ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ | ಪೇಜರ್‌ ದಾಳಿ: ಅಪಾಯಕಾರಿ ಬೆಳವಣಿಗೆ

Published : 6 ಅಕ್ಟೋಬರ್ 2024, 23:30 IST
Last Updated : 6 ಅಕ್ಟೋಬರ್ 2024, 23:30 IST
ಫಾಲೋ ಮಾಡಿ
Comments

ಇಸ್ರೇಲ್‌ನ ಉತ್ತರದಲ್ಲಿರುವ ಪುಟ್ಟ ದೇಶ ಲೆಬನಾನ್‌ನಲ್ಲಿ ಇತ್ತೀಚೆಗೆ ಹಿಜ್ಬುಲ್ಲಾ ಸಂಘಟನೆಯ ಸುಮಾರು ಮೂರು ಸಾವಿರ ಸದಸ್ಯರ ಪೇಜರ್‌ಗಳು ಏಕಕಾಲಕ್ಕೆ ಸ್ಫೋಟಗೊಂಡವು. ಕೆಲವರು ಪೇಜರ್‌ಗಳನ್ನು ಜೇಬಿನಲ್ಲಿ ಇಟ್ಟುಕೊಂಡು ಗಾಡಿ ಓಡಿಸುತ್ತಿದ್ದರು, ಇನ್ನು ಕೆಲವರು ನಡೆದುಕೊಂಡು ಹೋಗುತ್ತಿದ್ದರು, ಮತ್ತೆ ಕೆಲವರು ಸದ್ದಾದ ಕೂಡಲೇ ಏನೋ ಮೆಸೇಜ್‌ ಬಂತೆಂದು ಓದಲು ಕಣ್ಣೆದುರು ಹಿಡಿದುಕೊಂಡಿದ್ದರು. ಸುಮಾರು ಹತ್ತು ಮಂದಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟರು. ಕೆಲವರು ಕೈ, ಕಿಡ್ನಿ, ಕಣ್ಣು ಕಳೆದುಕೊಂಡರು. ಕೆಲವರ ಮುಖದ ಒಂದು ಭಾಗವೇ ಛಿದ್ರಗೊಂಡಿತು. ಸಾವಿರಾರು ಜನ ಗಾಯಗೊಂಡರು.

ಅರೇ! ಈ ಸ್ಮಾರ್ಟ್‌ ಮೊಬೈಲ್‌ ಕಾಲದಲ್ಲಿ ಯಾರಪ್ಪಾ ಪೇಜರ್‌ ಬಳಸುವವರು ಅನ್ನುವ ಅನುಮಾನ ಬರುವುದು ಸಹಜವೇ. ಮೊಬೈಲ್‌ ಆವಿಷ್ಕಾರಕ್ಕೂ ಮುನ್ನ ಸಂದೇಶ ಮಾತ್ರ ಕಳುಹಿಸಬಲ್ಲ ಬೀಪ್‌ ಸದ್ದಿನ ಪೇಜರ್‌ ಚಾಲ್ತಿಯಲ್ಲಿತ್ತು. ಮೊಬೈಲ್‌ ಬಂದಮೇಲೆ ಯಾರೂ ಇದನ್ನು ಬಳಸುವುದಿಲ್ಲ. ಯಾರಿಗೂ ತಾವಿರುವ ಜಾಗ ಗೊತ್ತಾಗಬಾರದೆಂದು ಕಾನೂನುಬಾಹಿರ ಕೆಲಸ ಮಾಡುವವರು ಇವುಗಳನ್ನು ಬಳಸುವುದನ್ನು ‘ಪುಷ್ಪಾ’ದಂತಹ ಸಿನಿಮಾಗಳಲ್ಲಿ ನೋಡಿದ್ದೇವೆ. ಕಾರಣ, ಪೇಜರ್‌ಗೆ ನೆಟ್‌ವರ್ಕ್‌ ಬೇಡ, ಹಾಗೆಯೇ ಸಂದೇಶ ಕಳಿಸಬಹುದು. ಲೆಬನಾನಿನಲ್ಲಿ ಇದನ್ನು ಬಳಸುತ್ತಿದ್ದವರು ಹಿಜ್ಬುಲ್ಲಾ ಸಂಘಟನೆಯ ಸದಸ್ಯರು.

ಮಾಧ್ಯಮ ತನಿಖಾ ವರದಿಗಳ ಪ್ರಕಾರ, ಇಸ್ರೇಲ್‌ನ ಇಂಟೆಲಿಜೆನ್ಸ್‌ ಏಜೆನ್ಸಿ ಮೊಸಾದ್‌ ಏನು ಮಾಡುತ್ತಿ ತ್ತೆಂದರೆ, ಮೊಬೈಲ್‌ ಲೊಕೇಶನ್‌ನಿಂದ ಹಿಜ್ಬುಲ್ಲಾ ಸದಸ್ಯರ ಇರವನ್ನು ಕಂಡುಹಿಡಿದು ಆಕ್ರಮಣ ಮಾಡಿ ಸಾಯಿಸುತ್ತಿತ್ತು. ಹಾಗಾಗಿ, ಅವರೆಲ್ಲ ಮೊಬೈಲ್‌ ಅನ್ನು ತ್ಯಜಿಸಿ ಪೇಜರ್‌ ಬಳಸಲು ಶುರುಮಾಡಿದರು. ಒಂದೇ ಸಲ ಸುಮಾರು ಮೂರು ಸಾವಿರ ಪೇಜರ್‌ಗಳು ಬೇಕಾದ ಕಾರಣ, ಹಿಜ್ಬುಲ್ಲಾ ಅವನ್ನು ತಯಾರಿಸಲು ತೈವಾನ್‌ನ ಒಂದು ಕಂಪನಿಗೆ ಆರ್ಡರ್‌ ನೀಡಿತು. ಆ ಕಂಪನಿ ಹಂಗೆರಿಯ ಒಂದು ಕಂಪನಿಗೆ ಹೊರಗುತ್ತಿಗೆ ನೀಡಿತು. ಹಂಗೆರಿಯಲ್ಲಿ ಈ ಪೇಜರ್‌ಗಳು ತಯಾರಾಗುವಾಗಲೇ ಮೊಸಾದ್ ಮಧ್ಯಪ್ರವೇಶಿಸಿ ಆ ಎಲ್ಲ ಪೇಜರ್‌ಗಳ ಒಳಗೆ ಬ್ಯಾಟರಿಯ ಪಕ್ಕದಲ್ಲೇ ಮೂವತ್ತು ಗ್ರಾಮ್‌ಗಳ ಪುಟ್ಟ ವಿಸ್ಫೋಟಕವನ್ನು ಅಳವಡಿಸುವಂತೆ ನೋಡಿಕೊಂಡಿತು. ಜತೆಗೆ ಸಾಫ್ಟ್‌ವೇರ್‌ ಕೂಡ ಅಳವಡಿಸಲಾಯಿತು (ಆದರೆ, ಸಮಸ್ಯೆ ಪೇಜರ್‌ ತಯಾರಿಕೆಯಲ್ಲಲ್ಲ, ಸಾಗಣೆ ಸಂದರ್ಭದಲ್ಲಿ ಮೊಸಾದ್‌ ಪ್ರವೇಶಿಸಿ ಹೀಗೆ ಮಾಡಿದೆ ಎಂದು ಈಗ ಆ ಕಂಪನಿಗಳು ಹೇಳಿವೆ).

ಪೇಜರ್‌ ಖರೀದಿ ನಡೆದದ್ದು ಫೆಬ್ರುವರಿಯಲ್ಲಿ.ಎರಡು ವರ್ಷದ ನಂತರ ಸ್ಫೋಟಿಸಬೇಕೆಂದು ಇಸ್ರೇಲ್‌ ಯೋಜನೆ ಹಾಕಿಕೊಂಡಿದ್ದರೂ ಜುಲೈನಲ್ಲಿ ಹಿಜ್ಬುಲ್ಲಾದ ಒಬ್ಬ ಸದಸ್ಯನಿಗೆ ಈ ಪೇಜರ್‌ಗಳ ಮೇಲೆ ಅನುಮಾನ ಬಂದು ಅವನು ಹೋಗಿ ಮೇಲಧಿಕಾರಿಗೆ ಹೇಳಿದ. ಆದರೆ ಆತ ದೂರು ನೀಡಿದ ಮೇಲಧಿಕಾರಿ ಮೊಸಾದ್‌ನ ಏಜೆಂಟ್‌ ಆಗಿದ್ದ! ಅನುಮಾನ ವ್ಯಕ್ತಪಡಿಸಿದವನನ್ನು ಮುಗಿಸಲಾಯಿತು. ಬೇರೆಯವರಿಗೆ ಅನುಮಾನ ಬರಬಾರದೆಂದು ಸೆಪ್ಟೆಂಬರ್‌ನಲ್ಲೇ ಪೇಜರ್‌ ಸ್ಫೋಟಿಸುವ ಯೋಜನೆಯನ್ನು ಇಸ್ರೇಲ್‌ ಹಾಕಿಕೊಂಡಿತು ಎಂಬ ವರದಿಗಳಿವೆ.

ಹಿಜ್ಬುಲ್ಲಾ ತನ್ನ ಸದಸ್ಯರಿಗೆ ಇಸ್ರೇಲ್‌ ವಿರುದ್ಧದ ಕಾರ್ಯಾಚರಣೆ ಬಗ್ಗೆ ಮಧ್ಯಾಹ್ನ ಹನ್ನೆರಡರಿಂದ ಸಂಜೆ ನಾಲ್ಕರ ಒಳಗೆ ಸಂದೇಶ ಕಳುಹಿಸುತ್ತಿತ್ತು. ಹಾಗಾಗಿ, ಮೊಸಾದ್‌ ಮಧ್ಯಾಹ್ನ ಮೂರೂವರೆಯ ಸಮಯವನ್ನು ಆಯ್ಕೆ ಮಾಡಿಕೊಂಡಿತು. ಸಾಫ್ಟ್‌ವೇರ್‌ ಅನ್ನು ಆ್ಯಕ್ಟಿವೇಟ್‌ ಮಾಡಲಾಯಿತು. ಅಂದರೆ ಆ ಪೇಜರ್‌ ಅದನ್ನು ಉಪಯೋಗಿಸುವವನ ಹತ್ತಿರವೇ ಇರಬೇಕು. ಅಂತಹ ಸಮಯದಲ್ಲೇ ಈ ಸ್ಫೋಟವನ್ನು ಯೋಜಿಸಲಾಗಿತ್ತು.

ಮೊಸಾದ್‌ ಸದಸ್ಯರ ಬುದ್ಧಿವಂತಿಕೆಗೆ ಕೆಲವರಂತೂ ವಾಹ್‌ ವಾಹ್‌ ಎಂದಿರಬಹುದು. ಅರೆ, ಲೊಕೇಶನ್‌ ಕೂಡ ಇರದ ಪೇಜರ್‌ಗಳನ್ನು ಸಣ್ಣ ಸಣ್ಣ ಬಾಂಬುಗಳನ್ನಾಗಿ ಪರಿವರ್ತಿಸಿ ಮತ್ತ್ಯಾವುದೋ ದೇಶದಲ್ಲಿ ಕೂತು ಅವನ್ನು ಸ್ಫೋಟಿಸುವ ವಿಚಾರ ಅದ್ಭುತ ಎನ್ನಿಸಿರಬಹುದು. ಆದರೆ ಹೀಗೆ ಸಂಭ್ರಮಪಡುವ ವಿಚಾರವೇ ಮೂರ್ಖತನದ್ದು. ಬದಲಾಗಿ ಇದು ಆತಂಕಪಡುವ ವಿಷಯ. ಸೂಕ್ಷ್ಮವಾಗಿ ಯೋಚನೆ ಮಾಡಿದಾಗ ಈ ರೀತಿಯ ಆಕ್ರಮಣದ ಸಾಧ್ಯತೆಯೇ ನಡುಕ ಹುಟ್ಟಿಸುವಂತಹದ್ದು. ಏಕೆಂದರೆ ಯಾವ ದೇಶದವರೂ ತಮಗಾಗದ ಯಾವ ದೇಶದ ಮೇಲಾದರೂ ಹೀಗೆ ಆಕ್ರಮಣ ಮಾಡಬಹುದು! ಅಷ್ಟೇಅಲ್ಲ ಭಯೋತ್ಪಾದಕರು ಕೂಡ ಸಾಮಾನ್ಯ ಜನರ ಮೇಲೆ ಈ ಪ್ರಯೋಗ ಮಾಡಬಹುದು. ಬರೀ ಪೇಜರ್‌ ಅಲ್ಲ, ಮೊಬೈಲ್‌ ಮೂಲಕವೂ ಈ ರೀತಿಯ ಸ್ಫೋಟ ಸಂಭವಿಸಬಹುದು! ಬೇರೆ ದೇಶ ಬಿಡಿ, ನಮ್ಮ ದೇಶವನ್ನೇ ತೆಗೆದುಕೊಳ್ಳಿ. ಭಾರತದಲ್ಲಿ ಬಹುತೇಕರು ಉಪಯೋಗಿಸುವುದು ವಿದೇಶಿ ನಿರ್ಮಿತ ಮೊಬೈಲುಗಳನ್ನು!

ಹಾಗಾಗಿ, ಇದೀಗ ಲೆಬನಾನಿನಲ್ಲಿ ನಡೆದ ಪೇಜರ್‌, ವಾಕಿಟಾಕಿ ಸ್ಫೋಟದ ಸಮಸ್ಯೆ ಇಸ್ರೇಲ್‌ ಅಥವಾ ಲೆಬನಾನಿನ ಸಂಗತಿ ಮಾತ್ರವಲ್ಲ. ಅಲ್ಲಿ ಯುದ್ಧ ತೀವ್ರವಾದರೆ ನಮ್ಮ ದೇಶ ಮಾತ್ರವಲ್ಲ ಜಗತ್ತಿನ ಹಲವಾರು ದೇಶಗಳ ಆರ್ಥಿಕ ವ್ಯವಸ್ಥೆಗೆ ಪೆಟ್ಟು ಬೀಳಲಿದೆ. ಆದರೆ ಅದಕ್ಕಿಂತ ಅಪಾಯಕಾರಿಯಾದ ಸಂಗತಿಯೆಂದರೆ, ಈ ರೀತಿಯ ತಂತ್ರಜ್ಞಾನವನ್ನೇನಾದರೂ ದೇಶಗಳು ಬಳಸಲು ಶುರು ಮಾಡಿದರೆ ಮುಂಬರುವ ದಿನಗಳು ಕರಾಳವಾಗಲಿವೆ. ಆದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? ಉತ್ತರ ಸಿಗದ ಪ್ರಶ್ನೆ ಬೃಹದಾಕಾರವಾಗಿ ಕಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT