‘ಪ್ರಜಾಪ್ರಭುತ್ವದ ಕಗ್ಗೊಲೆ’- ಈ ಮಾತು ಇತ್ತೀಚೆಗೆ ಎಲ್ಲಾ ವಲಯದವರ ಬಾಯಲ್ಲೂ ಸರಾಗವಾಗಿ ಹರಿದಾಡುತ್ತಿದೆ. ರಾಜಕೀಯ ಕ್ಷೇತ್ರದಲ್ಲಿ ಹೆಚ್ಚಾಗಿ ಕೇಳಿಬರುತ್ತಿದೆ. ಇದನ್ನು ಹೇಳುತ್ತಿರುವವರು ನಿಜವಾಗಿಯೂ ಸತ್ಯವನ್ನೇ ನುಡಿಯುತ್ತಿದ್ದಾರೆ. ಕೊಲೆಯಾಗಿ ಬಿದ್ದಿರುವುದು ಒಂದೇ ಹೆಣ. ಕೊಲೆಗಾರರು, ಕೊಲೆಯ ಸಮಯ, ಕೊಲೆಯ ಸಂದರ್ಭ, ಕೊಲೆಗೆ ಬಳಸಿದ ಹತಾರಗಳು ಮಾತ್ರ ಬೇರೆಬೇರೆ. ವಿಚಿತ್ರವೆಂದರೆ, ಹಳೆಯ ಕೊಲೆಗಾರರೇ ಹೊಸ ಫಿರ್ಯಾದಿಗಳೂ ಮತ್ತು ಕೆಲವೊಮ್ಮೆ ತೀರ್ಪು ನೀಡುವ ನ್ಯಾಯಾಧೀಶರೂ ಆಗಿಬಿಡುತ್ತಾರೆ. ಅವರ ದೂರಿನಲ್ಲಿ ಇವರು, ಇವರ ದೂರಿನಲ್ಲಿ ಅವರು ಆರೋಪಿ. ಭಾಗಿಯೇ ಸಾಕ್ಷಿಯಾಗುವ ವಿಪರ್ಯಾಸವಿದು.

ಈ ಸನ್ನಿವೇಶವನ್ನು ವಿಶಾಲಾರ್ಥದಲ್ಲಿ ಹಲವು ಕಾಲಘಟ್ಟಗಳಿಗೆ, ಹಲವು ರಾಜ್ಯಗಳಿಗೆ, ಇಡೀ ರಾಷ್ಟ್ರಕ್ಕೆ ಅನ್ವಯಿಸಬಹುದಾದರೂ, ವಿಶ್ಲೇಷಣೆಯನ್ನುಒಂದು ಚೌಕಟ್ಟಿಗೆ ಒಳಪಡಿಸುವ ದೃಷ್ಟಿಯಿಂದ, ನಮ್ಮ ರಾಜ್ಯದ ಸಮಕಾಲೀನ ರಾಜಕೀಯ ಬೆಳವಣಿಗೆಗಳಿಗೆ ಸೀಮಿತಗೊಳಿಸೋಣ. ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ನಿರ್ದಿಷ್ಟ ವಿದ್ಯಮಾನಗಳನ್ನು ಗಮನಿಸಿದರೆ, ಪ್ರಜಾಪ್ರಭುತ್ವದ ಮೂಲ ಆಶಯಗಳಿಗೆ ಹೊಡೆತ ಬಿದ್ದದ್ದು ಒಂದು ವರ್ಷದ ಹಿಂದೆ, ಸಮ್ಮಿಶ್ರ ಸರ್ಕಾರ ರಚನೆಯಾದ ಸಂದರ್ಭದಲ್ಲಿ ಎಂಬುದು ಎದ್ದುಕಾಣುತ್ತದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಜಿದ್ದಾಜಿದ್ದಿ ಹೋರಾಟ ಮಾಡಿದ ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾಗಿ ಸಮ್ಮಿಶ್ರ ಸರ್ಕಾರ ರಚಿಸಿದ್ದು ಪ್ರಜಾಸತ್ತಾತ್ಮಕ ವ್ಯವಸ್ಥೆಯ ವ್ಯಂಗ್ಯದಂತೆ ಇತ್ತು. ಅಧಿಕಾರಕ್ಕೆ ಏರುವುದನ್ನೇ ಗುರಿಯಾಗಿರಿಸಿಕೊಂಡ ಜೆಡಿಎಸ್ ಪಕ್ಷಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ಸಮಾನ ಶತ್ರುಗಳು, ಅನುಕೂಲಕ್ಕೆ ತಕ್ಕಂತೆ ಮಿತ್ರರು. ಹಾಗಾಗಿ, ಸಮ್ಮಿಶ್ರ ಸರ್ಕಾರ ರಚನೆ ಸಂದರ್ಭದಲ್ಲಿ ನೀಡಿದ ಸಮರ್ಥನೆಯನ್ನು, ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡುವ ಘೋಷಣೆಯನ್ನು ಜೆಡಿಎಸ್ ನಡೆ ಬಲ್ಲ ಯಾರೂ ನಂಬಲು ಸಾಧ್ಯವಿರಲಿಲ್ಲ.

ಜೆಡಿಎಸ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚಿಸುವ ಕಾಂಗ್ರೆಸ್ ನಿರ್ಧಾರವನ್ನು ಆ ಪಕ್ಷದ ಸ್ಥಳೀಯ ನಾಯಕತ್ವದ ಅಭಿಪ್ರಾಯಕ್ಕೆ ವಿರುದ್ಧವಾಗಿ ಹೈಕಮಾಂಡ್ ಹಂತದಲ್ಲಿ ತೆಗೆದುಕೊಳ್ಳಲಾಗಿತ್ತು. ಚುನಾವಣೆ ಸಂದರ್ಭದಲ್ಲಿ ಕುಮಾರಸ್ವಾಮಿ ಅವರನ್ನು ‘ಅವರಪ್ಪನಾಣೆ ಗೆಲ್ಲುವುದಿಲ್ಲ’ ಎಂದು ಗೇಲಿ ಮಾಡಿದ್ದ ಸಿದ್ದರಾಮಯ್ಯ ಅವರು ದೇವೇಗೌಡರ ಮನೆ ಬಾಗಿಲಿಗೆ ಹೋಗಿ ಕೈಕಟ್ಟಿ ನಿಲ್ಲಬೇಕಾದ ಪ್ರಸಂಗವನ್ನು ಮರೆಯಲಾಗದು. ಕಾಂಗ್ರೆಸ್ನ ಚುನಾಯಿತ ಶಾಸಕರು ಹಾಗೂ ಸ್ಥಳೀಯ ನಾಯಕರ ಅಭಿಪ್ರಾಯವನ್ನು ಪರಿಗಣಿಸದೆ ಆ ಪಕ್ಷದ ಹೈಕಮಾಂಡ್, ರಾಷ್ಟ್ರ ರಾಜಕಾರಣದ ಹಿನ್ನೆಲೆಯಲ್ಲಿ ನೇರವಾಗಿ ದೇವೇಗೌಡರ ಜೊತೆಗೆ ಹೊಂದಾಣಿಕೆ ಮಾಡಿಕೊಂಡು, ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಪಟ್ಟ ಕಟ್ಟಿತು. ಶಾಸಕಾಂಗ ಪಕ್ಷದ ಬಹುಮತದ ಅಭಿಪ್ರಾಯ ಲೆಕ್ಕಿಸದೇ ಮೇಲಿನಿಂದ ಲಕೋಟೆ ಮೂಲಕ ನಿರ್ಧಾರ ಹೇರುವ ರೀತಿ ಕಾಂಗ್ರೆಸ್ಗೆ ಹೊಸದೇನಲ್ಲ. ಇಂತಹ ಅಪ್ರಜಾಸತ್ತಾತ್ಮಕ ಕ್ರಮವನ್ನು ಆ ಪಕ್ಷದೊಳಗಿನ ಶಿಸ್ತು ಮತ್ತು ನಿಷ್ಠೆಗೆ ಪ್ರತೀಕವಾಗಿ ಪರಿಗಣಿಸುವುದು ಸೋಜಿಗದ ಮತ್ತೊಂದು ಮಗ್ಗುಲು.

ಚುನಾವಣೆಯಲ್ಲಿ ಮತದಾರರಿಂದ ದಯನೀಯ ತಿರಸ್ಕಾರ ಉಂಡು ಅಧಿಕಾರ ಕಳೆದುಕೊಂಡ ಪಕ್ಷ ವೊಂದು, ಮೂರನೇ ಸ್ಥಾನದಲ್ಲಿದ್ದ ಪಕ್ಷಕ್ಕೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿದ್ದರ ಹಿಂದೆ ಪ್ರಜಾಪ್ರಭುತ್ವದ ಯಾವ (ಅಪ)ಮೌಲ್ಯ ಅಡಗಿತ್ತು ಎಂಬುದನ್ನು ಸಂಶೋಧನೆ ಮಾಡಿ ತಿಳಿದುಕೊಳ್ಳಬೇಕಿಲ್ಲ. ಮಿತ್ರಪಕ್ಷಗಳ 13 ತಿಂಗಳ ವರ್ತನೆಗಳೇ ಇದನ್ನು ಅನಾವರಣಗೊಳಿಸಿವೆ. ಕಾಂಗ್ರೆಸ್ಸಿನ ಬೇಷರತ್ ಬೆಂಬಲದೊಂದಿಗೆ ಆರಂಭವಾದ ಕೂಡಿಕೆ, ಕ್ರಮೇಣ ಅಧಿಕಾರ ಹಂಚಿಕೆಯ ಎಲ್ಲಾ ಹಂತಗಳಲ್ಲಿ ಚೌಕಾಸಿ, ಆಡಳಿತದ ಎಲ್ಲಾ ಅಂಗಗಳಲ್ಲಿ ಹಸ್ತಕ್ಷೇಪಕ್ಕೆ ಅನುವು ಮಾಡಿಕೊಟ್ಟಿತು. ನಾಮಕಾವಸ್ತೆಯ ಮಂತ್ರಿಮಂಡಲದಲ್ಲಿ ಆಡಳಿತದ ಹಿಡಿತ ಕೇಂದ್ರೀಕೃತವಾಯಿತು.

ಒಂದು ಪಕ್ಷ, ಒಬ್ಬ ಮುಖ್ಯಮಂತ್ರಿ ತಮಗೆ ಅಧಿಕಾರ ಪ್ರಾಪ್ತಿ ಆಗಿರುವುದೇ ದೈವಾನುಗ್ರಹದಿಂದ ಎಂದು ನಂಬಿ ನಡೆದರೆ ಚುನಾವಣೆ ಪ್ರಕ್ರಿಯೆಗೆ ಏನು ಅರ್ಥ? ಪ್ರಮಾಣ ವಚನದ ಸಮಯ, ವಿಧಾನಸಭೆ ಸೇರುವ ದಿನಾಂಕ, ಆಯವ್ಯಯ ಮಂಡನೆಯ ಮುಹೂರ್ತವನ್ನು ಜ್ಯೋತಿಷಿಗಳೇ ನಿರ್ಧರಿಸಿದರೆ, ಪ್ರಜಾಪ್ರಭುಗಳು ಬರಗಾಲದಲ್ಲಿ ಬಸವಳಿಯುವಾಗ ಪ್ರಜಾಪ್ರತಿನಿಧಿಗಳು ಗುಡಿಗುಂಡಾರಗಳ ಸುತ್ತಾಟ, ಹೋಮಹವನಗಳ ಆರ್ಭಟಗಳಲ್ಲಿ ಮುಳುಗಿದರೆ ಸಂವಿಧಾನದ ಮೂಲ ಆಶಯಗಳಿಗೆ ಉಸಿರಾಡಲು ಆಸ್ಪದವೆಲ್ಲಿ?

ಇನ್ನು, ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ ಮಾಡಿದ್ದಾದರೂ ಏನು? ಅಧಿಕೃತ ವಿರೋಧ ಪಕ್ಷವಾಗಿ ಎಷ್ಟೊಂದು ದಕ್ಷತೆಯಿಂದ, ಪ್ರಭಾವಶಾಲಿಯಾಗಿ ಕಾರ್ಯ ನಿರ್ವಹಿಸುವ ಅವಕಾಶ ಆ ಪಕ್ಷಕ್ಕಿತ್ತು. ಆಡಳಿತ ಪಕ್ಷದ ತಪ್ಪುನಡೆಗಳಿಗೆ ಅಂಕುಶವಾಗಬೇಕಿದ್ದ ವಿರೋಧ ಪಕ್ಷ, ಮೊದಲ ದಿನದಿಂದಲೂ ಸರ್ಕಾರವನ್ನು ಬೀಳಿಸುವ ಕಾಯಕ ಮತ್ತು ಅಧಿಕಾರದ ಗದ್ದುಗೆ ಏರುವ ಕನಸಿನಲ್ಲಿ ಮುಳುಗಿತು. ಕರ್ನಾಟಕದ ಆಪರೇಷನ್ ಕಮಲದ (ಕು)ಖ್ಯಾತಿ ದೇಶವ್ಯಾಪಿ. ಬಿಜೆಪಿ ಮುಖಂಡರು ಶಾಸಕರೊಬ್ಬರ ರಾಜೀನಾಮೆಗಾಗಿ ನಡೆಸಿದ್ದರು ಎನ್ನಲಾದ ಸಂಭಾಷಣೆಯ ಆಡಿಯೊ ಪ್ರಸಂಗವನ್ನು ಕೂಡ ಮರೆತುಕೂಡುವಷ್ಟು ಜಡಗೊಂಡಿದೆ ನಾಡಿನ ಪ್ರಜ್ಞೆ. ಮುಖ್ಯಮಂತ್ರಿ ಸ್ವತಃ ಬಹಿರಂಗಗೊಳಿಸಿದ ಆ ಆಡಿಯೊದಲ್ಲಿ ವಿಧಾನಸಭಾಧ್ಯಕ್ಷರು ಮತ್ತು ನ್ಯಾಯಮೂರ್ತಿಯೊಬ್ಬರನ್ನು ಹೆಸರಿಸಲಾಗಿತ್ತು. ಹಿರಿಯ ಪತ್ರಕರ್ತರೊಬ್ಬರು ಭಾಗವಹಿಸಿದ್ದರೆಂದು ಹೇಳಲಾದ ಈ ಪ್ರಕರಣದಲ್ಲಿ, ಮನನೊಂದ ಸ್ಪೀಕರ್ ರಮೇಶ್ ಕುಮಾರ್ ಅವರು ವಿಧಾನಸಭೆ ಅಧಿವೇಶನದಲ್ಲೇ ಗದ್ಗದಿತರಾಗಿ ಮೌಲ್ಯಯುತ ಮಾತುಗಳನ್ನು ಆಡಿದರು. 15 ದಿನಗಳ ಒಳಗೆ ಸೂಕ್ತ ವಿಚಾರಣೆ ನಡೆಸಿ ತಮ್ಮನ್ನು ಕಳಂಕಮುಕ್ತರನ್ನಾಗಿ ಮಾಡಬೇಕೆಂದು ಸದನವನ್ನು ಒತ್ತಾಯಿಸಿದರು. ಅಂತಿಮವಾಗಿ, ಎಸ್ಐಟಿ ಮೂಲಕ ತನಿಖೆ ನಡೆಸಿ ಸತ್ಯ ಹೊರಗೆಡಹುವುದಾಗಿ ಮುಖ್ಯಮಂತ್ರಿ ಘೋಷಿಸಿದರು.

ಅದಾಗಿ ತಿಂಗಳುಗಳೇ ಉರುಳಿದರೂ ವಿಶೇಷ ತನಿಖಾ ತಂಡದ ರಚನೆಯೂ ಆಗಲಿಲ್ಲ, ಸ್ಪೀಕರ್ ಮತ್ತು ನ್ಯಾಯಮೂರ್ತಿ ಅವರ ಮೇಲಿನ ಕಳಂಕ ತೊಡೆಯಲೂ ಇಲ್ಲ. ಈ ಬಗ್ಗೆ, ಆರೋಪ ಹೊತ್ತ ಸ್ಪೀಕರ್ ಅವರೇ ಮೌನ ವಹಿಸಿರುವುದು ನಿಗೂಢವಾಗಿದೆ. ಬಹುಶಃ ಆಗ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರನ್ನು ದಂಡಿಸಿದ್ದರೆ ಈಗ ನಿರ್ಮಾಣವಾಗಿರುವ ರಾಜಕೀಯ ದುಃಸ್ಥಿತಿ ಒಂದಷ್ಟು ಕಾಲ ಮುಂದಕ್ಕೆ ಹೋಗುತ್ತಿತ್ತೇನೋ!

ಪ್ರಜಾತಂತ್ರ ವ್ಯವಸ್ಥೆಯ ಬುನಾದಿಯಂತಿರುವ ಬಹುಪಾಲು ಮತದಾರರು ಸಾಚಾ ಆಗಿ ಉಳಿದಿಲ್ಲ. ಪ್ರತಿನಿಧಿಗಳನ್ನು ಚುನಾಯಿಸುವ ಸಂದರ್ಭದಲ್ಲಿ ಮತದಾರ ಪ್ರಭುಗಳು ಪರಿಗಣಿಸುವ ಮಾರಕ ಮಾನದಂಡಗಳೇ ಇದಕ್ಕೆ ಸಾಕ್ಷಿ. ಸ್ವಾರ್ಥ ಮತ್ತು ಲಾಭಾಕಾಂಕ್ಷೆಗಳಿಗಾಗಿ ಸಂವೇದನೆಯನ್ನು ಕಳೆದುಕೊಂಡ ಸಮಾಜಕ್ಕೆ, ಕಣ್ಣೆದುರಿಗಿನ ಕಗ್ಗೊಲೆಯೂ ತಲ್ಲಣ ಉಂಟುಮಾಡುವುದಿಲ್ಲ. ಸಿಬಿಐ, ಐಟಿ, ಸಿಸಿಬಿ, ಲೋಕಾಯುಕ್ತ, ರಾಜ್ಯಪಾಲ, ಸ್ಪೀಕರ್ ಮುಂತಾದ ಸಾಂವಿಧಾನಿಕ ಸಂಸ್ಥೆ- ಹುದ್ದೆಗಳ ದುರುಪಯೋಗವು ಯಾವೊಂದು ಪಕ್ಷ ಅಥವಾ ವ್ಯಕ್ತಿಗೆ ಸೀಮಿತವಾಗಿಲ್ಲ. ಈ ವಿಷಯದಲ್ಲಿ, ಅಧಿಕಾರದಲ್ಲಿ ಇರುವವರು ಶಾಶ್ವತ ಆರೋಪಿಗಳು, ವಿರೋಧ ಪಕ್ಷದಲ್ಲಿ ಇರುವವರು ಸದಾ ದೂರುದಾರರು. ಪ್ರಜಾಪ್ರಭುತ್ವದ ಕೊಲೆಯಲ್ಲಿ, ನಾಲ್ಕನೇ ಅಂಗವೆಂದು ಕರೆಸಿಕೊಳ್ಳುವ ಮಾಧ್ಯಮರಂಗದ ಕೊಡುಗೆಯೇನೂ ಕಡಿಮೆಯಲ್ಲ. ಈ ರಂಗವು ಅನಧಿಕೃತ ವಿರೋಧ ಪಕ್ಷದಂತೆ ಕಾರ್ಯ ನಿರ್ವಹಿಸಬೇಕು. ಆದರೆ ಕೆಲವು ಮಾಧ್ಯಮಗಳು ಆಡಳಿತ ಪಕ್ಷಗಳ ಅಧಿಕೃತ ಅಂಗಸಂಸ್ಥೆಗಳಂತೆ ವರ್ತಿಸುತ್ತವೆ.

ಇವೆಲ್ಲ ಇರಿತಗಳಿಂದ ಗಾಸಿಗೊಂಡ ಪ್ರಜಾಪ್ರಭುತ್ವ ಸಾವನ್ನಪ್ಪಿರುವುದು ಸತ್ಯ. ಆದರೆ ಅದು ಕಗ್ಗೊಲೆಯೋ, ಆತ್ಮಹತ್ಯೆಯೋ ನಿರ್ಣಯವಾಗಬೇಕಿದೆ. ಕಗ್ಗೊಲೆ ಎಂದಾದರೆ, ಹಂತಕರು ಕಣ್ಣೆದುರಿಗಿದ್ದಾರೆ. ಆತ್ಮಹತ್ಯೆ ಎಂದು ನಿರ್ಣಯಿಸಿದರೆ, ಅದಕ್ಕೆ ಪ್ರೇರಣೆ ನೀಡಿದವರ ಗುರುತು ಸಿಕ್ಕಿದೆ. ಆದರೆ ಅವರನ್ನೆಲ್ಲಾ ಗಲ್ಲಿಗೇರಿಸಿದರೆ ಉಳಿಯುವವರಾರು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.