ಅದು, ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸಂದರ್ಶನ ಕೌಶಲ ಕಾರ್ಯಾಗಾರ. ಶಿಬಿರಾರ್ಥಿ ಯುವತಿಯೊಬ್ಬಳು ಕೇಳಿದಳು. ‘ಸರ್, ನನಗೆ ಇನ್ನೊಬ್ಬರ ಜೊತೆಗೆ ಸಂಭಾಷಿಸುವಾಗ ಅವರ ಮುಖವನ್ನು ನೋಡುತ್ತಾ ಮಾತನಾಡಲು ಆಗುವುದಿಲ್ಲ. ಏನೋ ಒಂಥರ ಮುಜುಗರ. ಆಗೆಲ್ಲ ನನ್ನ ದೃಷ್ಟಿ ಇನ್ನೆಲ್ಲೋ ಇರುತ್ತೆ. ಹಾಗಂತ ಇದೊಂದು ಸಮಸ್ಯೆ ಎಂದು ಇಲ್ಲಿಯವರೆಗೂ ಅನಿಸಿರಲಿಲ್ಲ. ಪರಿಣಾಮಕಾರಿ ಸಂವಹನದಲ್ಲಿ ಆಂಗಿಕ ಭಾಷೆಯ ಮಹತ್ವವನ್ನು ನೀವು ಒತ್ತಿ ಹೇಳಿದಾಗಲೇ ಕಣ್ಣೋಟದ ಪ್ರಾಮುಖ್ಯ ಗೊತ್ತಾಗಿದ್ದು. ಈ ಸಮಸ್ಯೆಯನ್ನು ಸರಿ ಮಾಡಿಕೊಳ್ಳುವುದು ಹೇಗೆ?’ ಮುಚ್ಚುಮರೆಯಿಲ್ಲದ ಆ ನೇರ ಪ್ರಶ್ನೆ ನನ್ನನ್ನು ತುಸು ಚಕಿತಗೊಳಿಸಿತ್ತು. ಹಾಗೆ ಕೇಳುವಾಗಲೂ ಅವಳ ದೃಷ್ಟಿ ಬೇರೆಡೆಗೆ ಇದ್ದುದನ್ನು ಗಮನಿಸಿದ್ದೆ!

ಹೌದು, ಹೀಗೆ ದೃಷ್ಟಿ ತಪ್ಪಿಸುವ ಸಮಸ್ಯೆ ಹಲವರಿಗಿದೆ. ಇವರು ತಾವು ಮಾತನಾಡುತ್ತಿರುವ ವ್ಯಕ್ತಿಯ ಕಣ್ಣಲ್ಲಿ ಕಣ್ಣಿಟ್ಟು ನೋಡುವುದು ಹೋಗಲಿ, ಸರಿಯಾಗಿ ಮುಖ ನೋಡಲೂ ಹಿಂದೇಟು ಹಾಕುತ್ತಾರೆ. ಆತ್ಮವಿಶ್ವಾಸದ ಕೊರತೆ, ಕೀಳರಿಮೆ, ಮುಜುಗರ, ನಾಚಿಕೆ, ಭಯ, ಹಿಂಜರಿಕೆ, ತಿರಸ್ಕಾರ, ದ್ವೇಷ, ಅಪರಾಧಿ ಭಾವ, ಆತಂಕ, ಮಾನಸಿಕ ತೊಂದರೆ... ಹೀಗೆ ನೇತ್ರ ಸಂಪರ್ಕ ತಪ್ಪಿಸಲು ಕಾರಣಗಳು ಹಲವು. ಇವರಲ್ಲಿ ಬಹುತೇಕರಿಗೆ ತಮಗೆ ಇಂತಹದ್ದೊಂದು ಸಮಸ್ಯೆಯಿದೆಯೆಂಬ ಅರಿವೂ ಇರುವುದಿಲ್ಲ!

ಪರಿಣಾಮಕಾರಿ ಸಂವಹನದಲ್ಲಿ ಮಾತಿಗಿಂತ ಮಿಗಿಲಾಗಿರುವುದು ವ್ಯಕ್ತಿಯ ಶಾರೀರಿಕ ಭಾಷೆ. ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವುದು, ಮೊಗದಲ್ಲಿ ಭಾವನೆಗಳ ಅಭಿವ್ಯಕ್ತಿ, ಮಂದಹಾಸ, ಆಲಿಸುವಿಕೆ, ಕೈಗಳ ಚಲನೆ, ನಿಲ್ಲುವ, ಕೂರುವ ಭಂಗಿಗಳು, ಸನ್ನೆಗಳು ಆಂಗಿಕ ಭಾಷೆಯ ಮುಖ್ಯ ಅಂಗಗಳು. ಮಕ್ಕಳು ಮೌಖಿಕ ಪರೀಕ್ಷೆ, ಸಂದರ್ಶನಗಳಲ್ಲಿ ವಿಫಲರಾಗುವ ಪ್ರಮುಖ ಕಾರಣಗಳಲ್ಲಿ ಅಸಮರ್ಪಕ ಆಂಗಿಕ ಭಾಷೆಯೂ ಒಂದು. ಕಳಾಹೀನ, ಭೀತಿ ತುಂಬಿದ, ಆತ್ಮವಿಶ್ವಾಸವಿಲ್ಲದ ಮುಖಚರ್ಯೆ, ಸಂದರ್ಶಕರ ನೇರ ದೃಷ್ಟಿ ತಪ್ಪಿಸುವುದು, ಮುದುಡಿ ಕೂರುವುದು, ಸಭ್ಯವಲ್ಲದ ಉಡುಪು, ಹಿಂಜರಿಕೆಯಂತಹ ನಕಾರಾತ್ಮಕ ವರ್ತನೆಗಳು ನಪಾಸಿಗೆ ಕಾರಣವಾಗಬಹುದು.

ನಮ್ಮ ಭಾವನೆಗಳನ್ನು, ವಿಚಾರಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳಲು ಭಾಷೆ ಮುಖ್ಯ. ಭಾಷೆಯೆಂದರೆ ಮಾತಷ್ಟೇ ಅಲ್ಲ, ಜೊತೆಗೆ ಶಾರೀರಿಕ ಭಾಷೆಯೂ ಸೇರಿರುತ್ತದೆ. ದೈಹಿಕ ಭಾಷೆಯು ಔಪಚಾರಿಕ ಮಾತಿಗಿಂತಲೂ ಹೆಚ್ಚು ಪರಿಣಾಮಕಾರಿ. ಜಗತ್ತಿನ ಎಲ್ಲರಿಗೂ ಸುಲಭವಾಗಿ ಅರ್ಥವಾಗುವ ವಿಶ್ವಭಾಷೆಯಿದು. ಸರಿಯಾದ ಹಾವಭಾವಗಳು ನಾವಾಡುವ ಮಾತಿಗೆ ಮತ್ತಷ್ಟು ಪರಿಣಾಮ ತುಂಬಿ ಕೇಳುಗರಲ್ಲಿ ಉತ್ತಮ ಸ್ಪಂದನೆಗೆ ಕಾರಣವಾಗುತ್ತವೆ.

ಅದು ಸಂದರ್ಶನವಿರಲಿ, ಮೌಖಿಕ ಪರೀಕ್ಷೆಯಾಗಿರಲಿ, ಸಾಧಾರಣ ಸಂಭಾಷಣೆಯಾಗಿರಲಿ, ಭಾಷಣವೇ ಆಗಿರಲಿ ಕಣ್ಣೋಟವೆಂಬುದು ಒಂದು ಪ್ರಮುಖ ಆಂಗಿಕ ಭಾಷೆ. ಕಣ್ಣಿನ ಸಂವಹನದ ಮೂಲಕವೇ ವ್ಯಕ್ತಿಗೆ ಯಾವ ಭಾವನೆಯಿದೆ, ನಂಬಿಕೆಗೆ ಅರ್ಹನೆ, ಆತ್ಮವಿಶ್ವಾಸ ಇದೆಯೆ, ಉತ್ಸಾಹವಿದೆಯೆ ಎಂದೆಲ್ಲಾ ತಿಳಿದುಕೊಳ್ಳಬಹುದು. ಇನ್ನು ಮುಗುಳ್ನಗೆಗಂತೂ ಸರ್ವರನ್ನೂ ಸೆಳೆಯುವ ಮಾಂತ್ರಿಕ ಶಕ್ತಿ ಇದೆ! ಇದರಿಂದ ಕಾರ್ಯಸಿದ್ಧಿಯೂ ಸುಲಭ. ಕೈಕುಲುಕುವಾಗ ದೃಢವಾಗಿ ಕೈಕುಲುಕುವುದು ವಿಶ್ವಾಸದ ಲಕ್ಷಣ. ನೇರವಾಗಿ ನಿಲ್ಲುವ, ನಡೆಯುವ, ಕೂರುವ ಭಂಗಿಯು ಆತ್ಮವಿಶ್ವಾಸ, ದೃಢ ನಿಲುವು, ಸಕಾರಾತ್ಮಕ ಚಿಂತನೆಯ ಪ್ರತಿಬಿಂಬ.

ಗ್ಯಾಜೆಟ್ಗಳ ಜೊತೆಗೆ ಹೆಚ್ಚು ಹೊತ್ತು ಕಳೆಯುವ ಈಗಿನ ಮಕ್ಕಳು, ಯುವಕ–ಯುವತಿಯರು ಪರಿಣಾಮಕಾರಿ ಸಂವಹನದಲ್ಲಿ ಸೋಲುತ್ತಿದ್ದಾರೆ. ಇತ್ತ ಓದುವ ಹವ್ಯಾಸವೂ ಕಾಣೆಯಾಗಿರುವುದರಿಂದ ಸಾಮಾನ್ಯ ಜ್ಞಾನಕ್ಕೂ ಕೊರತೆಯಿದೆ. ಪಠ್ಯದ ತಿಳಿವಳಿಕೆಯಿದ್ದರೂ ಅದನ್ನು ಸರಿಯಾಗಿ ಅಭಿವ್ಯಕ್ತಿಸುವ ಮೃದು ಕೌಶಲಗಳ ಅರಿವಿಲ್ಲ. ಪರಿಣಾಮ, ಸ್ಪರ್ಧಾತ್ಮಕ ಜಗತ್ತಿನ ಪೈಪೋಟಿಯಲ್ಲಿ ಹಿಂದೆ ಬೀಳುತ್ತಿದ್ದಾರೆ. ಯಶಸ್ಸೆಂಬುದು ಮರೀಚಿಕೆಯಾಗಿ ಮತ್ತಷ್ಟು ಹತಾಶರಾಗುತ್ತಿದ್ದಾರೆ. ಓದಿದ ಮಾಧ್ಯಮ, ಪಡೆದ ಶಿಕ್ಷಣ, ಆಂಗಿಕ ಭಾಷೆಯ ಅರಿವಿಲ್ಲದಿರುವಂತಹ ಕಾರಣಗಳಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲೇ ಕೀಳರಿಮೆ ಹೆಚ್ಚು.

ಸಂವಹನ ಕಲೆಯನ್ನು ಸಮರ್ಥವಾಗಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುವುದು ತರಗತಿಗಳಲ್ಲಿ
ಪ್ರಶ್ನೆಗಳನ್ನು ಕೇಳುವುದು. ಮಕ್ಕಳು ಶಾಲೆಯಲ್ಲಿ ತಮ್ಮ ಸಂದೇಹ, ಅನುಮಾನ, ಅರ್ಥವಾಗದ್ದನ್ನು
ಕೇಳುವ, ಅಭಿಪ್ರಾಯ ವ್ಯಕ್ತಪಡಿಸುವ ಅಭ್ಯಾಸ ರೂಢಿಸಿಕೊಂಡಾಗ ಅವರ ಆತ್ಮವಿಶ್ವಾಸ ವೃದ್ಧಿಸುವ ಜೊತೆಗೆ ಮಾತನಾಡುವ ಕೌಶಲವೂ ಕರಗತವಾಗುತ್ತದೆ. ಇದರಿಂದ ತಿಳಿವಳಿಕೆ ಹೆಚ್ಚುವುದಷ್ಟೇ ಅಲ್ಲ ಶಾರೀರಿಕ ಭಾಷೆಯೂ ಬೆಳೆಯುತ್ತದೆ. ಆದ್ದರಿಂದ ಪ್ರಾಥಮಿಕ ಶಾಲಾ ಹಂತದಿಂದಲೇ ಪ್ರಶ್ನೆಗಳನ್ನು ಕೇಳುವಂತೆ ಮಕ್ಕಳನ್ನು ಉತ್ತೇಜಿಸುವುದು ಅವರ ವ್ಯಕ್ತಿತ್ವ ನಿರ್ಮಾಣದ ದೃಷ್ಟಿಯಲ್ಲಿ ಮಹತ್ವದ ಅಂಶ.

ಉತ್ತಮ ಹಾವಭಾವಗಳು ವ್ಯಕ್ತಿಯೊಬ್ಬನ ಕೌಟುಂಬಿಕ ಬದುಕು, ವೃತ್ತಿ ಬದುಕು, ಸಾಮಾಜಿಕ ಬದುಕಿನಲ್ಲಿ ಯಶಸ್ಸು ತರುತ್ತವೆ. ಸ್ನೇಹ, ಪ್ರೀತಿ, ವಿಶ್ವಾಸ ಗಳಿಸಲು ಇವು ರಹದಾರಿ. ಅಸಭ್ಯ ಆಂಗಿಕ ಸನ್ನೆಗಳು ಜಗಳ, ಕಲಹ, ವೈರತ್ವಕ್ಕೆ ಕಾರಣವಾಗಿ ವ್ಯಕ್ತಿತ್ವಕ್ಕೆ ಮಸಿ ಬಳಿಯಬಹುದು. ಹಾಗಾಗಿ, ವಿದ್ಯಾಭ್ಯಾಸದ ಸಮಯ
ದಲ್ಲೇ ಮಕ್ಕಳಿಗೆ ಸರಿಯಾದ ದೈಹಿಕ ಭಾಷೆಯ ಮಹತ್ವವನ್ನು ಮನದಟ್ಟು ಮಾಡಿಸಿ ಅದನ್ನು ಪ್ರಜ್ಞಾಪೂರ್ವಕವಾಗಿ ರೂಢಿಸಿಕೊಳ್ಳಲು ಪ್ರೇರಣೆ ನೀಡಬೇಕಿದೆ.

ಆಂಗಿಕ ಭಾಷೆ ಸೇರಿದಂತೆ ಮೃದು ಕೌಶಲಗಳನ್ನು ಕಲಿತು, ಸಮರ್ಪಕವಾಗಿ ಬಳಸಿಕೊಳ್ಳುವುದು ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.