ನ್ಯೂಜಿಲೆಂಡ್ನ ಎರಡು ಮಸೀದಿಗಳಲ್ಲಿ ಇತ್ತೀಚೆಗೆ ‘ಜನಾಂಗೀಯ ಶ್ರೇಷ್ಠತಾವಾದಿ’ಯೊಬ್ಬ ನಡೆಸಿದ ಮಾರಣಹೋಮ ಜಗತ್ತನ್ನೇ ಬೆಚ್ಚಿಬೀಳಿಸಿತು. ನಂತರದಲ್ಲಿ ಅಲ್ಲಿನ ಜನ ಆ ಘಟನೆಗೆ ತೋರಿದ ಪ್ರತಿಕ್ರಿಯೆ, ಅಸಾಧಾರಣವಾದ ಅನುಕಂಪಯುತ ನಡವಳಿಕೆ, ರಾಜನೀತಿಯ ಮೌಲ್ಯವನ್ನು ಎತ್ತಿಹಿಡಿದ ಪ್ರಧಾನಿ ಜೆಸಿಂಡಾ ಆರ್ಡರ್ನ್ ಅವರ ವಿವೇಕಯುತ ಹೆಜ್ಜೆಗಳು, ತನ್ನ ಶೇಕಡ ಒಂದಕ್ಕಿಂತಲೂ ಕಡಿಮೆ ಜನಸಂಖ್ಯೆಯುಳ್ಳ ಜನಸಮುದಾಯಕ್ಕೆ ಅಭದ್ರತೆ ಕಾಡದಂತೆ ತೋರಿದ ತಾಯ್ತನದ ಕಾಳಜಿ, ತತ್ಕ್ಷಣವೇ ಇಂತಹ ಕೃತ್ಯಗಳನ್ನು ಪ್ರತಿಬಂಧಿಸುವ ನಿಟ್ಟಿನಲ್ಲಿ ಶಸ್ತ್ರಾಸ್ತ್ರ ನಿಯಂತ್ರಣ ಕಾನೂನು ಜಾರಿಗೆ ತರುತ್ತಿರುವುದು... ಎಲ್ಲವೂ ಮನುಷ್ಯಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿವೆ.

ದೇಶಪ್ರೇಮದ ಹೊಸ ಕಥನವೊಂದನ್ನು ಜಗತ್ತಿಗೆ ನ್ಯೂಜಿಲೆಂಡ್ ಪರಿಚಯಿಸಿದೆ. ಅದು, ದೇಶಪ್ರೇಮವೆಂದರೆ ತನ್ನ ದೇಶವಾಸಿಗಳಿಗೆ ನೋವಾದಾಗ ಒಂದಾಗಿ ನಿಲ್ಲುವುದು, ನಾವೆಲ್ಲಾ ಒಂದು ಎಂದು ಕಾರ್ಯಮುಖೇನ ತೋರಿಸುವುದು.

ಕಳೆದ ವರ್ಷ ನಮ್ಮ ದೇಶದ ಕಠುವಾ ಎಂಬಲ್ಲಿ 8 ವರ್ಷದ ಆಸಿಫಾಳನ್ನು ಸಾಮೂಹಿಕ ಅತ್ಯಾಚಾರ ನಡೆಸಿ ಕೊಲ್ಲಲಾಯಿತು. ಈಪ್ರಕರಣ, ನಾಡಿನ ಆತ್ಮಸಾಕ್ಷಿಯನ್ನೇ ಕಲಕಿತ್ತು. ಯಾಕೆಂದರೆ ಅಲ್ಲಿ ಕಾಮಾಂಧತೆಗೆ ಕೋಮಾಂಧತೆಯೂಸೇರಿ ಪೈಶಾಚಿಕತೆ ಪ್ರಧಾನ ಪಾತ್ರ ವಹಿಸಿತ್ತು. ಅದೂ ಅತ್ಯಂತ ಸಹಿಷ್ಣುತೆಯ ಧರ್ಮವೊಂದರ ಆರಾಧನಾಲಯದ ಒಳಗೆ. ಆದರೆ, ಅದಕ್ಕೆ ಕೆಲವರಿಂದ ವ್ಯಕ್ತವಾದ ಪ್ರತಿಕ್ರಿಯೆ ಅದಕ್ಕಿಂತಲೂ ಕ್ರೂರವಾಗಿತ್ತು. ಮುಂದೊಮ್ಮೆ ಭಯೋತ್ಪಾದಕರನ್ನು ಹೆರುವ ಮುನ್ನವೇ ಅವಳು ತೆರಳಿದ್ದು ಒಳ್ಳೆಯದಾಯಿತು ಎಂಬ ಹೀನಾತಿಹೀನ ವಿಷವನ್ನು ಕೆಲವರು ಕಾರಿದರು. ಹೀಗೆಯೇ ಯಾವ ಯಾವುದೋ ಕಾರಣಕ್ಕೆ ಇತ್ತೀಚಿನ ದಿನಗಳಲ್ಲಿ ಅದೆಷ್ಟೊಂದು ನರಹತ್ಯೆಗಳಾದವು. ನ್ಯೂಜಿಲೆಂಡ್ ತೋರಿಸಿದ ಶೋಕಮೌನಕ್ಕೆ ವಿರುದ್ಧವಾದ ಮೌನವನ್ನು ಕೆಲವೊಂದು ಸಂದರ್ಭಗಳಲ್ಲಿ ನಮ್ಮ ಪ್ರಭುತ್ವ ವಹಿಸಿತು.

ರಾಷ್ಟ್ರವನ್ನು ಬೆಚ್ಚಿಬೀಳಿಸುವ ಸನ್ನಿವೇಶಗಳಲ್ಲಿ, ಅದರ ಅಸ್ಮಿತೆಗೆ ಧಕ್ಕೆಯಾದಾಗ ನಾಯಕತ್ವವು ಹೇಗೆ ರಾಜಧರ್ಮವನ್ನು ಪಾಲಿಸಬೇಕು ಎನ್ನುವ ವಿಷಯದಲ್ಲಿ ಜೆಸಿಂಡಾ ನಡೆ ಅನುಕರಣೀಯ.

ಹಾಗೆಯೇ ಸಾಂತ್ವನದ ದ್ಯೋತಕವಾಗಿ ಜೆಸಿಂಡಾ ಧರಿಸಿದ್ದ ಶಿರವಸ್ತ್ರವಾಗಿರಲೀ, ಶುಕ್ರವಾರದಂದು ವಾಹಿನಿಗಳಲ್ಲಿ ಆಝಾನ್ ಮೊಳಗಿಸಿದ ರೀತಿಯಾಗಿರಲೀ, ನಾಗರಿಕರು ಧರ್ಮಭೇದ ಮರೆತು ಮಸೀದಿಗಳಲ್ಲಿ ನಮಾಜ್ಗೆ ಕೈ ಜೋಡಿಸಿದುದಾಗಿರಲೀ ಇಂದಿಗೆ ಮರೀಚಿಕೆಗಳಾಗಿಬಿಟ್ಟಿರುವ ಧರ್ಮಾತೀತ ನಡವಳಿಕೆಗಳ ಮೇರು ಉದಾಹರಣೆಗಳಾಗಿವೆ. ವಿಪರ್ಯಾಸವೆಂದರೆ, ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಅದನ್ನು ಇಸ್ಲಾಂಗೆ ಸಿಕ್ಕಿದ ಜಯ ಎಂದು ಸಂಭ್ರಮಿಸುತ್ತಿರುವುದು. ನಡಾವಳಿಗಳು ಸೂಸುತ್ತಿರುವ ಸಂದೇಶವನ್ನು ಈ ಹುಡುಗರು ತಪ್ಪಾಗಿ ಸ್ವೀಕರಿಸುತ್ತಿದ್ದಾರೆ. ಆದರೆ ಅದು ಇಸ್ಲಾಂಗೆ ಸಿಕ್ಕಿದ ಜಯವಲ್ಲ. ಮಾನವೀಯ ಮೌಲ್ಯಗಳಿಗೆ, ವಿಕಸಿತ ಮನಸ್ಸುಗಳ ಸುಸಂಸ್ಕೃತ ನಡವಳಿಕೆಗೆ ಸಿಕ್ಕ ಜಯವಾಗಿದೆ.

ಸೌದಿ ಅರೇಬಿಯಾದಂತಹ ದೇಶಗಳಲ್ಲಿ ಅನ್ಯಮತೀಯ ಮಹಿಳೆಯರಾದರೂ ಆ ನೆಲದಲ್ಲಿ ಇಳಿದ ಕೂಡಲೇ ಪರ್ದಾ ಧರಿಸಲೇಬೇಕೆಂಬ ಕರ್ಮಠ ನಿಯಮವಿದೆ. ಈ ಸನ್ನಿವೇಶ ಮತ್ತು ನ್ಯೂಜಿಲೆಂಡ್ನ ಸನ್ನಿವೇಶ ಕೊಡುವ ಸಂದೇಶ ಬೇರೆಯೇ ಆಗಿವೆ. ಅವು ಸಾರುವ ಮೌಲ್ಯಗಳಲ್ಲಿ ಅಗಾಧ ಅಂತರವಿದೆ. ಅಂತಹ ಧಾರ್ಮಿಕ ವೈಶಾಲ್ಯ ಸಹ ಮಾದರಿಯಾದುದು.

ಸಂಖ್ಯೆಯಲ್ಲಿ ಕಡಿಮೆ ಎನ್ನುವುದು ಸಾಪೇಕ್ಷವಾದುದು. ಮನೆಕೆಲಸದವರು, ಚೌಕೀದಾರರು, ತೃತೀಯ ಲಿಂಗಿಗಳು, ಬಹುಸಂಖ್ಯಾತರ ಮೌಲ್ಯ ನಿರ್ಣಯಕ್ಕೆ ವಿರುದ್ಧವಾಗಿ ತಮ್ಮಿಚ್ಛೆಯಂತೆ ಬಾಳುತ್ತಿರುವವರು, ಅದಾಗ ತಾನೇ ಹೊಸ ಮನೆಯೊಳಗೆ ಬಂದ ನವವಿವಾಹಿತೆ, ಕೌಟುಂಬಿಕ ದೌರ್ಜನ್ಯಗಳಿಂದ ಹೊರಬಂದು ಒಂಟಿಯಾಗಿ ಬದುಕು ಕಟ್ಟಿಕೊಳ್ಳುತ್ತಿರುವ ಮಹಿಳೆಯರು- ಇವರೆಲ್ಲರೂ ಆಯಾ ವಲಯದಲ್ಲಿ ಅಲ್ಪಸಂಖ್ಯಾತರೇ. ಇವರೊಂದಿಗೆಲ್ಲಾ ನಮ್ಮ ವರ್ತನೆ ಹೇಗಿದೆ? ನಮ್ಮ ನಾಲಗೆ ಎಷ್ಟು ಸೌಮ್ಯವಾಗಿದೆ?

ತಮ್ಮ ರಾಜಕೀಯ ಆಟಗಳಿಗಾಗಿ ಚೌಕೀದಾರರನ್ನು ಬಳಸಿಕೊಳ್ಳುತ್ತಿರುವ ರಾಜಕೀಯ ಪಕ್ಷಗಳ ಅವಸ್ಥೆ ನೋಡುವಾಗ ವಿಷಾದವಾಗುತ್ತದೆ. ಒಂದು ದೀಪಾವಳಿಯಂದು ಮ್ಲಾನನಾಗಿ ಕುಳಿತಿದ್ದ ಫ್ಲ್ಯಾಟ್ನ ಕಾವಲುಗಾರನಲ್ಲಿ ಹಬ್ಬಕ್ಕೆ ಊರಿಗೆ ಹೋಗದಿರುವ ಬಗ್ಗೆ ವಿಚಾರಿಸಿದೆ. ಆತ ಅದಾಗಲೇ ಹೆಂಡತಿಯ ಆಪರೇಷನ್ಗೆ ಸಾಲ ಮಾಡಿರುವ ಕಾರಣ ಹೋಗಲಿಲ್ಲ ಎಂದ. ಕೂಡಲೇ ಮನೆಯಲ್ಲಿದ್ದ ತಿಂಡಿತಿನಿಸಿನ ಜತೆ ಮುನ್ನೂರು ರೂಪಾಯಿಯನ್ನು ನನ್ನ ಮಗನ ಕೈಲಿ ಕೊಡಿಸಿದಾಗ ಅವನ ಕಣ್ಣಲ್ಲಿ ಜಿನುಗಿದ ಹನಿಯ ಬೆಳಕಿನಲ್ಲಿ ನಾನು ನನ್ನ ಜೀವನದ ಮೊದಲ ದೀಪಾವಳಿಯನ್ನು ಆಚರಿಸಿದೆ. ನಂತರದ ವರ್ಷಗಳಲ್ಲಿ ಅದಕ್ಕಿಂತ ಹೆಚ್ಚು ಬೆಳಕುಗಳನ್ನು ಕಂಡೆವು. ನಿಜಾರ್ಥದ ದೀಪಾವಳಿಯ ಬೆಳಗಿದೆವು. ಪಾಶ್ಚಾತ್ಯ ಸಂಸ್ಕೃತಿಯು ನಮ್ಮ ಸಂಸ್ಕೃತಿಗಿಂತ ಕೀಳು ಎಂದು ಹಂಗಿಸುವ ನಮಗೆ, ಅಲ್ಲಿಂದಲೂ ಕಲಿಯಬೇಕಿರುವುದು ತುಂಬಾ ಇದೆ ಎನ್ನುವುದು ತಿಳಿದಿರಬೇಕು. ಅತ್ಯುತ್ತಮ ವಿಚಾರಗಳು ಜಗದ ಎಲ್ಲೆಡೆಯಿಂದ ಹರಿದುಬರಲಿ ಎನ್ನುವುದು ನಮ್ಮ ಜೀವನನೀತಿಯಾಗಬೇಕು.

ಜಗತ್ತಿನೆದುರು ಎರಡು ಮಾದರಿಗಳಿವೆ. ಒಂದು, ತನ್ನವರಲ್ಲದವರೆಲ್ಲರನ್ನೂ ತರಿದು ಹಾಕಿದ ನಾಜಿಲ್ಯಾಂಡ್, ಇನ್ನೊಂದು ತನ್ನೊಳಗಿನವರನ್ನು ಅಪೂರ್ವವಾಗಿ, ತಾಯಿಯಂತೆ ಪೊರೆದ ನ್ಯೂಜಿಲೆಂಡ್. ಯಾವ ಮಾದರಿ ನಮಗೆ ಬೇಕು ಎಂದು ನಾವೇ ತೀರ್ಮಾನಿಸಬೇಕಿದೆ. ಕಲಿಸಿದ ಪಾಠಗಳನ್ನು ಬದುಕಿಗೆ ಅನ್ವಯಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.