ಶರಾವತಿ ಎಂಬ ನದಿ ಎಲ್ಲಿದೆ ಈಗ? ಅದನ್ನು ಅನೇಕ ತುಂಡುಗಳನ್ನಾಗಿ ಮಾಡಿ ಕಟ್ಟಿಟ್ಟಿದ್ದೇವೆ. ಮೊದಲು ಮಡೆನೂರು/ ಹಿರೆಭಾಸ್ಕರ ಡ್ಯಾಮ್; ಆಮೇಲೆ ತಡಗಳಲೆ, ನಂತರ ಲಿಂಗನಮಕ್ಕಿ, ಕೊನೆಗೆ ಗೇರುಸೊಪ್ಪ- ಹೀಗೆ ಜಲಾಶಯಗಳನ್ನಾಗಿ ವಿಭಜಿಸಿ ಭೋಗಿಸುತ್ತಿದ್ದೇವೆ. ‘ನದಿ’ ಎಂಬ ಯಾವ ಲಕ್ಷಣಗಳೂ ಅದಕ್ಕೆ ಉಳಿದಿಲ್ಲ. ತನ್ನ ದಂಡೆಗಳಗುಂಟ ಜೀವಿವೈವಿಧ್ಯವನ್ನು ಅದು ಪೋಷಿಸುತ್ತಿಲ್ಲ. ಸಮುದ್ರಕ್ಕೆ ಯಾವ ಪೋಷಕಾಂಶಗಳನ್ನೂ ಸಾಗಿಸುತ್ತಿಲ್ಲ. ಕೊರೆತ, ಭೋರ್ಗರೆತ ಯಾವುದೂ ಇಲ್ಲ. ತಾನು ಹೊರಹಾಕ ಬೇಕಿದ್ದ ಹೂಳನ್ನೆಲ್ಲ ತನ್ನೊಳಗೇ ಬಚ್ಚಿಟ್ಟುಕೊಂಡು ಅದು ಗುಡಾಣವಾಗುತ್ತಿದೆ. ಜಲಬದ್ಧತೆಯಿಂದಾಗಿ ಮಲಬದ್ಧತೆಯಿಂದ ನರಳುತ್ತಿದೆ.

ಶರಾವತಿಯನ್ನು ಇಂದು ಭೋಗಿಸುತ್ತಿರುವವರಲ್ಲಿ ಬೆಂಗಳೂರಿನವರ ಪಾಲೇ ಹೆಚ್ಚಿಗೆ ಇದೆ. ನದಿಯನ್ನು ಮುಗಿಸಲು ನೆರವಾದ ಗುತ್ತಿಗೆದಾರರು, ಎಂಜಿನಿಯರುಗಳು, ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು, ರಾಜಕೀಯ ಹಿರೀಕರು ತಾವು ಅಲ್ಲಿ ಗಳಿಸಿದ್ದನ್ನು ದ್ವಿಗುಣಗೊಳಿಸಿ, ದಶಗುಣ, ಶತಗುಣಗೊಳಿಸಿ ಬೆಂಗಳೂರಿನಲ್ಲೇ (ಬಹುಪಾಲು) ಬೇರುಬಿಟ್ಟಿದ್ದಾರೆ. ಬೆಂಗಳೂರು ಇಷ್ಟೆಲ್ಲ ಬೆಳೆಯಲು ಶರಾವತಿ ಫಲಾನುಭವಿಗಳ ಕೊಡುಗೆಯೂ ಗಣನೀಯವಾಗಿದೆ. ಈಗ ಅವರೆಲ್ಲರ ಬಾಯಾರಿಕೆ ತಣಿಸಲು ಮತ್ತೆ ಶರಾವತಿಯೇ ಬೇಕಾಗಿದೆ.

ಇವನ್ನೆಲ್ಲ ಗಮನದಲ್ಲಿ ಇಟ್ಟುಕೊಂಡು ಶರಾವತಿಯ ಜಲರಕ್ಷಣಾ ಹೋರಾಟವನ್ನು ಬೇರೆ ರೀತಿಯಲ್ಲೇ ನಿಭಾಯಿಸಬೇಕಾಗಿದೆ. ಎಂದಿನಂತೆ ರೋಡ್ ಷೋ, ಮಾಧ್ಯಮಗೋಷ್ಠಿ, ಮನವಿಪತ್ರ ಸಲ್ಲಿಕೆ, ಕೋರ್ಟು–ಕಚೇರಿ ದಾವೆಗಳನ್ನೂ ದಾಟಿ ಬೇರೆ ಆಯಾಮಗಳಿಗೆ ಅದು ವಿಸ್ತರಿಸಬೇಕಿದೆ. ಇದಕ್ಕೆ ನನ್ನ ಮೂರು ಸಲಹೆಗಳು ಇಂತಿವೆ:

1. ಶರಾವತಿ ಕಣಿವೆಯಿಂದ ಬಂದು ಬೆಂಗಳೂರಿನಲ್ಲಿ ಬದುಕನ್ನು ಕಟ್ಟಿಕೊಂಡವರೂ ಇಲ್ಲಿ ನೀರಿನ ಅಭಾವಕ್ಕೆ ಕಾರಣರಾಗುತ್ತಿದ್ದಾರೆ. ಅವರೆಲ್ಲರೂ ಒಂದಾಗಬೇಕು. ನೀರಿನ ಬಳಕೆಯ ಆದರ್ಶ ವಿಧಾನ ಅನುಸರಿಸಿ ಬೆಂಗಳೂರಿನ ಇತರರಿಗೆ ಮಾದರಿ ಆಗಬೇಕು. ಅಂದರೆ- ನೀರನ್ನು ಪೋಲು ಮಾಡಬಾರದು; ಮಳೆನೀರಿನ ಸಂಗ್ರಹ ಮಾಡಬೇಕು; ಬಳಸಿದ ನೀರನ್ನೇ ಮತ್ತೆ ಮತ್ತೆ ಬಳಸಬೇಕು. ಜಲ ಸಾಕ್ಷರತೆಯ ಈ ಕೆಲಸಗಳ ಕುರಿತು ಚಿತ್ರ, ವಿಡಿಯೊ, ಭಿತ್ತಿಚಿತ್ರ, ಕಲಾಮೇಳ, ಉಪನ್ಯಾಸ, ಬೀದಿ ನಾಟಕವೇ ಮುಂತಾದ ಮಾಧ್ಯಮಗಳ ಮೂಲಕ ಒಂದೇ ಬ್ಯಾನರಿನಲ್ಲಿ ಪ್ರದರ್ಶಿಸಬೇಕು. ಶರಾವತಿ ನೀರನ್ನು ಕುಡಿದು ಬೆಳೆದ ನಾವು ಬೆಂಗಳೂರಿನಲ್ಲಿ ನಮ್ಮ ಹೊಣೆಯನ್ನು ಹೇಗೆ ನಿಭಾಯಿಸುತ್ತಿದ್ದೇವೆ ಎಂಬುದರ ಬಗ್ಗೆ ಮತ್ತೆ ಮತ್ತೆ ಮಾಧ್ಯಮಗಳ ಗಮನ ಸೆಳೆಯುತ್ತಿರಬೇಕು. ಅದೇ ಬ್ಯಾನರಿನಲ್ಲಿ ಚಿಕ್ಕಪುಟ್ಟ ವಾರಾಂತ್ಯದ ತಂಡಗಳನ್ನು ಕಟ್ಟಿಕೊಂಡು ಹೋಟೆಲ್, ಹಾಸ್ಟೆಲ್, ಕಲ್ಯಾಣಮಂಟಪ, ಉದ್ಯಮಘಟಕ ಹೀಗೆ ಎಲ್ಲೇ ನೀರಿನ ಅಪವ್ಯಯ ಆಗುತ್ತಿದ್ದರೂ ಶಾಂತಿಯುತ ಮನವೊಲಿಕೆ ಮೇಳ ನಡೆಸುತ್ತಿರಬೇಕು. ಶರಾವತಿ ಎಂಬ ಹೆಸರೇ ‘ಜಲಶಿಕ್ಷಣ ಸೇವಾಪಡೆ’ ಎಂಬಂತಾಗಬೇಕು.

2. ಲಿಂಗನಮಕ್ಕಿ, ಗೇರುಸೊಪ್ಪ ಅಣೆಕಟ್ಟುಗಳನ್ನು ನಿರ್ಮಿಸಿ, ಅರಣ್ಯಗಳನ್ನು ಮುಳುಗಿಸಿ ದೊಡ್ಡದಾಗಿ ಬೆಳೆದು ಬೆಂಗಳೂರನ್ನೂ ಬೆಳೆಸುತ್ತಿರುವ ಅನೇಕ ಮಹ ನೀಯರು ಇಲ್ಲಿದ್ದಾರೆ. ಅವರ ಇಂದಿನ ಜಲಬಳಕೆಯ ವೈಖರಿಯನ್ನು ಜನರಿಗೆ ತೋರಿಸುತ್ತ, ಅವರ ಧಾರಾಳ ಧೋರಣೆಯನ್ನು ಮಾರ್ಪಡಿಸಬೇಕು. ಶರಾವತಿ ಕಣಿವೆ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳ ಗುತ್ತಿಗೆ ಪಡೆದಿದ್ದ ಕಂಪನಿಗಳು ಬೇರೆ ಬೇರೆ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿವೆ. ಈ ವ್ಯವಹಾರಗಳಿಗೆ ಸಂಬಂಧಿಸಿದ ಸಂಸ್ಥೆಗಳಲ್ಲಿ ಅವು ಎಗ್ಗಿಲ್ಲದೆ ಹೇಗೆ ನೀರನ್ನು ಪೋಲು ಮಾಡುತ್ತಿವೆ ಎಂಬುದರ ಬಗ್ಗೆ ತನಿಖಾ ವರದಿಗಳು ಬರಬೇಕು. ಶರಾವತಿ, ನೇತ್ರಾವತಿ ಮತ್ತು ಅಘನಾಶಿನಿ ಕಣಿವೆಗಳಿಂದ ಬಂದ ಮಾಧ್ಯಮ ಶ್ರಮಿಕರಿಗೆ ಈ ಕೆಲಸ ಕಷ್ಟವೇನೂ ಆಗದು. ಅವರಿಗೆ ಅದು ನೀರು ಕುಡಿದಷ್ಟು ಸುಲಭ!

ಉದ್ಯಮಗಳಲ್ಲಿ ನೀರಿನ ಅತಿಬಳಕೆ, ದುರ್ಬಳಕೆ, ಬಿಸಾಕು ಪ್ರವೃತ್ತಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಾದರಿ ಕೆಲಸ ನಡೆಯುವಂತೆ ವ್ಯವಸ್ಥಾಪಕರ ಮನವೊಲಿಸಬೇಕು, ಅದನ್ನು ಜನಕ್ಕೆ ತಿಳಿಸಬೇಕು. ಶರಾವತಿ ವಿದ್ಯುತ್ತನ್ನು ಬಳಸುವ ಎಲ್ಲ ಉದ್ಯಮಗಳಿಗೂ ಇದೇ ಬಗೆಯ ಜಲಸಾಕ್ಷರತೆಯನ್ನು ವಿಸ್ತರಿಸಬೇಕು.

3. ಲಿಂಗನಮಕ್ಕಿ ಜಲಾನಯನ ಪ್ರದೇಶದ (ಸ್ಥಳೀಯ) ಜನರ ಹೋರಾಟ ಬೇರೆ ತೆರನಾಗಿರಬೇಕು. ಆ ಜಲಾಶಯಕ್ಕೆ ನೀರು ಹೋಗದಂತೆ ಅವರು ತಡೆ ಹಿಡಿಯಬೇಕು!

ಬಿದ್ದ ಮಳೆ ನೀರನ್ನು ಆದಷ್ಟೂ ಹೆಚ್ಚು ಪ್ರಮಾಣದಲ್ಲಿ ತಂತಮ್ಮ ಜಮೀನಿನಲ್ಲಿ, ಗ್ರಾಮದಲ್ಲಿ, ಹೋಬಳಿಯಲ್ಲಿ, ತಾಲ್ಲೂಕಿನಲ್ಲಿ ಇಂಗಿಸಬೇಕು. ನೀರು ಮತ್ತು ಫಲವತ್ತಾದ ಹೂಳು ಇವೆರಡೂ ತಮ್ಮಲ್ಲೇ ಉಳಿಯುವಂತೆ, ಅಂದರೆ ಲಿಂಗನಮಕ್ಕಿ ಸೇರದಂತೆ ಪ್ರತಿಬಂಧಿಸುವುದು ಸ್ವಾರ್ಥ ಹೌದು, ಆದರೆ ಲೋಕ ಕಲ್ಯಾಣದ, ಪರಮಾದರ್ಶದ ಸ್ವಾರ್ಥ ಇದು.

ಶರಾವತಿಯ ಫಲಾನುಭವಿಗಳು ರಾಜ್ಯದ ಎಲ್ಲೇ ಇರಲಿ, ಈ ಬಗೆಯ ಜಲರಕ್ಷಣಾ ಹೋರಾಟದಲ್ಲಿ ಅವರೂ ಭಾಗಿಯಾಗಬೇಕು. ಶರಾವತಿಗೆ ಅಣೆಕಟ್ಟುಗಳನ್ನು ಕಟ್ಟಿ, ಫಲ ಉಂಡಿದ್ದಾಯಿತು; ಈಗ ಇಡೀ ನಾಡಿಗೆ ಒಂದು ಹೊಸ ಮಾದರಿಯ ಚಳವಳಿಯನ್ನು ಕಟ್ಟಿ ತೋರಿಸುವ ಸಮಯ ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.