ವಿಜ್ಞಾನವೆಂದರೆ ಜೀವನವೇ ಆಗಿರುವ ಈ ದಿನಗಳಲ್ಲಿ, ಅದು ಕೊಡುವ ಸೌಲಭ್ಯಗಳಿಲ್ಲದ ಬದುಕನ್ನು ಊಹಿಸುವುದೂ ಅಸಾಧ್ಯ. ಯಾವುದೇ ವ್ಯಕ್ತಿ ತಾನು ಹೇಳುತ್ತಿರುವುದು ಸತ್ಯ ಎಂದು ದೃಢೀಕರಿಸಲು ‘ವೈಜ್ಞಾನಿಕವಾಗಿ ಹೇಳುವುದಾದರೆ...’ ಎಂದೇಪ್ರಾರಂಭಿಸುತ್ತಾನೆ. ವಿಜ್ಞಾನದ ಸೌಲಭ್ಯಗಳನ್ನು ದಿನವಿಡೀ ಬಳಸುತ್ತಾ ಇರುವ ನಾವು ಇಂದು ನೈಸರ್ಗಿಕವಾಗಿ ಉಳಿದಿಲ್ಲ.

ಏನಿಲ್ಲವೆಂದರೂ ಕನ್ನಡಕವಾದರೂ ಜೀವನದ ಒಂದಲ್ಲ ಒಂದು ಹಂತದಲ್ಲಿ ನಮ್ಮನ್ನು ಬಯೊನಿಕ್ ಆಗಿಸುತ್ತದೆ. ಇನ್ನು ಕೃತಕ ಹಲ್ಲು, ಪೇಸ್ ಮೇಕರ್, ಮೊಳಕಾಲ ಚಿಪ್ಪು, ವ್ಯಾಕ್ಸಿನೇಷನ್, ಹಿಯರಿಂಗ್ ಏಡ್... ಮುಂತಾದವುಗಳ ಬಗ್ಗೆಯಂತೂ ಹೇಳುವಂತೆಯೇ ಇಲ್ಲ. ವಿಜ್ಞಾನದ ಎಲ್ಲ ಸಂಶೋಧನೆಗಳು ನಡೆಯುವುದು ಪ್ರಯೋಗಶಾಲೆಯಲ್ಲಿಯೇ ಆದರೂ, ಅಂತಿಮವಾಗಿ ಅದು ತನ್ನ ಸಾರ್ಥಕತೆಯನ್ನು ಕಂಡುಕೊಳ್ಳುವುದು ಜನಸಾಮಾನ್ಯನಿಗೆ ಉಪಯೋಗವಾದಾಗ ಹಾಗೂ ಅವನ ಜೀವನ ಮೌಲ್ಯವನ್ನು ಹೆಚ್ಚಿಸಿದಾಗ. ಇದರಿಂದ ವಿಜ್ಞಾನ, ಜನರಿಗಾಗಿ ಇದೆ ಎನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ. ಆದರೆ ವಿಜ್ಞಾನದಿಂದ ಇಷ್ಟೆಲ್ಲವನ್ನೂ ಪಡೆದ ನಾವು ವಿಜ್ಞಾನಕ್ಕಾಗಿ ಏನನ್ನು ಮಾಡಿದ್ದೇವೆ ಎಂದು ಯೋಚಿಸಬೇಕಾದ ಸಮಯ ಇದಾಗಿದೆ.

ಫೆಬ್ರುವರಿ 28, ರಾಷ್ಟ್ರೀಯ ವಿಜ್ಞಾನ ದಿನ. ನೊಬೆಲ್ ಪ್ರಶಸ್ತಿ ಪುರಸ್ಕೃತ ಭಾರತೀಯ ವಿಜ್ಞಾನಿ ಸರ್ ಸಿ.ವಿ.ರಾಮನ್ ತಮ್ಮ ‘ರಾಮನ್ ಪರಿಣಾಮ’ವನ್ನು ಪ್ರಕಟಿಸಿದ ದಿನವನ್ನು ದೇಶವು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸುತ್ತದೆ. ಜನರಲ್ಲಿ ವೈಜ್ಞಾನಿಕ ಮನೋಭಾವವನ್ನು ಉದ್ದೀಪಿಸಲು 1987ರಿಂದ ಈ ದಿನ ಆಚರಣೆಯಲ್ಲಿದೆ. ವಿಜ್ಞಾನವನ್ನು ಜನರಿಗೆ ತಲುಪಿಸಲು ಶ್ರಮಿಸುತ್ತಿರುವ ಸಂಸ್ಥೆ ಮತ್ತು ವ್ಯಕ್ತಿಗಳಿಗೆ ಕೇಂದ್ರ ಸರ್ಕಾರವು ರಾಷ್ಟ್ರ ಮಟ್ಟದ ಪುರಸ್ಕಾರವನ್ನು ಸಹ ನೀಡಿ ಗೌರವಿಸುತ್ತದೆ. ವಿಜ್ಞಾನ ದಿನದ ಈ ಬಾರಿಯ ಘೋಷವಾಕ್ಯ ‘ಜನರಿಗಾಗಿ ವಿಜ್ಞಾನ ಮತ್ತು ವಿಜ್ಞಾನಕ್ಕಾಗಿ ಜನರು’. ಈ ಕಾಲಘಟ್ಟದಲ್ಲಿ ನಿಜಕ್ಕೂ ಇಂಥದ್ದೊಂದು ಧ್ಯೇಯವಾಕ್ಯ ಬಹಳ ಪ್ರಸ್ತುತ ಎನಿಸುತ್ತದೆ.

ವಿಜ್ಞಾನ ಒಂದು ಅಧ್ಯಯನ ವಿಭಾಗ, ಹೀಗಾಗಿ ವಿಜ್ಞಾನಕ್ಕಾಗಿ ಸಾಮಾನ್ಯ ಜನರಾದ ನಾವೇನು ಮಾಡಬಹುದು ಎನ್ನುವವರಿದ್ದಾರೆ. ಆದರೆ, ವಿಜ್ಞಾನ ಕೊಡುವ ಸವಲತ್ತುಗಳನ್ನು ಬಳಸಿಕೊಳ್ಳಲು ಹೇಗೆ ಮುಂದಾದೆವೋ ಹಾಗೆಯೇ ವಿಜ್ಞಾನಕ್ಕಾಗಿ ಏನನ್ನಾದರೂ ಮಾಡಬೇಕು ಎನ್ನುವಾಗಲೂ ನಾವು ಮುಂದೆ ಬರಬೇಕು. ಮೊದಲನೆಯದಾಗಿ, ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಹಾಗೂ ಏನನ್ನಾದರೂ ಒಪ್ಪಿಕೊಳ್ಳುವ ಮುನ್ನ ವಿಜ್ಞಾನದ ಮೂಲ ಮಂತ್ರವಾದ ಪ್ರಶ್ನಿಸುವಿಕೆಯನ್ನು ರೂಢಿಸಿಕೊಳ್ಳಬೇಕು. ಯಾರಾದರೂ ‘ಇದೂ ವೈಜ್ಞಾನಿಕವೇ’ ಎಂದು ಹೇಳಿದಾಗ, ‘ಇದೆಲ್ಲವೂ ನಮ್ಮಲ್ಲಿತ್ತು’ ಅಥವಾ ‘ಎಲ್ಲವೂ ಹೊರಗಿನಿಂದ ಬಂದದ್ದು’ ಎಂದಾಗ ಪರಾಮರ್ಶಿಸಿ ನೋಡುವ, ಸಂದೇಹ ಬಂದದ್ದನ್ನು ತಿಳಿದವರಲ್ಲಿ ಕೇಳಿ ತಿಳಿಯುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು.

ವಿಜ್ಞಾನದ ಸೌಲಭ್ಯಗಳನ್ನು ಬಳಸಿಕೊಂಡು ಸಮಾಜದಲ್ಲಿ ಮೌಢ್ಯಗಳನ್ನು ಹರಡುತ್ತಿರುವ ಹಲವರನ್ನು ನೋಡುತ್ತಿದ್ದೇವೆ. ಸಾಮಾಜಿಕ ಜಾಲತಾಣಗಳಿಂದ ವಿಷಯ ಬಹು ಬೇಗ ಸಮಾಜದಲ್ಲಿ ಹರಡುತ್ತದೆ. ನಿಮಗೆ ಬಂದ ಯಾವುದೇ ಸಂದೇಶವನ್ನು ಮುಂದಕ್ಕೆ ರವಾನಿಸುವ ಮುನ್ನ ಅದರ ಸತ್ಯಾಸತ್ಯತೆಯ ಪರಾಮರ್ಶೆ ಸಹ ಅಷ್ಟೇ ಅವಶ್ಯಕ. ಇದು ಆಚರಣೆ, ಜಾಹೀರಾತು ಅಥವಾ ಮತ ಚಲಾಯಿಸುವ ವಿಷಯಕ್ಕೆ ಸಂಬಂಧಿಸಿದ್ದಿರಬಹುದು ಇಲ್ಲವೇ ನಿಮ್ಮ ಆಹಾರ, ಜೀವನ ವಿಧಾನ, ದಪ್ಪಗಾಗಲು, ತೆಳ್ಳಗಾಗಲು, ವಿವಿಧ ರೋಗಗಳಿಗೆ ಮನೆಮದ್ದು ಮಾಡಲು ಯಾವುದೇ ಆಗಿರಲಿ, ಇವನ್ನು ಹೇಳುತ್ತಿರುವವರು ಯಾರು, ಯಾಕೆ ಅದನ್ನು ಹೇಳುತ್ತಿದ್ದಾರೆ ಎಂದೊಮ್ಮೆ ವಿಚಾರ ಮಾಡುವುದು ಕೂಡ ವಿಜ್ಞಾನಕ್ಕೆ ನಾವು ನೀಡುವ ಕೊಡುಗೆ.

ಮಾನವ ಹತ್ತು ಸಾವಿರ ವರ್ಷಗಳ ಹಿಂದೆ ಒಂದೆಡೆ ನೆಲೆ ನಿಂತು ಬದುಕನ್ನು ಕಟ್ಟಿಕೊಳ್ಳಲು ಪ್ರಾರಂಭಿಸಿದಾಗ, ಅವನ ಮುಂದೆ ತನ್ನ ನಿತ್ಯದ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವ ಮೂಲಭೂತವಾದ ಸವಾಲುಗಳು ಇದ್ದವು. ಇದೇ ಮಾನವನ ಕೈಗೆ ಸಿಕ್ಕ ವಿಜ್ಞಾನವೆಂಬ ಅಸ್ತ್ರ. ಅವನದನ್ನು ಬಳಸಿಕೊಳ್ಳುವಲ್ಲಿ ತೋರಿದ ಜಾಣ್ಮೆ ಅವನನ್ನು ಉಳಿದೆಲ್ಲ ಜೀವಿಗಳಿಗಿಂತ ಮತಿವಂತನನ್ನಾಗಿಸಿ ವಿಕಾಸದ ಹಾದಿಯಲ್ಲಿ ಮುನ್ನಡೆಸಿ, ಇಂದು ಅವನಿಗೆ ಅವನು ಮಾತ್ರ ಪ್ರತಿಸ್ಪರ್ಧಿಯಾಗುವಂತೆ ಮಾಡಿದೆ. ಆದರೆ, ಈ ಮತಿವಂತ ಮಾತ್ರ ‘ಈ ಗ್ರಹದ ಮೇಲೆ ಇರುವುದೆಲ್ಲ ನನಗಾಗಿ’ ಎಂಬಂತೆ ದೋಚುತ್ತಾ ಮುನ್ನಡೆದ ಪರಿಣಾಮವಾಗಿ ಇಂದು ತನ್ನ ವಿನಾಶಕ್ಕೆ ತಾನೇ ಕಾರಣನಾಗುತ್ತಿದ್ದಾನೆ. ಈ ಎಚ್ಚರಿಕೆಯನ್ನು ಸಹ ಅವನಿಗೆ ವಿಜ್ಞಾನವೇ ಕೊಟ್ಟಿದೆ.

ಇಂದು ಯಾವುದೇ ವಿಷಯವನ್ನು, ಅದು ಫಲ ಜ್ಯೋತಿಷವಾಗಿರಲಿ ಅಥವಾ ಜಾಗತಿಕ ತಾಪಮಾನದ ಏರಿಕೆಯಾಗಿರಲಿ, ಯಾವುದೇ ವಿಷಯದ ಪರ ಇಲ್ಲವೇ ವಿರುದ್ಧವಾಗಿರಲಿ ಅದನ್ನು ಜನ ನಂಬುವಂತೆ ಮಾಡಲು ವಿಜ್ಞಾನದ ಬಳಕೆಯಾಗುತ್ತಿದೆ. ಆದ್ದರಿಂದ ಯಾವ ವಿಜ್ಞಾನ ಸತ್ಯ ಎಂದು ಯೋಚಿಸಬೇಕಾದ ಹೊಸ ಸವಾಲೊಂದು ತಲೆಯೆತ್ತಿದೆ. ಇಂತಹ ಸಂದರ್ಭದಲ್ಲಿ ವಿಜ್ಞಾನವನ್ನು ಅಧ್ಯಯನ ಮಾಡುವ ಮೂಲಕ ಮಾತ್ರವಲ್ಲ ವಿಜ್ಞಾನವೇ ಕೊಟ್ಟಿರುವ ಪ್ರಶ್ನಿಸುವ ಮನೋಭಾವವನ್ನು ವಿಜ್ಞಾನಕ್ಕೂ ಅನ್ವಯಿಸಿ ನೋಡಬೇಕಾದ ಕಾಲ ಇದಾಗಿದೆ. ಈ ಮೂಲಕ ವಿಜ್ಞಾನವನ್ನು ನಿಜವಾದ ಅರ್ಥದಲ್ಲಿ ನಮ್ಮದಾಗಿಸಿಕೊಳ್ಳಬೇಕಿದೆ. ಅದು ಬದುಕಿನ ವಿಧಾನವಾಗಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.