ಯಾವುದೋ ಒಂದು ನೆಪದಡಿ, ಮನುಷ್ಯರನ್ನು ಹೊಡೆದು ಕೊಲ್ಲುವ ಹೀನಪ್ರವೃತ್ತಿ ದೇಶದಲ್ಲಿ ಮರುಕಳಿಸುತ್ತಲೇ ಇದೆ. ಹೀಗೆ ಕೊಲ್ಲುವವರಿಗೆ ಮಕ್ಕಳು– ದೊಡ್ಡವರು ಎಂಬ ಭೇದವೂ ಇಲ್ಲ. ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಭಾವಖೇಡಿ ಎಂಬ ಹಳ್ಳಿಯಲ್ಲಿ ಬಯಲಿನಲ್ಲಿ ಶೌಚಕ್ಕೆ ಕುಳಿತಿದ್ದ ಇಬ್ಬರು ದಲಿತ ಮಕ್ಕಳನ್ನು ಹೊಡೆದು ಕೊಂದ ದಾರುಣ ಪ್ರಕರಣ, ಮನುಷ್ಯತ್ವ ಇರುವವರ ಮನಸ್ಸನ್ನು ಖಂಡಿತ ವಿಚಲಿತಗೊಳಿಸುತ್ತದೆ.

10–12 ವರ್ಷದ ಈ ಮಕ್ಕಳು ಗ್ರಾಮ ಪಂಚಾಯಿತಿ ಕಟ್ಟಡದ ಬಳಿ ಬಯಲಿನಲ್ಲಿ ಶೌಚಕ್ಕೆ ಕುಳಿತಿದ್ದನ್ನು ನೋಡಿದ ಇಬ್ಬರು ಹಲ್ಲೆಕೋರರು, ಮೊಬೈಲ್ ಫೋನ್‌ನಲ್ಲಿ ಮಕ್ಕಳ ಫೋಟೊ ಕ್ಲಿಕ್ಕಿಸಿದ್ದಲ್ಲದೆ, ಅವರನ್ನು ಲಾಠಿಯಿಂದ ಹೊಡೆದು ಕೊಲೆ ಮಾಡಿದ್ದಾರೆ. ಬಹುಶಃ ಆ ಮಕ್ಕಳು ದಲಿತರು ಅಲ್ಲವಾಗಿದ್ದಲ್ಲಿ ‘ದೊಡ್ಡವರು’ ಎನ್ನಿಸಿಕೊಂಡ ಈ ಜನ ಬುದ್ಧಿ ಹೇಳಿ ಬಿಡುತ್ತಿದ್ದರೋ ಏನೋ? ದಲಿತರ ರಕ್ಷಣೆಗಾಗಿ ಹತ್ತಾರು ಕಾಯ್ದೆಗಳಿದ್ದರೂ, ಇವತ್ತಿಗೂ ದಲಿತರು ಹಳ್ಳಿಗಳಲ್ಲಿ ಎಂತಹ ದಯನೀಯ ಸ್ಥಿತಿಯಲ್ಲಿ ಬದುಕು ಸವೆಸುತ್ತಿದ್ದಾರೆ ಎನ್ನುವುದಕ್ಕೆ ಈ ಘಟನೆ ಇತ್ತೀಚಿನ ಉದಾಹರಣೆ.

‘ಗ್ರಾಮದಲ್ಲಿ ದಲಿತರ ವಿರುದ್ಧ ಜಾತಿ ತಾರತಮ್ಯ ಎಸಗಲಾಗುತ್ತಿದೆ. ಗ್ರಾಮದ ಕೈಪಂಪ್‌ನಿಂದ ಎಲ್ಲರೂ ನೀರು ಪಡೆದ ಬಳಿಕವಷ್ಟೇ ನಾವು ನೀರು ತೆಗೆಯಬಹುದು. ಅತಿ ಕಡಿಮೆ ಕೂಲಿಗೆ ನಮ್ಮನ್ನು ದುಡಿಯಲು ಒತ್ತಾಯಿಸಲಾಗುತ್ತಿದೆ’ ಎಂದು ಕೊಲೆಗೀಡಾದ ಒಬ್ಬ ಬಾಲಕನ ತಂದೆ ಹೇಳಿರುವುದನ್ನು ನೋಡಿದರೆ ಗ್ರಾಮದಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ ಎನ್ನುವುದು ಖಚಿತ. ಮಕ್ಕಳ ಸಾವಿಗೆ ಕಾರಣರಾದವರಿಗೆ ಕಠಿಣ ಶಿಕ್ಷೆ ಆಗುವಂತೆ ಸರ್ಕಾರ ನೋಡಿಕೊಳ್ಳಬೇಕು. ಆಡಳಿತ ವ್ಯವಸ್ಥೆಯು ಇಂತಹ ಪ್ರಕರಣಗಳನ್ನು ಕಡೆಗಣ್ಣೋಟದಿಂದ ನಿರ್ಲಕ್ಷಿಸುವುದರಿಂದಲೇ ಈ ರೀತಿಯ ದೌರ್ಜನ್ಯಗಳನ್ನು ಪೂರ್ತಿ ನಿಲ್ಲಿಸಲು ಈವರೆಗೆ ಸಾಧ್ಯವಾಗಿಲ್ಲ. ಇಂತಹ ಅಮಾನವೀಯ ಕೃತ್ಯಗಳಿಗೆ ಕಾನೂನು ಪಾಲಕರೂ ಹೊಣೆಯೆಂದು ಪರಿಗಣಿಸಿ ಅವರ ವಿರುದ್ಧವೂ ಕಠಿಣ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ.

ಮಕ್ಕಳು ಮಾತ್ರವಲ್ಲ, ಹಿರಿಯರೂ ಶೌಚಕ್ಕೆ ಬಯಲನ್ನು ಬಳಸುವುದು ನಮ್ಮಲ್ಲಿ ಹಿಂದಿನಿಂದಲೂ ಬಂದಿರುವ ಅನಿಷ್ಟ ರೂಢಿ. ಇದು ಯಾವುದೋ ಒಂದು ಸಮುದಾಯಕ್ಕೆ ಸೀಮಿತವಾದದ್ದೂ ಅಲ್ಲ. ನಾಲ್ಕು ವರ್ಷಗಳ ಹಿಂದೆ ಪ್ರಕಟವಾದ ಸಮೀಕ್ಷೆಯೊಂದರ ಪ್ರಕಾರ, ನಮ್ಮ ದೇಶದ ಸುಮಾರು ಅರ್ಧದಷ್ಟು ಜನ ಬಯಲಿನಲ್ಲೇ ಮಲವಿಸರ್ಜನೆ ಮಾಡುತ್ತಾರೆ. ಬಯಲುಶೌಚ ಸಾಮಾನ್ಯವಾಗಿರುವ ಜಗತ್ತಿನ ಹತ್ತು ದೇಶಗಳಲ್ಲಿ ಭಾರತವೇ ಮುಂಚೂಣಿಯಲ್ಲಿದೆ. ದೇಶದ ಪ್ರತಿ ಏಳು ಮಕ್ಕಳಲ್ಲಿ ಒಬ್ಬರಿಗೆ ಮನೆಯಲ್ಲಾಗಲೀ, ಶಾಲೆಯಲ್ಲಾಗಲೀ ಶೌಚಾಲಯ ಸೌಲಭ್ಯ ಇಲ್ಲ ಎನ್ನುತ್ತಿದೆ ಅಂಕಿಅಂಶ.

ಮನಮೋಹನ ಸಿಂಗ್ ಪ್ರಧಾನಿ ಆಗಿದ್ದಾಗ ಯುಪಿಎ ಸರ್ಕಾರವು ಶೌಚಾಲಯ ನಿರ್ಮಿಸಲು ‘ನಿರ್ಮಲ್ ಭಾರತ್’ ಯೋಜನೆಯಡಿ ಪ್ರತಿ ಕುಟುಂಬಕ್ಕೆ 10 ಸಾವಿರ ಸಹಾಯಧನ ನೀಡುತ್ತಿತ್ತು. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಎನ್‌ಡಿಎ ಸರ್ಕಾರವು ಯೋಜನೆಯ ಹೆಸರನ್ನು ‘ಸ್ವಚ್ಛ ಭಾರತ್’ ಎಂದು ಬದಲಿಸಿ, 6.50 ಲಕ್ಷ ಹಳ್ಳಿಗಳಲ್ಲಿ ಶೌಚಾಲಯ ನಿರ್ಮಿಸಲು ಪ್ರತಿ ಹಳ್ಳಿಗೆ ವಾರ್ಷಿಕ ₹ 20 ಲಕ್ಷ ಮೀಸಲಿಡುವುದಾಗಿ ಘೋಷಿಸಿತು.

ಭಾವಖೇಡಿ ಗ್ರಾಮದ ಮಕ್ಕಳ ಹತ್ಯೆಯ ಪ್ರಕರಣವನ್ನು ಗಮನಿಸಿದರೆ, ಹಳ್ಳಿಗಳನ್ನು ಬಯಲುಶೌಚ ಮುಕ್ತಗೊಳಿಸುವ ಯೋಜನೆಯ ಹಣ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ ಅಥವಾ ದುರುಪಯೋಗ ಆಗುತ್ತಿದೆ ಎನ್ನುವುದು ಸ್ಪಷ್ಟ. ಭಾವಖೇಡಿಯ ಮಕ್ಕಳ ಹತ್ಯೆ ಪ್ರಕರಣ, ಸ್ವಚ್ಛ ಭಾರತ ಯೋಜನೆಯ ಅಮಾನುಷ ವ್ಯಂಗ್ಯ ಎನ್ನದೇ ನಿರ್ವಾಹವಿಲ್ಲ.ಉತ್ತರ ಭಾರತದ ಹಳ್ಳಿಯೊಂದರಲ್ಲಿ ರಾತ್ರಿ ವೇಳೆ ಬಯಲು ಶೌಚಾಲಯಕ್ಕೆ ಹೋದ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದದ್ದೂ ಹಿಂದೆ ವರದಿಯಾಗಿತ್ತು. ಹಾಗೆ ನೋಡಿದರೆ ಬಯಲು ಶೌಚಾಲಯದಿಂದ ಹೆಚ್ಚು ಅಪಾಯಕ್ಕೆ ಒಳಗಾಗುತ್ತಿರುವವರು ಮಕ್ಕಳೇ.

ಯುನಿಸೆಫ್ ಪ್ರಕಾರ, ಬಯಲು ಶೌಚಾಲಯದಿಂದಾಗಿ ಬರುವ ಸಾಂಕ್ರಾಮಿಕ ರೋಗಗಳ ಸಂಖ್ಯೆ 50ಕ್ಕಿಂತಲೂ ಹೆಚ್ಚು. ಇದರಿಂದ ಭೇದಿಗೀಡಾಗಿ ವಿಶ್ವದಾದ್ಯಂತ ಪ್ರತಿವರ್ಷ 5 ವರ್ಷದೊಳಗಿನ 5.80 ಲಕ್ಷ ಮಕ್ಕಳು ಸಾವಿಗೀಡಾಗುತ್ತಿದ್ದಾರೆ. ಮಕ್ಕಳಲ್ಲಿ ಕಂಡುಬರುತ್ತಿರುವ ಪೌಷ್ಟಿಕಾಂಶ ಕೊರತೆಗೂ ಬಯಲು ಶೌಚವೇ ಕಾರಣ. ಆದರೆ, ಮಕ್ಕಳನ್ನೂ ಹೊಡೆದು ಕೊಲ್ಲುವ ಮನಃಸ್ಥಿತಿಯು ಈ ಭೇದಿಯಿಂದ ಉಂಟಾಗುವ ಮಕ್ಕಳ ಸಾವಿಗಿಂತಲೂ ಭಯಾನಕ.ಜಾತಿಯ ಸಂಕೋಲೆಯಿಂದ ಈ ದೇಶಕ್ಕೆ ಮುಕ್ತಿ ಸಿಗಲು ಇನ್ನೆಷ್ಟು ವರ್ಷಗಳು ಬೇಕು? ಪ್ರಜ್ಞಾವಂತರೆಲ್ಲರೂ ಅತ್ಯಂತ ಗಂಭೀರವಾಗಿ ಚಿಂತಿಸಿ ಉತ್ತರ ಕಂಡುಕೊಳ್ಳಬೇಕಾದ ಪ್ರಶ್ನೆಯಿದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.