ಕೊಪ್ಪಳ ಜಿಲ್ಲೆಯ ಹಲಿಗೇರಿ ಗ್ರಾಮದಲ್ಲಿ, ಮನೆಯ ಪಕ್ಕದಲ್ಲಿರುವ ಕ್ಷೌರದಂಗಡಿಯಲ್ಲಿ ಪರಿಶಿಷ್ಟರಿಗೆ ಕ್ಷೌರ ಮಾಡಿದರೆ ಮೈಲಿಗೆಯಾಗುತ್ತದೆ ಎಂಬ ಕಾರಣದಿಂದ ಕ್ಷೌರದಂಗಡಿಗಳನ್ನೇ ಮುಚ್ಚಲಾಯಿತು ಎಂಬ ಸುದ್ದಿ
ಯನ್ನು ಪತ್ರಿಕೆಗಳಲ್ಲಿ ಓದಿ ಬೇಸರವೆನಿಸಿತು. ಪರಿಶಿಷ್ಟರಿಗೆ ಕ್ಷೌರ ಮಾಡಲು ತಮ್ಮ ಅಭ್ಯಂತರವಿಲ್ಲ, ಆದರೆ ಮನೆಯ ಪಕ್ಕದಲ್ಲೇ ಅಂಗಡಿ ಇರುವುದರಿಂದ ತೊಂದರೆಯಾಗುತ್ತಿದೆ, ಗ್ರಾಮ ಪಂಚಾಯಿತಿ ಪ್ರತ್ಯೇಕ ಜಾಗ ಕೊಟ್ಟರೆ ಮಾಡುತ್ತೇವೆ ಎಂದು ಕ್ಷೌರಿಕರು ಹೇಳಿದ್ದಾರೆ.

ಸರಿ, ಮನೆಯ ಪಕ್ಕದಲ್ಲಿ ಕ್ಷೌರ ಮಾಡಲು ತೊಂದರೆ ಆಗುತ್ತದೆ, ಬೇರೆ ಜಾಗ ಕೊಡಿ ಅಂದರೆ ತಪ್ಪೇನಿಲ್ಲ. ಆದರೆ ಇಲ್ಲಿ ಅವರಿಗೆ ತೊಂದರೆಯಾಗುತ್ತಿರುವುದು ಪರಿಶಿಷ್ಟರು ಮನೆಯ ಹತ್ತಿರ ಬರುವುದರಿಂದ! ಅರೆ, ಪರಿಶಿಷ್ಟರಲ್ಲದವರಿಗೆ ಮನೆಯ ಪಕ್ಕವೇ ಕ್ಷೌರ ಮಾಡಿದಾಗ ಆಗದ ಸಮಸ್ಯೆ ಪರಿಶಿಷ್ಟರಿಗೆ ಮಾಡಿದಾಗ ಮಾತ್ರ ಆಗುವುದು ಹೇಗೆ?

ಇದೇ ಜಿಲ್ಲೆಯಲ್ಲಿ ಮೂರು ವರ್ಷಗಳ ಹಿಂದಷ್ಟೇ ಎರಡು ವರ್ಷದ ಮಗು ದೇವಸ್ಥಾನದೊಳಗೆ ಪ್ರವೇಶಿ
ಸಿದ್ದಕ್ಕೆ ಅಪ್ಪನಿಗೆ ಇಪ್ಪತ್ತೈದು ಸಾವಿರ ರೂಪಾಯಿ ದಂಡ ಹಾಕಲಾಗಿತ್ತು! ಹಿಂದಿನ ಆಗಸ್ಟ್ನಲ್ಲಿ, ಪರಿಶಿಷ್ಟ ಜಾತಿಗೆ ಸೇರಿದ ಇಪ್ಪತ್ತೊಂದು ವರ್ಷದ ಒಬ್ಬ ಮಹಿಳೆಯನ್ನು ಪರಿಶಿಷ್ಟ ಪಂಗಡಕ್ಕೆ ಸೇರಿದ ಗಂಡನ ಮನೆಯವರೇ ಸಾಯಿಸಿದ್ದರು! ಅವಳಿಗೆ ಪ್ರಾಣಿಗಳೂ ವಾಸಿಸಲು ಆಗದಂತಹ ಶೆಡ್ ಒಂದನ್ನು ಉಳಿಯಲು ನೀಡಲಾಗಿತ್ತು. ಅವಳು ಮಾಡಿದ ಅಡುಗೆಯನ್ನು ಅತ್ತೆ, ಮಾವ ತಿನ್ನುತ್ತಿರಲಿಲ್ಲವಾದ್ದರಿಂದ ಆಕೆ ಅಡುಗೆಯನ್ನೂ ಬೇರೆಯಾಗಿಯೇ ಮಾಡಿಕೊಂಡು ತಿನ್ನಬೇಕಿತ್ತು.

‘ಅವಳನ್ನು ನಮ್ಮ ಜಾತಿಗೆ ಸೇರಿಸಿಕೊಳ್ಳುತ್ತೇವೆ, ನಂತರ ಆಕೆ ನಿಮ್ಮ ಸಂಪರ್ಕ ಮಾಡುವಂತಿಲ್ಲ’ ಎಂದು ಆಕೆಯ ತವರು ಮನೆಯವರಿಗೆ ಹೇಳಲಾಗಿತ್ತು. ಐದೇ ಕಿಲೊಮೀಟರ್ ದೂರದಲ್ಲಿರುವ ಅಜ್ಜಿಯನ್ನೂ ಭೇಟಿ ಮಾಡಲು ಆ ಹುಡುಗಿಗೆ ಅವಕಾಶ ನೀಡಿರಲಿಲ್ಲ. ಅಪ್ಪ– ಅಮ್ಮ ಬಂದಾಗಲೂ ಬಲವಂತದಿಂದ
ಹೊರಕಳಿಸಲಾಗಿತ್ತು.

ವಿದ್ಯಾಕಾಶಿ ಧಾರವಾಡದ ಕುಂದಗೋಳ ತಾಲ್ಲೂಕಿನ ರೊಟ್ಟಿಗವಾಡ ಗ್ರಾಮದ ಯುವಕರು ಹಿಂದಿನ ವರ್ಷದ ಡಿಸೆಂಬರ್ನಲ್ಲಿ ಪ್ರತಿಭಟನೆ ಮಾಡಿದರು. ಕಾರಣವೇನೆಂದರೆ, ಅಲ್ಲಿನ ಕ್ಷೌರಿಕರು ಅವರಿಗೆ ಕ್ಷೌರ ಮಾಡುತ್ತಿರಲಿಲ್ಲ, ಮಾಡಲೇಬೇಕು ಎಂದರೆ ಐನೂರು ರೂಪಾಯಿ ವಸೂಲಿ ಮಾಡುತ್ತಿದ್ದರು. ಅಷ್ಟೇ ಅಲ್ಲ, ಕೆಲವು ಹೋಟೆಲುಗಳಲ್ಲಿ ಕುರ್ಚಿಯ ಬದಲು ಮೆಟ್ಟಿಲುಗಳ ಮೇಲೆ ಕೂರಲು ಹೇಳುತ್ತಾರೆಂದೂ ಆ ಯುವಕರು ದೂರಿದ್ದರು.

ದೊಡ್ಡಬಳ್ಳಾಪುರದ ಪರಿಶಿಷ್ಟ ಸಮುದಾಯದ ಯುವಕನೊಬ್ಬ ಫೆಬ್ರುವರಿಯಲ್ಲಿ ಪೊಲೀಸ್ ರಕ್ಷಣೆಯೊಂದಿಗೆ ಕ್ಷೌರ ಮಾಡಿಸಿಕೊಳ್ಳಬೇಕಾಯಿತು. ಕಾರಣ ಮತ್ತೆ ಅದೇ! ಪರಿಶಿಷ್ಟರ ಕೂದಲನ್ನು ಕತ್ತರಿಸಲು ನಕಾರ. ಮಂಡ್ಯದ ಚೀರನಹಳ್ಳಿ ಗ್ರಾಮದ ಬೀರೇಶ್ವರ ದೇವಾಲಯವನ್ನು ಪರಿಶಿಷ್ಟ ಸಮುದಾಯದವರು ಈ ವರ್ಷದ ಮಾರ್ಚ್ನಲ್ಲಿ ಪ್ರವೇಶಿಸಿದರು. ನೂರಾರು ವರ್ಷ ಹಳೆಯದಾಗಿರುವ ಈ ದೇವಸ್ಥಾನದ ಒಳಗೆ ಪರಿಶಿಷ್ಟರಿಗೆ ಪ್ರವೇಶವಿರಲಿಲ್ಲ. ಅಷ್ಟೇ ಅಲ್ಲ, ದೇವಸ್ಥಾನದ ಜಾತ್ರೆಯ ಮೆರವಣಿಗೆಗೂ ಅವರು ಬರುವಂತಿರಲಿಲ್ಲ! ಕೆಲವು ಹೋರಾಟಗಾರರ ಮಧ್ಯಪ್ರವೇಶ ಹಾಗೂ ಸರ್ಕಾರದ ಆದೇಶದ ಮೇರೆಗೆ ಅಂತೂ ಈ ದೇವಾಲಯದ ಬಾಗಿಲು ಈ ವರ್ಷ ಪರಿಶಿಷ್ಟರಿಗೆ ತೆರೆದಿದೆ!

ಜಾತಿಯ ಕಾರಣದಿಂದ ಮನುಷ್ಯರನ್ನು ಮನುಷ್ಯರಿಂದ ಬೇರ್ಪಡಿಸುವ ಅಸ್ಪೃಶ್ಯತೆಯ ಈ ಅಮಾನವೀಯ ಅಭ್ಯಾಸವು ಮುಂದುವರಿದ ರಾಜ್ಯವೆಂದು ಹೆಸರು ಪಡೆದ ಕರ್ನಾಟಕದ ಎಲ್ಲ ಭಾಗಗಳಲ್ಲೂ ಹೇಗೆ ವ್ಯಾಪಕವಾಗಿ ಹರಡಿದೆ ಎನ್ನುವುದಕ್ಕೆ ಈ ಮೇಲಿನವು ಕೆಲವೇ ಕೆಲವು ಉದಾಹರಣೆಗಳಷ್ಟೇ.

ಅಸ್ಪೃಶ್ಯತೆಯ ಪ್ರಕರಣವೊಂದರಲ್ಲಿ ಇತ್ತೀಚೆಗಷ್ಟೇ 101 ಮಂದಿಗೆ ಶಿಕ್ಷೆ ವಿಧಿಸಿದ ಕೊಪ್ಪಳ ಜಿಲ್ಲಾ ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ಆಫ್ರೋ ಅಮೆರಿಕನ್ ಹಾಡುಗಾರ್ತಿ ಮರಿಯನ್ ಆ್ಯಂಡರ್ಸನ್ ಅವರ ಹೇಳಿಕೆಯನ್ನು ಉಲ್ಲೇಖಿಸಿದ್ದರು. ಮರಿಯನ್ ಹೇಳುತ್ತಾರೆ, ‘ಒಂದು ದೇಶ ಎಷ್ಟೇ ದೊಡ್ಡದಾಗಿರಲಿ, ಅದರ ಅತ್ಯಂತ ದುರ್ಬಲ ಪ್ರಜೆಗಳಿಗಿಂತ ಬಲಿಷ್ಠವಾಗಲು ಸಾಧ್ಯವೇ ಇಲ್ಲ. ನೀವು ಒಬ್ಬ ವ್ಯಕ್ತಿಯನ್ನು ಎಲ್ಲಿಯವರೆಗೆ ಕೆಳಗೇ ಇಟ್ಟಿರುತ್ತೀರೋ, ಅಲ್ಲಿಯವರೆಗೆ ನಿಮ್ಮದೊಂದು ಭಾಗವನ್ನೂ ನೀವು ಕೆಳಗೇ ಇಟ್ಟಿರಬೇಕಾಗುತ್ತದೆ. ಹಾಗಿದ್ದಾಗ ನೀವು ಮೇಲಕ್ಕೆ ಹಾರುವುದು ಅಸಾಧ್ಯವಾಗುತ್ತದೆ’. ಎಷ್ಟು ಅರ್ಥಪೂರ್ಣವಾದ ಮಾತುಗಳು!

ನಿಜ, ದುರ್ಬಲರನ್ನು ಅದೇ ಜಾಗದಲ್ಲಿಟ್ಟು ನಾವೂ ಕೆಳಗೆ ಜಾರುವ ಬದಲು ಅವರನ್ನು ಮೇಲೆತ್ತುವ ಪ್ರಯತ್ನ ಮಾಡಿದರೆ, ಒಟ್ಟಿಗೇ ಮೇಲೇರಬಹುದಲ್ಲ. ಆಗ ಎಲ್ಲರೂ ಶಕ್ತಿವಂತರಾಗಿ ದೇಶ ಬಲಿಷ್ಠವಾಗಬಹುದಲ್ಲ!

ಆದರೇನು? ನಾನು, ನನ್ನದು ಎಂಬ ಅಹಂಕಾರದಲ್ಲಿ, ಬೇರೆಯವರನ್ನು ಕೀಳಾಗಿಸಿ ನಮ್ಮ ಮೇಲರಿಮೆಯನ್ನು ಸಾಬೀತುಪಡಿಸಲು ಯತ್ನಿಸುವ ನಾವು, ಹೀಗೆ ಒಟ್ಟಂದದಲ್ಲಿ ಸಾಗುವ ಯೋಚನೆಯನ್ನಾದರೂ ಮಾಡುತ್ತೇವೆಯೇ? ಹಾಗೆ ಸಾಗಲು ನಮ್ಮ ಮೆದುಳು ಮತ್ತು ಎದೆಯಾಳದಲ್ಲಿ ಬೇರುಬಿಟ್ಟಿರುವ ಜಾತಿಯ ಅಹಂಕಾರ ಬಿಟ್ಟೀತೇ? ಈ ದೀಪಾವಳಿಗೆ ಮನೆಯನ್ನೆಲ್ಲ ಚೊಕ್ಕ ಮಾಡಿ ಬೆಳಕಾಗಲೆಂದು ದೀಪ ಹಚ್ಚಿದ್ದೇವೆ, ಆದರೆ ನಮ್ಮ ಮನಸ್ಸಿನೊಳಗಿನ ಜಾತೀಯತೆಯ ಕೊಳೆಯನ್ನು ತೊಳೆಯಲು, ಶ್ರೇಷ್ಠತೆಯ ವ್ಯಸನದ ಕತ್ತಲನ್ನು ತೊಡೆಯಲು ಸಣ್ಣ ಪ್ರಯತ್ನವನ್ನಾದರೂ ಮಾಡಿದ್ದೇವೆಯೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.