ಕನ್ನಡ ಅತ್ಯಂತ ಜೀವಂತವಾದ, ಚಲನಶೀಲವಾದ ಭಾಷೆ. ಇದನ್ನು ಮಾತನಾಡುವ ಜನ ವ್ಯಾಕರಣ, ಛಂದಸ್ಸು, ಸಂಧಿ– ಸಮಾಸ ನೋಡಿಕೊಂಡು, ಉಚ್ಚಾರಣೆಯ ಕುರಿತು ಎಚ್ಚರಿಕೆ ವಹಿಸಿ ಮಾತನಾಡು ವುದಿಲ್ಲ. ದಿನನಿತ್ಯದ ಗ್ರಹಿಕೆ, ಅರಿವು, ಸಂವಹನದ ಅಗತ್ಯಗಳನ್ನು ಪೂರೈಸುವಂತೆ ಪ್ರತಿಯೊಬ್ಬರೂ ಬಳ
ಸುತ್ತಿರುವುದರಿಂದ ಕನ್ನಡ ಭಾಷೆಯು ಕ್ಷಣಕ್ಷಣಕ್ಕೂ ಬದಲಾಗುತ್ತಲೇ ಬೆಳೆಯುತ್ತಲೇ ಇರುತ್ತದೆ. ಜೀವಂತ ಸಮುದಾಯಗಳು ಆಡುಮಾತಿನಲ್ಲಿ ಬಳಸುವ ಯಾವುದೇ ಭಾಷೆಯ ಸಂದರ್ಭದಲ್ಲಿ ಈ ಮಾತು ನಿಜ.

ಕನ್ನಡ ಮಾತನಾಡುವವರು ಕರ್ನಾಟಕದಲ್ಲಿ ಮಾತ್ರ ಅಲ್ಲ, ಹೊರನಾಡು, ಹೊರದೇಶಗಳಲ್ಲೂ ಇದ್ದಾರೆ. ಕರ್ನಾಟಕದ ಗಡಿಯೊಳಗೆ ಮಾತನಾಡುವ ಕನ್ನಡವನ್ನು ಗಮನಿಸಿದರೂ ಸ್ಪಷ್ಟವಾಗಿ ಪ್ರತ್ಯೇಕಿಸಲು ಸಾಧ್ಯವಿಲ್ಲದ ಆದರೂ ಭಿನ್ನವಾದ ಅಸಂಖ್ಯಾತ ಶೈಲಿಗಳನ್ನು ನೋಡುತ್ತೇವೆ. ಅಧ್ಯಯನದ ಅನುಕೂಲಕ್ಕಾಗಿ ಇವುಗಳನ್ನು ಕಲಬುರಗಿ ಕನ್ನಡ, ಧಾರವಾಡ ಕನ್ನಡ, ಮಂಗಳೂರು ಕನ್ನಡ ಮತ್ತು ಮೈಸೂರು ಕನ್ನಡ ಎಂದು ವಿಭಜಿಸಲಾಗುತ್ತದೆ. ಇವು ಪ್ರಾದೇಶಿಕ ಉಪಭಾಷೆಗಳು. ಒಂದೊಂದು ಪ್ರದೇಶದಲ್ಲಿ ಮತ್ತೆ ಒಳಹೊಕ್ಕು ನೋಡಿದರೆ ಜಿಲ್ಲೆಜಿಲ್ಲೆಗೆ, ತಾಲ್ಲೂಕು ತಾಲ್ಲೂಕಿಗೆ ಮಾತನಾಡುವ ಕನ್ನಡ ವಿಶಿಷ್ಟವಾಗಿರುವುದು ಕಂಡುಬರುತ್ತದೆ.

ಪ್ರತಿಯೊಂದು ಪ್ರಾದೇಶಿಕ ಉಪಭಾಷೆಯಲ್ಲಿಯೇ ಮತ್ತೆ ಜಾತಿ, ಧರ್ಮ, ಕಸುಬು, ಲಿಂಗ, ಕನ್ನಡವಲ್ಲದ ಮಾತೃಭಾಷೆಯಂತಹವುಗಳ ಆಧಾರದಲ್ಲಿಯೂ ವೈಶಿಷ್ಟ್ಯ ಕಂಡುಬರುತ್ತದೆ. ಆಡುಮಾತಿನಲ್ಲಿ ಎಷ್ಟೊಂದು ವ್ಯತ್ಯಾಸ ಇರುತ್ತದೆ ಎಂದರೆ, ಉದಾಹರಣೆಗೆ, ಮಳವಳ್ಳಿಯಲ್ಲಿ ಮಾತನಾಡುವ ಕನ್ನಡ ಭಾಲ್ಕಿಯವರಿಗೆ, ದಾಂಡೇಲಿಯಲ್ಲಿ ಮಾತನಾಡುವವರ ಕನ್ನಡ ಮುಳಬಾಗಿಲಿನವರಿಗೆ ಹೆಚ್ಚೆಂದರೆ ಶೇ 30- 40ರಷ್ಟು ಅರ್ಥವಾಗಬಹುದು. ಆದರೂ ಇಡೀ ಕರ್ನಾಟಕದಲ್ಲಿ ಅವರೆಲ್ಲರೂ ಮಾತನಾಡುವುದು ಕನ್ನಡವೇ! ಇದೇ ಜೀವಂತ ಭಾಷೆಯ ವೈಶಿಷ್ಟ್ಯ ಮತ್ತು ಮಾಧುರ್ಯ.

ಆದರೆ, ಬರಹದ ಭಾಷೆ ಹಾಗಲ್ಲ. ಬರಹದ ಭಾಷೆಯು ಎಲ್ಲಾ ಆಡುಮಾತಿನ ವೈವಿಧ್ಯದಿಂದ ಸಾಮಗ್ರಿಯನ್ನು ಪಡೆದು ಬೆಳೆಯುತ್ತದೆ. ಬರಹದ ಭಾಷೆಯನ್ನು ಬಳಸುತ್ತಾ ಹೋದ ಹಾಗೆ ಅದು ವಿವಿಧ ಆಡುಮಾತಿನ ಪ್ರಕಾರಗಳ ಮೇಲೆ ಪ್ರಭಾವ ಬೀರಬಹುದು, ಕೆಲವೊಮ್ಮೆ ವಿಶಿಷ್ಟ ಆಡುಮಾತಿನ ಶೈಲಿಯಿಂದ ತಾನೂ ಪ್ರಭಾವಕ್ಕೆ ಒಳಗಾಗಬಹುದು. ಆದರೂ ಬರಹದ ಭಾಷೆ ಒಂದು ರೀತಿ ಉದ್ದೇಶಪೂರ್ವಕವಾಗಿ ಬೆಳೆದುನಿಂತಿರುವ, ಅಖಿಲ ಕರ್ನಾಟಕ ಮಟ್ಟದ ಲಿಖಿತ ಅಥವಾ ಮುದ್ರಿತ ಸಂವಹನಕ್ಕಾಗಿ ವಿಕಾಸಹೊಂದಿರುವ ಶೈಲಿ. ಈ ಮಾದರಿಯ ಕನ್ನಡವು ಯಾವುದೇ ಪ್ರದೇಶದ ಮನೆಮಾತಾಗಿರುವುದಿಲ್ಲ. ಆದರೂ ಇದು ಎಲ್ಲರ ಕನ್ನಡ.

ಕನ್ನಡವನ್ನು ಅಭಿವ್ಯಕ್ತಿಗಾಗಿ ಬಳಸುವವರು, ಎಂದರೆ, ಕಥೆ, ಕಾದಂಬರಿ, ಕಾವ್ಯ, ನಾಟಕದಂತಹ ರಚನೆಗಳಲ್ಲಿ ಯಾವುದಾದರೂ ಪ್ರಾದೇಶಿಕ, ಸಾಂಸ್ಕೃತಿಕ, ಆಡುಮಾತಿನ ಶೈಲಿಯನ್ನು ಯಶಸ್ವಿಯಾಗಿ ಬಳಸಬಹುದು. ಆ ಕೆಲಸವನ್ನು ಚೆನ್ನಾಗಿ ಮಾಡಿದಾಗ, ಆ ಸಾಹಿತ್ಯದಲ್ಲಿ ಒಂದು ಪ್ರದೇಶದ, ಜಾತಿಯ, ಉದ್ಯೋಗದ ಸೊಗಡು ಎದ್ದು ಕಾಣುತ್ತದೆ. ಬರಹದ ಶೈಲಿಯಲ್ಲಿಯೂ ಒಂದೊಂದು ಕ್ಷೇತ್ರದ ಅಗತ್ಯಕ್ಕೆ ತಕ್ಕ ಹಾಗೆ ವಿಶಿಷ್ಟ ಶೈಲಿಗಳು ವಿಕಾಸ ಹೊಂದಿರುತ್ತವೆ. ಉದಾಹರಣೆಗೆ, ಆಡಳಿತ, ನ್ಯಾಯಾಂಗ, ಉದ್ದಿಮೆ, ಶಿಕ್ಷಣ, ಸಂಶೋಧನೆ, ವಿಜ್ಞಾನ, ಸಮಾಜವಿಜ್ಞಾನ, ವೈದ್ಯಕೀಯ ಹೀಗೆ ತಾಂತ್ರಿಕ ಬರಹದ ಭಾಷೆಯ ಸರ್ವೇಸಾಮಾನ್ಯ ಲಕ್ಷಣಗಳು ಕಂಡುಬಂದರೂ, ಮುಖ್ಯವಾಗಿ ಪಾರಿಭಾಷಿಕ ಪದಗಳ ಮಟ್ಟಿಗಾದರೂ ಆಯಾ ಕ್ಷೇತ್ರದ ಬರಹಶೈಲಿಯು ವಿಶಿಷ್ಟವಾಗಿರುತ್ತದೆ.

ಮತ್ತೆ ಮಾತಿನ ಶೈಲಿಗೆ ಹಿಂದಿರುಗೋಣ. ಪ್ರಾದೇಶಿಕ ಉಪಭಾಷೆಗಳಲ್ಲಿ ಮಾತನಾಡುವಾಗ ಅದು ಸ್ಥಳೀಯ ಸಂವಹನದ ಅಗತ್ಯಗಳನ್ನು ಸಮರ್ಥವಾಗಿ ನಿಭಾಯಿಸುವಂತೆ ಇರುತ್ತದೆ. ಅಲ್ಲಿಗೆ ಅದು ಸಾರ್ಥಕ. ಆದರೆ, ಬೀದರ್ನ ಒಬ್ಬರು ಅಖಿಲ ಕರ್ನಾಟಕ ಸಮಾವೇಶದಲ್ಲಿ ಉಳಿದ ಪ್ರಾದೇಶಿಕ ಭಾಷೆಯವರಿಗೂ ಅರ್ಥವಾಗುವ ಹಾಗೆ ಭಾಷಣ ಮಾಡಬೇಕು ಎಂದಾದರೆ, ಅವರು ತಮ್ಮ ಅಪ್ಪಟ ಮನೆ ಮಾತಿನಲ್ಲಿ ಮಾತನಾಡುವುದಿಲ್ಲ. ಬದಲಿಗೆ, ತಮ್ಮ ಉಪಭಾಷೆಯ ಮಿತಿಯನ್ನು ಮೀರಿ, ಬರಹದ ಭಾಷೆಯ ಶೈಲಿಯಿಂದ ನೆರವು ಪಡೆಯಲು ನೋಡುತ್ತಾರೆ. ಇದು ಇನ್ನೊಂದು ರೀತಿಯ ಶೈಲಿಯಾಗಿ ಹೊಮ್ಮುತ್ತದೆ.

ಅಖಿಲ ಕರ್ನಾಟಕ ಮಟ್ಟದಲ್ಲಿ ತಲುಪುವ ಉದ್ದೇಶವಿರುವ ಮುದ್ರಣ ಮಾಧ್ಯಮದ ಪತ್ರಿಕೆಗಳು, ನಿಯತಕಾಲಿಕಗಳು ಯಾವುದೇ ಪ್ರದೇಶದಲ್ಲಿ ಆಡುವ ಮಾತನ್ನು ಅನುಸರಿಸದೆ ಸರ್ವೇಸಾಮಾನ್ಯ ಬರಹದ ಶೈಲಿಯನ್ನು ಅನುಸರಿಸುತ್ತವೆ. ಅದೇ ರೀತಿ ರೇಡಿಯೊ, ಟಿ.ವಿ., ವಿಡಿಯೊದಂತಹ ಮಾಧ್ಯಮಗಳೂ ಅದೇ ಬರಹ ಭಾಷೆಯ ಆಡುಮಾತಿನ ರೂಪವೇನೋ ಎನ್ನವಂಥ ಭಾಷೆಯನ್ನು ಬಳಸುತ್ತವೆ. ಹೀಗೆ ಮಾಡುವಾಗ ಸಹಜವಾಗಿಯೇ ಪದ, ವಾಕ್ಯರಚನೆ, ಉಚ್ಚಾರಣೆ ಎಲ್ಲವೂ ಬರಹ ರೂಪದ ಭಾಷೆಯ ಶಿಷ್ಟತೆಯನ್ನು ಅನುಸರಿಸಬೇಕಾಗುತ್ತದೆ. ಅದಕ್ಕನುಗುಣ ವಾಗಿ ಅಲ್ಪಪ್ರಾಣ, ಮಹಾಪ್ರಾಣ, ಹ- ವ್ಯಂಜನದ ಬದಲು ಆ ಅಥವಾ ಅ ಸ್ವರವನ್ನು ಬಳಸುವುದು, ಸ,ಶ,ಷ ವ್ಯತ್ಯಾಸವಿಲ್ಲದೇ ಮಾತಾಡುವುದು ಅಷ್ಟರಮಟ್ಟಿಗೆ ತಪ್ಪಾಗುತ್ತದೆ. ಕನ್ನಡದಲ್ಲಿ ದನ-ಧನ, ಆದರ- ಹಾದರ, ಹಕ್ಕಿ- ಅಕ್ಕಿ, ಶಂಕರ- ಸಂಕರದಂತಹ ಒಂದೇ ಧ್ವನಿಮಾದ ವ್ಯತ್ಯಾಸದಲ್ಲಿ ಅರ್ಥವೇ ಬದಲಾಗುವ ಸನ್ನಿವೇಶದಲ್ಲಂತೂ ಬರಹದ ಹಾಗೆ ಸ್ಪಷ್ಟ ಉಚ್ಚಾರಣೆಯೂ ಸರಿಯಾಗಿ ಇರಬೇಕಾಗುತ್ತದೆ.

ಕೊನೆಯದಾಗಿ, ಉಚ್ಚಾರಣೆ ಸರಿಯೋ ಉಚ್ಛಾರಣೆ ಸರಿಯೋ, ನೀವೇ ಹೇಳಿ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.