ಬುಧವಾರ, 3 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ: ಪ್ರಾಣಿಗಳಿಗೂ ಬದುಕುವ ಹಕ್ಕಿದೆ

Published 1 ಜುಲೈ 2024, 19:18 IST
Last Updated 1 ಜುಲೈ 2024, 19:18 IST
ಅಕ್ಷರ ಗಾತ್ರ

ನಮ್ಮ ಮನೆಯ ಮುಂದಿನ ತಿರುವಿನಲ್ಲಿ ಎಂತಹ ವೇಗದಲ್ಲಿ ಚಲಿಸುವ ವಾಹನಗಳೂ ವೇಗ ತಗ್ಗಿಸುತ್ತವೆ. ಅಲ್ಲಿ ರಸ್ತೆ ಉಬ್ಬು ಇಲ್ಲ, ಸಿಗ್ನಲ್ ಕೂಡ ಇಲ್ಲ. ಆದರೆ ಅಲ್ಲೊಂದು ನಾಯಿ ಸದಾ ಎಚ್ಚರವಿರುತ್ತದೆ.‌ ವೇಗವಾಗಿ ಬರುವ ವಾಹನಗಳನ್ನು ಅಟ್ಟಿಸಿಕೊಂಡು ಹೋಗುತ್ತದೆ. ಬೊಗಳುತ್ತದೆ. ದೊಡ್ಡ ರಾದ್ಧಾಂತ ಮಾಡುತ್ತದೆ.‌ ನಿಧಾನಕ್ಕೆ ಒಂದು ಎಚ್ಚರದಲ್ಲಿ ಹೋಗುವ ವಾಹನಗಳ ತಂಟೆಗೆ ಅದು ಹೋಗುವುದಿಲ್ಲ.‌ ಆ ನಾಯಿ ಈ ರಸ್ತೆಯಲ್ಲಿ ಒಂದಿಷ್ಟು ಭಯ ಹುಟ್ಟಿಸಿದೆ.‌

ಇದರ ಹಿಂದಿನ ಕಾರಣ ತಿಳಿದಾಗ ನಿಜಕ್ಕೂ‌ ಅಚ್ಚರಿಯಾಯಿತು. ಈ ನಾಯಿಯ ಜೊತೆ ಇನ್ನೊಂದು ನಾಯಿ ಇತ್ತಂತೆ. ಮರಿ ಆಗಿದ್ದಾಗಿನಿಂದಲೂ ಆ ಎರಡೂ ನಾಯಿಗಳು ಸದಾ ಒಟ್ಟಿಗೆ ಇರುತ್ತಿದ್ದವಂತೆ. ಇವೆರಡೂ ಬೀದಿ ನಾಯಿಗಳು. ಒಂದು ತಿಂಗಳ ಹಿಂದೆ ವೇಗವಾಗಿ ಬಂದ ಕಾರೊಂದು ರಸ್ತೆಯ ಪಕ್ಕ ಮಲಗಿದ್ದ ನಾಯಿಯನ್ನು ಗುದ್ದಿ ಹೋಗಿದೆ. ಅದು ಅಲ್ಲೇ ಪ್ರಾಣಬಿಟ್ಟಿದೆ. ಅದರ ಮೇಲೆ ಮತ್ತೆರಡು ವಾಹನಗಳು ಹಾದು ಹೋಗಿವೆ. ಈ ನಾಯಿ ಬೊಗಳಿ ಬೊಗಳಿ ಸಂಕಟಗೊಂಡಿದೆ. ಅಂದಿನಿಂದ ಅದು ಯಾವುದೇ ವೇಗದ ವಾಹನವನ್ನು ತರಾಟೆಗೆ ತೆಗೆದುಕೊಳ್ಳುತ್ತದೆ.‌

ಮನುಷ್ಯನ ಜೀವ ಮಾತ್ರವೇ ಮುಖ್ಯವಾದದ್ದು; ಪ್ರಾಣಿಗಳದ್ದಲ್ಲ ಎಂಬ ಮನೋಭಾವ ಹಲವರಲ್ಲಿದೆ. ನಮ್ಮ ಸಂಕಟ ಮಾತ್ರವೇ ನಿಜವಾದ ಸಂಕಟ; ಪ್ರಾಣಿಗಳದ್ದು ಸಂಕಟವೇ ಅಲ್ಲ ಅನ್ನುವಷ್ಟರ ಮಟ್ಟಿಗೆ ಮನುಷ್ಯ ಜಗತ್ತು ನಿರ್ಭಾವುಕವಾಗಿದೆ. ವೇಗದ ಚಾಲನೆಯೇ ಈ ಕಾಲದ ದೊಡ್ಡ ನಶೆ. ರಸ್ತೆ ಅಪಘಾತಗಳಲ್ಲಿ ಬಹುತೇಕವು ‘ಅತೀ ವೇಗದ’ ಕಾಣಿಕೆಗಳೇ ಆಗಿವೆ.‌ ವೇಗವಾಗಿ ವಾಹನ ಚಾಲನೆ ಮಾಡಿ, ತಮ್ಮ ಪಾಡಿಗೆ ತಾವಿರುವ ಜೀವವನ್ನು ಕಬಳಿಸಿಸುವವರಿಗೆ ಎಂದೂ ಕ್ಷಮೆ ಇರಬಾರದು.

ಅತಿವೇಗದಿಂದ ವಾಹನ ಚಾಲನೆ ಮಾಡುವವರು ಪ್ರತಿವರ್ಷ ಅದೆಷ್ಟೋ ಪ್ರಾಣಿಗಳನ್ನು ಬಲಿ ತೆಗೆದುಕೊಳ್ಳುತ್ತಿದ್ದಾರೆ. ವಾಹನಗಳ ಚಕ್ರಕ್ಕೆ ಸಿಕ್ಕಿಹಾಕಿಕೊಳ್ಳುವ ಕಾಡು ಬೆಕ್ಕಿನಿಂದ ಹಿಡಿದು, ರೈಲಿಗೆ ಸಿಲುಕಿ ಸಾಯುವ ಆನೆಗಳವರೆಗೂ ಅನೇಕ ಪ್ರಾಣಿಗಳು ಈ ಅಪಘಾತದ ಲೆಕ್ಕದಲ್ಲಿವೆ. ಕಾಡಿನ ರಸ್ತೆಯಲ್ಲಿ ಅಪಘಾತದಿಂದ ಸತ್ತು ಬೀಳುವ ಪ್ರಾಣಿಗಳ ಲೆಕ್ಕ ಇಟ್ಟುವರಾರು?

ವಾಹನದಲ್ಲಿ ಕೂತು ಜೋರಾಗಿ ಆಕ್ಸಿಲರೇಟರ್ ತುಳಿಯುವವರಿಗೆ ಈ ಜಗತ್ತು ಕ್ಷುಲ್ಲಕವಾಗಿ ಕಾಣುತ್ತದೆಯೇನೊ... ಅದರಲ್ಲೂ ಪ್ರಾಣಿಗಳು ಬದುಕಲು ಯೋಗ್ಯವಲ್ಲದ ವ್ಯರ್ಥ ಸರಕು ಎಂದು ಅವರು ಭಾವಿಸುತ್ತಾರೇನೋ. ಅವರೆಲ್ಲಾ ಅಷ್ಟೊಂದು ವೇಗವಾಗಿ ಸಾಗಿ ಅದೇನು ಸಾಧಸಿದ್ದಾರೋ ಏನೋ. ಗಂಟೆಗೆ 150 ಕಿ.ಮೀ. ವೇಗವಾಗಿ ವಾಹನ ಚಲಾಯಿಸಿ, ಮನೆಯಲ್ಲಿ ಕುಳಿತು ರೀಲ್ಸ್ ನೋಡುತ್ತಾರೆ. ಇಲ್ಲವೇ ಹೊರಗೆ ಕುಳಿತು ಗೆಳೆಯರೊಂದಿಗೆ ಹರಟೆ ಹೊಡೆಯುತ್ತಾರೆ. ವಾಹನಗಳಲ್ಲಿ ವೇಗವಾಗಿ ಸಾಗುವ ಜನರನ್ನು ಕಂಡು, ಬದುಕಿನ ಎಲ್ಲದರಲ್ಲೂ ಅದೇ ಬಗೆಯ ವೇಗ ಇದ್ದಿದ್ದರೆ ಈ ದೇಶ ಅದೆಷ್ಟು ಉದ್ಧಾರವಾಗಿರಬಹುದಾಗಿತ್ತು ಎಂದು ಅನ್ನಿಸುವುದಿದೆ. ಸದಾ 100 ಕಿ.ಮೀ. ವೇಗದಲ್ಲಿ ವಾಹನ ಚಲಾಯಿಸುವ ನೌಕರರು ಎರಡು ಪುಟದ ಕಡತ ಸಿದ್ಧಗೊಳಿಸಲು ಆರು ತಿಂಗಳು ಸಮಯ ತೆಗೆದುಕೊಳ್ಳುವುದೂ ಇದೆ! ನಮ್ಮದು ಏನಿದ್ದರೂ ಕೊಲ್ಲುವ ವೇಗಕ್ಕೆ ಆದ್ಯತೆ ನೀಡುವ ಸ್ವಭಾವ!

ವಾಹನ ಸವಾರನೊಬ್ಬ ಒಂದು ಪ್ರಾಣಿಗೆ ಗುದ್ದಿ, ಅದು ಮೃತಪಟ್ಟರೆ ಉಳಿದವರು ಅದರ ಮೇಲೆ ವಾಹನ ಹತ್ತಿಸಿಕೊಂಡು ಹೋಗುತ್ತಾರೆ. ಆ ಕಳೇಬರವನ್ನು ಕಣ್ಣಲ್ಲಿ ನೋಡಲಾಗದಷ್ಟು ವಿಕಾರಗೊಳಿಸುತ್ತಾರೆ. ಕೆಲವರು ರಸ್ತೆಯ ಪಕ್ಕದಲ್ಲಿ ತಮ್ಮ ಪಾಡಿಗೆ ತಾವು ಏನೂ ಆಗಿಯೇ ಇಲ್ಲವೇನೊ ಎಂಬಂತೆ ಹೋಗುತ್ತಿರುತ್ತಾರೆ. ಅದನ್ನು ಎತ್ತಿ ಒಂದು‌ ಸರಿಯಾದ ಜಾಗಕ್ಕೆ ಹಾಕುವ ಮನಸ್ಸನ್ನೂ ಮಾಡುವುದಿಲ್ಲ.‌ ಸಂಸ್ಕಾರವಂತೂ‌ ದೂರದ ಮಾತು ಬಿಡಿ.‌ ಅಪಘಾತಕ್ಕೆ ಒಳಗಾಗಿ ಬದುಕಿ ಉಳಿದ ಪ್ರಾಣಿಗಳ ಗೋಳು ಮತ್ತೊಂದು ರೀತಿ. ಏಳಲಾಗದೆ, ನಡೆಯಲಾಗದೆ ಗಾಯವನ್ನು ಹೊತ್ತುಕೊಂಡೇ ಮಲಗುತ್ತವೆ. ಆಹಾರವಿಲ್ಲದೆ ಎಲ್ಲೋ ಒಂದು ಕಡೆ ಸದಾ ನರಳುತ್ತವೆ. ನರಳಿ ನರಳಿಯೇ ಸಾಯುತ್ತವೆ. 

ಹೆಲ್ಮಟ್ ಇಲ್ಲ, ಪರವಾನಗಿ ಇಲ್ಲ ಅಂತ ದಂಡ ವಸೂಲಿಗೆ ಆಸಕ್ತಿ ತೋರಿಸುವ ಕೆಲವು ಪೋಲಿಸರು ಈ ಅತಿವೇಗವನ್ನು ಅಷ್ಟೊಂದು ಗಂಭೀರವಾಗಿ ತೆಗೆದುಕೊಂಡಂತೆ ಕಾಣಿಸುವುದಿಲ್ಲ. ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ ವೇಗಕ್ಕೆ ಪೊಲೀಸ್ ಬ್ರೇಕ್ ಬೀಳಬಹುದಾದರೂ ತಾಲ್ಲೂಕು ಹಂತಗಳಲ್ಲಿ ವಾಹನಗಳ ವೇಗಕ್ಕೆ ಮಿತಿಯೇ ಇಲ್ಲ. ಎಷ್ಟೇ ವೇಗದಲ್ಲಿ ಹೋದರೂ ಕೇಳುವವರಿಲ್ಲ.‌ ಪ್ರಾಣಿಗಳಿಗೂ ಹಕ್ಕಿದೆ ಎಂದು ಸುಪ್ರೀ‌ಂ ಕೋರ್ಟ್ ಹೇಳುತ್ತದೆ. ಒಡೆಯನೇ ಇಲ್ಲದ ಪ್ರಾಣಿಗಳ ಸಾವಿಗೆ ನ್ಯಾಯ ಕೇಳುವವರಾರು? ಮನುಷ್ಯರ ಅಬ್ಬರದ ಧಿಮಾಕಿನ ನಡುವೆ ಪ್ರಾಣಿಗಳಾದರೂ ಹೇಗೆ ಬದುಕಿಯಾವು ನೆಮ್ಮದಿಯಾಗಿ?

ಕೆಲವು ಸ್ವಯಂ ಸೇವಾ ಸಂಸ್ಥೆಗಳು ಇಂತಹ ಪ್ರಾಣಿಗಳನ್ನು ರಕ್ಷಿಸುವ ಕೆಲಸ ಮಾಡುತ್ತಿವೆ. ಅಷ್ಟರಮಟ್ಟಿಗೆ ಒಂದು‌ ಸಮಾಧಾನ. ಅಪಘಾತದಲ್ಲಿ ಗಾಯಗೊಂಡ ಪ್ರಾಣಿಗಳನ್ನು ರಕ್ಷಿಸುವುದು ಹಾಗೂ ಅವುಗಳಿಗೆ ಚಿಕಿತ್ಸೆ ಕೊಡಿಸುವ ಕೆಲಸಗಳು ಅಲ್ಲಲ್ಲಿ ನಡೆಯುತ್ತಿವೆ. ನ್ಯಾಯಾಲಯದ ಮೂಲಕ ನ್ಯಾಯ ಕೊಡಿಸುವ ಕೆಲಸಗಳು ಕೂಡ ಆಗಿವೆ. ಇವೆಲ್ಲಾ ತುಂಬಾ ಒಳ್ಳೆಯ ಬೆಳವಣಿಗೆಗಳು. ನಾವು ನಮ್ಮ ಗೆಳೆಯರನ್ನೋ, ಬಂಧುಗಳನ್ನೋ, ಪರಿಚಿತರನ್ನೋ ಅಪಘಾತದಲ್ಲಿ ಕಳೆದುಕೊಂಡಿದ್ದರೆ, ಅದರ ನಂತರವೂ ಮತ್ತದೇ ವೇಗದಲ್ಲಿ ವಾಹನ ಚಾಲನೆ ಮಾಡುತ್ತೇವೆ ಎಂದಾದರೆ ಆ ನಾಯಿಗಿರುವಷ್ಟು ಪ್ರಜ್ಞೆ ನಮಗಿಲ್ಲವಾಯಿತೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT