ಮಾತ್ರ ಎತ್ತಿಡಲಾಗಿತ್ತು. ಯೋಜನೆ ಮತ್ತೆ ವಿಳಂಬವಾಗುತ್ತಿರುವ ಬಗ್ಗೆ ಜನಾಕ್ರೋಶ ಹೆಚ್ಚಿದ್ದರಿಂದ ಕೇಂದ್ರ ಸರ್ಕಾರವು 2020–21ನೇ ಸಾಲಿನ ಬಜೆಟ್ನಲ್ಲಿ ಪರಿಷ್ಕೃತ ಯೋಜನೆಯನ್ನು ಪ್ರಕಟಿಸಿತು. ಇದೀಗ ₹ 19 ಸಾವಿರ ಕೋಟಿ ಅಂದಾಜು ವೆಚ್ಚದ ಯೋಜನೆಯ ಅನುಷ್ಠಾನಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆಯನ್ನು ನೀಡಿದೆ. ಇದು, ಈ ಯೋಜನೆಯ ಅನುಷ್ಠಾನದ ಕನಸು ಮತ್ತೆ ಗರಿಗೆದರುವಂತೆ ಮಾಡಿದೆ.

ಉಪನಗರ ರೈಲು ಯೋಜನೆಯ ಜಾರಿಗೆ ಇದ್ದ ಬಹುತೇಕ ಆಡಳಿತಾತ್ಮಕ ತೊಡಕುಗಳು ನಿವಾರಣೆ ಆಗಿವೆ.ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ (ಕೆ–ರೈಡ್) ಕಾಮಗಾರಿ ಅನುಷ್ಠಾನದ ಹೊಣೆ ವಹಿಸಲಾಗಿದೆ. ಯೋಜನೆಯ ಒಟ್ಟು ವೆಚ್ಚದಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಅನುದಾನದ ಹೊರತಾಗಿ ₹ 8,860 ಕೋಟಿ ಸಾಲವನ್ನೂ ಪಡೆಯ ಬೇಕಿದೆ. ಈ ಯೋಜನೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯುವ ಸಲುವಾಗಿ ಜಾಗತಿಕ ಮಟ್ಟದ ಹಣಕಾಸು ಸಂಸ್ಥೆಗಳ ಜತೆ ಮಾತುಕತೆ ನಡೆದಿದೆ. ಈ ಕುರಿತು ಶೀಘ್ರ ಒಪ್ಪಂದಗಳು ಏರ್ಪಡುವಂತೆ ಎರಡೂ ಸರ್ಕಾರಗಳು ನೋಡಿಕೊಳ್ಳಬೇಕು. ಮುಂಬೈ ನಗರದಲ್ಲಿ ಉಪನಗರ ರೈಲು ಸಾರಿಗೆಯನ್ನು ನಿತ್ಯ ಸರಿಸುಮಾರು 75 ಲಕ್ಷ ಜನ ಬಳಸುತ್ತಿದ್ದಾರೆ.ಬೆಂಗಳೂರಿನಲ್ಲಿ ಉಪನಗರ ರೈಲು ಸೇವೆಯ ಪ್ರಯೋಜನವನ್ನುನಿತ್ಯ ಸುಮಾರು 25 ಲಕ್ಷ ಮಂದಿ ಪಡೆಯಬಹುದು ಎಂದು ಅಂದಾಜು ಮಾಡಲಾಗಿದೆ. ನಗರದ ರಸ್ತೆ ಮೇಲಿನ ಹೊರೆ ಅಷ್ಟರ ಮಟ್ಟಿಗೆ ತಗ್ಗಲಿದೆ. ಜೊತೆಗೆ ಮಾಲಿನ್ಯವೂ ಕಡಿಮೆ ಆಗಲಿದೆ. ಈಗ ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರಗಳೇ ಇವೆ. ಇದುವರೆಗೆ ಉಪನಗರ ರೈಲಿನ ಬಗ್ಗೆ ಬರೀ ಭರವಸೆಗಳನ್ನಷ್ಟೇ ನೀಡುತ್ತಾ ಬಂದಿರುವ ಜನಪ್ರತಿನಿಧಿಗಳು ಇನ್ನು ಸಬೂಬು ಹೇಳುತ್ತಾ ಕೂರುವುದಕ್ಕೆ ಅವಕಾಶ ಇಲ್ಲ. ಈ ಕಾಮಗಾರಿಯನ್ನು ಆದಷ್ಟು ಶೀಘ್ರ ಆರಂಭಿಸಬೇಕು. ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ಕಾಮಗಾರಿ ಆರಂಭಿಸಲು ಪ್ರಾಥಮಿಕವಾಗಿ ಕನಿಷ್ಠ ₹ 1 ಸಾವಿರ ಕೋಟಿ ಅನುದಾನವಾದರೂ ಬೇಕು. ಅನುದಾನ ಬಿಡುಗಡೆ ಮಾಡಲು ಸರ್ಕಾರಗಳು ಮತ್ತಷ್ಟು ವಿಳಂಬ ಮಾಡಬಾರದು. ನಗರದ ಜನರ ದಶಕಗಳ ಕನಸನ್ನು ನನಸಾಗಿಸುವ ಮಹತ್ತರ ಹೊಣೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡರ ಮೇಲೂ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.