ಮದ್ಯವ್ಯಸನಿಗಳ ಮಕ್ಕಳಿಗಾಗಿಯೇ ಮೀಸಲಾದ ರಾಷ್ಟ್ರೀಯ ಸಂಸ್ಥೆ ‘ನ್ಯಾಷನಲ್ ಅಸೋಸಿಯೇಷನ್ ಫಾರ್ ಚಿಲ್ಡ್ರನ್ ಆಫ್ ಆಲ್ಕೊಹಾಲಿಕ್ಸ್’ ಫೆಬ್ರುವರಿ 12ರಿಂದ 18ರವರೆಗಿನ ದಿನಗಳನ್ನು ‘ಮದ್ಯವ್ಯಸನಿಗಳ ಮಕ್ಕಳ ದಿನ’ (ಚಿಲ್ಡ್ರನ್ ಆಫ್ ಆಲ್ಕೊಹಾಲಿಕ್ಸ್ ವೀಕ್) ಎಂದು ಆಚರಿಸುತ್ತದೆ. ವಾರ್ಷಿಕವಾಗಿ ನಡೆಸುವ ಈ ಆಚರಣೆಯಲ್ಲಿ ಈ ಮಕ್ಕಳ ಅದುಮಿಟ್ಟ ವ್ಯಥೆಯ ಬಗ್ಗೆ, ದೈನಂದಿನ ಜೀವನದ ಕಷ್ಟಗಳ ಬಗ್ಗೆ ಹೆಚ್ಚು ಹೆಚ್ಚು ಅರಿವನ್ನು ಮೂಡಿಸುವ ಮತ್ತು ಸಹಾಯ ನೀಡುವ ಕೆಲಸಗಳು ನಡೆಯುತ್ತವೆ.

ರಾಷ್ಟ್ರೀಯ ಮಾನಸಿಕ ಆರೋಗ್ಯ ವರದಿ– 2015ರ ಪ್ರಕಾರ, ಭಾರತದಲ್ಲಿ ಶೇ 29ರಷ್ಟು ವ್ಯಕ್ತಿಗಳು ಮದ್ಯ ಸೇವನೆಯ ಸಮಸ್ಯೆಗಳಿಂದ ಬಳಲುತ್ತಾರೆ. ವರ್ಷದಲ್ಲಿ ಆಗುವ ಎಲ್ಲಾ ಬಗೆಯ ರಸ್ತೆ ಅಪಘಾತಗಳ ಕಾರಣ ನೋಡಿದರೆ, ಇದರಲ್ಲಿ ಸುಮಾರು ಶೇ 33ರಷ್ಟು ಮದ್ಯದ ಅಮಲಿನಲ್ಲಿ ಆಗಿರುತ್ತವೆ. ಯಕೃತ್ತಿನ ಸಮಸ್ಯೆಗಳಿಗೆ ಶೇ 54ರಷ್ಟು ಕಾರಣ ಮದ್ಯವೇ ಆಗಿದೆ. ಈ ಎಲ್ಲಾ ಸಮಸ್ಯೆಗಳು ವರದಿಗಳಲ್ಲಿ, ಅಧ್ಯಯನಗಳಲ್ಲಿ ಲೆಕ್ಕಕ್ಕೆ ಸಿಗುವ, ಕಣ್ಣಿಗೆ ಕಾಣುವಂಥವು. ಆದರೆ ಮದ್ಯವ್ಯಸನಿಗಳ ಮನೆಯಲ್ಲಿರುವ ಮಕ್ಕಳಿರುತ್ತಾರಲ್ಲಾ, ಅವರ ಮಾನಸಿಕ, ಭಾವನಾತ್ಮಕ ತೊಂದರೆಗಳು ಬೆಳಕಿಗೆ ಬರುವುದೇ ಇಲ್ಲ.

ಪುಟ್ಟ ಮಕ್ಕಳ ಬೆಳವಣಿಗೆಯ ಮೇಲೆ ಪೋಷಕರ ಮದ್ಯವ್ಯಸನವು ಅಪಾರವಾದ ದುಷ್ಪರಿಣಾಮ ಬೀರಬಲ್ಲದು. ದುಡಿಯುವ ತಂದೆ ಮದ್ಯವ್ಯಸನದಲ್ಲಿ ಮುಳುಗಿದರೆ, ದೈನಂದಿನ ಜೀವನದ ಅಗತ್ಯಗಳನ್ನು ಪೂರೈಸುವುದೇ ಕಷ್ಟವಾಗುತ್ತದೆ. ಇನ್ನು ಅಮಲಿನಲ್ಲಿರುವ ತಂದೆಯು ಮಕ್ಕಳ ಭಾವನಾತ್ಮಕ ಬೇಡಿಕೆಗಳಾದ ಪ್ರೀತಿ, ಕಾಳಜಿ, ಬೆಂಬಲವನ್ನು ನೀಡಬಲ್ಲನೇ?

ಪ್ರತಿದಿನ ಕುಡಿದು ಬರುವ ತಂದೆ, ತಾಯಿ-ತಂದೆಯ ಜಗಳ, ತಮಗೆ ಆಗಾಗ ಬೀಳುವ ಪೆಟ್ಟುಗಳ ಜೊತೆಗೆ ಮನೆಯ ಹದಗೆಟ್ಟ ವಾತಾವರಣವನ್ನು ನೋಡಿ ಮಕ್ಕಳಿಗೆ ಸಾಕಾಗಿರುತ್ತದೆ. ಇವರ ಮೇಲೆ ನಡೆಸಿದ ಮನಃಶಾಸ್ತ್ರೀಯ ಅಧ್ಯಯನದ ಪ್ರಕಾರ, ಸುಮಾರು ಶೇ 10-20ರಷ್ಟು ಮಕ್ಕಳಲ್ಲಿ ಆತಂಕ, ಖಿನ್ನತೆಯ ಲಕ್ಷಣಗಳಿರುತ್ತವೆ. ಹಾಗೆಯೇ ವರ್ತನಾ ಸಮಸ್ಯೆಗಳು, ಶಾಲೆಗೆ ಹೋಗದಿರುವುದೂ ಇದರಲ್ಲಿ ಸೇರಿರಬಹುದು. ಹೆಣ್ಣುಮಕ್ಕಳಲ್ಲಿ ಆತಂಕ, ಖಿನ್ನತೆ ಕಾಣಿಸಿಕೊಂಡರೆ, ಗಂಡು ಮಕ್ಕಳಲ್ಲಿ ಸಿಟ್ಟು, ಹಟ, ಕಳ್ಳತನದಂತಹ ಬಾಹ್ಯ ಸ್ವರೂಪದ ಸಮಸ್ಯೆಗಳನ್ನು ಕಾಣಬಹುದು. ಈ ಮಕ್ಕಳು ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಮದ್ಯ, ಮಾದಕವಸ್ತು ಸೇವನೆ ಪ್ರಾರಂಭಿಸಬಹುದು.

ಮದ್ಯ ಸಂಬಂಧಿ ಸಮಸ್ಯೆಗಳು ಬರೀ ಒಬ್ಬ ವ್ಯಕ್ತಿಗೆ ಸೀಮಿತವಲ್ಲ. ಆ ವ್ಯಕ್ತಿಯ ಇಡೀ ಕುಟುಂಬವೇ ನರಳುತ್ತದೆ. ಅದರಲ್ಲೂ ಇನ್ನೂ ಮೊಗ್ಗಾಗಿದ್ದು ಮುಂದೆ ಅರಳಬೇಕಿರುವ ಮಕ್ಕಳಂತೂ ಈ ಆಘಾತಕ್ಕೆ ನಲುಗಿ, ಬಾಡಿ ಹೋಗಬಹುದು. ಕೆಲವೊಮ್ಮೆ ಇಬ್ಬರು ಪೋಷಕರೂ ಮದ್ಯವ್ಯಸನಿಗಳಾಗಿರಬಹುದು. ಆಗಂತೂ ಮಕ್ಕಳ ಆರೈಕೆ ಸಂಪೂರ್ಣ ಹಿಂಬದಿಗೆ ಸರಿಯುತ್ತದೆ. ಮಕ್ಕಳ ಮೇಲಿನ ದೌರ್ಜನ್ಯದ ಒಂದು ವಿಧ ಇದು.

ಭಾರತದಲ್ಲಿ ಮದ್ಯ ಸೇವಿಸುವುದನ್ನು ಹೇಳಿಕೊಳ್ಳುವುದು ಹಲವರಿಗೆ ನಾಚಿಕೆಯ ಸಂಗತಿ. ಹಾಗಾಗಿ, ಇಡೀ ಕುಟುಂಬ ತುಂಬಾ ದಿನಗಳ ತನಕ, ಈ ಚಟದ ಗುಟ್ಟು ಬಿಟ್ಟುಕೊಡುವುದಿಲ್ಲ. ‘ಅಪ್ಪ ಕುಡಿಯುತ್ತಾನೆ, ಅಮ್ಮನಿಗೆ ಹೊಡೆಯುತ್ತಾನೆ, ಆಗಾಗ ನನಗೂ ಹೊಡೆತ ಬೀಳುತ್ತದೆ’ ಎಂಬುದೆಲ್ಲವೂ ಗೊತ್ತಿದ್ದರೂ ತನಗೆ ಕಷ್ಟ ಆಗುತ್ತಿದ್ದರೂ ಮಗು ಯಾರಿಗೂ ಹೇಳುವುದಿಲ್ಲ. ಕೆಲವೊಮ್ಮೆ ಎಳೆಯ ಮಕ್ಕಳು ಮನೆಯಲ್ಲಿ ನಡೆಯುವ ಈ ಎಲ್ಲಾ ರಾದ್ಧಾಂತಗಳಿಗೆ ತಾವೇ ಕಾರಣ ಎಂದು ಬೇಸರಪಟ್ಟುಕೊಳ್ಳಲು ಪ್ರಾರಂಭಿಸುತ್ತಾರೆ. ಅದರಿಂದ ಅವರು ಖಿನ್ನತೆಗೆ ಒಳಗಾಗಬಹುದು. ಮನೆಯಲ್ಲಿ ಈ ಗಲಾಟೆಗಳನ್ನು ನೋಡಿ ರೋಸಿಹೋದ ಮಕ್ಕಳು, ಅದರಲ್ಲೂ ಹದಿಹರೆಯದವರು, ಯಾವಾಗಲೂ ಕೋಪದಲ್ಲಿ ಇರುವುದೂ ಇದೆ. ‘ಕೋಪ ಯಾರ ಮೇಲೆ’ ಎಂಬುದು ಅವರಿಗೇ ಅರ್ಥವಾಗುವುದಿಲ್ಲ. ತನ್ನನ್ನು ಈ ಪರಿಸ್ಥಿತಿಗೆ ತಳ್ಳಿದ ಪೋಷಕರ ಮೇಲಷ್ಟೇ ಅಲ್ಲದೆ, ಇಡೀ ಜಗತ್ತಿನ ಮೇಲೇ ಸಿಟ್ಟು ಇದ್ದಂತಿರುತ್ತದೆ.

ಹಾಗಾದರೆ ಇದಕ್ಕೆ ಪರಿಹಾರವೇನು? ಮದ್ಯವ್ಯಸನಿಗಳ ಮಕ್ಕಳಿಗೆ ಪ್ರೀತಿ, ಕಾಳಜಿ, ಸಹಾಯದ ಅಗತ್ಯವಿದೆ. ಅನುಕಂಪ ತೋರಿಸಿದರೆ ಬೇಸರವಾಗುತ್ತದೆ. ಅವರ ಮುಂದೆ ಪೋಷಕರನ್ನು ಹೀಯಾಳಿಸುವ ಕೆಲಸವನ್ನು ಖಂಡಿತ ಮಾಡಬಾರದು. ಈ ಮಕ್ಕಳಿಗೆ ಮನೆಯಲ್ಲಿ ಎಲ್ಲರೂ ಇದ್ದೂ, ಭಾವನಾತ್ಮಕವಾಗಿ ಯಾರೂ ಲಭ್ಯವಿರುವುದಿಲ್ಲ. ಅವರ ಮಾತುಗಳನ್ನು, ಸಮಸ್ಯೆಗಳನ್ನು ಸಮಾಧಾನದಿಂದ ಆಲಿಸಬೇಕು. ಶಾಲೆಯ ಶಿಕ್ಷಕರು ಅಥವಾ ಶಾಲೆಯಲ್ಲಿರುವ ಕೌನ್ಸಿಲರ್ ಅಥವಾ ಸ್ನೇಹಿತರಾಗಿ ಯಾರೂ ಈ ಕೆಲಸ ನಿರ್ವಹಿಸಬಹುದು. ಸರ್ಕಾರದಿಂದ ಈ ಮಕ್ಕಳಿಗಾಗಿಯೇ ವಿಶೇಷವಾದ ಸಹಾಯವಾಣಿಗಳೇನೂ ಇದ್ದ ಹಾಗಿಲ್ಲ. ಆದರೆ ಮಕ್ಕಳ ಸಹಾಯವಾಣಿಯಾದ 1098ನ್ನೇ ಉಪಯೋಗಿಸಬಹುದು. ಸರ್ಕಾರ ತನ್ನ ಆರೋಗ್ಯ ಕಾರ್ಯಕ್ರಮಗಳಲ್ಲಿ, ಈ ಮಕ್ಕಳಿಗಾಗಿ ವಿಶೇಷ ಯೋಜನೆಗಳನ್ನು ರೂಪಿಸಬೇಕು. ಬಹಳಷ್ಟು ಸ್ವಯಂ ಸೇವಾ ಸಂಸ್ಥೆಗಳು ಈ ದಿಸೆಯಲ್ಲಿ ಕಾರ್ಯಕ್ರಮಗಳನ್ನು ಮಾಡುತ್ತಿವೆ.

ಪುಟ್ಟ ಮಕ್ಕಳೇನೂ ಪೋಷಕರ ಮದ್ಯವ್ಯಸನಕ್ಕೆ ಕಾರಣರಲ್ಲ. ಅದು, ಅವರ ನಿಯಂತ್ರಣದಲ್ಲೂ ಇಲ್ಲ. ಹಾಗಿದ್ದ ಮೇಲೆ ಈ ಮಕ್ಕಳದೇನು ತಪ್ಪು? ಅವರೂ ಎಲ್ಲರಂತೆ ಸಂತಸದಿಂದ ಇರುವಂತೆ ನೋಡಿಕೊಳ್ಳುವುದು ನಮ್ಮ, ಅಂದರೆ ಸಮಾಜದ ಕರ್ತವ್ಯವಲ್ಲವೇ?

ಲೇಖಕಿ: ಮನೋವೈದ್ಯೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.