ವಾಡಿಕೆಯಂತೆ ವರ್ಷಕ್ಕೊಮ್ಮೆ ವೈದ್ಯಕೀಯ ತಪಾಸಣೆಗೆ ಅಗತ್ಯವಾದ ರಕ್ತಪರೀಕ್ಷೆ ಮಾಡಿಸುವಾಗ ಈ ಬಾರಿ ಡಿ ಜೀವಸತ್ವದ ಪರೀಕ್ಷೆಯನ್ನು ಹೊಸದಾಗಿ ಮಾಡಿಸಿದೆ. ಫಲಿತಾಂಶದಲ್ಲಿ ಡಿ ಜೀವಸತ್ವದ ಕೊರತೆ ಇರುವುದು ಕಂಡು ಅಚ್ಚರಿಯಾಯಿತು. ಬಿಸಿಲಿನ ಜೀವಸತ್ವ ಎಂದೇ ಹೆಸರಾಗಿರುವ ಡಿ ಜೀವಸತ್ವ ಸೂರ್ಯನ ಬಿಸಿಲಿನಲ್ಲಿ ಉಚಿತವಾಗಿ ದೊರಕುತ್ತದೆ. ಬಿಸಿಲಿನಲ್ಲಿ ಸಾಮಾನ್ಯವಾಗಿ ಅಡ್ಡಾಡುವ ಹಾಗೂ ಸೂರ್ಯನ ಪ್ರಖರ ಬೆಳಕು ಯಥೇಚ್ಛವಾಗಿ ಸಿಗುವ ನಾಡಿನಲ್ಲಿ ವಾಸಿಸುವವರಿಗೂ ಡಿ ಜೀವಸತ್ವದ ಕೊರತೆ ಇರುತ್ತದೆ ಎಂಬುದನ್ನು ನಾವು ಊಹಿಸುವುದಿಲ್ಲ.

ಮೀನು, ಹಾಲಿನ ಉತ್ಪನ್ನಗಳು, ಮೊಟ್ಟೆ, ಅಣಬೆ, ಕಿತ್ತಳೆ, ಸೋಯಾದಂತಹ ಆಹಾರ ಪದಾರ್ಥಗಳಿಂದ ಡಿ ಜೀವಸತ್ವವನ್ನು ಪಡೆಯಬಹುದು. ದೇಹವನ್ನು ಬಿಸಿಲಿಗೆ ಒಡ್ಡಿದಾಗಲೂ ಡಿ ಜೀವಸತ್ವವನ್ನು ನಮ್ಮ ದೇಹವು ಸಹಜವಾಗಿ ತಯಾರಿಸಿಕೊಳ್ಳುತ್ತದೆ.
ಸೂರ್ಯನ ಬಿಸಿಲಿನಲ್ಲಿರುವ ನೇರಳಾತೀತ ಬಿ ಕಿರಣಗಳು ಚರ್ಮಕ್ಕೆ ತಾಗಿದಾಗ, ಚರ್ಮದಲ್ಲಿರುವ ಕೊಲೆಸ್ಟ್ರಾಲ್ನಿಂದ ಡಿ ಜೀವಸತ್ವವು ಉತ್ಪತ್ತಿಯಾಗುತ್ತದೆ. ನಮಗೆ ಅಗತ್ಯವಾದ ಕ್ಯಾಲ್ಸಿಯಂ ಅನ್ನು ನಮ್ಮ ದೇಹ ಹೀರಿಕೊಳ್ಳಲು ಡಿ ಜೀವಸತ್ವದ ಅಗತ್ಯ ಇದೆ. ಮೂಳೆಗಳ ಆರೋಗ್ಯ, ದೇಹದಲ್ಲಿ ರೋಗ ಪ್ರತಿರೋಧಕ ಶಕ್ತಿಗೆ ಡಿ ಜೀವಸತ್ವ ತುಂಬಾ ಅಗತ್ಯ ಎನ್ನುತ್ತಾರೆ ವೈದ್ಯರು. ಪದೇಪದೇ ಆಯಾಸ, ಖಿನ್ನತೆ, ಕೂದಲು ಉದುರುವಿಕೆಯಂತಹ ಸಮಸ್ಯೆಗಳಿಗೂ ಡಿ ಜೀವಸತ್ವದ ಕೊರತೆಯೇ ಕಾರಣ ಎನ್ನಲಾಗುತ್ತದೆ.

ಒಂದು ಅಂದಾಜಿನ ಪ್ರಕಾರ, ಜಗತ್ತಿನಲ್ಲಿ 100 ಕೋಟಿ ಹಾಗೂ ಭಾರತದಲ್ಲಿ 49 ಕೋಟಿಗೂ ಅಧಿಕ ಜನರು ಡಿ ಜೀವಸತ್ವದ ತೀವ್ರತರ ಕೊರತೆಯಿಂದ ಬಳಲುತ್ತಿದ್ದಾರೆ. ಪ್ರಪಂಚದ ಒಟ್ಟು ಜನಸಂಖ್ಯೆಯ ಶೇ 50ರಷ್ಟು ಜನರಿಗೆ ಡಿ ಜೀವಸತ್ವದ ಕೊರತೆ ಇದೆ ಎನ್ನಲಾಗಿದೆ. ಯುರೋಪಿನ ಶೇ 40ರಷ್ಟು ಜನರು ಡಿ ಜೀವಸತ್ವದ ಕೊರತೆ ಹೊಂದಿದ್ದು, ಶೇ 13ರಷ್ಟು ಜನರಿಗೆ ತೀವ್ರ ಕೊರತೆ ಇದೆ ಎನ್ನಲಾಗಿದೆ. ಸಾಮಾನ್ಯವಾಗಿ ದೇಹಕ್ಕೆ ಅವಶ್ಯವಾದ ಡಿ ಜೀವಸತ್ವವನ್ನು ಸೂರ್ಯನ ಬಿಸಿಲಿನ ಮೂಲಕವೇ ಪಡೆಯಲು ಸಾಧ್ಯವಿದೆ. ಆದರೆ ಇದರ ತೀವ್ರ ಕೊರತೆಯಿದ್ದಲ್ಲಿ ಆಹಾರ ಹಾಗೂ ಸೂರ್ಯನ ಬೆಳಕಿನ ಮೂಲಕ ದೇಹಕ್ಕೆ ಅಗತ್ಯವಿರುವಷ್ಟು ದೊರೆಯುವುದಿಲ್ಲ. ಇಂತಹವರಿಗೆ ವೈದ್ಯರು ಮಾತ್ರೆ ಅಥವಾ ಇಂಜೆಕ್ಷನ್ ರೂಪದಲ್ಲಿ ಡಿ ಜೀವಸತ್ವವನ್ನು ನೀಡುತ್ತಾರೆ.

ಜೀವಜಗತ್ತಿಗೆಲ್ಲಾ ಪ್ರಾಣಸೆಲೆಯಾದ ಸೂರ್ಯ ಮನುಜರಿಗೂ ಅನಿವಾರ್ಯ. ಡಿ ಜೀವಸತ್ವದ ಕುರಿತು ಯಾವುದೇ ಮಾಹಿತಿ ಇಲ್ಲದ ಕಾಲದಲ್ಲಿ ನಮ್ಮ ಹಿರಿಯರು ಸೂರ್ಯನ ಬಿಸಿಲಿಗೆ ಮೈಯೊಡ್ಡಿ ಸಹಜವಾಗಿ ತಮಗೆ ಅಗತ್ಯವಾದ ಚೈತನ್ಯ, ಶಕ್ತಿಯನ್ನು ಪಡೆಯುತ್ತಿದ್ದರು. ಕಾಲಾನಂತರ ಜನರು ಮನೆ ಬಿಟ್ಟು ಹೊರಬಂದರೆ ವಾಹನಗಳನ್ನು ಆಶ್ರಯಿಸುತ್ತಾರೆ. ಡಿ ಜೀವಸತ್ವ ದೊರೆಯುವ ವೇಳೆಯಲ್ಲಿ ಬಹುಪಾಲು ಜನರು ತಮ್ಮ ಕಚೇರಿ, ಶಾಲೆ, ಕಾಲೇಜುಗಳಲ್ಲಿ ಇರುತ್ತಾರೆ. ಜೊತೆಗೆ ತುಂಬುತೋಳಿನ ಶರ್ಟ್, ಪ್ಯಾಂಟ್ ಹಾಗೂ ಇತರ ದಿರಿಸುಗಳು ಸೂರ್ಯನ ಕಿರಣಗಳು ಮೈಸೋಕದಂತೆ ಮಾಡುತ್ತವೆ. ಇದರಿಂದ ಡಿ ಜೀವಸತ್ವದ ಕೊರತೆ ಸಾಮಾನ್ಯ ಎಂಬಂತಾಗಿದೆ.

ಸೂರ್ಯನ ದರ್ಶನ ಅಪರೂಪ ಎಂಬಂತಿರುವ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿನ ಕೆಲವರು ಸೂರ್ಯನ ಬಿಸಿಲಿಗಾಗಿ ಭಾರತದಂತಹ ದೇಶಗಳಿಗೆ ಬಂದು, ಇಲ್ಲಿನ ಸಮುದ್ರ ತೀರಗಳಲ್ಲಿ ಕಡಿಮೆ ಬಟ್ಟೆಯನ್ನು ಧರಿಸಿ ಸೂರ್ಯಸ್ನಾನ ಮಾಡುತ್ತಾರೆ. ಆದರೆ ಸೂರ್ಯನ ಬಿಸಿಲು ಸಾಕೆನ್ನುವಷ್ಟು ದೊರೆಯುವ ನಮ್ಮ ದೇಶದಲ್ಲಿ ಜಾಗೃತಿಯ ಕೊರತೆಯಿಂದ ಶೇ 90ಕ್ಕೂ ಅಧಿಕ ಮಕ್ಕಳಿಗೆ ಡಿ ಜೀವಸತ್ವದ ಕೊರತೆ ಇದೆ ಎಂಬ ವರದಿಗಳು ಗಾಬರಿ ಹುಟ್ಟಿಸುತ್ತವೆ.

ಸಾಮಾನ್ಯವಾಗಿ ಮಕ್ಕಳು ಮುಂಜಾನೆಯ ಸಾಮೂಹಿಕ ಪ್ರಾರ್ಥನೆಯನ್ನು ಪೂರೈಸಿ, ತರಗತಿಯೊಳಗೆ ಸೇರುತ್ತಾರೆ. ಎಲ್ಲೋ ಕೆಲವು ಶಾಲೆಗಳ ಮಕ್ಕಳು ಸಂಜೆಯ ವೇಳೆಗೆ ಶಾಲಾ ಮೈದಾನಕ್ಕೆ ಆಟವಾಡಲು ಬಂದರೂ ಡಿ ಜೀವಸತ್ವ ತಯಾರಿಗೆ ಅಗತ್ಯವಾದ ಬಿಸಿಲು ಸಂಜೆಯ ಬಿಸಿಲಿನಲ್ಲಿ ಇರುವುದಿಲ್ಲ. ಮಧ್ಯಾಹ್ನ 11ರಿಂದ 1ರ ಸಮಯದ ಬಿರು ಬಿಸಿಲಿಗೆ ಪ್ರತಿದಿನ ಕೆಲ ನಿಮಿಷ ಮೈಯೊಡ್ಡಿದಲ್ಲಿ ಡಿ ಜೀವಸತ್ವದ ಕೊರತೆ ಕಾಡದು ಎನ್ನುತ್ತಾರೆ ತಜ್ಞರು.

ಈ ಕಾರಣದಿಂದ ಫುಡ್ ಸೇಫ್ಟಿ ಮತ್ತು ಸ್ಟ್ಯಾಂಡರ್ಡ್ ಅಥಾರಿಟಿ ಆಫ್ ಇಂಡಿಯಾ ಸಂಸ್ಥೆಯು ಎನ್ಸಿಇಆರ್ಟಿ ಹಾಗೂ ಇತರ ಸಂಸ್ಥೆಗಳ ಸಹಯೋಗದೊಂದಿಗೆ 2018ರಲ್ಲಿ ದೆಹಲಿಯಲ್ಲಿನ ಶಾಲೆಗಳಲ್ಲಿ ‘ಬಿಸಿಲು ಯೋಜನೆ’ಯನ್ನು ಹಮ್ಮಿಕೊಂಡು, ಮಕ್ಕಳಲ್ಲಿ ಅಗತ್ಯ ಜಾಗೃತಿ ಮೂಡಿಸುವ ಜೊತೆ ಶಾಲೆಯ ಸಾಮೂಹಿಕ ಪ್ರಾರ್ಥನೆಯ ಸಮಯವನ್ನು ಮಧ್ಯಾಹ್ನ 11ರಿಂದ 1ರ ಸಮಯಕ್ಕೆ ಬದಲಾಯಿಸಲು ಪ್ರಯತ್ನಿಸಿತ್ತು. ರಾಜ್ಯದ ಶಾಲೆ ಕಾಲೇಜು, ಕಚೇರಿಗಳಲ್ಲಿಯೂ ಮಕ್ಕಳು ಮತ್ತು ವಯಸ್ಕರಲ್ಲಿನ ಡಿ ಜೀವಸತ್ವದ ಕೊರತೆಯ ನಿವಾರಣೆಗೆ ಬಿಸಿಲಿಗೆ ಮೈಯೊಡ್ಡುವ ಯೋಜನೆಯನ್ನು ಜಾರಿಗೆ ತರುವ ಅಗತ್ಯ ಇದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.