ಮಹಾರಾಷ್ಟ್ರದಲ್ಲಿ 10 ನೂತನ ವೈದ್ಯಕೀಯ ಕಾಲೇಜುಗಳನ್ನು ಇತ್ತೀಚೆಗೆ ವರ್ಚುಯಲ್ ಆಗಿ ಉದ್ಘಾಟಿಸುವ ವೇಳೆ ಪ್ರಧಾನಿ ನರೇಂದ್ರ ಮೋದಿ, ಮರಾಠಿ ಮಾಧ್ಯಮದಲ್ಲಿ ಎಂಬಿಬಿಎಸ್ ಪದವಿ ಓದುವ ಅವಕಾಶ ಶೀಘ್ರದಲ್ಲೇ ಮಹಾರಾಷ್ಟ್ರದ ವಿದ್ಯಾರ್ಥಿಗಳಿಗೆ ದೊರೆಯಲಿದೆ ಎಂದು ಹೇಳಿದ್ದಾರೆ. ಪ್ರಾದೇಶಿಕ ಭಾಷೆಗಳಲ್ಲಿ ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ವಿಜ್ಞಾನ- ತಂತ್ರಜ್ಞಾನಕ್ಕೆ ಸಂಬಂಧಿಸಿದ ಪದವಿ ಶಿಕ್ಷಣ ನೀಡುವುದನ್ನು ರಾಷ್ಟ್ರೀಯ ಶಿಕ್ಷಣ ನೀತಿ- 2020 ಜಾರಿಗೆ ಬಂದ ನಂತರ ಮುನ್ನೆಲೆಗೆ ತರಲಾಗುತ್ತಿದೆ.

2021ನೇ ಸಾಲಿನಲ್ಲಿ ದೇಶದ ವಿವಿಧೆಡೆ ಪ್ರಾದೇಶಿಕ ಭಾಷೆಗಳಲ್ಲಿ ಎಂಜಿನಿಯರಿಂಗ್ ಶಿಕ್ಷಣ ನೀಡಲು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಮುಂದಾಯಿತು. ಕನ್ನಡ, ಹಿಂದಿ, ಮರಾಠಿ, ಬಂಗಾಳಿ, ಮಲಯಾಳ, ತಮಿಳು ಸೇರಿದಂತೆ ವಿವಿಧ ಭಾಷಾ ಮಾಧ್ಯಮಗಳಲ್ಲಿ ಎಂಜಿನಿಯರಿಂಗ್ ಪದವಿ ಕೋರ್ಸ್ಗಳನ್ನು ಪ್ರಾರಂಭಿಸಲು ಒಂದಿಷ್ಟು ಕಾಲೇಜುಗಳು ಮುಂದೆ ಬಂದಿದ್ದವು. ಈ ಪ್ರಯೋಗ ಸಫಲಗೊಂಡಿದೆಯೋ ಅಥವಾ ವಿಫಲವಾಗಿದೆಯೋ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ನೆರವಾಗುವ ಅಂಕಿ-ಅಂಶಗಳು ಇಂದು ಕಣ್ಣೆದುರು ಇವೆ.

ಹಿಂದಿನ ಮೂರು ವರ್ಷಗಳಲ್ಲಿ ದೇಶದ 13 ರಾಜ್ಯಗಳ 35 ಕಾಲೇಜುಗಳಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಎಂಜಿನಿಯರಿಂಗ್ ಶಿಕ್ಷಣ ನೀಡುವ ಪ್ರಯತ್ನ ನಡೆಸಲಾಗಿದೆ. ಉತ್ತರಪ್ರದೇಶ, ರಾಜಸ್ಥಾನ, ಬಿಹಾರ, ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ವಿದ್ಯಾರ್ಥಿಗಳು ಹಿಂದಿ, ಮರಾಠಿ ಹಾಗೂ ತಮಿಳು ಮಾಧ್ಯಮದಲ್ಲಿ ಓದಲು ಮುಂದೆ ಬರುತ್ತಿದ್ದಾರೆ. ಪಶ್ಚಿಮ ಬಂಗಾಳ, ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಶೂನ್ಯ ದಾಖಲಾತಿಯ ಕಾರಣಕ್ಕೆ ಪ್ರಾದೇಶಿಕ ಭಾಷೆಯಲ್ಲಿ ಎಂಜಿನಿಯರಿಂಗ್ ಕಲಿಸುವ ಕಸರತ್ತಿಗೆ ಪೂರ್ಣವಿರಾಮ ಹಾಕಲಾಗಿದೆ. ಗುಜರಾತ್ನಲ್ಲೂ ಸ್ಥಳೀಯ ಭಾಷೆಯಲ್ಲಿ ಎಂಜಿನಿಯರಿಂಗ್ ಓದಲು ಒಬ್ಬ ವಿದ್ಯಾರ್ಥಿಯೂ ಮುಂದೆ ಬಂದಿಲ್ಲ.

ಅತಿ ಹೆಚ್ಚು ಬೇಡಿಕೆ ಹೊಂದಿರುವ ಕೋರ್ಸ್ ಆದ ಕಂಪ್ಯೂಟರ್ ಸೈನ್ಸ್ ಅನ್ನು ಪ್ರಾದೇಶಿಕ ಭಾಷಾ ಮಾಧ್ಯಮದಲ್ಲಿ ಆರಂಭಿಸಿದ ಕಾಲೇಜುಗಳಲ್ಲಿ ಮಾತ್ರ ಇಂದಿಗೂ ಗಮನಾರ್ಹ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ದಾಖಲಾಗುತ್ತಿದ್ದಾರೆ. ಇನ್ನು ಕಡಿಮೆ ಬೇಡಿಕೆ ಇರುವ ಮೆಕ್ಯಾನಿಕಲ್, ಸಿವಿಲ್ ಮತ್ತು ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಕೋರ್ಸ್ಗಳನ್ನು ಪ್ರಾದೇಶಿಕ ಭಾಷೆಯಲ್ಲಿ ನೀಡಲು ಮುಂದಾದ ಕಾಲೇಜುಗಳು, ವಿದ್ಯಾರ್ಥಿಗಳು ದಾಖಲಾಗದ ಕಾರಣಕ್ಕೆ ಆ ಪ್ರಯತ್ನವನ್ನು ಕೈಬಿಟ್ಟಿವೆ. ಕರ್ನಾಟಕದಲ್ಲಿ ಕೂಡ ಬೆರಳೆಣಿಕೆಯಷ್ಟು ಕಾಲೇಜುಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಮೆಕ್ಯಾನಿಕಲ್ ಮತ್ತು ಸಿವಿಲ್ ಎಂಜಿನಿಯರಿಂಗ್ ಕೋರ್ಸ್ಗಳನ್ನು ಪ್ರಾರಂಭಿಸಲಾಗಿತ್ತು. ಆಯಾ ಪ್ರಾದೇಶಿಕ ಭಾಷೆಯಲ್ಲಿ ಓದಬೇಕೆನ್ನುವ ಇಚ್ಛೆಗಿಂತ ಮುಖ್ಯವಾಗಿ ಇಂಗ್ಲಿಷ್ ಮಾಧ್ಯಮದ ಕಂಪ್ಯೂಟರ್ ಸೈನ್ಸ್ ಸೀಟು ಸಿಗದ ಕಾರಣಕ್ಕೆ ವಿದ್ಯಾರ್ಥಿಗಳು ಪ್ರಾದೇಶಿಕ ಭಾಷಾ ಮಾಧ್ಯಮಗಳತ್ತ ಮುಖ ಮಾಡುತ್ತಿದ್ದಾರೆ. 2021-22ನೇ ಶೈಕ್ಷಣಿಕ ಸಾಲಿನಲ್ಲಿ ಶುರುವಾದ ಪ್ರಾದೇಶಿಕ ಭಾಷಾ ಮಾಧ್ಯಮದ ಎಂಜಿನಿಯರಿಂಗ್ ಪದವಿಗೆ ದಾಖಲಾದ ವಿದ್ಯಾರ್ಥಿಗಳು, ಸದ್ಯ ಪದವಿಯ ಅಂತಿಮ ವರ್ಷದಲ್ಲಿ ಓದುತ್ತಿದ್ದಾರೆ. ಇವರನ್ನು ಉದ್ಯೋಗದಾತರು ಹೇಗೆ ಸ್ವೀಕರಿಸಲಿದ್ದಾರೆ
ಎಂಬುದರ ಆಧಾರದಲ್ಲಿ ಪ್ರಾದೇಶಿಕ ಮಾಧ್ಯಮದ ಎಂಜಿನಿಯರಿಂಗ್ ಶಿಕ್ಷಣದ ಭವಿಷ್ಯ ನಿರ್ಧಾರವಾಗಲಿದೆ.

ವೈದ್ಯಕೀಯ ಶಿಕ್ಷಣಕ್ಕೆ ಬಹಳಷ್ಟು ಬೇಡಿಕೆ ಇರುವುದರಿಂದ ಒಂದು ವೇಳೆ ಪ್ರಾದೇಶಿಕ ಭಾಷಾ ಮಾಧ್ಯಮದಲ್ಲಿ ಎಂಬಿಬಿಎಸ್ ಪದವಿ ಪ್ರಾರಂಭಿಸಿದರೆ ವಿದ್ಯಾರ್ಥಿಗಳು ದಾಖಲಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಪ್ರಶ್ನೆ ಇರುವುದು ಇಂತಹ ಶಿಕ್ಷಣ ನೀಡಲು ಬೇಕಿರುವ ಸಂಪನ್ಮೂಲಗಳ ಕ್ರೋಡೀಕರಣ ಮತ್ತು ಪೂರ್ವಸಿದ್ಧತೆ ನಡೆದಿದೆಯೇ ಎಂಬ ಕುರಿತು. ಮಹಾರಾಷ್ಟ್ರ ವಿಧಾನಸಭೆಗೆ ಸದ್ಯದಲ್ಲೇ ಚುನಾವಣೆ ನಡೆಯಲಿರುವುದರಿಂದ, ಚುನಾವಣಾ ಲಾಭವನ್ನು ಗಣನೆಗೆ ತೆಗೆದುಕೊಂಡು ಮೋದಿ ಅವರು ಮರಾಠಿ ಮಾಧ್ಯಮದಲ್ಲಿ ವೈದ್ಯಕೀಯ ಶಿಕ್ಷಣ ಪ್ರಾರಂಭಿಸುವ ಇಂಗಿತ ವ್ಯಕ್ತಪಡಿಸಿರಬಹುದು. ಪ್ರಾದೇಶಿಕ ಭಾಷೆಯಲ್ಲಿ ವೈದ್ಯಕೀಯ ಶಿಕ್ಷಣದ ಕೋರ್ಸುಗಳನ್ನು ತೆರೆಯುವ ಅಸಲಿ ಕಾಳಜಿಯು ಒಕ್ಕೂಟ ಸರ್ಕಾರಕ್ಕೆ ಇದ್ದರೆ, ಮೊದಲಿಗೆ ಅದರ ಸಾಧಕ-ಬಾಧಕಗಳ ಕುರಿತು ತಜ್ಞರೊಂದಿಗೆ ಸಮಾಲೋಚನೆ ನಡೆಸುವುದು ಸೂಕ್ತ. ಇಲ್ಲವಾದರೆ ಪ್ರಾದೇಶಿಕ ಭಾಷೆಯಲ್ಲಿ ಎಂಜಿನಿಯರಿಂಗ್ ಶಿಕ್ಷಣ ನೀಡುವ ಪ್ರಯೋಗಕ್ಕೆ ಬಂದಿರುವ ಗತಿಯೇ ವೈದ್ಯಕೀಯ ಶಿಕ್ಷಣಕ್ಕೂ ಒದಗುವ ಅಪಾಯವಿದೆ.

ಎಂಜಿನಿಯರಿಂಗ್ ವೃತ್ತಿಗೆ ಹೋಲಿಸಿದರೆ ವೈದ್ಯಕೀಯ ವೃತ್ತಿಯಲ್ಲಿ ಇರುವವರಿಗೆ ಪ್ರಾದೇಶಿಕ ಭಾಷೆಯಲ್ಲಿ ವ್ಯವಹರಿಸಬೇಕಾದ ಅನಿವಾರ್ಯ ಹೆಚ್ಚು ಎದುರಾಗಲಿದೆ. ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಜ್ಞಾನ ಮತ್ತು ಮಾಹಿತಿ ಪ್ರಾದೇಶಿಕ ಭಾಷೆಗಳಲ್ಲಿ ಮತ್ತಷ್ಟು ದೊರೆಯಲಾರಂಭಿಸಿದರೆ ಎಲ್ಲರಿಗೂ ಒಳಿತು. ಆದರೆ ಸೂಕ್ತ ತಯಾರಿ, ಪೂರ್ವಸಿದ್ಧತೆ ಮತ್ತು ಸಮಗ್ರ ವಿಶ್ಲೇಷಣೆ ಕೈಗೊಳ್ಳದೆ, ರಾಜಕೀಯ ಲಾಭ-ನಷ್ಟಗಳನ್ನು ಗಣನೆಗೆ ತೆಗೆದುಕೊಂಡು ಮುನ್ನುಗ್ಗಿದರೆ ಅದರ ಅಡ್ಡ
ಪರಿಣಾಮಗಳು ಬಹುಬೇಗ ಮುನ್ನೆಲೆಗೆ ಬರುತ್ತವೆ.

ಪ್ರಾದೇಶಿಕ ಭಾಷೆಗಳಲ್ಲಿ ವಿಜ್ಞಾನ– ತಂತ್ರಜ್ಞಾನಕ್ಕೆ ಸಂಬಂಧಿಸಿದ ಪದವಿ ಶಿಕ್ಷಣ ನೀಡುವ ಆಶಯವನ್ನು ಸುಸ್ಥಿರ ಮಾದರಿಯಲ್ಲಿ ಕಾರ್ಯರೂಪಕ್ಕೆ ತರುವುದು ಅಷ್ಟೇನೂ ಸರಳವಲ್ಲ. ಈ ಕುರಿತು ಚಿಂತಿಸುವವರು, ಇರುವ ತೊಡಕುಗಳನ್ನು ನಿವಾರಿಸುವ ಕಡೆಗೆ ಮೊದಲು ಹೆಚ್ಚಿನ ಗಮನಹರಿಸಬೇಕಿದೆ. ಸೂಕ್ತ ತಯಾರಿ ನಡೆಸದೆ ಇಂತಹ ಪ್ರಯೋಗಗಳನ್ನು ಅನುಷ್ಠಾನಕ್ಕೆ ತರುವುದರಿಂದ ಅನುಕೂಲಕ್ಕಿಂತ ಅನನುಕೂಲಗಳೇ ಹೆಚ್ಚು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.