ಈ ಹಿಂದಿನ ಸರ್ಕಾರ, ಕೆಲವು ಜಯಂತಿಗಳ ರಜೆಗಳನ್ನು ರದ್ದುಪಡಿಸಿ ಅವುಗಳನ್ನು ಪರಿಮಿತ ರಜೆಗಳನ್ನಾಗಿ (ಆರ್.ಎಚ್) ಪರಿವರ್ತಿಸಿತ್ತು. ಅದು ನಿಸ್ಸಂಶಯವಾಗಿ ಸ್ವಾಗತಾರ್ಹ ಕ್ರಮ. ಇದರ ಜಾಡಿನಲ್ಲಿ ಹೊಸ ಸರ್ಕಾರ ಈಗ, ಗಣ್ಯ ವ್ಯಕ್ತಿಗಳ ನಿಧನದ ಸಂದರ್ಭದಲ್ಲಿ ರಜೆ ಘೋಷಿಸುವ ಪದ್ಧತಿಯನ್ನೂ ಕೈಬಿಟ್ಟರೆ ನಿಜಕ್ಕೂ ಅದೊಂದು ಐತಿಹಾಸಿಕ ಮತ್ತು ಪ್ರಶಂಸಾರ್ಹ ಕಾರ್ಯವಾದೀತು.

ಶೋಕಾಚರಣೆ, ಮೃತರ ಸಾಧನೆ-ಕೊಡುಗೆಗಳ ಬಗ್ಗೆ ಸಮಾಜದ ಗಮನ ಸೆಳೆಯುವುದು, ಸಾರ್ವಜನಿಕರಿಗೆ ಹಾಗೂ ಸಾರ್ವಜನಿಕ ಆಸ್ತಿಗೆ ಆಗಬಹುದಾದ ಸಂಭಾವ್ಯ ಹಾನಿಯನ್ನು ತಪ್ಪಿಸುವುದು- ಇವೆಲ್ಲ ಗಣ್ಯ ವ್ಯಕ್ತಿಗಳ ನಿಧನದ ಹಿನ್ನೆಲೆಯಲ್ಲಿ ರಜೆ ಘೋಷಿಸುವುದಕ್ಕೆ ಕೊಡಬಹುದಾದ ಸಮರ್ಥನೆಗಳು. ಸಾರ್ವಜನಿಕರಿಗೆ ಆಗಬಹುದಾದ ತೊಂದರೆಗಳನ್ನು ತಪ್ಪಿಸುವ ಒಂದು ಸಂಗತಿಯ ಹೊರತಾಗಿ ಬೇರೆ ಯಾವುದಾದರೂ ಉದ್ದೇಶ ಈವರೆಗೆ ಈಡೇರಿದ್ದಿದೆಯೇ? ಶೋಕಾಚರಣೆ ಅಥವಾ ಮೃತರಿಗೆ ಗೌರವ ಸೂಚಿಸುವುದು ಎಂದರೇನು? ಆ ವ್ಯಕ್ತಿ ಸಮಾಜದ ಯಾವುದಾದರೂ ಕ್ಷೇತ್ರಕ್ಕೆ ಸಲ್ಲಿಸಿರಬಹುದಾದ ಕೊಡುಗೆಯನ್ನು ಸ್ಮರಿಸುವುದು, ಗಣ್ಯ ವ್ಯಕ್ತಿಯ ಸಾಧನೆಗಳನ್ನು ಹೊಸ ತಲೆಮಾರಿಗೆ ಪರಿಚಯಿಸುವುದು ಮತ್ತು ಆ ಮೂಲಕ ಅವರೂ ಪ್ರೇರಣೆ ಪಡೆಯುವಂತೆ ಮಾಡುವುದು ಎಂಬಂತಹ ವಿವರಣೆಗಳನ್ನು ಕೊಡಬಹುದು. ರಜೆ ಘೋಷಿಸುವುದರಿಂದ ವಾಸ್ತವವಾಗಿ ಈ ಗುರಿ ಈಡೇರುತ್ತದೆಯೇ? ರಜೆ ನೀಡದೆಯೂ ಈ ಉದ್ದೇಶಗಳನ್ನು ಸಾಧಿಸಲಾಗದೇ?

ಸಹೋದ್ಯೋಗಿಯೊಬ್ಬರು ಸರ್ಕಾರಿ ಕಚೇರಿಯೊಂದರಲ್ಲಿ ಆಗಬೇಕಾಗಿದ್ದ ತಮ್ಮ ಕೆಲಸಕ್ಕಾಗಿ ಮೈಸೂರಿಗೆ ಹೋಗಿದ್ದರಂತೆ. ಗಂಟೆಗಟ್ಟಲೆ ಸರತಿಯಲ್ಲಿ ಕಾದು ಇನ್ನೇನು ತಮ್ಮ ಕೆಲಸ ಆಗುತ್ತದೆ ಅನ್ನುವಷ್ಟರಲ್ಲಿ ಗಣ್ಯರೊಬ್ಬರ ನಿಧನದ ಪ್ರಯುಕ್ತ ರಜೆಯ ಘೋಷಣೆ ಹೊರಬಿತ್ತು. ಎಷ್ಟಾದರೂ ಸರ್ಕಾರಿ ನೌಕರರು, ರಜೆ ಘೋಷಣೆಯಾಗುತ್ತಿದ್ದಂತೆ ಫೈಲುಗಳನ್ನೆಲ್ಲ ಮಡಚಿಟ್ಟು ಹೊರಟೇಬಿಟ್ಟರಂತೆ. ನಿಮಿಷಾರ್ಧದಲ್ಲಿ ಕಚೇರಿಯೆಲ್ಲ ಖಾಲಿಯಾದ್ದರಿಂದ, ನಾಲ್ಕು ಗಂಟೆ ಪ್ರಯಾಣ ಮಾಡಿ ಮೈಸೂರಿಗೆ ಹೋಗಿದ್ದ ಸಹೋದ್ಯೋಗಿ ಪೆಚ್ಚುಮೋರೆ ಹಾಕಿಕೊಂಡು ಪುನಃ ಬಸ್ ಹತ್ತಿದರಂತೆ.

ಇದೊಂದು ಸಣ್ಣ ನಿದರ್ಶನ ಅಷ್ಟೆ. ಇಂತಹ ಎಷ್ಟು ಸಾವಿರ ಕೆಲಸಗಳು ಒಂದು ರಜೆಯಿಂದ ನನೆಗುದಿಗೆ ಬೀಳಬಹುದು? ಎಷ್ಟು ಲಕ್ಷ ಗಂಟೆ ಮಾನವ ಶ್ರಮ ವ್ಯರ್ಥವಾಗಬಹುದು? ಎಷ್ಟು ಕೋಟಿ ರೂಪಾಯಿ ನಷ್ಟ ಆಗಬಹುದು? ಸ್ವಾತಂತ್ರ್ಯಾನಂತರ ಗಣ್ಯರ ನಿಧನದ ಶೋಕಾಚರಣೆಗಾಗಿ ಎಷ್ಟು ರಜೆಗಳನ್ನು ಘೋಷಣೆ ಮಾಡಿರಬಹುದು? ಅವುಗಳಿಂದ ಆಗಿರಬಹುದಾದ ಒಟ್ಟು ನಷ್ಟ ಎಷ್ಟಿರಬಹುದು? ಅಧ್ಯಯನಕ್ಕೆ ಒಳಪಡಿಸಿದರೆ ಅದೊಂದು ಮಹಾಗ್ರಂಥವೇ ಆದೀತು. ಗಣ್ಯರ ನಿಧನದಿಂದ ಸಮಾಜಕ್ಕೆ ‘ತುಂಬಲಾರದ ನಷ್ಟ’ವೆಂದು ಹೇಳುವುದು ಮಾಮೂಲಿ ಆಗಿಬಿಟ್ಟಿದೆ; ವಾಸ್ತವವಾಗಿ ತುಂಬಲಾರದ ನಷ್ಟ ಆಗುವುದು ಅವರ ನಿಧನದ ಹೆಸರಿನಲ್ಲಿ ರಜೆ ಘೋಷಿಸುವುದರಿಂದ.

ಜಾತಿ ಪ್ರಮಾಣ ಪತ್ರ, ರೇಷನ್ ಕಾರ್ಡು, ಪಿಂಚಣಿ, ಪೋಸ್ಟಾಫೀಸು, ಬ್ಯಾಂಕ್ ಕೆಲಸ ಎಂದೆಲ್ಲ ದೂರದೂರದ ಹಳ್ಳಿಗಳಿಂದ ತಾಲ್ಲೂಕು ಕೇಂದ್ರ, ಜಿಲ್ಲಾ ಕೇಂದ್ರಗಳಿಗೆ ಪ್ರತಿದಿನ ಪ್ರಯಾಣಿಸುವವರು ಸಾವಿರಾರು ಮಂದಿ. ಇದ್ದಕ್ಕಿದ್ದ ಹಾಗೆ ರಜೆ ಘೋಷಿಸುವುದರಿಂದ ಇಂತಹ ಜನಸಾಮಾನ್ಯರಿಗೆ ಆಗುವ ತೊಂದರೆ ಎಷ್ಟೆಂಬುದನ್ನು ಸರ್ಕಾರ ಎಂದಾದರೂ ಯೋಚಿಸಿದ್ದಿದೆಯೇ? ತಮ್ಮ ಹೊಲದ ಕೆಲಸಕ್ಕೋ, ಕೂಲಿ ಕೆಲಸಕ್ಕೋ ಮೀಸಲಿರುವ ಒಂದು ದಿನವನ್ನು ಹೇಗೋ ಹೊಂದಿಸಿಕೊಂಡು ಕಚೇರಿಗಳಿಗೆ ಎಡತಾಕುವ ಈ ಜನರಿಗೆ, ರಜೆ ಘೋಷಣೆಯಿಂದ ಆಗುವ ನಷ್ಟ ಎಷ್ಟೆಂದು ಯಾರಾದರೂ ಅಂದಾಜಿಸಿದ್ದಾರೆಯೇ? ಒಂದಿಡೀ ದಿನ ವ್ಯರ್ಥವಾಯಿತಲ್ಲ ಎಂದು ನೊಂದುಕೊಳ್ಳುವ ಇವರು, ಮೃತ ವ್ಯಕ್ತಿಯ ಗೌರವಾರ್ಥ ಶೋಕಾಚರಿಸಿ ಅವರ ಸಾಧನೆಗಳನ್ನು ಕೊಂಡಾಡುವ ಸಾಧ್ಯತೆ ಎಷ್ಟು?

ಶಾಲಾ– ಕಾಲೇಜುಗಳಲ್ಲಿವಿದ್ಯಾರ್ಥಿಗಳಿಗೆ ಮೃತ ಗಣ್ಯರ ಸಾಧನೆ-ಕೊಡುಗೆಗಳನ್ನು ಮನವರಿಕೆ ಮಾಡಿಕೊಡುವುದು ಅಧ್ಯಾಪಕರ ಕರ್ತವ್ಯ ಎಂಬುದು ನಿಜ. ಆದರೆ ರಜೆ ಘೋಷಿಸುವುದರಿಂದ ಅದನ್ನು ಮಾಡಿದಂತಾಗುತ್ತದೆಯೇ? ಅನೇಕ ವಿದ್ಯಾರ್ಥಿಗಳು ಸ್ವಯಂ ರಜೆ ಘೋಷಿಸಿಕೊಂಡು ಅಂದು ಕಾಲೇಜುಗಳಿಗೆ ಕಾಲಿಡುವುದೇ ಇಲ್ಲ. ರಜೆ ಘೋಷಣೆಯಾಗುತ್ತಲೇ ಹಲವರು ಕ್ಯಾಂಪಸ್ ಖಾಲಿ ಮಾಡುತ್ತಾರೆ. ಅವರಲ್ಲಿ ಬಹುತೇಕರು ದಿನದ ಉಳಿದ ಸಮಯವನ್ನು ಹೇಗೆ ಕಳೆಯುತ್ತಾರೆ ಎಂಬುದು ಎಲ್ಲರಿಗೂ ಗೊತ್ತು. ಇನ್ನು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಸಮಸ್ಯೆ ಬೇರೆ. ಅವರಿಗೆ ರಜೆ ಕೊಟ್ಟರೂ ಸಮಸ್ಯೆ, ಕೊಡದಿದ್ದರೂ ಸಮಸ್ಯೆ. ಆಗಷ್ಟೇ ಶಾಲೆಗೆ ಬಂದ ಪುಟಾಣಿಗಳನ್ನು ಮತ್ತೆ ಅವರವರ ಮನೆಗಳಿಗೆ ತಲುಪಿಸುವುದು ತುಂಬ ತ್ರಾಸದ ಕೆಲಸ. ರಜೆ ಕೊಡದೇ ಇದ್ದರೆ ಸರ್ಕಾರದ ಆದೇಶವನ್ನು ಉಲ್ಲಂಘಿಸಿದಂತಾಗುತ್ತದೆ. ಅತ್ತ ಶಾಲೆಗಳಿಗೆ ಸಂಕಟ, ಇತ್ತ ಹೆತ್ತವರಿಗೆ ಆತಂಕ.

ಒಟ್ಟಾರೆ, ಈ ಸಮಸ್ಯೆಗೊಂದು ಪರಿಹಾರ ಕಂಡುಕೊಳ್ಳಲೇಬೇಕು. ಇದಕ್ಕೆ ಎಲ್ಲರೂ ಪಕ್ಷಾತೀತವಾಗಿ ಒಮ್ಮತದ ತೀರ್ಮಾನಕ್ಕೆ ಬರಲೇಬೇಕು. ಆ ದಿನ ಎಲ್ಲರೂ ಒಂದು ಗಂಟೆ ಹೆಚ್ಚು ಕೆಲಸ ಮಾಡಲಿ. ಮೃತ ಗಣ್ಯರ ಬಗ್ಗೆ ಕಚೇರಿಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ, ಉಪನ್ಯಾಸ-ಸಂವಾದ ಏರ್ಪಡಿಸಲಿ. ಮೃತರಿಗೆ ಇದಕ್ಕಿಂತ ದೊಡ್ಡ ಗೌರವ ಉಂಟೇ?

ಲೇಖಕ: ಸಹಾಯಕ ಪ್ರಾಧ್ಯಾಪಕ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ, ತುಮಕೂರು ವಿಶ್ವವಿದ್ಯಾಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.