ನಮಗೆ ಸಾಮಾನ್ಯವಾಗಿ ಸ್ವಾತಂತ್ರ್ಯೋತ್ಸವಕ್ಕೂ ಗಣರಾಜ್ಯೋತ್ಸವಕ್ಕೂ ವ್ಯತ್ಯಾಸವೇ ಗೊತ್ತಿರುವುದಿಲ್ಲ. ‘ಭಾರತ ಸ್ವಾತಂತ್ರ್ಯ ಅಧಿನಿಯಮ 1947’ರ ಮೂಲಕ ಭಾರತವು ಆಗಸ್ಟ್ 15ರಂದು ಸ್ವಾತಂತ್ರ್ಯವನ್ನೇನೋ ಪಡೆಯಿತು. ಆದರೆ, ಅದು ‘ಸಾರ್ವಭೌಮ’ ರಾಷ್ಟ್ರವಾಗಿರಲಿಲ್ಲ. ವಾಸ್ತವವಾಗಿ ಅಂದಿನಿಂದ 1950ರ ಜನವರಿ 26ರವರೆಗೆ ಬ್ರಿಟಿಷ್ ಕಾಮನ್‍ವೆಲ್ತ್‌ನ ಭಾಗವಾಗಿತ್ತು. 1950ರ ಜನವರಿ 26ರಂದು ಭಾರತವು ಸಾರ್ವಭೌಮ ಜನಸತ್ತಾತ್ಮಕ ಗಣರಾಜ್ಯವಾಯಿತು; ಕಾರಣ, ಅಂದು ದೇಶದ ಸಂವಿಧಾನವು ಅಧಿಕೃತವಾಗಿ ಜಾರಿಗೊಂಡಿತು. ದೇಶ ಬ್ರಿಟಿಷರ ಎಲ್ಲಾ ಬಗೆಯ ರಾಜಕೀಯ ಆಧಿಪತ್ಯದಿಂದ ಸರ್ವತಂತ್ರ ಸ್ವತಂತ್ರವಾಯಿತು.

ಇದಕ್ಕಾಗಿ ಜನವರಿ 26ನ್ನೇ ಆಯ್ಕೆ ಮಾಡಿದುದರಲ್ಲಿಯೂ ಒಂದು ವಿಶೇಷವಿದೆ. 1930ರಲ್ಲಿ ಲಾಹೋರಿನಲ್ಲಿ ನಡೆದ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ಸಿನ ಅಧಿವೇಶನದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ದೇಶಕ್ಕಾಗಿ ‘ಪೂರ್ಣ ಸ್ವರಾಜ್ಯ’ದ ಶಪಥವನ್ನು ಘೋಷಿಸಿದರು, ಅಂದು ಜನವರಿ 26. ಹೀಗಾಗಿ, ಆ ದಿನವನ್ನು ನಾವು ಸ್ವಾತಂತ್ರ್ಯ ದಿನೋತ್ಸವದ ರೀತಿಯಲ್ಲಿಯೇ ಆಚರಣೆ ಮಾಡುವ ಬದಲು ಸಂವಿಧಾನ ಎಂದರೇನು, ಅದು ಹೇಗೆ ನಮಗೆ ಮಹತ್ವದ್ದಾಗಿದೆ, ಅದು ನಮಗೆ ನೀಡುವ ಹಕ್ಕುಗಳೇನು, ವಿಧಿಸುವ ಕರ್ತವ್ಯಗಳೇನು ಎಂಬಂತಹ ಅಂಶಗಳನ್ನು ಮತ್ತೆ ಮತ್ತೆ ನೆನಪಿಸಿಕೊಂಡು ಅದರ ಬಗ್ಗೆ ಬದ್ಧತೆಯನ್ನು ನವೀಕರಿಸುವ ದಿನವಾಗಬೇಕಾಗಿದೆ. ಅದರಲ್ಲೂ ಸರ್ಕಾರಗಳನ್ನು ಆಯ್ಕೆ ಮಾಡುವ ಯುವಜನರಿಗೆ ಸಂವಿಧಾನದ ಮಹತ್ವವನ್ನು ಅರ್ಥ ಮಾಡಿಸಬೇಕಾಗಿದೆ.

ಸ್ವಾತಂತ್ರ್ಯ ಬರುವ ಸುಮಾರು 8 ತಿಂಗಳ ಮುಂಚೆಯೇ, ಆಗಿನ ವಿವಿಧ ಪ್ರಾಂತೀಯ ವಿಧಾನಸಭೆಗಳು, ರಾಜಮನೆತನಗಳ ಪ್ರಾಂತ್ಯಗಳು ಮತ್ತು ಬ್ರಿಟಿಷ್ ಕಮಿಷನರೇಟ್ ಪ್ರದೇಶಗಳಿಂದ ಆಯ್ಕೆಯಾಗಿದ್ದ 389 ಸದಸ್ಯರನ್ನು ಒಳಗೊಂಡ ‘ಸಂವಿಧಾನ ರಚನಾ ಸಭೆ’ ಕಾರ್ಯ ಆರಂಭಿಸಿತು. ಒಟ್ಟು 2 ವರ್ಷ, 11 ತಿಂಗಳು, 18 ದಿನಗಳಲ್ಲಿ ಸಂವಿಧಾನ ರಚನೆಯ ಕಾರ್ಯ ಪೂರ್ಣಗೊಂಡಿತು. ಇದಕ್ಕಾಗಿ ರಚಿತವಾದ 22 ವಿವಿಧ ವಿಷಯ ಸಮಿತಿಗಳಲ್ಲಿ ಎಲ್ಲ ಸದಸ್ಯರು ಪಾಲ್ಗೊಂಡರು. ಬೆನೆಗಲ್ ನರಸಿಂಗರಾವ್ ಸಲಹಾಗಾರರಾಗಿದ್ದರು. ವಿವಿಧ ಸಮಿತಿಗಳು ಗಹನ ಅಧ್ಯಯನ, ಚರ್ಚೆಯ ಫಲವಾಗಿ ತಯಾರಿಸಿದ ವರದಿಗಳು ಸಂವಿಧಾನ ಸಭೆ
ಯಲ್ಲಿ ವಿಮರ್ಶೆ, ಪರಿಷ್ಕರಣೆ, ತಿದ್ದುಪಡಿಗೆ ಒಳಗಾದವು. ಇವೆಲ್ಲವನ್ನೂ ಒಗ್ಗೂಡಿಸಿ ಒಂದು ವ್ಯವಸ್ಥಿತ ಗ್ರಂಥದ ರೂಪ ಕೊಡುವುದಕ್ಕಾಗಿ, 1947ರ ಆಗಸ್ಟ್ 29ರಂದು ಒಂದು ‘ಕರಡು ಸಮಿತಿ’ ರಚಿಸಲಾಯಿತು. ಅದರ ಅಧ್ಯಕ್ಷರಾಗಿದ್ದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಕಠಿಣ ಪರಿಶ್ರಮದ ಫಲವಾಗಿ ವಿಕಾಸಗೊಂಡ ಸಂವಿಧಾನವು 1949ರ ನ. 26ರಂದು ಸಂವಿಧಾನ ಸಭೆಯಲ್ಲಿ ಅಂಗೀಕೃತವಾಯಿತು.

ಭಾರತ ಸಂವಿಧಾನದ ಸತ್ವ, ಮಹತ್ವವನ್ನು ಅರ್ಥ ಮಾಡಿಕೊಳ್ಳಲು ನಾವು ಅದರ ಪ್ರಸ್ತಾವನೆಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡರೂ ಸಾಕು. ಸಂವಿಧಾನದ ಹೆಬ್ಬಾಗಿಲಿನಂತಿರುವ ಪ್ರಸ್ತಾವನೆ ಆರಂಭವಾಗುವುದೇ ‘ವಿ ದ ಪೀಪಲ್ ಆಫ್ ಇಂಡಿಯಾ...’, ‘ಭಾರತದ ಜನತೆಯಾದ ನಾವು...’ ಎಂದು. ಕೊನೆಗೊಳ್ಳುವುದು, ‘ನಮಗೆ ನಾವೇ ಈ ಸಂವಿಧಾನವನ್ನು ಕೊಟ್ಟುಕೊಂಡಿದ್ದೇವೆ’ ಎಂದು. ಎಂದರೆ ಭಾರತದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಜನತೆಯೇ ತಮ್ಮನ್ನು ಆಳಿಕೊಳ್ಳಲು ತಮ್ಮ ಪ್ರತಿನಿಧಿಗಳ ಮೂಲಕ ರಚಿಸಿಕೊಂಡ ಮೊತ್ತಮೊದಲ ಲಿಖಿತ ಸಂವಿಧಾನ ಇದಾಗಿದೆ. ಇದು ದೈವಿಕ ಶಾಸನವಲ್ಲ, ಅಪೌರುಷೇಯ ಪ್ರಶ್ನಾತೀತ ಗ್ರಂಥವಲ್ಲ. ನಾವೇ ರಚಿಸಿಕೊಂಡಿರುವ, ಕಾಲದ ಅಗತ್ಯಗಳಿಗೆ ಅನುಗುಣವಾಗಿ ತನ್ನಲ್ಲೇ ತಿದ್ದುಪಡಿಗಳಿಗೆ ಅವಕಾಶ ನೀಡಿಕೊಂಡಿರುವ ಅಪ್ಪಟ ತಾರ್ಕಿಕವಾದ ಲೌಕಿಕ ಗ್ರಂಥ. ನಮ್ಮ ಪರವಾಗಿ ಆಡಳಿತ ನಡೆಸಲು ನಾವು ಜನಪ್ರತಿನಿಧಿಗಳನ್ನು ಆರಿಸಿರುತ್ತೇವೆಯೇ ವಿನಾ, ಹೊಸ ಪ್ರಭುಗಳಾಗಿ ನಮ್ಮನ್ನೇ ಆಳಲು ಅಲ್ಲ.

ಆಗಸ್ಟ್ 15ರಂದು ನಾವು, ಸ್ವಾತಂತ್ರ್ಯ ಆಂದೋಲನದಲ್ಲಿ ಭಾಗವಹಿಸಿದ್ದ ಕೆಲವು ಗಣ್ಯರ ಫೋಟೊಗಳನ್ನು ಇಟ್ಟು ನಮಸ್ಕರಿಸುತ್ತೇವೆ. ಫೋಟೊಗಳು ಕೇವಲ ಪ್ರಾತಿನಿಧಿಕ ಎಂಬುದನ್ನು ಮಕ್ಕಳಿಗೆ, ಸಾರ್ವಜನಿಕರಿಗೆ ಮನವರಿಕೆ ಮಾಡಿಸಬೇಕು. ಈಗಷ್ಟೇ ನಾವು ಎಂದಿನಂತೆಯೇ ಗಣರಾಜ್ಯೋತ್ಸವವನ್ನು ಆಚರಿಸಿದ್ದೇವೆ. ಆದರೆ ಇನ್ನು ಮುಂದೆಯಾದರೂ ಅದನ್ನು ಭಿನ್ನವಾಗಿ ಆಚರಿಸಲು ಮುಂದಾಗಬೇಕು. ಆ ದಿನ ಯಾರೊಬ್ಬರ ಫೋಟೊಗಳನ್ನೂ ಇಡುವ ಅಗತ್ಯವಿಲ್ಲ. ನಾವು ದೊಡ್ಡದಾಗಿ ಫೋಟೊ ಹಾಕಿಸಿ ಇಡಬೇಕಾದುದು ಭಾರತ ಸಂವಿಧಾನದ ಪ್ರತೀಕವಾಗಿ, ಸುಂದರವಾದ ಅಂಚಿನಲ್ಲಿರುವ ‘ಪ್ರಸ್ತಾವನೆ’ಯ ಕಟ್ಟುಹಾಕಿಸಿದ ಚಿತ್ರವನ್ನು. ಇದಕ್ಕೆ ಹಾರ ಹಾಕಿ ಪೂಜಿಸಬೇಕಾಗಿಲ್ಲ. ಬದಲಿಗೆ ಅದರಲ್ಲಿರುವ ಒಕ್ಕಣೆಯನ್ನು ಎಲ್ಲರಿಗೂ ಓದಿ ಹೇಳಿ, ಒಂದೊಂದೇ ಪದ, ವಾಕ್ಯ, ಪರಿಕಲ್ಪನೆಯನ್ನು ಅರ್ಥ ಮಾಡಿಸಬೇಕು. ಸಂಭ್ರಮ, ಸಡಗರಕ್ಕಿಂತ ವೈಚಾರಿಕ ವಾತಾವರಣ ಏರ್ಪಡಿಸುವುದು ಬಹಳ ಮುಖ್ಯ.

ಸಂವಿಧಾನವನ್ನು ಬದಲಾಯಿಸಬೇಕು ಎಂದು ಸಾರ್ವಜನಿಕ ಹೇಳಿಕೆಗಳನ್ನು ಕೊಡುವುದರಿಂದ ಹಿಡಿದು ಭಾರತದ ಸಂಸತ್ತಿನ ಹತ್ತಿರದಲ್ಲಿಯೇ ಸಂವಿಧಾನದ ಪ್ರತಿಯನ್ನು ಸುಟ್ಟುಹಾಕುವವರೆಗೆ ಮಾರಕವಾದ ರಾಜಕೀಯ ಬೆಳವಣಿಗೆ ಆಗಿರುವ ಸಂದರ್ಭದಲ್ಲಿ, ಗಣರಾಜ್ಯೋತ್ಸವವನ್ನು ವಿಭಿನ್ನ ರೀತಿಯಲ್ಲಿ ಆಚರಿಸಿ ಜನಜಾಗೃತಿ ಮೂಡಿಸುವುದು ಹೆಚ್ಚು ಸಮಂಜಸ. ‘ನಾವು ರಕ್ಷಿಸಿದರೆ ಸಂವಿಧಾನವನ್ನು, ಅದು ರಕ್ಷಿಸುತ್ತದೆ ನಮ್ಮನ್ನು’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.