ಗುರುವಾರ, 26 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ: ಮಾತು ಆಡುವ ಮುನ್ನ...

ಸಲ್ಲದ ಮಾತುಗಳನ್ನಾಡಿ, ಬಳಿಕ ಹಾಗೆ ಹೇಳಿಯೇ ಇಲ್ಲವೆಂದರೆ ಎರಡು ಬಾರಿ ಪ್ರಮಾದವನ್ನು ಎಸಗಿದಂತೆ ಅಲ್ಲವೆ?
Published : 25 ಸೆಪ್ಟೆಂಬರ್ 2024, 20:40 IST
Last Updated : 25 ಸೆಪ್ಟೆಂಬರ್ 2024, 20:40 IST
ಫಾಲೋ ಮಾಡಿ
Comments

ಜನಪ್ರತಿನಿಧಿಗಳು ನಮ್ಮ ಪರಂಪರೆ, ಸಂಸ್ಕೃತಿಯನ್ನು ಜನಮಾನಸದಲ್ಲಿ ಬಿಂಬಿಸುತ್ತಾರೆ ಎನ್ನುವುದು ನಿರೀಕ್ಷೆ. ಆದರೆ ಅವರು ವಾಕ್‌ಶುದ್ಧಿ ಕಾಪಿಟ್ಟುಕೊಳ್ಳದೆ ವಿನಾಕಾರಣ ಜನಾಕ್ರೋಶಕ್ಕೆ ಗುರಿಯಾಗುವುದನ್ನು ಕಾಣುತ್ತಿದ್ದೇವೆ. ನಾವು ಆಡುವ ಮಾತುಗಳು ನಮ್ಮ ಅಸ್ಮಿತೆ, ಮನೋಭಾವದ ಪ್ರತೀಕ. ಮಾತಿಗೆ ಆಯ್ಕೆ ಮಾಡಿಕೊಳ್ಳುವ ಪದಗಳು ಕೇಳುಗರಿಗೆ ನಮ್ಮ ಬುದ್ಧಿವಂತಿಕೆ ಅಥವಾ ದಡ್ಡತನದ ಸೂಚಕ. ಪದಗಳು ಒಮ್ಮೆ ಬಾಯಿಂದ ಹೊರಬಂದ ನಂತರ ಎಷ್ಟೇ ಪರಿಪರಿಯಾಗಿ ಕ್ಷಮೆ ಯಾಚಿಸಿದರೂ ತೊಡೆದು ಹಾಕಲಾಗದು. ಚಿಂತಿಸದೆ ಎಡವಿದೆನಲ್ಲ ಎಂಬ
ಅಪರಾಧಪ್ರಜ್ಞೆ ಕ್ಷಮಾಪಣೆಯ ಹಿಂದೆ ಇದ್ದೇ ಇರುತ್ತದೆ.

ಸಂಯಮದಿಂದ ಆಲಿಸದಿರುವುದೇ ತರಾತುರಿಯ ಮಾತಿಗೆ ಮೂಲ. ಆತುರದ ಮಾತಿನಲ್ಲಿ ಪರನಿಂದೆಗಳು ನುಸುಳಿರುತ್ತವೆ. ಶಬ್ದಗಳು ಕಣ್ಣಿಗೆ ಕಾಣವು, ಆದರೆ ಅವು ಅಳಿಸಲಾಗದ ಗಾಯದ ಕಲೆಗಳನ್ನು ಉಳಿಸಿಬಿಟ್ಟಿರುತ್ತವೆ. ಮಾತು ಬಲ್ಲವನಿಗೆ ಜಗಳದ ಹಂಗಿರದು. ಮಾತು ಮುತ್ತಾಗಬಹುದು, ಅದು ಮೃತ್ಯುವಿಗೂ ಮೂಲವಾಗಬಹುದು. ಗೌತಮ ಬುದ್ಧ ‘ಪ್ರತಿ ಮನುಷ್ಯನೂ ತನ್ನ ಬಾಯಲ್ಲಿ
ಕೊಡಲಿಯಿಟ್ಟುಕೊಂಡೇ ಜನಿಸುತ್ತಾನೆ. ದಡ್ಡನು ನಿಂದನೀಯ ಮಾತಿನಿಂದ ತನ್ನನ್ನು ಮತ್ತು ಪರರನ್ನು ಕೊಯ್ಯುತ್ತಾನೆ’ ಎಂದಿದ್ದಾನೆ. ಬೇಜವಾಬ್ದಾರಿಯುತವಾದ ಒಂದೇ ಒಂದು ಪದಪ್ರಯೋಗವು ಸಮಾಜದ ಶಾಂತಿ, ಸಾಮರಸ್ಯವನ್ನು ಕಲಕಬಹುದು. ಅದರ ಪರ ಮತ್ತು ವಿರುದ್ಧದ ಚಳವಳಿಗಳಿಂದ ಅಮಾಯಕರೇ ಹೆಚ್ಚು ಬವಣೆಪಡುವವರು. ಸಲ್ಲದ ಮಾತುಗಳನ್ನಾಡಿ, ಬಳಿಕ ಹಾಗೆ ಹೇಳಿಯೇ ಇಲ್ಲವೆಂದರೆ ಎರಡು ಬಾರಿ ಪ್ರಮಾದವನ್ನು ಎಸಗಿದಂತೆ ಅಲ್ಲವೆ? ನಿಮ್ಮ ಮಾತನ್ನು ನೀವೇ ಆಲಿಸಿದಾಗ ಅದು ಸಿಹಿಯಾಗಿರಲಿ ಎನ್ನುವುದು ಪ್ರಖರ ಹಿತೋಕ್ತಿ.

ಕುಹಕ ಮಾತು ವೈರತ್ವವನ್ನು ಹೆಚ್ಚಿಸುತ್ತದೆ. ಹಾಗಾದಾಗ ಇನ್ನೆಲ್ಲಿಯ ಸಾಂಘಿಕ ಬದುಕು, ಸಮಾಜವಾದ? ನಯವಾದ ನುಡಿ ಒಂದು ಸಾಮಾಜಿಕ ಕೌಶಲ. ಮುನಿಸಿಕೊಂಡರೆ ಸಾಕುಪ್ರಾಣಿಗಳೂ ವೇದನೆ ಪಡುತ್ತವೆ. ಬಹುಜನ ಬಳಸುವರೆ, ಸರ್ವಸಮ್ಮತವೆ,
ವಿವಾದಾತೀತವೆ ಎಂದು ಖಾತರಿಪಡಿಸಿಕೊಂಡೇ ನಿಘಂಟು ರಚನೆಕಾರರು ಶಬ್ದಗಳನ್ನು ಸೇರಿಸುತ್ತಾರೆ. ಮಹಾಕವಿ ಭಾರವಿ ‘ಹಿತವೂ ಮನೋಹರವೂ ಆದ ಮಾತು ವಿರಳ’ ಎನ್ನುತ್ತಾನೆ. ಶರಣರು ಮಾತನ್ನು ಜ್ಯೋತಿರ್ಲಿಂಗವಾಗಿ ಕಂಡಿದ್ದಾರೆ. ಮಾತಾಡುವ ಮುನ್ನ ಆಲೋಚಿಸಿದರೆ, ಬಳಸುವ ಪದಗಳ ಪರಿಣಾಮ ತಿಳಿಯಲು ಸಮಯ ಲಭಿಸುತ್ತದೆ. ಕಟುಪದಗಳು ಭೌತಿಕ ಥಳಿತಕ್ಕಿಂತ ಹೆಚ್ಚು ನೋವುಕಾರಕಗಳು.

ಚೆನ್ನಾಗಿ ಚಿಂತಿಸಿದ ಬಳಿಕ ಮೂಡಿಬರುವ ಮಾತನ್ನು ಮಂದಿ ಮೆಚ್ಚುತ್ತಾರೆ. ವಿವಾದಕ್ಕೆ ಆಸ್ಪದವಾಗದ ಪದಗಳ ಬಳಕೆ ಸಂಭಾವ್ಯ ಗೊಂದಲವನ್ನು ತಪ್ಪಿಸುವುದು. ಯಾರೇ ಒಬ್ಬರನ್ನು ನಿಂದಿಸುವುದು ತರವಾಗದು. ‘ಊಟ ವಿತರಣೆಯಲ್ಲಿ ಜಿಪುಣತನ’ ಎಂಬ ಕಟಕಿ ಅನಿವಾರ್ಯ ಆಗಬಾರದು. ಬದಲಿಗೆ, ‘ಧಾರಾಳವಾಗಿ ಬಡಿಸಿದಿರಿ, ಆದರೆ ಸೌಟು ಚಿಕ್ಕದು’ ಎನ್ನಬಹುದಲ್ಲ! ‘ಛೇ! ಹಾಳೆ ಹರಿದಿದೆಯಲ್ಲ, ಈಗ ಯಾವುದರ ಮೇಲೆ ಬರೆಯುತ್ತೀ?’ ಎಂದು ಲೋಪದ ಪರಿಣಾಮವನ್ನು ವಿವರಿಸಿದರಾಯಿತು. ಮಗು ಕೂಡ ವಿಶ್ವಾಸಕ್ಕೆ ಮಣಿಯುತ್ತದೆ. ಅಂತೆಯೇ ‘ನಿಮ್ಮ ಪೈಕಿ ಅರ್ಧದಷ್ಟು ಮೂರ್ಖರಿದ್ದಾರೆ’ ಎನ್ನುವ ಬದಲು ‘ಅರ್ಧದಷ್ಟು ಬುದ್ಧಿವಂತರು’ ಎನ್ನಬಹುದಲ್ಲ! ಮಾತಿಗೆ ತಿಳಿವಿನೋದದ ಸ್ಪರ್ಶವಿದ್ದರೆ ಬಂಗಾರಕ್ಕೆ ಕಳಶವಿಟ್ಟಂತೆ.

ನಾವು ತಮಾಷೆ, ಹುಡುಗಾಟಿಕೆ ಎಂದು ಭಾವಿಸುವುದು ಇತರರ ಮನಸ್ಸನ್ನು ತೀವ್ರವಾಗಿ ಬಾಧಿಸಬಹುದು. ನಮ್ಮ ಉದ್ದೇಶ ಒಳ್ಳೆಯದೇ ಇದ್ದರೂ ಅದನ್ನು ಯಾರಾದರೂ ಅಪವ್ಯಾಖ್ಯಾನಿಸಿದರೆ, ಅದಕ್ಕೆ ತರಾವರಿ ಬಣ್ಣ ಹಚ್ಚಿದರೆ ಪರಿಸ್ಥಿತಿ ಘೋರ. ಕೋಲು, ಕಲ್ಲು ಮೂಳೆ ಮುರಿಯಬಹುದು, ಆದರೆ ಒರಟು ಶಬ್ದಗಳು ಸರ್ವದಾ ಪರರನ್ನು ನೋಯಿಸುತ್ತವೆ. ನಾವು ಉದ್ಗರಿಸುವ ಶಬ್ದಗಳು ಜಗತ್ತನ್ನು ಹೇಗೆ ನಿರೂಪಿಸುತ್ತೇವೆ ಎನ್ನುವುದನ್ನು ಸಾದರಪಡಿಸುತ್ತವೆ. ಶಬ್ದಗಳು ಎಲ್ಲ ಬಗೆಯ ಹಿಂಸೆಯಿಂದ ಮುಕ್ತವಾದ, ಎಲ್ಲ ಜೀವಿಗಳನ್ನೂ ಗೌರವಿಸುವ, ಎಲ್ಲ ಜನರನ್ನೂ ಮಾನ್ಯ ಮಾಡುವ ಸಮಾಜವನ್ನು ಕಟ್ಟುತ್ತವೆ. ಹಾಗಾಗಿ ಒಂದೊಂದೂ ಶಬ್ದವನ್ನು ಅಳೆದು, ತೂಗಿಯೇ ಪ್ರಯೋಗಿಸಬೇಕು.

ಭಾಷೆ ಒಂದು ದಿವ್ಯ ಶಕ್ತಿ. ನಾವು ನುಡಿಯುವಾಗ ವಾಸ್ತವವನ್ನು ರೂಪಾಂತರಿಸಲು ಭಾಷೆಯ ಸಾಮರ್ಥ್ಯ
ವನ್ನು ಚಲಾಯಿಸುತ್ತೇವೆ. ಕಡಲಿಗೆ ಕಲ್ಲು ಒಗೆದಾಗ ಅದು ತಳಕ್ಕೆ ಹೋಗುವುದು ಸರಿ. ಆದರೆ ಅದು ಎಷ್ಟು ಆಳಕ್ಕೆ, ಎಷ್ಟು ವೇಗವಾಗಿ ಮುಳುಗುತ್ತದೆ ಎನ್ನುವುದನ್ನು ತಿಳಿಯಲಾಗದು. ಒರಟು ಶಬ್ದಗಳ ಬಳಕೆಯೂ ಅಂತೆಯೆ. ಅವು ಯಾರ ಮನಸ್ಸನ್ನು ಹೇಗೆ ಪೀಡಿಸುತ್ತವೊ ಗೊತ್ತಾಗದು. ಹರಿಯಬಿಟ್ಟ ಒಂದೇ ಒಂದು ಒಕ್ಕಣೆಯು ಅತಿ ಪ್ರೀತಿ, ವಿಶ್ವಾಸವನ್ನೂ ಕಸಿದು ಸ್ನೇಹ, ಸಂಬಂಧಗಳಿಗೆ ಭಂಗ ತರಬಹುದು. ಹಾಗಾಗಿ, ಶಬ್ದಗಳಿಗೆ ಅರ್ಥ ತುಂಬುವಾಗ ಬಲು ಎಚ್ಚರ ಬೇಕು.

ಮನಸ್ಸಿಗೆ ಬಂದ ಎಲ್ಲ ಆಲೋಚನೆಗಳನ್ನೂ ವ್ಯಕ್ತಪಡಿಸಬೇಕಿಲ್ಲ. ಸಿಟ್ಟು ಬಂದಾಗ ತುಸು ಮಾತು ನಿಲ್ಲಿಸಿ, ಆಡಹೊರಟ ಕಠೋರ ಪದಗಳನ್ನು ನಿವಾರಿಸಿಕೊಳ್ಳುವುದು ಜಾಣತನ. ವೀರಾವೇಶದಿಂದ ಕಟುವಾಗಿ ಮಾತನಾಡುವವರು ಮೇಲ್ನೋಟಕ್ಕೆ ಬಲಾಢ್ಯರಂತೆ ತೋರಿಯಾರು. ಆದರೆ ಅದು ಅಹಮಿಕೆಯನ್ನಷ್ಟೇ ಹೆಚ್ಚಿಸುವ ಹುಸಿ ಸಾಮರ್ಥ್ಯ. ಯಾರನ್ನೂ ದೂಷಿಸದ, ಕಣ್ಣಲ್ಲಿ ಕಣ್ಣಿಟ್ಟು ಆಡುವ ನುಡಿಗಳು ಮೆಚ್ಚುಗೆ ಗಳಿಸುತ್ತವೆ. ಸ್ಪಷ್ಟವಾಗಿ, ಸಂಕ್ಷಿಪ್ತವಾಗಿ ಮಾತನಾಡಿದರೆ ಕಟುವಾದ ಒಕ್ಕಣೆಗಳು ಇಣುಕವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT