ಮಕ್ಕಳಿಲ್ಲದ ಮನೆ ಅದೊಂದು ಬಾಳೇ! ಅಜ್ಜಿ ಅವರೆಕಾಯಿ ಸುಲಿಯುತ್ತಾ ಯೋಚನೆಗೀಡಾಗಿದ್ದರು. ಅವರೆಯ ಮೂರು ಕಾಳುಗಳಲ್ಲಿ ಒಂದು ಕಾಳಿನೊಳಗೆ ಸುಂದರವಾದ ಹಸಿರುಹುಳು ಮುಲು ಮುಲು ಎನ್ನುವುದನ್ನು ಕಂಡಾಕ್ಷಣ, ಇದನ್ನೇ ನಾನು ಮಗುವಿನೋಪಾದಿಯಲ್ಲಿ ಯಾಕೆ ಸಾಕಬಾರದು ಎಂದುಕೊಂಡ ಅಜ್ಜಿ, ಅದನ್ನು ಚಟಾಕಿನಲ್ಲಿಟ್ಟು ಮೇವು ಹಾಕಿತು. ಅದು ಬೆಳೆಯಿತು.

ಪಾವು, ಸೇರು, ಬಳ್ಳ, ಮಡಕೆ, ಗುಡಾಣ, ವಾಡೆ ಏನೂ ಸಾಕಾಗದಂತೆ ಅಗಾಧವಾಗಿ ಬೆಳೆದ ಹಸಿರುಹುಳು, ಅಜ್ಜಿಯ ಮನೆಯನ್ನೇ ಉರುಳಿಸುವಷ್ಟು ಗಾತ್ರದಷ್ಟಾಗುತ್ತಾ ಹೋಯಿತು. ‘ಅಯ್ಯೋ, ಶಿವನೇ ಪಾರ್ವತಿ ಏನ್ಮಾಡಲಪ್ಪಾ’ ಎಂದು ಹಲುಬಿದ ಕೋರಿಕೆ ಆಲಿಸಿ, ‘ನಡೀರಿ, ಪಾಪ ಆ ಮುದುಕಮ್ಮಗೆ ಅದೇನು ಗೋಳೋ!’ ಎಂದಳು ಪಾರ್ವತಿ. ರಕ್ಕಸ ಭಾರದ ಆ ಹುಳುವನ್ನು ಅಜ್ಜಿಯ ಬೇಡಿಕೆಯಂತೆ ಸುಂದರಿ ಬಾಲೆಯನ್ನಾಗಿ ಮಾಡಿಕೊಟ್ಟರು ಶಿವ– ಪಾರ್ವತಿ.

ಈ ಅಜ್ಜಿಯನ್ನು ನವವಿಜ್ಞಾನಿಯ ಸ್ಥಾನದಲ್ಲಿ ಇಡೋಣ. ಹಸಿರುಹುಳುವನ್ನು ನಿಸರ್ಗ ಜೀವಜಾಲ ಎನ್ನೋಣ. ಕೂರಿಗೆಗೆ ಮೂರು ತಾಳಲ್ಲವೇ! ಒಂದು ತಾಳಿನದು ನೆಲಕ್ಕೆ, ಇನ್ನೊಂದು ತಾಳಿನದು ತನಗೆ, ಮತ್ತೊಂದು ತಾಳಿನದು ಹಕ್ಕಿಪಕ್ಷಿ, ಹುಳು ಹುಪ್ಪಟೆಗೆ. ಇದು ನಿಸರ್ಗ ನಿಯಮ. ಹಾಗಾಗಿ, ಅವರೆಹುಳ ಅದರ ಪಾಲಿನ ಕಾಳು ತಿನ್ನುತ್ತಿತ್ತು. ಅದಕ್ಕೆ ಹೆಚ್ಚಿನ ಪೋಷಣೆ ಬೇಕಿರಲಿಲ್ಲ. ಅಜ್ಜಿ ರೂಪಕದ ವಿಜ್ಞಾನ ಎಡವಿತು. ಆಸೆ ಇರಬೇಕು ನಿಜ. ದಾಹ ಇರಬಾರದಲ್ಲವೇ! ವಿಜ್ಞಾನವು ಆಸೆ ಎಂಬುದನ್ನು ಜಗತ್ತಿನ ಮನುಕುಲದ ದಾಹಕ್ಕೆ ಅಣಿ ಮಾಡಿತು. ಅದರ ಪರಿಣಾಮವಾಗಿ ಇಂದಿನ ಜಗವು ಒಂದು ಹೊಗೆಬಂಡಿ. ಆಕಾಶರಾಯನ ಸಂಗಾತಿ ಓಜೋನ್ ತಕ್ಕಂತೂತ. ಹಿಮಪರ್ವತಗಳ ಕಣ್ಣೀರು. ಸಮುದ್ರರಾಜನ ಅಕಾಲ ಮುಪ್ಪು. ಭೂಮಾತೆ ಈಗ ಅಕಾಲ ಮುಪ್ಪಿನ ಮುದುಕಿ.

ವಿಜ್ಞಾನ ಎಂಬುದರೊಳಗೆ ಅಜ್ಞಾನದ ಕಲ್ಲುಗಳಿರುತ್ತವೆ. ಅದು ಪರಂಪರೆಯ ಜ್ಞಾನಕ್ಕೆ ವಿರುದ್ಧವಾಗಿ ಮೀಸೆ ತಿರುವುತ್ತದೆ. ಭವಿಷ್ಯವನ್ನು ಹೊಸಕಿ ಹಾಕುತ್ತದೆ. ಹಸಿರುಹುಳು ತಾತ್ಕಾಲಿಕವಾಗಿ ಸೌಂದರ್ಯಭರಿತವಾಗಿ ಕಾಣುತ್ತದೆ ನಿಜ. ಅದರೊಳಗೆ ನಿಗೂಢ ಹೆಜ್ಜೆಗಳೂ ಇರುತ್ತವೆ. ಈ ನಿಸರ್ಗದ ಕೊಡುಗೆಯನ್ನು ಸವಿಯದೆ ಪ್ರಯೋಗಕ್ಕೆ ಹೊರಟ ಮಾದರಿಯೇ ಇಂದಿನ ಜಗದ ಅವಸ್ಥೆ. ಬ್ರಿಟಿಷರು ಈ ದೇಶದ ಜಗಲಿ ಮೇಲಿನ ಗ್ರಾಮೋದ್ಯೋಗವನ್ನು ನಾಶ ಮಾಡಿ ಹೊರಡುವಾಗ ಗಾಂಧೀಜಿ ‘ಚರಕದ ಸಂಕೇತದಲ್ಲಿ ದೇಶಕಟ್ಟಿ’ ಎಂದರು. ಕಾಂಗ್ರೆಸ್ಸಿಗೆ ತ್ರಿವರ್ಣ ಧ್ವಜ ಕೊಟ್ಟರು. ನಡುವೆ ಚರಕದ ಲಾಂಛನ ಇಟ್ಟರು. ಆಳುವ ವೀರರು ಅಶೋಕನ ಧರ್ಮಚಕ್ರ ತಂದರು. ಹಿಂದೂ ಧರ್ಮದ ಸಂಕೇತವೂ ಆಯಿತು. ಅದೇ ಸುದರ್ಶನ ಚಕ್ರವಾಗಿ ನಿಂತಿದೆ. ಸಾಮ್ರಾಟ ಸಿಂಹನ ಎದುರು, ಜನ ಹಾಗೂ ಜೀವಾನುಜೀವಿಗಳು ಕುರಿಗಳಾದರು.

ಆಗ ನೆಹರೂ ಆಲೋಚನೆಯಲ್ಲಿ ಇತರ ದೇಶಗಳೊಡನೆ ದೇಶ ಚಲಿಸಬೇಕಾಗಿತ್ತು. ಹಸಿವಿನ ಭಾರತಕ್ಕೆ ಅನ್ನ ಬೇಕಾಗಿತ್ತು. ಹಸಿರು ಕ್ರಾಂತಿ ಸಹಕರಿಸಿತು. ಕಡೆಗೆ ಅದೇ ಬ್ರಹ್ಮರಾಕ್ಷಸನಾಗಿ ನಿಂತುಬಿಟ್ಟಿದೆ. ಇಂದು ಹಳ್ಳಿಯಲ್ಲಿ ಪರಂಪರೆಯ ಬೇವು, ಗಂಜಲ, ಮರದತೆಪ್ಪೆ, ಸಹಜ ಔಷಧಿಗಳು ಮರೆತು ಹೋಗಿರುವುದಷ್ಟೇ ಅಲ್ಲ, ಕೀಟನಾಶಕ, ರಸಗೊಬ್ಬರ ಸುರಿಯದೆ ಬೆಳೆಯಲಾದೀತೆ ಎಂಬ ಅಜ್ಞಾನಕ್ಕೆ ರೈತ ಬಲಿಯಾಗಿದ್ದಾನೆ.

‘ಮಣ್ಣಿನಲ್ಲಿ ಸಸ್ಯಸಂಬಂಧಿ ಗೊಬ್ಬರವು ಇರುವಂತೆ ನೋಡಿಕೊಳ್ಳಬೇಕಾದುದು ಪ್ರಥಮಕಾರ್ಯ, ಬೆಳೆಗಳನ್ನು ಕೀಟನಾಶಕಗಳಿಂದ ರಕ್ಷಿಸುವುದು ಅವೈಜ್ಞಾನಿಕ ಮತ್ತು ಕೆಟ್ಟ ವಿಧಾನ’ ಎಂದು, ಸಾಂಪ್ರದಾಯಿಕ ಪ್ರಯೋಗಗಳನ್ನು ಆಧಾರವಾಗಿ ಇಟ್ಟುಕೊಂಡು 1924-31ರ ನಡುವೆ ‘ಪ್ರಾಣಿ ಮತ್ತು ಸಂತಾನೋತ್ಪತ್ತಿ’ ಬಗ್ಗೆ ಪ್ರಯೋಗ ನಡೆಸಿದ ಸರ್ ಆಲ್ಬರ್ಟ್ ಹೊವಾರ್ಡ್ ಇನ್ಸ್ಟಿಟ್ಯೂಟ್ ತೀರ್ಮಾನಿಸಿತ್ತು. ಡಾ. ರೆಂಚ್, ಲಾರ್ಡ್ನಾತ್ಬರ್ನ್ ಮುಂತಾದವರು ಸಾಂಪ್ರದಾಯಿಕ ರೈತಾಪಿ ಬಗ್ಗೆ ಒತ್ತಿ ಒತ್ತಿ ಹೇಳಿದರು.

ಆಗ ಜಗತ್ತು ಅಮೆರಿಕೆ ಸಹಿತವಾಗಿ ವಿಜ್ಞಾನದ ಅಮಲಿನಲ್ಲಿದ್ದ ಕಾರಣ, ಎಲ್ಲರ ಕಿವಿ ಮಂದವಾಗಿದ್ದವು. ಈಗ ಕಾಲ ಸರಿದಿದೆ. ರೈತಾಪಿ ಹತಾಶವಾಗಿದೆ. ನಿಸರ್ಗ ದೂಳೀಪಟವಾಗಿದೆ, ಈ ದೂಳೆಬ್ಬಿಸಿದ ಪಾಶ್ಚಾತ್ಯ ರಾಷ್ಟ್ರಗಳು ಪುನಃ ಹೊರಳು ದಾರಿಯಲ್ಲಿವೆ. ಭಾರತ ಸೇರಿದಂತೆ ಪೂರ್ವ ದೇಶಗಳು ‘ಅಜ್ಜಿ’ ಎಂಬ ರೂಪಕದಲ್ಲಿ ಶಿವ– ಪಾರ್ವತಿಯನ್ನು ಬೇಡುತ್ತಿಲ್ಲ. ಆ ದೇವರುಗಳು ಏನು ಮಾಡಿಯಾರು ಎಂದು ಹಮ್ಮಿನಲ್ಲಿ, ಅಭಿವೃದ್ಧಿ ಮೌಢ್ಯ ಮಂತ್ರ ಜಪಿಸುತ್ತಿವೆ. ‘ನನ್ನ ಗುರಿಯು ಯಂತ್ರಗಳ ನಿರ್ಮೂಲನ ಅಲ್ಲ, ಅವುಗಳ ಮಿತ ಬಳಕೆ’ ಎಂಬ ಗಾಂಧಿ ಮಾತನ್ನು ದೇಶವು ಕೇಳುವ ಸ್ಥಿತಿಯಲ್ಲಿಲ್ಲ.

ಆಧುನಿಕ ಯಂತ್ರಗಳು ಮನುಷ್ಯನ ಕೈಕಾಲುಗಳೇ ಕ್ಷೀಣಿಸುವಂತೆ ಮಾಡಿವೆ. ಸರ್ಕಾರಗಳು ಇದನ್ನೇ ಪೋಷಿಸುತ್ತಿವೆ. ಉಣ್ಣಲು ಕೊಡುತ್ತೇನೆ, ವೋಟು ಕೊಡಿ ಎಂಬುದನ್ನು ನಂಬಿದ ಮತದಾರರು ಭವಿಷ್ಯದ ಮೇಲೆ ಚಪ್ಪಡಿ ಎಳೆದುಕೊಳ್ಳಲಾರಂಭಿಸಿದ್ದಾರೆ. ಹಾಗಾದರೆ ಈ ದೇಶದ ಮುಂದಿನ ಗುರಿಯೇನು? ಪರಂಪರೆಯ ಕೃಷಿಗೆ ಪುನಃ ತೆರಳುವುದು. ಸಾಂಪ್ರದಾಯಿಕ ಕೃಷಿಯಲ್ಲಿ ಇಳುವರಿ ಕಡಿಮೆ ಎಂದು ಹೇಳುವುದು ಭ್ರಮೆ. ನಮ್ಮ ಹಿರಿಯರು ಸ್ಥಳೀಯ ಬೀಜಗಳನ್ನು ಸಂರಕ್ಷಿಸಿ ಈಗಿಗಿಂತ ಹೆಚ್ಚಾಗಿ ಬೆಳೆದು, ವಾಡೆ ತುಂಬಿ, ಹಗೇವು ತುಂಬಿ, ಮಳೆ ಬೆಳೆ ಹೋದರೆ ಮುಂದಿನ ವರ್ಷಕ್ಕಿರಲಿ ಎಂದು ಕಾಪಿಡುತ್ತಿದ್ದರು. ಇದನ್ನು ರೈತರು ಪುನಃ ನೆನಪಿಸಿಕೊಂಡರೆ, ಸರ್ಕಾರ ಹಾಗೂ ಸಮಾಜ ಆರೋಗ್ಯದಾಯಕ ಆಹಾರಕ್ಕೆ ಒಲಿದರೆ, ತಕ್ಕಮಟ್ಟಿಗೆ ಸುಧಾರಣೆ ಆಗಬಹುದಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.