ಬೆಂಗಳೂರು: ನೋಂದಣಿಯೇ ಆಗದ ಸಂಘ–ಸಂಸ್ಥೆಗಳಿಗೆ ಲಕ್ಷ ಲಕ್ಷ ಸಹಾಯಧನ. ಆನ್ಲೈನ್ನಲ್ಲಿ ಅರ್ಜಿ ಸಲ್ಲಿಕೆ ವೇಳೆ ಪೂರಕ ದಾಖಲೆ ಸಲ್ಲಿಸದಿದ್ದರೂ ಭರಪೂರ ಅನುದಾನ. ಪ್ರಭಾವಿಗಳು, ಗಣ್ಯರ ಶಿಫಾರಸು ತಂದವರಿಗೆ ಅರ್ಜಿ ಸಲ್ಲಿಸದಿದ್ದರೂ ಹಣ...

ಇದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಾರ್ಷಿಕ ಧನಸಹಾಯ ಯೋಜನೆಯ ಸ್ಥಿತಿ. ನಾಡಿನ ಕಲೆ, ಸಾಹಿತ್ಯ, ಸಂಗೀತ, ಜಾನಪದ, ನೃತ್ಯ, ಕಲಾ ಪ್ರಕಾರಗಳನ್ನು ಉಳಿಸಿ ಬೆಳೆಸುವ ಸಲುವಾಗಿ, ನೋಂದಾಯಿತ ಸಂಘ–ಸಂಸ್ಥೆಗಳು ಏರ್ಪಡಿಸುವ ಕಾರ್ಯಕ್ರಮಗಳಿಗೆ ಸರ್ಕಾರ ಅನುದಾನ ಒದಗಿಸುತ್ತಿದೆ. ಸದುದ್ದೇಶದಿಂದ ಪ್ರಾರಂಭಿಸಲಾದ ಈ ಯೋಜನೆಯು ಕಲಾವಿದರು ಹಾಗೂ ನೋಂದಾಯಿತ ಸಂಘ–ಸಂಸ್ಥೆಗಳಿಗೆ ನೀರ ಮೇಲಿನ ಗುಳ್ಳೆಯಂತಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಲಕ್ಷಾಂತರ ಹಣ ಖರ್ಚು ಮಾಡುವ ಕಲಾವಿದರು, ಪುಡಿಗಾಸಿಗಾಗಿ ಕನ್ನಡ ಭವನಕ್ಕೆ ಪದೇ ಪದೇ ಎಡತಾಕಬೇಕಾದ ಪರಿಸ್ಥಿತಿ ಇದೆ.

ನಿಯಮದಂತೆ ಕಾರ್ಯಕ್ರಮ ನಡೆಸಿ, ಅನುದಾನಕ್ಕೆ ಅಗತ್ಯ ದಾಖಲೆಗಳನ್ನು ಸಲ್ಲಿಸಿದರೂ ನೆರವು ಸಿಗುವ ಖಚಿತತೆ ಸಂಘ–ಸಂಸ್ಥೆಗಳ ಮುಖ್ಯಸ್ಥರಿಗೆ ಇಲ್ಲ. ಇದರಿಂದಾಗಿ ಬಹುತೇಕ ಸಂಘ–ಸಂಸ್ಥೆಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ, ಸಾಂಸ್ಕೃತಿಕ ಲೋಕದಿಂದ ಮರೆಯಾಗುತ್ತಿವೆ. ಈ ಯೋಜನೆಯನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ಪ್ರಭಾವಿಗಳು, ಕಾರ್ಯಕ್ರಮಗಳನ್ನು ನಡೆಸದಿದ್ದರೂ ₹ 10 ಲಕ್ಷದಿಂದ ₹ 20 ಲಕ್ಷದವರೆಗೆ ಅನುದಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಇದು ಕಲಾವಿದರು ಹಾಗೂ ಸಾಂಸ್ಕೃತಿಕ ಕ್ಷೇತ್ರದ ಪ್ರಮುಖರ ಅಸಮಾಧಾನಕ್ಕೆ ಕಾರಣವಾಗಿದೆ.

ಓದಿ... ಒಳನೋಟ: ಚಿನ್ನದ ಪದಕಗಳೇ ಕಣ್ಮರೆಯಾಗಿದ್ದವು!

ದಮನಿತ ಹಾಗೂ ಅಲಕ್ಷಿತ ಸಮುದಾಯಕ್ಕೆ ವಿಶೇಷ ಪ್ರೋತ್ಸಾಹ ನೀಡಲು ರೂಪಿಸಿದ ವಿಶೇಷ ಘಟಕ ಯೋಜನೆಯ ಅನುದಾನವೂ ದುರ್ಬಳಕೆಯಾಗುತ್ತಿದೆ. ಸಾಂಸ್ಕೃತಿಕ ಭವನ ಕಟ್ಟಲು ನೀಡಿದ್ದ ಅನುದಾನದಲ್ಲಿ ಮದುವೆ ಛತ್ರ, ವಸತಿಗೃಹ, ಒಳಾಂಗಣ ಕ್ರೀಡಾಂಗಣ ನಿರ್ಮಿಸಲಾಗಿದೆ ಎಂದು ಭಾರತೀಯ ಮಹಾಲೇಖಪಾಲರ ವರದಿ (ಸಿಎಜಿ) ಆಕ್ಷೇಪ ವ್ಯಕ್ತಪಡಿಸಿದೆ.

ಪಟ್ಟಭದ್ರರ ಆಟ: ‘ಲೆಟರ್ ಹೆಡ್’ ಸಂಘಟನೆಗಳ ಕೆಲ ಪಟ್ಟಭದ್ರರು ವಾರ್ಷಿಕ ₹ 25 ಲಕ್ಷದಿಂದ ₹ 50 ಲಕ್ಷ ಅನುದಾನ ಪಡೆದ ನಿದರ್ಶನಗಳೂ ಇವೆ. ಇನ್ನೊಂದೆಡೆ, ಬಿಡುಗಡೆಯಾದ ಹಣವನ್ನು ಸಾಂಸ್ಕೃತಿಕ ಕಾರ್ಯಕ್ರಮಗಳ ಬದಲು ಕಟ್ಟಡ ನಿರ್ಮಾಣದಂತಹ ಅನ್ಯ ಕಾರ್ಯಗಳಿಗೆ ಬಳಸಿರುವ ಸಂಘ–ಸಂಸ್ಥೆಗಳೂ ರಾಜ್ಯದಲ್ಲಿವೆ.

2016–17ನೇ ಸಾಲಿನಲ್ಲಿ ನಿಸರ್ಗ ಸಾಮಾಜಿಕ ಸಾಂಸ್ಕೃತಿಕ ಟ್ರಸ್ಟ್ ಎಂಬ ಸಂಸ್ಥೆಯು ₹ 10 ಲಕ್ಷ ಧನಸಹಾಯ ಪಡೆದಿತ್ತು. ಆದರೆ, ಈ ಹೆಸರಿನ ಸಂಸ್ಥೆಯೇ ಅಸ್ತಿತ್ವದಲ್ಲಿ ಇರಲಿಲ್ಲ. 2017–18ನೇ ಸಾಲಿನಲ್ಲಿ 30ಕ್ಕೂ ಅಧಿಕ ಸಂಘ–ಸಂಸ್ಥೆಗಳಿಗೆ ಅವಧಿ ಮೀರಿದ ಬಳಿಕವೂ ₹ 6.8 ಕೋಟಿ ಧನಸಹಾಯ ಒದಗಿಸಲಾಗಿತ್ತು. ಪ್ರಭಾವಿ ಶಾಸಕರು, ಸಚಿವರ ಶಿಫಾರಸು ಇದಕ್ಕೆ ಕಾರಣ ಎನ್ನುವುದು ಗುಟ್ಟಾಗಿ ಉಳಿದಿಲ್ಲ.

ಧನಸಹಾಯ ನಿಯಮದ ಪ್ರಕಾರ ಶುದ್ಧ ಸಾಂಸ್ಕೃತಿಕ ವಾತಾವರಣ ನಿರ್ಮಾಣ ಮಾಡುತ್ತಿರುವ ಸಂಘ–ಸಂಸ್ಥೆಗಳಿಗೆ ಮಾತ್ರ ವಿಶೇಷ ಸಂದರ್ಭದಲ್ಲಿ ಆರ್ಥಿಕ ನೆರವು ನೀಡುವ ಅಧಿಕಾರ ಸರ್ಕಾರಕ್ಕಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ಸಂಘ–ಸಂಸ್ಥೆಗಳು ಮುಖ್ಯಮಂತ್ರಿ, ಸಚಿವರ ಶಿಫಾರಸು ಬಳಸಿಕೊಂಡು, ಅಗತ್ಯ ದಾಖಲಾತಿ ಸಲ್ಲಿಸದೇ ನಿಯಮ ಮೀರಿ ಅನುದಾನ ಪಡೆದುಕೊಳ್ಳುತ್ತಿವೆ ಎಂಬ ಆರೋಪ ಇದೆ.

ಇಲಾಖೆಯಲ್ಲಿನ ದಲ್ಲಾಳಿಗಳು ಹಾಕಿಕೊಟ್ಟಿರುವ ‘ಒಳದಾರಿ’ಗಳಿಂದಾಗಿ ಕಾರ್ಯಕ್ರಮ ಮಾಡದ ಸಂಸ್ಥೆಗಳಿಗೆ ₹ 10 ಲಕ್ಷದಿಂದ ₹ 20 ಲಕ್ಷ ದೊರೆಯುತ್ತಿದೆ. ₹ 5 ಲಕ್ಷದಿಂದ ₹ 10 ಲಕ್ಷ ಖರ್ಚು ಮಾಡಿ ಕಾರ್ಯಕ್ರಮಗಳನ್ನು ನಡೆಸಿದವರಿಗೆ ₹10 ಸಾವಿರದಿಂದ ₹ 50 ಸಾವಿರ ಸಿಗುತ್ತಿದೆ.

ಈ ಹಿಂದೆ ರಾಮನಗರದಲ್ಲಿ ಪ್ರಭಾವಿ ಮುಖಂಡರೊಬ್ಬರ ಸಂಸ್ಥೆಯು ಭಜನಾ ಮಂದಿರ ನಿರ್ಮಾಣಕ್ಕೆ ಸಂಸ್ಕೃತಿ ಸಚಿವರ ಶಿಫಾರಸಿನ ಮೂಲಕ ₹ 45 ಲಕ್ಷ ಅನುದಾನ ಪಡೆದಿತ್ತು. ಆಡಳಿತಾರೂಢ ಪಕ್ಷಗಳು ಬದಲಾದಂತೆ ತಮ್ಮ ತತ್ವ, ಸಿದ್ಧಾಂತಗಳಿಗೆ ಒಗ್ಗುವ ಸಂಘ–ಸಂಸ್ಥೆಗಳಿಗೆ ಪ್ರಾತಿನಿಧ್ಯ ನೀಡಲಾಗುತ್ತಿದೆ ಎಂಬ ದೂರುಗಳೂ ಇತ್ತೀಚಿನ ದಿನಗಳಲ್ಲಿ ಕೇಳಿಬರುತ್ತಿವೆ.

ಓದಿ...ಒಳನೋಟ: ‘ಅನುದಾನ’ಕ್ಕೆ ಪಟ್ಟು ‘ಅನುಮಾನ’ದ ಪೆಟ್ಟು!

ಜಿಲ್ಲಾ ಮಟ್ಟದ ಅರ್ಜಿ ಪರಿಶೀಲನಾ ಸಮಿತಿ ಮತ್ತು ರಾಜ್ಯ ಮಟ್ಟದ ಧನಸಹಾಯ ಮಂಜೂರಾತಿ ಸಮಿತಿಯಿಂದ ತಿರಸ್ಕರಿಸಲ್ಪಟ್ಟ ಅರ್ಜಿಗಳಿಗೂ ಕಾಣದ ಕೈಗಳು (ಮಧ್ಯವರ್ತಿಗಳು) ಧನಸಹಾಯ ಒದಗಿಸಿಕೊಡುತ್ತಿವೆ. ಅನುಮೋದನೆಗೊಂಡ ಅನುದಾನದ ಅನುಸಾರ ಕಮಿಷನ್ ಹಂಚಿಕೆಯಾಗುತ್ತಿದೆ ಎಂಬ ಆರೋಪವನ್ನು ಕಲಾವಿದರು ಮಾಡುತ್ತಾರೆ.

‘ಧನಸಹಾಯ ವ್ಯವಸ್ಥೆಯಲ್ಲಿ ಪಾರದರ್ಶಕ ವ್ಯವಸ್ಥೆ ಸಂಪೂರ್ಣ ಮರೆಯಾಗಿದೆ. ನಿನ್ನೆ ಮೊನ್ನೆ ಹುಟ್ಟಿಕೊಂಡ ಸಂಘ–ಸಂಸ್ಥೆಗಳು ಲಕ್ಷಾಂತರ ರೂಪಾಯಿ ಪಡೆದುಕೊಳ್ಳುತ್ತಿವೆ. ಮಧ್ಯವರ್ತಿಗಳ ಮೂಲಕ ವ್ಯವಹಾರಕ್ಕೆ ಇಳಿಯುವ ಅಧಿಕಾರಿಗಳು, ಸೂಕ್ತ ದಾಖಲೆಗಳನ್ನು ನೀಡದಿದ್ದರೂ ಅನುದಾನ ಒದಗಿಸಿಕೊಡುತ್ತಿದ್ದಾರೆ. ಎಲ್ಲ ದಾಖಲಾತಿ ಇರುವ ಸಂಘ–ಸಂಸ್ಥೆಗಳಿಗೆ ತಾಂತ್ರಿಕ ಕಾರಣ ನೀಡಿ, ಅರ್ಜಿ ತಿರಸ್ಕರಿಸಲಾಗುತ್ತಿದೆ’ ಎಂದು ಕಲಾವಿದ ಡಾ. ಜಯಸಿಂಹ ಬೇಸರ ವ್ಯಕ್ತಪಡಿಸಿದರು.

ಗೊಂದಲದಲ್ಲಿ ಸಂಸ್ಥೆಗಳು: ಧನಸಹಾಯಕ್ಕಾಗಿ ಸರ್ಕಾರವು ಪ್ರತಿವರ್ಷ ₹ 15 ಕೋಟಿಯಿಂದ ₹ 20 ಕೋಟಿ ಖರ್ಚು ಮಾಡುತ್ತಿದೆ. ರಾಜ್ಯದಲ್ಲಿ 7,000ಕ್ಕೂ ಅಧಿಕ ಸಾಂಸ್ಕೃತಿಕ ಸಂಘ–ಸಂಸ್ಥೆಗಳಿದ್ದರೂ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರಕ್ಕೆ ಬೇಸತ್ತು, ಕೆಲ ಸಂಸ್ಥೆಗಳು ಧನಸಹಾಯಕ್ಕೆ ಅರ್ಜಿ ಸಲ್ಲಿಸುವ ಗೋಜಿಗೆ ಹೋಗುತ್ತಿಲ್ಲ. ಅರ್ಜಿ ಅಲ್ಲಿಸುವ 4 ಸಾವಿರಕ್ಕೂ ಅಧಿಕ ಸಂಘ–ಸಂಸ್ಥೆಗಳಲ್ಲಿ 900ರಿಂದ 1,000 ಸಂಘ–ಸಂಸ್ಥೆಗಳಿಗೆ ಧನಸಹಾಯ ಒದಗಿಸಲಾಗುತ್ತಿದೆ. 15ರಿಂದ 20 ಹಾಗೂ ಅದಕ್ಕಿಂತ ಹೆಚ್ಚಿನ ವರ್ಷಗಳಿಂದ ಕಾರ್ಯಕ್ರಮಗಳನ್ನು ನಿಯಮಿತವಾಗಿ ಮಾಡಿಕೊಂಡು ಬಂದಿರುವ ಹಲವು ಸಂಘ–ಸಂಸ್ಥೆಗಳೂ ಅನುದಾನದಿಂದ ವಂಚಿತವಾಗುತ್ತಿವೆ.

‘ನಮ್ಮ ಸಂಸ್ಥೆ 42 ವರ್ಷಗಳ ಇತಿಹಾಸ ಹೊಂದಿದೆ. ಪ್ರತಿ ತಿಂಗಳಿಗೆ ನಾಲ್ಕು–ಐದು ಕಾರ್ಯಕ್ರಮ ನಡೆಸುತ್ತಿದ್ದೇವೆ. ವರ್ಷದ ಕಾರ್ಯಕ್ರಮಗಳನ್ನು 200 ಪುಟಗಳಲ್ಲಿ ಇಲಾಖೆಗೆ ಕಳುಹಿಸಲಾಗುತ್ತಿದೆ. ಆದರೂ ಎರಡು ವರ್ಷಗಳಿಂದ ಅನುದಾನ ನೀಡಿಲ್ಲ. ನಮ್ಮದು ವಾರ್ಷಿಕ ಬಜೆಟ್ ₹ 10 ಲಕ್ಷದಿಂದ ₹ 14 ಲಕ್ಷ ಇದೆ. ಇಲಾಖೆ ಬೆನ್ನುತಟ್ಟಿ ಪ್ರೋತ್ಸಾಹಿಸಬೇಕಾಗಿತ್ತು. ಬೇಕಾಬಿಟ್ಟಿ ತಮ್ಮವರಿಗೆ ಅನುದಾನ ನೀಡಲಾಗುತ್ತಿದೆ’ ಎಂದು ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷ ಬೈರಮಂಗಲ ರಾಮೇಗೌಡ ಬೇಸರ ವ್ಯಕ್ತಪಡಿಸಿದರು.

‘ಅನುದಾನ ಹಂಚಿಕೆಯಲ್ಲಿ ಪಾರದರ್ಶಕತೆ ತರುವ ನೆಪದಲ್ಲಿ ಸರ್ಕಾರವು ಈ ಬಾರಿ ಧನಸಹಾಯದ ಮೊತ್ತವನ್ನು ಗರಿಷ್ಠ ₹ 2.5 ಲಕ್ಷಕ್ಕೆ ಮಿತಿಗೊಳಿಸಿದೆ. ಆದರೆ, ಇಷ್ಟು ಕಡಿಮೆ ಅನುದಾನದಲ್ಲಿ ವರ್ಷಪೂರ್ತಿ ಕಾರ್ಯಕ್ರಮ ನಡೆಸುವುದು ಹೇಗೆ’ ಎಂದು ಉದಯಭಾನು ಕಲಾಸಂಘ, ಬಿ.ಎಂ.ಶ್ರೀ. ಪ್ರತಿಷ್ಠಾನ ಸೇರಿದಂತೆ ವಿವಿಧ ಸಂಘ–ಸಂಸ್ಥೆಗಳು ಹಾಗೂ ಕಲಾವಿದರು ಪ್ರಶ್ನಿಸಿವೆ.

‘ನಮ್ಮ ಸಂಸ್ಥೆ ಆರು ದಶಕಗಳಿಂದ ಸಾಂಸ್ಕೃತಿಕ, ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದೆ. ಎಲ್ಲ ದಾಖಲಾತಿಗಳನ್ನೂ ಒದಗಿಸಿದರೂ ಅನುದಾನ ನೀಡಿಲ್ಲ. ಸಂಸ್ಕೃತಿ ಇಲಾಖೆಯಲ್ಲಿ ಹೇಳುವವರು ಕೇಳುವವರು ಇಲ್ಲ. ಅನುದಾನವನ್ನು ₹ 2.5 ಲಕ್ಷಕ್ಕೆ ಮಿತಿಗೊಳಿಸಿರುವುದು ಸರಿಯಲ್ಲ. ಸಾವಿರ ಆಮಂತ್ರಣ ಪತ್ರಿಕೆಗೆ ₹ 15 ಸಾವಿರ ಆಗುತ್ತದೆ. ಹೀಗಾದಲ್ಲಿ ಕಾರ್ಯಕ್ರಮಗಳನ್ನು ಮಾಡಲು ಸಾಧ್ಯವಿಲ್ಲ’ ಎನ್ನುತ್ತಾರೆ ಉದಯಭಾನು ಕಲಾಸಂಘದ ಕಾರ್ಯದರ್ಶಿ ಎಂ. ನರಸಿಂಹ.

ಓದಿ...ಸಂದರ್ಶನ: ಸಂಸ್ಕೃತಿ ಇಲಾಖೆಯ ಅಕ್ರಮಗಳಿಗೆ ಕಡಿವಾಣ: ಸಚಿವ ಸುನೀಲ್ ಕುಮಾರ್

ಪಾರದರ್ಶಕವಲ್ಲದ ಆನ್ಲೈನ್ ವ್ಯವಸ್ಥೆ:ಧನಸಹಾಯಕ್ಕೆ ಈಗ ಆನ್ಲೈನ್ ವ್ಯವಸ್ಥೆ ಜಾರಿಯಲ್ಲಿದೆ. ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಪ್ರತಿಯ ಜತೆಗೆ ನಡೆಸಿರುವ ಕಾರ್ಯಕ್ರಮಗಳ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಗೊಂಡ ವಿವರ ಸೇರಿದಂತೆ ಅಗತ್ಯ ದಾಖಲಾತಿಗಳ ಸ್ಕ್ಯಾನ್ ಪ್ರತಿಗಳನ್ನು ಒದಗಿಸಬೇಕು. ಈ ವ್ಯವಸ್ಥೆ ಜಾರಿಯಾದ ಬಳಿಕ ತಂತ್ರಜ್ಞಾನದ ನೆರವಿನಿಂದ ನಕಲಿ ದಾಖಲಾತಿ, ಪತ್ರಿಕೆಗಳ ಮುದ್ರಣ ಪ್ರತಿ ಸೃಷ್ಟಿಸಲಾಗುತ್ತಿದೆ. 2018–19ನೇ ಸಾಲಿನ ಧನಸಹಾಯದ ಆಯ್ಕೆಯಲ್ಲಿ ಕೆಲ ಸಂಸ್ಥೆಗಳು ಈ ರೀತಿ ನಕಲಿ ದಾಖಲಾತಿ ಸೃಷ್ಟಿಸಿರುವುದು ಪತ್ತೆಯಾಗಿತ್ತು.

ಇಲಾಖೆಯಡಿ ನಡೆಯುತ್ತಿರುವ ಕಾರ್ಯಕ್ರಮಗಳ ಪ್ರಾಯೋಜನೆಯೂ ಕೆಲ ಕಲಾ ತಂಡಗಳ ಪಾಲಾಗುತ್ತಿವೆ. ಮಧ್ಯವರ್ತಿಗಳು ತಮಗೆ ಬೇಕಾದ ಹತ್ತಾರು ಕಲಾವಿದರ ಸಂಪರ್ಕ ಕಾಯ್ದುಕೊಂಡು, ಪ್ರತಿ ಬಾರಿ ಅವರಿಗೆ ಪ್ರಾಯೋಜನೆ ಕೊಡಿಸಲು ಯಶಸ್ವಿ ಆಗುತ್ತಿದ್ದಾರೆ. ಮಧ್ಯವರ್ತಿಗಳ ಮೂಲಕ ಅಧಿಕಾರಿಗಳಿಗೆ ಹಣ ಸಂದಾಯ ಆಗುತ್ತಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ರಾಮನಗರ ಹಾಗೂ ಮೈಸೂರು ಜಿಲ್ಲೆಯ ಕಲಾ ತಂಡಗಳಿಗೆ ಮಾತ್ರ ಕಾರ್ಯಕ್ರಮಗಳು ಸಿಗುತ್ತಿವೆ. ಉತ್ತರ ಕರ್ನಾಟಕ ಭಾಗದ ಕಲಾ ತಂಡಗಳನ್ನು ಗುರುತಿಸುವ ಕೆಲಸ ಆಗುತ್ತಿಲ್ಲ ಎನ್ನುವುದು ಕಲಾವಿದರ ಆರೋಪ.

ಆಯ್ಕೆ ವ್ಯವಸ್ಥೆ ಬಗ್ಗೆ ಅನುಮಾನ:ಧನಸಹಾಯಕ್ಕೆ ಅರ್ಜಿ ಸಲ್ಲಿಸಿದಸಂಘ–ಸಂಸ್ಥೆಗಳ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸುವ ಇಲಾಖೆಯ ಸಹಾಯಕ ನಿರ್ದೇಶಕರ ಅಧ್ಯಕ್ಷತೆಯ ಸಮಿತಿ, ಅಂತಿಮಗೊಂಡ ಪಟ್ಟಿಯನ್ನು ರಾಜ್ಯಮಟ್ಟದ ಧನಸಹಾಯ ಮಂಜೂರಾತಿ ಆಯ್ಕೆ ಸಮಿತಿಗೆ ಕಳುಹಿಸುತ್ತದೆ. ಈ ಸಮಿತಿಗೆ ಇಲಾಖೆಯ ನಿರ್ದೇಶಕರೇ ಅಧ್ಯಕ್ಷರು. ವಿವಿಧ ಅಕಾಡೆಮಿಗಳು ಹಾಗೂ ಪ್ರಾಧಿಕಾರದ ಅಧ್ಯಕ್ಷರೂ ಈ ಸಮಿತಿಯಲ್ಲಿ ಸದಸ್ಯರಾಗಿರುತ್ತಾರೆ. ಈ ಸಮಿತಿಯಲ್ಲಿರುವ ಸದಸ್ಯರು ತಮಗೆ ಬೇಕಾದ ನಾಲ್ಕರಿಂದ ಐದು ಸಂಸ್ಥೆಗಳಿಗೆ ಅನುದಾನ ಒದಗಿಸಿಕೊಡುವಲ್ಲಿ ಯಶಸ್ವಿಯಾಗುತ್ತಿದ್ದಾರೆ ಎಂಬ ಆರೋಪವಿದೆ.

‘ರಾಜ್ಯ ಮಟ್ಟದ ಸಮಿತಿಯ ಸದಸ್ಯರು ತಮಗೆ ಬೇಕಾದ ಸಂಸ್ಥೆಗಳಿಗೆ ಅನುದಾನ ಒದಗಿಸಿಕೊಡುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಒಬ್ಬರೇ ನಾಲ್ಕರಿಂದ ಐದು ಸಂಸ್ಥೆಗಳ ಮುಖ್ಯಸ್ಥರಾಗಿರುತ್ತಾರೆ. ಧನಸಹಾಯಕ್ಕಾಗಿ ಬೇರೆಯವರೇ ಹೆಸರು ನಮೂದಿಸುತ್ತಾರೆ. ಆದರೆ,ಬ್ಯಾಂಕ್ ಖಾತೆ ಮಾತ್ರ ಒಂದೇ ಆಗಿರುತ್ತದೆ. ಈ ಸಾಲಿನ ಧನಸಹಾಯದಲ್ಲಿಯೂ ಸಮಿತಿ ಸದಸ್ಯರಾದ ಟಿ.ಎಸ್. ನಾಗಾಭರಣ ಸೇರಿದಂತೆ ಕೆಲವರ ಸಂಸ್ಥೆಗಳಿಗೆ ಅನುದಾನ ಸಂದಾಯವಾಗಿದೆ’ ಎಂದು ಬೆಂಗಳೂರಿನ ಕಲಾವಿದರೊಬ್ಬರು ಬೇಸರ ವ್ಯಕ್ತಪಡಿಸಿದರು.

‘ಸಾಂಸ್ಕೃತಿಕ ಪರಿಶೀಲನಾ ಸಮಿತಿ ರಚಿಸಿ’
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸಂಘ–ಸಂಸ್ಥೆಗಳಿಗೆ ಅನುದಾನ ನೀಡಿ ಕೈತೊಳೆದುಕೊಳ್ಳುತ್ತಿದೆ. ಈ ವ್ಯವಸ್ಥೆ ಸರಿಯಿಲ್ಲ. ಅಧಿಕಾರಿಗಳು ಅನುದಾನ ಪಡೆದ ಸಂಸ್ಥೆಗಳಿಗೆ ತೆರಳಿ, ಕಾರ್ಯಕ್ರಮಗಳು ನಡೆದಿವೆಯೇ ಎಂದು ಪರಿಶೀಲಿಸಬೇಕು. ಈ ಕಾರ್ಯಕ್ಕೆ ಪ್ರತಿವರ್ಷ ಸಾಂಸ್ಕೃತಿಕ ಪರಿಶೀಲನಾ ಸಮಿತಿ ರಚಿಸಬೇಕು. ಬೆಂಗಳೂರು ಕೇಂದ್ರಿತ ಸಂಘ–ಸಂಸ್ಥೆಗಳಿಗೆ ಮಾತ್ರ ಹೆಚ್ಚು ಅನುದಾನ ಹೋಗುತ್ತಿದೆ. ಪ್ರಾದೇಶಿಕ ಪ್ರಾತಿನಿಧ್ಯದ ಜತೆಗೆ ಸಾಮಾಜಿಕ ನ್ಯಾಯವನ್ನೂ ಪರಿಗಣಿಸಬೇಕು.
-ಪ್ರೊ.ಎಸ್.ಜಿ. ಸಿದ್ಧರಾಮಯ್ಯ,ಸಾಹಿತಿ

‘ಅಕ್ರಮಕ್ಕೆ ಕಡಿವಾಣ ಬಿದ್ದಿದೆ’
‘ಇಲಾಖೆಯಲ್ಲಿ ಹಿಂದೆ ಭಾರೀ ಪ್ರಮಾಣದ ಲಾಬಿ ನಡೆಯುತ್ತಿತ್ತು. ಕೆಲವೇ ಜನರ ಕಪಿಮುಷ್ಠಿಯಲ್ಲಿ ಇತ್ತು. ₹ 1 ಲಕ್ಷದಿಂದ ₹70 ಲಕ್ಷದವರೆಗೂ ಅನುದಾನ ಪಡೆಯುತ್ತಿದ್ದವರೂ ಇದ್ದರು. ಬಹಳಷ್ಟು ಸಂಘಟನೆಗಳು ‘ಲೆಟರ್ಹೆಡ್’ ಸಂಘಟನೆಗಳಾಗಿದ್ದವು. ಕೆಲವು ಸಂಘಟನೆಗಳು ಏನೂ ಮಾಡದೇ ನಿರಂತರ 5 ರಿಂದ 10 ವರ್ಷಗಳಿಂದ ಪತ್ರ ಕೊಟ್ಟು ಅನುದಾನ ಪಡೆದಿವೆ. ಅವರು ಮಾಡಿದ ಕಾರ್ಯಕ್ರಮಗಳಿಗೆ ದಾಖಲೆಗಳಾಗಲಿ, ಅಧಿಕಾರಿ ಗಳು ಮೇಲ್ವಿಚಾರಣೆ ಮಾಡಿದ್ದಾಗಲಿ ಇರಲಿಲ್ಲ. ಈಗ ಕಡಿವಾಣ ಬಿದ್ದಿದೆ’
-ವಿ. ಸುನೀಲ್ ಕುಮಾರ್,ಕನ್ನಡ ಮತ್ತು ಸಂಸ್ಕೃತಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.