ಕರ್ನಾಟಕದಲ್ಲೊಂದು ಆಂದೋಲನ ನಡೆದಿದೆ. ಹಲವು ಸಾವಿರ ಗ್ರಾಮೀಣ ಹೆಣ್ಣು ಮಕ್ಕಳು ವಿಧಾನಸೌಧಕ್ಕೆ ಮುತ್ತಿಗೆ ಹಾಕಲೆಂದು ಬೆಂಗಳೂರಿನತ್ತ ಹೆಜ್ಜೆ ಹಾಕುತ್ತಿದ್ದಾರೆ. ಈಗಾಗಲೇ ನೂರಾಐವತ್ತು ಕಿಲೊಮೀಟರು ನಡೆದು ತುಮಕೂರಿನ ಸಿದ್ಧಗಂಗಾ ಮಠ ತಲುಪಿದ್ದಾರೆ.

ಇದೇ ತಿಂಗಳ ಮೂವತ್ತರಂದು ಬೆಂಗಳೂರು ತಲುಪುವ ಗುರಿಯಿದೆ ಇವರಿಗೆ. ಬೆಳಗಾವಿ, ನಿಪ್ಪಾಣಿ, ಖಾನಾಪುರ, ರಾಯಚೂರು, ಸಿಂದಗಿ, ಮಾನ್ವಿ, ರಾಣೆಬೆನ್ನೂರು... ಹೀಗೆ ಕರ್ನಾಟಕದ ಮೂಲೆ ಮೂಲೆಗಳಿಂದ ಚಿತ್ರದುರ್ಗಕ್ಕೆ ಬಂದು, ಅಲ್ಲಿಂದ ನಡಿಗೆ ಆರಂಭಿಸಿದ್ದಾರೆ. ಕೆಲವರ ಭುಜಗಳ ಮೇಲೆ ಮಕ್ಕಳಿವೆ, ಒಬ್ಬಾಕೆ ಐದು ತಿಂಗಳ ಗರ್ಭಿಣಿ. ಚಳಿಗಾಲ, ದೂಳು, ಬಳಲಿಕೆ! ಅನೇಕರ ಕಾಲುಗಳಲ್ಲಿ ಚಪ್ಪಲಿ ಕೂಡ ಇಲ್ಲ.

ಮದ್ಯಪಾನ ನಿಷೇಧಿಸಿ ಎಂಬ ಬೇಡಿಕೆ ಇಡಲಿದ್ದಾರೆ ಇವರು. ವಿಚಿತ್ರವಾಗಿ ಕಾಣುವ ಬೇಡಿಕೆಯಿದು. ಆದರೆ ಅಷ್ಟೇನೂ ವಿಚಿತ್ರವಲ್ಲದ ಬೇಡಿಕೆ! ಇವರ ಜೊತೆ ಮಾತನಾಡಿದರೆ ನಿಮಗದು ಅರ್ಥವಾಗುತ್ತದೆ. ಗಂಡಂದಿರು, ಗಂಡು ಮಕ್ಕಳು, ಅಪ್ಪಂದಿರು, ಅಣ್ಣಂದಿರು, ಮಾವಂದಿರು, ಭಾವಂದಿರು ಹಾಗೂ ನೆರೆಹೊರೆಯವರ ಕುಡಿತದ ಹಿಂಸೆ ತಾಳಲಾರದೆ ರೋಸಿ ಹೋಗಿದ್ದಾರೆ ಇವರು. ಇತ್ತ ಮನೆ ನೋಡಿಕೊಳ್ಳುತ್ತಾರೆ, ಅತ್ತ ಕೂಲಿ ನೋಡಿಕೊಳ್ಳುತ್ತಾರೆ. ಮಕ್ಕಳು ಮರಿಗಳನ್ನೂ ನೋಡಿಕೊಳ್ಳುತ್ತಾರೆ, ಮನೆಯ ಏನನ್ನೂ ನೋಡಿಕೊಳ್ಳುತ್ತಾರೆ... ನೋಡಿಕೊಂಡವನಿಂದಲೇ ಬಡಿಸಿಕೊಳ್ಳುತ್ತಾರೆ, ಬಲವಂತದಿಂದ ಸಂಭೋಗಿಸಿಕೊಳ್ಳುತ್ತಾರೆ. ನಂತರ ಛಿ...ಥೂ! ಉಗಿಸಿಕೊಳ್ಳುತ್ತಾರೆ.

ಸಾಲ ಮನ್ನಾ ಮಾಡಿರೆಂದು ಕೇಳುತ್ತಿಲ್ಲ ಇವರು. ತಾಳಿಭಾಗ್ಯ ಕೇಳುತ್ತಿಲ್ಲ ಇವರು. ಟಿ.ವಿ, ಫ್ರಿಜ್ಜು ಯಾವುದನ್ನೂ ಕೇಳುತ್ತಿಲ್ಲ ಇವರು. ಕೇವಲ ಮದ್ಯಪಾನ ನಿಷೇಧಿಸಿ ಎಂದು ಕೇಳುತ್ತಿದ್ದಾರೆ. ಇದನ್ನು ಬಿಟ್ಟು ಬೇರೆ ಏನನ್ನೂ ಕೇಳುತ್ತಿಲ್ಲವಾದ್ದರಿಂದ ಸರ್ಕಾರಗಳಿಗೆ ತೋಚದಂತಾಗಿದೆ. ಸರ್ಕಾರಗಳ ಪ್ರಗತಿಪರ ಕಾರ್ಯಕ್ರಮಗಳ ಯಾದಿಯಲ್ಲಿ ಮದ್ಯಪಾನ ನಿಷೇಧ ಎಂಬ ಪದವೇ ಇಲ್ಲವಾಗಿದೆ. ಮಾತ್ರವಲ್ಲ, ರಾಜ್ಯ ಸರ್ಕಾರಗಳು ನಡೆದಿರುವುದೇ ಕುಡಿತದ ತೆರಿಗೆ ಅಥವಾ ಪಾಪದ ತೆರಿಗೆಯ ಬಲದ ಮೇಲೆ. ಪಾಪದ ತೆರಿಗೆಯ ವರಮಾನದಲ್ಲಿ ನಮಗೂ ಒಂದು ಪಾಲು ಕೊಡಿ ಎಂದು ಬಡವರು ಕೇಳಿದ್ದರೆ, ಚುನಾವಣೆಗೂ ಮುನ್ನ, ಕೊಟ್ಟಂತೆ ಮಾಡಬಹುದಿತ್ತು. ವಿಚಿತ್ರ ಸಂದಿಗ್ಧ ಸರ್ಕಾರಗಳಿಗೆ.

ತಲೆ ತಗ್ಗಿಸಿಕೊಂಡು ನಡೆದಿದ್ದೆ ನಾನು. ಕಾಲುಗಳು ಕಂಡವು. ಒಡೆದಿದ್ದವು. ನನ್ನ ಸಂಗಡಿಗ ಹೇಳುತ್ತಿದ್ದ. ಚಿತ್ರದುರ್ಗದ ಯುವ ಲಾಯರುಗಳ ಸಂಘಟನೆಯೊಂದು ಎಂಟುನೂರು ಚಪ್ಪಲಿಗಳನ್ನು ಈ ಕಾಲುಗಳಿಗೆಂದು ಕೊಂಡು ಕೊಟ್ಟಿತಂತೆ. ಹಿರಿಯೂರಿನ ಪಿ.ಎಮ್.ಎ. ಸಂಘಟನೆಯವರು ನಾಲ್ಕುನೂರು ಮುಲಾಮುಗಳ ಟ್ಯೂಬುಗಳನ್ನು ಇವರ ಒಡೆದ ಕೈಕಾಲುಗಳಿಗೆಂದು ಕೊಂಡುತಂದು ಹಂಚಿದರಂತೆ. ಬಾಳೆಯ ಹಣ್ಣು ಮಾರುವ ಮುಸ್ಲಿಮರೊಬ್ಬರುಗಾಡಿ ತುಂಬ ಇದ್ದ ಹಣ್ಣನ್ನು ಹಂಚಿಬಿಟ್ಟರಂತೆ. ತುಮಕೂರಿನ ಮಂಡಿ ವರ್ತಕರು, ವೈಶ್ಯರು, ಅಕ್ಕಿಗಿರಣಿಗಳ ಮಾಲೀಕರು ಹುಗ್ಗಿ ಮಾಡಿಸಿ ಹಂಚಿದ್ದಾರೆ. ನನ್ನ ಮೂಗಿಗೆ, ರಸ್ತೆಯ ದೂಳಿನ ವಾಸನೆಯ ನಡುವೆ ಮಲ್ಲಿಗೆ ಹೂವಿನ ವಾಸನೆ ಬಡಿಯಿತು. ತಲೆಯೆತ್ತಿ ಹುಡುಕಿದೆ. ಸ್ನಾನವಿಲ್ಲದೆ ಜಡವಾಗಿದ್ದ ಒಂದು ಜಡೆ ಮಲ್ಲಿಗೆ ಕುಚ್ಚನ್ನು ಮುಡಿದಿತ್ತು. ನನ್ನ ಮುಖದಲ್ಲಿ ಮಂದಹಾಸ ಮೂಡಿತು.

ಪಕ್ಕದಲ್ಲಿ ನಡೆದಿದ್ದ ಹಳೆ ಮೈಸೂರಿನ ಮುದುಕರೊಬ್ಬರು ಮೂಗಿನ ಮೇಲೆ ಬೆರಳಿಟ್ಟುಕೊಂಡರು. ‘ನಮ್ಮ ಕಡೆ ಹೆಣ್ಣು ಮಕ್ಕಳಿಗೆ ಇದು ಸಾಧ್ಯವಾ’ ಎಂದು ಯೋಚಿಸುತ್ತಿದ್ದೆ. ‘ಇವರನ್ನು ನೋಡಿ! ಊರು ಬಿಟ್ಟು ಬಂದು ಹತ್ತು ದಿನ ಆಗಿದೆ. ಸ್ನಾನವಿಲ್ಲ, ನಿದ್ರೆಯಿಲ್ಲ, ಸರಿಯಾಗಿ ಊಟವೂ ಇಲ್ಲ’ ಅಂದರು. ಹೌದು, ನಾವಿಂದು ಒಡೆದು ಹೋಳಾಗಿ ಬಿಟ್ಟಿದ್ದೇವೆ. ಇವರೂ ಮನುಷ್ಯ ಪ‍್ರಭೇದವೇ ಸರಿ ಎಂದು ತಿಳಿಯುವುದಕ್ಕೆ ಕಷ್ಟವಾಗುತ್ತಿದೆ ನಮಗೆ. ತುಮಕೂರಿನ ಚೌಕವೊಂದು ಬಂದಿತು. ವಾಹನಗಳು ಕೊತ ಕೊತ ಕುದಿಯುತ್ತಿದ್ದವು. ತಮ್ಮ ರಸ್ತೆಗಳನ್ನು, ಹನುಮ ಬಾಲದಂತಹ ನಿಧಾನ ನಡಿಗೆಯ ಜಾಥಾ ಆವರಿಸಿಕೊಂಡಿದೆ ಎಂಬ ಸಿಟ್ಟು. ಒಬ್ಬ ನುಗ್ಗಿಸಲು ಬಂದ. ಹೆಂಗಸರು ಜಗಳವಾಡಲಿಲ್ಲ. ಅಲ್ಲಿಯೇ ರಸ್ತೆಯ ಮೇಲೆ ಕುಳಿತುಬಿಟ್ಟರು. ಕುದಿಯುತ್ತಿದ್ದ ಡ್ರೈವರ್ ಕುದಿತವನ್ನು ಒಳಗದುಮಿಕೊಂಡು ನಿಂತ.

ಆರ್ಥಿಕ ಪ್ರಗತಿ ನಮ್ಮ ಏಕೈಕ ಮಾನದಂಡವಾಗಿದೆ. ಮಾನವ ಕಲ್ಯಾಣವೆಂದರೆ, ಶ್ರೀಮಂತ ಮಾನವರ ಕಲ್ಯಾಣವೆಂದೂ; ಸಮಾಜದ ಸ್ವಚ್ಛತೆಯೆಂದರೆ, ಕಿಚನ್ನುಗಳ ಸ್ವಚ್ಛತೆಯೆಂದೂ ಗ್ರಹಿಸಿದ್ದೇವೆ ನಾವು. ನನ್ನ ಮುಂದೆ ನಡೆಯುತ್ತಿರುವ, ಅಷ್ಟೇನೂ ಸ್ವಚ್ಛವಾಗಿರದ ಈ ಮಹಿಳೆಯರು ಬೆಂಗಳೂರನ್ನು ಪ್ರವೇಶಿಸಲಿ, ವಿಧಾನಸೌಧವನ್ನು ಮುತ್ತಲಿ, ತುಂಬಿಬಿಡಲಿ ಎಂದು ಹಾರೈಸುತ್ತೇನೆ. ಅಲ್ಲಿ ರಾಶಿ ಬಿದ್ದಿರುವ ಭ್ರಷ್ಟಾಚಾರ, ರೆಸಾರ್ಟ್ ರಾಜಕಾರಣ... ಇತ್ಯಾದಿ ಎಲ್ಲವನ್ನೂ ಗುಡಿಸಿಹಾಕಲಿ ಎಂದು ಹಾರೈಸುತ್ತೇನೆ. ಸದ್ದಿರದೆ ಈ ಮಹಿಳೆಯರನ್ನು ಹಿಂಬಾಲಿಸಿ ನಡೆಯುವವನಿದ್ದೇನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.