ಸಾಮಾಜಿಕ ಕಾಳಜಿಯುಳ್ಳ ಸಂಘಟನೆಗಳಲ್ಲಿ ದುಡಿದವರು ಪಕ್ಷ ರಾಜಕಾರಣದತ್ತ ಮುಖ ಮಾಡುತ್ತಿರುವುದು, ಇತ್ತೀಚೆಗೆ ಕೆಲವರಲ್ಲಿ ಕಳವಳ ಹುಟ್ಟಿಸುತ್ತಿದೆ. ಸಂಘ ಪರಿವಾರದ ವಿದ್ಯಾರ್ಥಿ ಸಂಘಟನೆಯಾದ ಎಬಿವಿಪಿ ಕಾರ್ಯಕರ್ತರು ಬಿಜೆಪಿಗೆ ಸೇರುವುದರ ಕುರಿತು, ನರಸಿಂಹ ರಾಯಚೂರು ಅವರು ಎತ್ತಿರುವ ಪ್ರಶ್ನೆಗಳು (ಸಂಗತ, ಮೇ 10) ಚರ್ಚಾರ್ಹವಾದವು.

ಈ ಪ್ರಶ್ನೆಗಳನ್ನು ಕೇವಲ ಒಂದು ವಿದ್ಯಾರ್ಥಿ ಸಂಘಟನೆಗೆ ಸೀಮಿತಗೊಳಿಸದೆ ಸ್ವಲ್ಪ ವಿಸ್ತರಿಸೋಣ. ನಮ್ಮ ಸಮಾಜದಲ್ಲಿ ಶಿಕ್ಷಣ, ಸೇವಾಕ್ಷೇತ್ರ, ಕಾರ್ಮಿಕ ವಲಯ ಇತ್ಯಾದಿಗಳನ್ನು ಸಂಘಟಿಸುವ ಕುರಿತು ಗೌರವ ಇದೆ. ಹಾಗೆಯೇ ಇಂಥ ಚಟುವಟಿಕೆಯಲ್ಲಿ ಭಾಗವಹಿಸು
ವವರು ರಾಜಕೀಯ ಪಕ್ಷವನ್ನು ಸೇರಿದರೆ ಅದರ ಬಗ್ಗೆ ಒಂದು ರೀತಿಯ ಅನುಮಾನ, ತಿರಸ್ಕಾರ ಇರುವುದೂ ನಿಜ. ಇಂತಹ ಭಾವನೆ ಆ ಕಾರ್ಯಕರ್ತನ ಕೆಲಸದ ಬಗ್ಗೆ ಇರುವಂತಹದ್ದಲ್ಲ. ಸಾಧಾರಣವಾಗಿ ಅದು, ಒಟ್ಟಾರೆ ರಾಜಕೀಯ ಕ್ಷೇತ್ರದ ಬಗೆಗೆ ಸಾರ್ವಜನಿಕರಲ್ಲಿ ಇರುವ ತಿರಸ್ಕಾರ ಮನೋಭಾವವನ್ನು ಪ್ರತಿನಿಧಿಸುತ್ತದೆ.

ಕಾಲೇಜು ವಿದ್ಯಾರ್ಥಿಗಳು ಸಾಮಾನ್ಯವಾಗಿ ಎಸ್‌ಎಫ್‌ಐ, ಎನ್‌ಎಸ್‌ಯುಐ, ಎಬಿವಿಪಿ, ಎಐಡಿಎಸ್‌ಒ ಮುಂತಾದ ವಿದ್ಯಾರ್ಥಿ ಸಂಘಟನೆಗಳಸಂಪರ್ಕಕ್ಕೆ ಬರುತ್ತಾರೆ. ಆಗ ಅವರು ವಿದ್ಯಾರ್ಥಿ ಸಮುದಾಯದ ಸಮಸ್ಯೆಗಳ ಬಗೆಗೆ ಆಲೋಚಿಸುವುದರ ಜೊತೆಗೆ ಸಂಘಟನಾ ಚಾತುರ್ಯವನ್ನೂ ಹೊಂದುತ್ತಾರೆ. ಓದಿನ ನಂತರ ಬೇರೆ ಬೇರೆ ಕ್ಷೇತ್ರಗಳಲ್ಲಿ ದುಡಿಯುವಾಗ, ವಿದ್ಯಾರ್ಥಿ ಸಂಘಟನೆಗಳಿಂದ ದೊರೆತ ತರಬೇತಿ ಮತ್ತು ಅನುಭವವು ಅವರನ್ನು ಹೆಚ್ಚು ಕ್ರಿಯಾಶೀಲರನ್ನಾಗಿ ಮಾಡಿರುತ್ತದೆ. ಜೊತೆಗೆ ಅವರು, ಭಿನ್ನವಾಗಿ ಯೋಚಿಸುವವರಾಗಿಯೂ ವಿನೂತನರಾಗಿಯೂ ಕಾಣಿಸಿಕೊಳ್ಳುತ್ತಾರೆ.

ಹೀಗೆ ತಮ್ಮ ಹಿರಿಯರೊಬ್ಬರು ಯಾವುದೋ ಒಂದು ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದಾಗ ಅದನ್ನು ಹೇಳಿಕೊಳ್ಳುವುದು ಸಂಘಟನೆಗಳ ಕಾರ್ಯಕರ್ತರಿಗೆ ಹೆಮ್ಮೆಯ ವಿಷಯವೂ ಆಗಿರುತ್ತದೆ. ಹಾಗಿದ್ದಾಗ, ಅವರು ರಾಜಕೀಯೇತರ ಕ್ಷೇತ್ರಗಳಿಗೆ ಹೋದಾಗ ಇಲ್ಲದ ಸಮಸ್ಯೆಯು ರಾಜಕೀಯ ಪಕ್ಷಗಳಿಗೆ ಹೋದಾಗ ಬರುವುದೇಕೆ? ವಾಸ್ತವದಲ್ಲಿ, ಸಂಘಟನೆಯ ಗುರಿ ಮತ್ತು ಉದ್ದೇಶಗಳ ಪ್ರಶ್ನೆ ಇಲ್ಲಿ ಬರುವುದಿಲ್ಲ. ಏಕೆಂದರೆ, ಈ ಎಲ್ಲ ಸಂಘಟನೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ ಕಾರ್ಯಕರ್ತರಲ್ಲಿ ಶೇ 5ರಷ್ಟು ಜನ ಕೂಡ ರಾಜಕೀಯ ಕ್ಷೇತ್ರಕ್ಕೆ ಹೋಗುವುದನ್ನು ನಾವು ನೋಡಿಲ್ಲ. ಇದಲ್ಲದೆ ಎಬಿವಿಪಿ ಕಾರ್ಯಕರ್ತರು ಕೇವಲ ಬಿಜೆಪಿ ಸದಸ್ಯರಾಗಿಲ್ಲ; ಬೇರೆ ಪಕ್ಷಗಳಲ್ಲೂ ಇದ್ದಾರೆ.

ಕೆಲವು ವರ್ಷಗಳ ಕೆಳಗೆ ಅಣ್ಣಾ ಹಜಾರೆ ಅವರ ನೇತೃತ್ವದಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ ಆಂದೋಲನದಿಂದ ಹುಟ್ಟಿದ ಆಮ್ ಆದ್ಮಿ ಪಕ್ಷಕ್ಕೆ, ಸಾಮಾಜಿಕ ಕಳಕಳಿಯುಳ್ಳ ಅನೇಕರು ಸೇರಿಕೊಂಡರು. ಇಂಥ ರಾಜಕೀಯ ಚಟುವಟಿಕೆ ದೇಶದಲ್ಲಿ ಕೆಲ ಕಾಲ
ವಾದರೂ ಹೊಸ ಭರವಸೆಯೊಂದನ್ನು ಮೂಡಿಸಿದ್ದು ಸತ್ಯ. ಆದರೆ, ಅರವಿಂದ ಕೇಜ್ರಿವಾಲರ ರಾಜಕೀಯ ವೈಖರಿಯು ಈ ಭರವಸೆಯನ್ನು ಹೇಗೆ ಹಾಳು ಮಾಡಿತು ಎನ್ನುವುದು ಬೇರೆ ವಿಷಯ. ಅಷ್ಟಾದರೂ, ಇತ್ತೀಚಿನ ದಿನಗಳಲ್ಲಿ ನಮ್ಮ ಸುತ್ತಮುತ್ತ ಇರುವ ಉತ್ತಮರು, ಶಿಕ್ಷಿತರು ರಾಜಕೀಯ ಪ್ರವೇಶಿಸುವುದನ್ನು ಗೌರವಾರ್ಹ ಎಂದು ಜನ ಪರಿಗಣಿಸುವಂತೆ ಮಾಡಿದ್ದು ಆಮ್ ಆದ್ಮಿ ಪಾರ್ಟಿಯ ವಿಶೇಷವೇ ಸರಿ.

ಇಂದು ರಾಜಕಾರಣದಲ್ಲಿ ಕಂಡುಬರುವ ಭ್ರಷ್ಟಾಚಾರ, ಅನೈತಿಕ ಹಾಗೂ ಜನವಿರೋಧಿ ಚಟುವಟಿಕೆಗಳು ನಮ್ಮೆಲ್ಲರಿಗೂ ಅಸಹ್ಯ ಹುಟ್ಟಿಸುತ್ತವೆ. ಯಾವುದೇ ತರಬೇತಿಯಿಲ್ಲದೆ ಸುಲಭವಾಗಿ ಪ್ರವೇಶಿಸುವ ಕ್ಷೇತ್ರ ರಾಜಕೀಯ ಎಂದಾಗಿಬಿಟ್ಟಿದೆ. ದುರದೃಷ್ಟವಶಾತ್, ದೇಶದ ಜನರ ಜೀವನ, ಭವಿಷ್ಯ ಇತ್ಯಾದಿ ನಿರ್ಧಾರವಾಗುವುದು ಈ ಕ್ಷೇತ್ರದಿಂದಲೇ. ಹಾಗಾದರೆ ಇಷ್ಟು ಪ್ರಮುಖವಾದ ಕ್ಷೇತ್ರಕ್ಕೆ ಒಂದಷ್ಟು ಸಾಮಾಜಿಕ ಕಳಕಳಿ, ಅದಕ್ಕೆ ಪೂರಕವಾದ ತರಬೇತಿ ಪಡೆದವರು ಹೋಗಬೇಕಾದ ಜರೂರಿರುತ್ತದೆ. ಅಂದರೆ, ಯಾವುದನ್ನು ನಾವು ಅನೈತಿಕ, ಹೊಲಸು ಎನ್ನುತ್ತೇವೆಯೋ ಆ ಜಾಗವನ್ನು ಸ್ವಚ್ಛಗೊಳಿಸಲು ಅಲ್ಲಿ ಒಳ್ಳೆಯ ಜನ ಕೆಲಸ ಮಾಡಬೇಕಾದ ಅಗತ್ಯವಿದೆ.

ಸಂಘಟನೆಯ ಕೆಲ ಹಿರಿಯರು ರಾಜ್ಯಸಭೆ, ವಿಧಾನ ಪರಿಷತ್ ಸದಸ್ಯರಾಗಿರುವುದನ್ನು ಲೇಖಕರು ಉಲ್ಲೇಖಿಸಿದ್ದಾರೆ. ಹಾಗೆ ನೋಡಿದರೆ, ಈ ರೀತಿಯ ವಿವಿಧ ಕ್ಷೇತ್ರಗಳ ಹಿರಿಯರು ಶಾಸಕಾಂಗದಲ್ಲಿ ಕುಳಿತು ತಮ್ಮ ತಮ್ಮ ಕ್ಷೇತ್ರಗಳ ಅನುಭವದಿಂದ ರಾಜಕೀಯದ ಘನತೆ ಎತ್ತಿ ಹಿಡಿದಿದ್ದಾರೆ. ಅಷ್ಟೇ ಅಲ್ಲ, ರಾಜಕೀಯದಲ್ಲಿ ಅವರ ಸಾಮಾಜಿಕ ಕಳಕಳಿಯು ಪರಿಣಾಮಕಾರಿ ಅಸ್ತ್ರವಾಗಬಲ್ಲದು, ಶಕ್ತಿಯಾಗಬಲ್ಲದು ಎಂಬುದು ನಿರ್ವಿವಾದ.

ಯಾವುದೇ ಸಾಮಾಜಿಕ ಸಂಘಟನೆಯ ಉದ್ದೇಶವು ಸಾಮಾಜಿಕ ಒಳಿತನ್ನು ಗುರಿಯಾಗುಳ್ಳ ಕಾರ್ಯಕರ್ತರ ಪಡೆಯನ್ನು ಕಟ್ಟುವುದಾಗಿರಬೇಕು. ಆದರೆ ಇಂಥವರು ಸಮಾಜದಲ್ಲಿ ತಮಗಿಷ್ಟ ಬಂದ ಯಾವುದೇ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬಹುದು. ಅದರಲ್ಲಿ ರಾಜಕೀಯವೂ ಒಂದು. ಆದರೆ ರಾಜಕೀಯ ಅಧಿಕಾರಕ್ಕಾಗಿ ಕೆಲವರು ಈ ಸಂಘಟನೆಗಳನ್ನು ದುರ್ಬಲಗೊಳಿಸಲು ಯತ್ನಿಸುವುದು ಎಲ್ಲಾ ಸಾಮಾಜಿಕ ಸಂಘಟನೆಗಳ ಮುಂದಿರುವ ಸವಾಲು. ಅದನ್ನು ತಡೆಯುವ ಮಾರ್ಗಗಳನ್ನು ಅವು ಕಂಡುಕೊಳ್ಳಬೇಕು. ದೇಶದ ರಾಜಕೀಯ ಕ್ಷೇತ್ರಕ್ಕೆ ಹೆಚ್ಚು ಕ್ರಿಯಾಶೀಲ, ದೂರದೃಷ್ಟಿಯುಳ್ಳ, ಸಾಮಾಜಿಕ ಕಳಕಳಿಯುಳ್ಳ ಜನರು ಬರುವಂತೆ ಆಗಬೇಕು. ಆ ಮೂಲಕ, ಈ ಕ್ಷೇತ್ರವನ್ನು ಸಮಾಜ ಗೌರವದಿಂದ ನೋಡುವ ಪರಿಸ್ಥಿತಿ ನಿರ್ಮಾಣವಾಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.