ಒಂದು ದಿನ ಝೆನ್ ಗುರುವಿನ ಬಳಿ ಒಬ್ಬ ತಾಯಿ ಬಂದು, ತನ್ನ ಮಗನಿಗೆ ಅತಿಯಾಗಿ ಸಿಹಿ ತಿನ್ನುವ ಕೆಟ್ಟ ಚಟ ಅಂಟಿಕೊಂಡಿದೆ. ಅದನ್ನು ಹೋಗಲಾಡಿಸುವಂತಹ ಉಪದೇಶ ನೀಡಬೇಕು ಎಂದು ಕೋರುತ್ತಾಳೆ. ಆಗ ಕ್ಷಣ ಯೋಚಿಸಿದ ಗುರು, ಆ ದಿನ ಯಾವುದೇ ಉಪದೇಶ ನೀಡದೆ, ಒಂದು ವಾರ ಬಿಟ್ಟು ಬರಲು ಹೇಳುತ್ತಾರೆ. ಅದರಂತೆ ಆ ತಾಯಿ ಮಗನ ಜೊತೆ ವಾಪಸ್ ಬಂದಾಗ, ಗುರು ಮತ್ತದೇ ನಿರ್ಲಿಪ್ತತೆಯಲ್ಲಿ
ಮುಂದಿನ ವಾರ ಬರಲು ಸೂಚಿಸುತ್ತಾರೆ. ಹೀಗೆ ಎರಡು– ಮೂರು ಸಲ ತಾಯಿ ಮತ್ತೆ ಮತ್ತೆ ಮರಳಿ ಬಂದಾಗ, ಒಂದು ದಿನ ಅವರು ಆಕೆಯ ಮಗನಿಗೆ ಸಿಹಿ ತಿನ್ನುವುದರ ಅಪಾಯಗಳನ್ನು ವಿವರಿಸಿ ಕಳುಹಿಸುತ್ತಾರೆ.

ಈ ಸರಳ ಉಪದೇಶವನ್ನು ಝೆನ್ ಗುರು ಮೊದಲ ದಿನವೇ ಕೊಡುವುದು ಸಾಧ್ಯವಿತ್ತು. ಚೋದ್ಯವೆಂದರೆ, ತಾಯಿ ಮೊದಲ ಬಾರಿ ಬಂದಾಗ ಸ್ವತಃ ಗುರುವೇ ಸಿಹಿ ತಿನ್ನುವ ಅಭ್ಯಾಸಕ್ಕೆ ಅಂಟಿಕೊಂಡಿದ್ದರು. ಈ ದುರಭ್ಯಾಸವನ್ನು ಮೊದಲು ತಾನು ಬಿಡುವವರೆಗೂ ಆಕೆಯ ಮಗನಿಗೆ ಗುರು ಉಪದೇಶ ನೀಡಲಿಲ್ಲ. ಇದು ಒಬ್ಬ ನಿಜವಾದ ಗುರುವಿನ ಬದ್ಧತೆ.

‘ತೊಡೆಯಬಾರದ ಪದವ ಬರೆಯಬಾರದು ನೋಡ!’ ಎಂದು ಅಲ್ಲಮ ಹೇಳುತ್ತಾನೆ. ಯಾವುದನ್ನು ತೊಡೆದುಹಾಕಲು ಸಾಧ್ಯವಿಲ್ಲವೋ ಅದನ್ನು ಬರೆಯಬಾರದು ಎಂಬ ಸಂದೇಶವಿರುವ ಈ ವಾಕ್ಯವು ಬರಹಕ್ಕೆ ಸಂಬಂಧಿಸಿದ್ದಾದರೂ ಒಬ್ಬ ವ್ಯಕ್ತಿಯ ವ್ಯಕ್ತಿತ್ವಕ್ಕೆ ಸಂಬಂಧಿಸಿದ ವ್ಯಾಖ್ಯಾನವಾಗಿಯೂ ಇದನ್ನು ಪರಿಗಣಿಸಬಹುದು.

ಒಬ್ಬ ಶಿಕ್ಷಕ ಮಕ್ಕಳಿಗೆ ಸರಿಯಾದ ಶಿಕ್ಷಣ ಕೊಡದಿದ್ದರೆ ಒಂದು ತಲೆಮಾರು ಹಾಳಾದಂತೆ. ಒಬ್ಬ ವೈದ್ಯ ತಪ್ಪು ಚಿಕಿತ್ಸೆ ನೀಡಿದರೆ ಒಬ್ಬ ವ್ಯಕ್ತಿಯ ಸಾವಾದಂತೆ. ಒಬ್ಬ ನ್ಯಾಯಾಧೀಶರ ತಪ್ಪು ತೀರ್ಪಿನಿಂದ ಅಮಾಯಕನಿಗೆ ಅನ್ಯಾಯವಾದಂತೆ. ಅದೇ ಒಬ್ಬ ಜನಪ್ರತಿನಿಧಿ ದಾರಿ ತಪ್ಪಿದರೆ ಇಡೀ ಒಂದು ವರ್ತಮಾನ
ವನ್ನು ಕುಲಗೆಡಿಸಿ ದೇಶದ ಭವಿಷ್ಯವನ್ನು ಕತ್ತಲಿನಲ್ಲಿ ಇರಿಸಿದಂತೆ ಆಗುತ್ತದೆ. ನೈತಿಕತೆ, ಧಾರ್ಮಿಕ ಸಹಿಷ್ಣುತೆ, ಕೂಡಿ ಬದುಕುವ ಅನ್ಯೋನ್ಯ ಭಾವ ಎಂಬ ಕನ್ನಡಿಯಲ್ಲಿ ಜನನಾಯಕ ದಿನನಿತ್ಯ ತನ್ನ ತಾ ಆತ್ಮವಿಮರ್ಶೆಗೆ ಒಡ್ಡಿಕೊಂಡು ಆಳಿದರೆ ಮಾತ್ರ ತಾನು ನಿಜ ಅರ್ಥದ ಅರಸನಾಗುತ್ತಾನೆ.

ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾದ ಸಂಸದರ ಪೈಕಿ ಶೇಕಡ 46ರಷ್ಟು ಮಂದಿ ಅಪರಾಧದ ಹಿನ್ನೆಲೆಯುಳ್ಳವರಾಗಿದ್ದು, ಇವರಲ್ಲಿ ಶೇಕಡ 93ರಷ್ಟು ಮಂದಿ ಕೋಟ್ಯಧಿಪತಿಗಳೇ ಇರುವುದು ‘ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್’ನ ಸಮೀಕ್ಷಾ ವರದಿಯಿಂದ ತಿಳಿಯುತ್ತದೆ. ಇದು, ಪ್ರಜಾಪ್ರಭುತ್ವದ ಅಸ್ತಿತ್ವ ಹಾಗೂ ದೇಶದ ಒಟ್ಟಾರೆ ಆರೋಗ್ಯದ ಬಗ್ಗೆ ಗಂಭೀರವಾಗಿ ಯೋಚಿಸುವಂತೆ ಮಾಡುತ್ತದೆ.

ಹಿಂದಿನ ಹತ್ತು– ಹದಿನೈದು ವರ್ಷಗಳ ಅಂಕಿ ಅಂಶಗಳನ್ನು ಗಮನಿಸಿದರೆ, ಭಾರತದ ಸಂಸದೀಯ ಜನತಂತ್ರ ವ್ಯವಸ್ಥೆ ಹಿಂದೆಂದೂ ಕಂಡರಿಯದಂತಹ ಬಿಕ್ಕಟ್ಟನ್ನು ಈಗ ಎದುರಿಸುತ್ತಿದೆ ಎನಿಸುತ್ತದೆ. ಚುನಾಯಿತ ಸದನಗಳ ಗುಣಮಟ್ಟ ಕ್ರಮೇಣ ಕುಸಿಯುತ್ತಿದೆ. ದೇಶದ ಒಬ್ಬ ಚುನಾಯಿತ ಸಂಸದನೆಂದರೆ ಅವನು ಆಯಾ ಸಮಾಜದ ಕನ್ನಡಿ ಇದ್ದ ಹಾಗೆ. ಆ ಸಂಸದ ಶಾಸನಬದ್ಧ ಅಧಿಕಾರ ಚಲಾಯಿಸುವುದಕ್ಕೆ ಮಾತ್ರ ಅರ್ಹನಾಗದೆ ಏಕಕಾಲಕ್ಕೆ ದೇಶದ ಸಾಂಸ್ಕೃತಿಕ ನಾಯಕನೂ ಆಗಿರುತ್ತಾನೆ. ನಾಯಕನು ಸದಾಚಾರ, ಪರಿಶುದ್ಧ ನಡೆ– ನುಡಿ ಮೈಗೂಡಿಸಿಕೊಂಡು ನೆಲದ ಕಾನೂನನ್ನು ಗೌರವಿಸುವುದು ಅಪೇಕ್ಷಣೀಯವಾಗಿರುತ್ತದೆ. ಇಲ್ಲಿ ಆಳುವ ದೊರೆಯೇ ಘೋರ ಅಪರಾಧಿಯಾದರೆ ಯಾರನ್ನು ದೂಷಿಸುವುದು? ಆತನನ್ನು ಆರಿಸಿ ಕಳಿಸಿದ ಮತದಾರನ ತಪ್ಪು ಕೂಡ ವಿವೇಚನೆಗೆ ಒಳಗಾಗುತ್ತದೆ. ಆದರೆ ಹಣ, ತೋಳ್ಬಲ ಮತ್ತು ಮಾಫಿಯಾ ಸುಳಿಯಲ್ಲಿ ಅವನ ಅಸಹಾಯಕತೆ ಅಡಗಿರುತ್ತದೆ.

ಅಪರಾಧ ಪ್ರಕರಣಗಳ ಆರೋಪ ಹೊತ್ತಿರುವ ಅಭ್ಯರ್ಥಿ ಗೆಲ್ಲುವ ಸಾಧ್ಯತೆ ಶೇಕಡ 15ರಷ್ಟು. ಆದರೆ, ಶುದ್ಧ ಚಾರಿತ್ರ್ಯ ಹೊಂದಿರುವ ಅಭ್ಯರ್ಥಿ ವಿಜೇತನಾಗುವ ಸಾಧ್ಯತೆ ಬರೀ ಶೇ 4.4ರಷ್ಟು ಎಂದು ಇದೇ ವರದಿ ಹೇಳುತ್ತದೆ. ಇದನ್ನು ಮುಂದಿಟ್ಟುಕೊಂಡು ಯೋಚಿಸಿದರೆ, ಸಜ್ಜನರು ಚುನಾವಣೆಗೆ ಸ್ಪರ್ಧಿಸುವ ವಾತಾವರಣವಾದರೂ ಎಲ್ಲಿದೆ?

‘ಅರಸು ರಾಕ್ಷಸ, ಮಂತ್ರಿಯೆಂಬುವ ಮೊರೆವ ಹುಲಿ, ಪರಿವಾರ ಹದ್ದಿನ ನೆರವಿ, ಬಡವರ ಭಿನ್ನಪವ ಇನ್ನಾರು ಆಲಿಪರು, ಉರಿ ಉರಿಯುತಿದೆ ದೇಶ, ನಾವಿನ್ನಿರಲು ಬಾರದು...’ ಎಂಬ ಕವಿ ಕುಮಾರವ್ಯಾಸರ ಮಾತುಗಳು ಈ ಸಂಕಟದ ಕಾಲಕ್ಕಂತೂ ಪ್ರಸ್ತುತವೆನಿಸುತ್ತವೆ.

ಭಾರತದ ಪ್ರಜಾತಂತ್ರ ವ್ಯವಸ್ಥೆಗೊಂದು ಘನವಾದ ಪರಂಪರೆ ಇದೆ. ಈ ಹಿಂದೆ ಆಳಿದ ನಾಯಕರ ಸಚ್ಚಾರಿತ್ರ್ಯ, ತುಡಿತ, ಬದ್ಧತೆ ಹಾಗೂ ನೈತಿಕತೆಯ ಇತಿಹಾಸವಿದೆ. ರೈಲು ಅಪಘಾತದ ನೈತಿಕ ಹೊಣೆ ಹೊತ್ತು ತತ್ಕ್ಷಣವೇ ರಾಜೀನಾಮೆ ನೀಡಿದ ಲಾಲ್ ಬಹದ್ದೂರ್ ಶಾಸ್ತ್ರಿ, ವಿಶ್ವಾಸಮತ ಪರೀಕ್ಷೆಯಲ್ಲಿ ಬರೀ ಒಂದು ವೋಟಿನಿಂದ ಸೋಲಾಗಿ ಪ್ರಧಾನಿ ಪದವಿಗೆ ರಾಜೀನಾಮೆ ನೀಡಿದ ಅಟಲ್ ಬಿಹಾರಿ ವಾಜಪೇಯಿ, ಆಯಕಟ್ಟಿನ ಹುದ್ದೆಗಳನ್ನು ನಿರ್ವಹಿಸಿದ್ದರೂ ಕೊನೆಯುಸಿರು ಇರುವವರೆಗೂ ಸರಳವಾಗಿ ಬದುಕಿದ ಜಾರ್ಜ್ ಫರ್ನಾಂಡಿಸ್ ಹೀಗೆ ಹತ್ತು ಹಲವರ ಅಕಳಂಕ ಇತಿಹಾಸ ಹೊತ್ತ ಸಂಸತ್ತಿನ ಘನ ಪರಂಪರೆಯನ್ನು ಎತ್ತಿ ಹಿಡಿದು, ದೇಶದ ಆರೋಗ್ಯವನ್ನು ಕಾಪಾಡುವ ಜವಾಬ್ದಾರಿ ಹೊಸ ಸಂಸದರ ಮೇಲಿದೆ. ಶಾಸನಸಭೆಗಳ ಚರ್ಚೆ, ಸಂವಾದದ ಗುಣಮಟ್ಟ ಎತ್ತರಿಸುವ ಹೊಣೆಯನ್ನೂ ಮರೆಯಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.