ನಾವು ಸಾಗುತ್ತಿದ್ದ ರಸ್ತೆಯಲ್ಲಿ ಮಕ್ಕಳು ಆಟವಾಡುತ್ತಿದ್ದುದನ್ನು ಗಮನಿಸಿದ ಸ್ನೇಹಿತರೊಬ್ಬರು, ‘ನಮ್ಮನೆ ಹತ್ರನೂ ಹೀಗೇ... ರೋಡಲ್ಲೇ ಮಕ್ಳು ಆಟ ಆಡ್ತಾರೆ. ಬೆಳಿಗ್ಗೆಯಿಂದ ಸಂಜೆವರ್ಗೂ ಒಂದಲ್ಲ ಒಂದು ಆಟ ಆಡ್ತಾನೆ ಇರ್ತಾರೆ. ಅವ್ರ ಪಾಡಿಗೆ ಅವ್ರು ಆಡ್ಕೊಂಡಿದ್ರೆ ಪರ್ವಾಗಿಲ್ಲ. ಆದ್ರೆ ಸಿಕ್ಕಾಪಟ್ಟೆ ಗದ್ದಲ ಮಾಡ್ತಾರೆ. ಹೋಗಿ ಬೈದ್ರೆ, ಒಂದ್ಹೊತ್ತು ನಾಪತ್ತೆಯಾಗಿ ಮತ್ತೆ ಯಥಾಪ್ರಕಾರ ಆಡೋಕೆ ಶುರು ಮಾಡ್ತಾರೆ’ ಅಂತ ಅಸಮಾಧಾನ ವ್ಯಕ್ತಪಡಿಸಿದರು. ‘ಮತ್ತೆ ಸ್ಕೂಲು ಶುರುವಾದ್ರೆ ನಿಮ್ಮ ಸಮಸ್ಯೆ ಅದರ ಪಾಡಿಗದು ಇಲ್ಲವಾಗುತ್ತೆ ಬಿಡಿ’ ಅಂದೆ. ಅವರೂ ‘ಹೌದ್ಹೌದು’ ಅಂತ ತಲೆದೂಗಿದರು.

ಹಾಸನದಲ್ಲಿ ನಾವು ವಾಸಿಸುವ ಮನೆಯ ಹಿಂಭಾಗದಲ್ಲಿ ಇದ್ದ ಖಾಲಿ ನಿವೇಶನವನ್ನು ಮಕ್ಕಳು ಇತ್ತೀಚೆಗೆ ತಮ್ಮ ಪೋಷಕರ ಜೊತೆ ಸೇರಿ ಸ್ವಚ್ಛಗೊಳಿಸಿದರು. ಇದೀಗ ನಿವೇಶನವನ್ನು ಪುಟ್ಟ ಆಟದ ಮೈದಾನವನ್ನಾಗಿ ಪರಿವರ್ತಿಸಿರುವ ಮಕ್ಕಳು, ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ವೇಳೆ ಕ್ರಿಕೆಟ್ ಹಾಗೂ ಷಟಲ್ ಬ್ಯಾಡ್ಮಿಂಟನ್ ಆಡುತ್ತಾರೆ. ಮಕ್ಕಳು ಹೀಗೆ ಖಾಲಿ ನಿವೇಶನವನ್ನು ಆಟವಾಡಲು ಬಳಸತೊಡಗಿದ ನಂತರ, ಮನೆಬಳಕೆ ತ್ಯಾಜ್ಯ ಎಸೆಯಲು ಇದೇ ನಿವೇಶನವನ್ನು ಆಯ್ದುಕೊಂಡಿದ್ದವರು ತಮ್ಮ ಪ್ರವೃತ್ತಿಗೆ ಅಂತ್ಯ ಹಾಡಬೇಕಾದ ಸಂದರ್ಭವೂ ಬಂದೊದಗಿದೆ. ತಾವು ಆಟವಾಡತೊಡಗಿದ ಮೇಲೂ ಕಸ ಎಸೆಯುವುದನ್ನು ಮುಂದುವರಿಸಿದವರ ಮೇಲೆ ಮಕ್ಕಳು ಅಸಮಾಧಾನ ತೋರ್ಪಡಿಸಿದ ಮೇಲೆ ಕಸ ವಿಲೇವಾರಿಗೆ ನಿವೇಶನ ಬಳಕೆಯಾಗುವುದು ನಿಂತಿದೆ.

ಕೊರೊನಾ ಕಾರಣಕ್ಕೆ ಮನೆಯಲ್ಲೇ ಉಳಿಯಬೇಕಾದ ಸಂದರ್ಭ ಎದುರಾದ ನಂತರ, ಮಕ್ಕಳು ತಮ್ಮನ್ನು ಆವರಿಸಿದ ಬೇಸರ ಮತ್ತು ಏಕತಾನತೆಯಿಂದ ಪಾರಾಗಲು ಸಹಜವಾಗಿಯೇ ಆಟದ ಮೊರೆ ಹೋದರು. ನಗರಗಳು ಬೆಳೆದಂತೆ ಕಣ್ಮರೆಯಾಗತೊಡಗಿರುವ ಖಾಲಿ ನಿವೇಶನಗಳು ಮಕ್ಕಳ ಆಡುವ ಆಸೆಗೆ ತಡೆ ಒಡ್ಡುತ್ತಿರುವುದು ಕೂಡ ಈ ಸಂದರ್ಭದಲ್ಲಿ ಢಾಳಾಗಿಯೇ ಗೋಚರಿಸುತ್ತಿದೆ.

ನಗರಗಳು ಬೆಳೆದರೂ ಹೆಚ್ಚಳವಾಗದ ಆಟದ ಮೈದಾನಗಳ ಸಂಖ್ಯೆ ಬಾಧಿಸುತ್ತಿರುವುದು ಮಕ್ಕಳನ್ನಷ್ಟೇ ಅಲ್ಲ. ವಾಯುವಿಹಾರ ಮತ್ತು ವ್ಯಾಯಾಮ ಮಾಡಲು ಹೊರಡುವ ಎಲ್ಲರಿಗೂ ಅದಕ್ಕೆ ಪೂರಕ ವಾತಾವರಣವಿರುವ ಸ್ಥಳ ಹುಡುಕುವುದೇ ಸವಾಲಾಗಿದೆ.

ಕೊರೊನಾ ಸೋಂಕು ವ್ಯಾಪಿಸುವ ಮುನ್ನ ಜಿಮ್ನಲ್ಲಿ ದೇಹ ದಂಡಿಸುತ್ತಿದ್ದ ಸ್ನೇಹಿತರೊಬ್ಬರು, ಇದೀಗ ಜಿಮ್ ತೊರೆದು ನಡಿಗೆಯ ಮೊರೆ ಹೋಗಿದ್ದಾರೆ. ಕೊರೊನಾ ನೆಪ ಮುಂದೊಡ್ಡಿ, ಮನೆ ಎದುರೇ ಇರುವ ಪದವಿ ಕಾಲೇಜು ಮೈದಾನದಲ್ಲಿ ವಾಯುವಿಹಾರ ನಡೆಸಲು ಸಾರ್ವಜನಿಕರಿಗೆ ಕಾಲೇಜು ಆಡಳಿತ ಮಂಡಳಿ ಅನುಮತಿ ನಿರಾಕರಿಸುತ್ತಿರುವುದರಿಂದ ಅವರು ಜಿಲ್ಲಾ ಕ್ರೀಡಾಂಗಣಕ್ಕೆ ತೆರಳುತ್ತಿದ್ದಾರೆ. ಅಲ್ಲೂ ಹೊಸದಾಗಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಿಸಲು ಮುಂದಾಗಿರುವುದರಿಂದ ಇನ್ನು ಮುಂದೆ ವಾಯುವಿಹಾರಕ್ಕೆ ಸ್ಥಳಾವಕಾಶ ದೊರೆಯುವುದೇ ಅನುಮಾನವೆಂದು ಅಳಲು ತೋಡಿಕೊಂಡರು.

ಕೊರೊನಾ ನಂತರ ಕೆಲ ಶಾಲಾ-ಕಾಲೇಜುಗಳು ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರತೊಡಗಿರುವುದರಿಂದ ಅಲ್ಲಿನ ಆಟದ ಮೈದಾನಗಳನ್ನು ವಾಯುವಿಹಾರ ಮತ್ತು ಆಟಕ್ಕೆ ಬಳಸುತ್ತಿದ್ದವರು ಸೂಕ್ತ ಪರ್ಯಾಯ ಸ್ಥಳ ಸಿಗದೆ ಪರಿತಪಿಸುತ್ತಿದ್ದಾರೆ. ಬೆರಳೆಣಿಕೆಯಷ್ಟು ಸಂಖ್ಯೆಯಲ್ಲಿರುವ ಪಾರ್ಕುಗಳಲ್ಲಿ ಬೆಳಿಗ್ಗೆ ಮತ್ತು ಸಂಜೆ ವೇಳೆ ಜನಜಂಗುಳಿಯೇ ನೆರೆದಿರುತ್ತದೆ. ಕೆಲವೆಡೆ ಅಭಿವೃದ್ಧಿ ಹಂತದಲ್ಲಿರುವ ಲೇಔಟ್ಗಳು ವಾಯುವಿಹಾರಿಗಳ ಪಾಲಿಗೆ ಹೊಸ ಆಶಾಕಿರಣವಾಗಿ ಗೋಚರಿಸತೊಡಗಿವೆ.

ಆಗಾಗ ನಾನು ವಾಯುವಿಹಾರಕ್ಕೆ ತೆರಳುವ ಮನೆ ಸಮೀಪದ ಕೆರೆ ಏರಿ ಮೇಲೆ ಅರಳಿ ಮರವಿದೆ. ಮೊದಲಿಗೆ ಕೆಲವರು ದೇವರ ಫೋಟೊಗಳನ್ನು ತಂದು ಅದರ ಅಡಿ ಇಡತೊಡಗಿದರು. ಆನಂತರ ಒಬ್ಬರು ಕಲ್ಲಿನ ವಿಗ್ರಹವನ್ನೇ ತಂದಿಟ್ಟರು. ಇದೀಗ ವಾಯುವಿಹಾರಕ್ಕೆಂದು ಬರುವ ಕೆಲವರು ಆ ವಿಗ್ರಹಕ್ಕೆ ಹೂ ಮುಡಿಸಿ ಪೂಜಿಸುತ್ತಾರೆ. ಹೀಗೆ ಅರಳಿ ಮರವನ್ನು ಪೂಜಾ ಸ್ಥಳವನ್ನಾಗಿ ಪರಿವರ್ತಿಸಿರುವ ಕೆಲವರು, ತಮ್ಮದೇ ತಂಡ ಕಟ್ಟಿಕೊಂಡು ಅರಳಿ ಮರದ ಸುತ್ತ ಕಾಂಪೌಂಡ್ ನಿರ್ಮಿಸಿ, ಅದಕ್ಕೊಂದು ಗುಡಿಯ ಸ್ವರೂಪ ನೀಡಲು ಸನ್ನದ್ಧರಾಗಿದ್ದಾರೆ. ಮುಂಬರುವ ದಿನಗಳಲ್ಲಿ, ಈಗ ವಾಯುವಿಹಾರಕ್ಕೆ ಬಳಕೆಯಾಗುತ್ತಿರುವ ಕೆರೆ ಏರಿಯು ಧಾರ್ಮಿಕ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗುವ ಸನ್ನಿವೇಶವೂ ನಿರ್ಮಾಣವಾಗುತ್ತಿದೆ. ಅಲ್ಲೇ ಸಮೀಪದಲ್ಲೇ ಎರಡು ದೇವಸ್ಥಾನಗಳಿದ್ದರೂ, ವಾಯುವಿಹಾರಕ್ಕೆ ಸೂಕ್ತ ಸ್ಥಳ ದೊರಕದೆ ಜನ ರಸ್ತೆಗಳನ್ನೇ ಆಶ್ರಯಿಸುವ ಪರಿಸ್ಥಿತಿ ಇರುವಾಗಲೂ ಜನರ ಆದ್ಯತೆ ದೇವಾಲಯ ನಿರ್ಮಾಣವೇ ಆಗಿರುವುದು ವಿಪರ್ಯಾಸ.

ಒಂದೆಡೆ ಪುಟ್ಟ ಮಕ್ಕಳು ಖಾಲಿ ನಿವೇಶನವನ್ನು ಆಟದ ಮೈದಾನವನ್ನಾಗಿ ರೂಪಿಸಿಕೊಳ್ಳಲು ಮುತುವರ್ಜಿ ತೋರಿದರೆ, ಮತ್ತೊಂದೆಡೆ ದೊಡ್ಡವರು ವಾಯುವಿಹಾರಕ್ಕೆ ಬಳಕೆಯಾಗುತ್ತಿರುವ ಕೆರೆ ಏರಿಯನ್ನೇ ಪೂಜಾ ಸ್ಥಳವನ್ನಾಗಿ ಪರಿವರ್ತಿಸಲು ಮುನ್ನುಗ್ಗುತ್ತಿರುವುದು ನಾಗರಿಕ ಸಮಾಜದ ವರ್ತಮಾನದ ಆದ್ಯತೆಗಳಿಗೆ ಹಿಡಿದ ಕನ್ನಡಿಯಂತೆಯೂ ತೋರುತ್ತಿದೆ.

ಹಿರಿಯರು ಮಕ್ಕಳ ಎದುರು ಇಡುತ್ತಿರುವ ಈ ‘ಮಾದರಿ’ ಸಮಾಜಮುಖಿಯಾದುದೇ? ಕಂಡಕಂಡಲ್ಲಿ ದೇವಾಲಯ ನಿರ್ಮಿಸಲು ತೋರುವ ಮುತುವರ್ಜಿಯನ್ನು ಆಟದ ಮೈದಾನ ಮತ್ತು ಉದ್ಯಾನಗಳ ಸಂಖ್ಯೆ ಹೆಚ್ಚಳಕ್ಕೂ ತೋರಬೇಕಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.