ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಕರ್ನಾಟಕ: ಹೆಸರಿಟ್ಟವರ ಮರೆಯುವುದು ಸರಿಯೇ?

Published 29 ಅಕ್ಟೋಬರ್ 2023, 19:30 IST
Last Updated 29 ಅಕ್ಟೋಬರ್ 2023, 19:30 IST
ಅಕ್ಷರ ಗಾತ್ರ

ಕರ್ನಾಟಕ: ಹೆಸರಿಟ್ಟವರ ಮರೆಯುವುದು ಸರಿಯೇ?

‘ಕರ್ನಾಟಕ’ ಎಂಬ ಹೆಸರು ಅಸ್ತಿತ್ವಕ್ಕೆ ಬಂದದ್ದರ ಸುವರ್ಣ ಮಹೋತ್ಸವವನ್ನು ಅದ್ಧೂರಿಯಿಂದ ಆಚರಿಸಲು ಹೊರಟಿರುವ ರಾಜ್ಯ ಸರ್ಕಾರ, ಕನ್ನಡ ಮಣ್ಣಿನ ಮಕ್ಕಳಲ್ಲಿ ಹೊಸ ಸಂಭ್ರಮಕ್ಕೆ ಮುನ್ನುಡಿ ಬರೆದಿದೆ. ಇಂತಹ ಸಮಯದಲ್ಲಿ, ‘ಮೈಸೂರು ರಾಜ್ಯ’ಕ್ಕೆ ‘ಕರ್ನಾಟಕ’ ಎಂದು ನಾಮಕರಣ ಮಾಡಿದವರನ್ನು ಮರೆತಿದೆಯೇ ಎಂಬ ಅನುಮಾನ ಕಾಡುತ್ತಿದೆ. ಏಕೀಕರಣದ ಹೋರಾಟ ತೀವ್ರಗೊಂಡಿದ್ದರ ಫಲವಾಗಿ, ಹರಿದು ಹಂಚಿಹೋಗಿದ್ದ ಕನ್ನಡ ನಾಡು ಒಟ್ಟಾಗಿ ಮೈಸೂರು ರಾಜ್ಯದ ಉದಯವಾಯಿತು. ಆದರೆ ಮೈಸೂರು ರಾಜ್ಯ ಎಂಬ ಹೆಸರು ನಿರ್ದಿಷ್ಟ ಪ್ರಾಂತ್ಯವನ್ನು ಪ್ರತಿನಿಧಿಸುತ್ತದೆ ಎಂಬ ಅಪಸ್ವರ ಇದ್ದೇ ಇತ್ತು. ಇಂತಹ ಕೊರಗನ್ನು ದೂರಮಾಡುವ ಸಂದರ್ಭಕ್ಕಾಗಿ ಕನ್ನಡಿಗರು ಚಾತಕ ಪಕ್ಷಿಗಳಂತೆ ಕಾದರು. ಅದೂ ಎಲ್ಲಿಯವರೆಗೆ ಎಂದರೆ, ದೇವರಾಜ ಅರಸು ಅವರು ಮುಖ್ಯಮಂತ್ರಿ ಆಗುವವರೆಗೆ. ಅರಸು ಅವರು ಜನರ ನಾಡಿಮಿಡಿತ ಅರಿತಿದ್ದ ಜನನಾಯಕ. ‘ಕರ್ನಾಟಕ’ ರಾಜ್ಯ ಎಂಬ ನಾಮಕರಣಕ್ಕೆ ವಿರೋಧ ಇದ್ದಾಗ್ಯೂ ಅದನ್ನು ಅವರು ಮೆಟ್ಟಿ ನಿಂತರು. 1973ರಲ್ಲಿ ಅಖಂಡ ರೂಪದಲ್ಲಿ ‘ಕರ್ನಾಟಕ’ ರಾಜ್ಯ ಎಂಬ ನಾಮಕರಣ ಆಯಿತು. ಆ ಒಂದು ಕ್ಷಣ ಅಂದಿನ ಮುಕ್ಕೋಟಿ ಕನ್ನಡಿಗರಲ್ಲಿ ರೋಮಾಂಚನ ಮೂಡಿಸಿದ್ದಷ್ಟೇ ಅಲ್ಲ ‘ನಾವೆಲ್ಲರೂ ಒಂದಾದೆವು’ ಎಂಬ ಐಕ್ಯತಾಭಾವ ಮೂಡಿಸಿತು.

ಈಗ ಸರ್ಕಾರವು ಸುವರ್ಣ ಸಂಭ್ರಮವನ್ನು ನ. 1ರಿಂದ ಇಡೀ ವರ್ಷ ಆಚರಿಸಲಿದೆ. ಆದರೆ ಆ ಹೆಸರಿನ ನಾಮಕರಣಕ್ಕೆ ಮುಂದಾದ ಅರಸು ಅವರ ಹೆಸರನ್ನು ಪ್ರಚುರಪಡಿಸಲು ಹಿಂದೇಟು ಹಾಕುತ್ತಿದೆ ಎಂಬ ಗ್ರಹಿಕೆ ಜನಮಾನಸದಲ್ಲಿದೆ. ಸರ್ಕಾರ ಅದನ್ನು ತೊಡೆದುಹಾಕಬೇಕು. ಈ ನಾಮಕರಣಕ್ಕೆ ಅರಸು ಅವರು ನೀಡಿದ ಕೊಡುಗೆಯನ್ನು ಸ್ಮರಿಸುವ ಮೂಲಕ ಅವರ ಹೆಸರು ಸಹ ಮುಂಚೂಣಿಯಲ್ಲಿ ಇರುವಂತೆ ಗಮನಹರಿಸಬೇಕು.

–ಡಿ.ಎಸ್.ಚೌಗಲೆ, ಬೆಳಗಾವಿ, ಎಂ.ಜಿ.ಈಶ್ವರಪ್ಪ, ದಾವಣಗೆರೆ, ಸಿ.ಬಸವಲಿಂಗಯ್ಯ, ಮೈಸೂರು, ಪ್ರಕಾಶ ಗರುಡ, ಧಾರವಾಡ, ಆರ್.ಎಚ್.ನಟರಾಜ್, ಆರ್.ಜಿ.ಹಳ್ಳಿ ನಾಗರಾಜ, ಸೂರಜ್ ಸ್ಟೀಫನ್ ಡಿಸೋಜ, ರಾಜಶೇಖರ ಮಠಪತಿ, ಬೆಂಗಳೂರು, ಭಾಗ್ಯಜ್ಯೋತಿ ಹಿರೇಮಠ, ಗುಡಗೇರಿ, ಯಲ್ಲಪ್ಪ ಹಿಮ್ಮಡಿ, ರಾಯಬಾಗ

_______________________________________________________

ಆಡುನುಡಿಯ ರೂಪ ತಪ್ಪಲ್ಲ

‘ಚಂದನ’ ಕನ್ನಡ ವಾಹಿನಿಯಲ್ಲಿ ಮೈಸೂರು ದಸರಾದ ನಿರೂಪಣೆಯ ಸಂದರ್ಭದಲ್ಲಿ ‘ಹಾಸನ’ವನ್ನು ‘ಆಸನ’, ‘ಹಿಂದೆ’ ಎಂಬುದನ್ನು ‘ಇಂದೆ’ ಎಂದೆಲ್ಲ ಉಚ್ಚಾರಣೆ ಮಾಡಿದ್ದು ಕನ್ನಡ ನಾಡಿನ ಪ್ರೇಕ್ಷಕರಿಗೆ, ಕೇಳುಗರಿಗೆ ಅಸಹನೀ ಯವಾಗಿತ್ತು ಎಂಬ ಆತಂಕವನ್ನು ಜಗದೀಶ ನೂಲಿನವರ ಅವರು ವ್ಯಕ್ತಪಡಿಸುತ್ತ (ವಾ.ವಾ., ಅ. 28), ‘ಕನ್ನಡದ ಉಚ್ಚಾರಣೆಯನ್ನು ಸ್ಪಷ್ಟವಾಗಿ ಮಾಡಲು ಬಾರದವರನ್ನು ನಿರೂಪಣೆಗಾಗಿ ನೇಮಿಸಿದರೆ ಹೇಗೆ?’ ಎಂದು ಪ್ರಶ್ನಿಸಿದ್ದಾರೆ.

‘ಹ’ಕಾರದಿಂದ ಮೊದಲಾಗುವ ಪದಗಳನ್ನು ಮಾತಿನ ಸನ್ನಿವೇಶಗಳಲ್ಲಿ ‘ಅ’ಕಾರವಾಗಿ ಉಚ್ಚಾರಣೆ ಮಾಡುವ ಕೋಟಿಗಟ್ಟಲೆ ಕನ್ನಡಿಗರು ನಾಡಿನಾದ್ಯಂತ ಇದ್ದಾರೆ. ಕನ್ನಡಿಗರು ನಿತ್ಯ ಆಡುತ್ತಿರುವ ಕನ್ನಡ ಪದಗಳ ರೂಪದಲ್ಲಿ ಹಲವಾರು ಬಗೆಯ ಪ್ರಾದೇಶಿಕ ಮತ್ತು ಸಾಮಾಜಿಕ ಒಳನುಡಿಗಳಿವೆ. ಈ ಒಳನುಡಿಗಳಲ್ಲಿ ಬಳಕೆಯಾಗುವ ಮಾತಿನ ಧ್ವನಿಗಳಲ್ಲಿ ಇಂತಹ ವ್ಯತ್ಯಾಸಗಳು ಕಂಡುಬರುವುದು ಕನ್ನಡ ನುಡಿಯ ಉಚ್ಚಾರಣಾ ಪ್ರಭೇದವೇ ವಿನಾ ಅಸಹನೀಯವಲ್ಲ. ಕನ್ನಡವನ್ನೂ ಒಳಗೊಂಡಂತೆ ಜಗತ್ತಿನಲ್ಲಿರುವ ಭಾಷೆಗಳ ಪದಗಳು ಆಡುರೂಪ ಮತ್ತು ಬರಹದ ರೂಪದಲ್ಲಿ ಬಳಕೆಯಾಗುತ್ತವೆ. ಬರಹದ ರೂಪದಲ್ಲಿ ‘ಹಾಸನ’ ಎಂಬುದನ್ನು ‘ಆಸನ’ ಎಂದು ಬರೆದರೆ, ಅದು ತಪ್ಪಾಗುತ್ತದೆ. ಆಡುರೂಪದಲ್ಲಿ ತಪ್ಪಾಗುವುದಿಲ್ಲ. ಅಂತಹ ಉಚ್ಚಾರಣೆಯು ಮಾತನಾಡಿದವರ ಪ್ರಾದೇಶಿಕ ಇಲ್ಲವೇ ಸಾಮಾಜಿಕ ಉಪಭಾಷೆಯ ಪ್ರಕಾರವನ್ನು ಸೂಚಿಸುತ್ತದೆ.

–ಸಿ.ಪಿ.ನಾಗರಾಜ, ಬೆಂಗಳೂರು

_______________________________________________________

ಜನರ ಅಭಿಪ್ರಾಯ ಕೇಳುವವರು ಯಾರು?

ರಾಮನಗರವನ್ನು ಬೆಂಗಳೂರು ದಕ್ಷಿಣ ಎಂದು ಮಾಡುವ ‘ಪ್ರತಿಜ್ಞೆ’ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರದು. ಅದು ಹಾಗೆ ಆಗಕೂಡದು ಎಂಬ ‘ಹಟ’ ಜೆಡಿಎಸ್‌ ಮುಖಂಡ ಎಚ್‌.ಡಿ.ಕುಮಾರಸ್ವಾಮಿ ಅವರದು. ಇಬ್ಬರೂ ಹೆಸರಿನ ಪರ ಹಾಗೂ ವಿರುದ್ಧವಾಗಿ ಪರಸ್ಪರ ಪ್ರಯೋಗಿಸುತ್ತಿರುವ ಮೂದಲಿಕೆಯ ವಾಗ್ಬಾಣಗಳನ್ನು ಸಹಿಸಿಕೊಳ್ಳಬೇಕಾದ ದುರಂತ ಕನ್ನಡ ಜನತೆಯದು. ತಾವು ಮಾಡುವ ಕೆಲಸ, ಆಡುವ ಮಾತು ಎಲ್ಲವೂ ಜನರಿಗಾಗಿ, ತಮ್ಮ ಮಾತು, ನಡವಳಿಕೆಗಳು ತಾವು ಪ್ರತಿನಿಧಿಸುವ ಕ್ಷೇತ್ರದ ಜನರದೇ ಆಗಿರುತ್ತವೆ ಎಂಬ ಅಬದ್ಧ ತಿಳಿವಳಿಕೆಯೇ ಈಗಿನ ಎಲ್ಲ ಅನಗತ್ಯ ಸಮಸ್ಯೆಗಳಿಗೆ ಕಾರಣ. ಅಷ್ಟಕ್ಕೂ ಹೆಸರು ಬದಲಾವಣೆ ಮಾಡಲೇಬೇಕಾದ ತುರ್ತಾದರೂ ಏನೆನ್ನುವುದೇ ತಿಳಿಯುವುದಿಲ್ಲ. ಕಾಕತಾಳೀಯವಾದರೂ ಒಂದು ಸಂಗತಿಯನ್ನು ಗಮನಿಸಬೇಕು. 2007ರಲ್ಲಿ ಬಿಜೆಪಿ– ಜೆಡಿಎಸ್ ಮೈತ್ರಿ ಸರ್ಕಾರವಿದ್ದಾಗ ರಾಮನಗರ ಜಿಲ್ಲೆ ರೂಪುಗೊಂಡದ್ದು. ಅಂದು ಮುಖ್ಯಮಂತ್ರಿಯಾಗಿದ್ದವರು ಎಚ್‌.ಡಿ.ಕುಮಾರಸ್ವಾಮಿ. ಈಗ 2023ರಲ್ಲಿ ಬಿಜೆಪಿ– ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡಿರುವ ಸಮಯದಲ್ಲೇ ಆಗಿನ ಹೆಸರನ್ನು ಈಗ ಬದಲಾಯಿಸುವ ಛಲ! ಈ ಮಧ್ಯೆ, ರಾಮನಗರ ಜಿಲ್ಲೆಯ ಜನರ ಅಭಿಪ್ರಾಯ ಕೇಳುವವರು ಯಾರು?

–ಸಾಮಗ ದತ್ತಾತ್ರಿ, ಬೆಂಗಳೂರು

_______________________________________________________


ಕಾಂಗ್ರೆಸ್‌ ಮುಖಂಡರು ವಾಸ್ತವ ಅರಿಯಲಿ

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಗಳಿಸಿ ಅಧಿಕಾರದ ಗದ್ದುಗೆ ಏರಿದ ಕಾಂಗ್ರೆಸ್ ಪಕ್ಷವು ಆಂತರಿಕ ಕಚ್ಚಾಟದಿಂದ ತನ್ನ ಸಮಾಧಿಯನ್ನು ತಾನೇ ತೋಡಿಕೊಳ್ಳಲು ಹೊರಟಿದೆಯೇ ಎಂಬ ಅನುಮಾನ, ಆ ಪಕ್ಷದೊಳಗೆ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸುತ್ತಿರುವ ಜನರನ್ನು ಕಾಡತೊಡಗಿದೆ. ಬಿಜೆಪಿ ನೇತೃತ್ವದ ಸರ್ಕಾರದ ದುರಾಡಳಿತದಿಂದ ಬೇಸತ್ತ ಜನ ಹಲವಾರು ನಿರೀಕ್ಷೆಗಳನ್ನು ಇಟ್ಟುಕೊಂಡು ಕಾಂಗ್ರೆಸ್ ನೇತೃತ್ವದ ಸರ್ಕಾರವನ್ನು ಅಸ್ತಿತ್ವಕ್ಕೆ ತಂದರು. ಆದರೆ ಜನರ ಆ ನಿರೀಕ್ಷೆಗಳು ಹುಸಿಯಾಗುತ್ತಿವೆಯೇ?

ರಾಜ್ಯದಲ್ಲಿ ಬರ ಪರಿಸ್ಥಿತಿ ಉಂಟಾಗಿ ಮುಂದೇನು ಎಂಬ ಆತಂಕದಲ್ಲಿ ಜನ ಇದ್ದಾರೆ. ಅಭಿವೃದ್ಧಿ ಕಾರ್ಯಗಳು ಹೆಚ್ಚೂಕಮ್ಮಿ ಸ್ಥಗಿತಗೊಂಡಂತೆ ಆಗಿವೆ. ಭ್ರಷ್ಟಾಚಾರ ನಿಯಂತ್ರಣಕ್ಕೆ ಬಂದಿಲ್ಲ. ಅಧಿಕಾರಿವರ್ಗ ಹಿಂದಿನ ಗುಂಗಿನಿಂದ ಹೊರಬರುವ ಲಕ್ಷಣಗಳು ಗೋಚರಿಸುತ್ತಿಲ್ಲ. ಕಾಂಗ್ರೆಸ್ ಕಾರ್ಯಕರ್ತರ ಅವಿರತ ಶ್ರಮದ ಫಲವಾಗಿ ಸಿಕ್ಕಿದ ಒಂದು ಉತ್ತಮ ಅವಕಾಶವನ್ನು ಆ ಪಕ್ಷದ ನಾಯಕರೇ ಪರಸ್ಪರ ಕಾಲನ್ನು ಎಳೆದುಕೊಳ್ಳುವ ಮೂಲಕ ಹಾಳುಮಾಡಿಕೊಳ್ಳುತ್ತಿದ್ದಾರೆ ಎನಿಸುತ್ತಿದೆ. ಇಂಥ ಪರಿಸ್ಥಿತಿಯಲ್ಲಿ, ಸರ್ಕಾರವು ರಾಜ್ಯದ ಸಮಸ್ಯೆಗಳ ನಿವಾರಣೆಯತ್ತ ಮುಖಮಾಡದಿದ್ದರೆ ಜನ ಖಂಡಿತಾ ಕ್ಷಮಿಸಲಾರರು ಎಂಬ ವಾಸ್ತವವನ್ನು ಆ ಪಕ್ಷದ ನಾಯಕರು ಬೇಗ ಅರಿತುಕೊಳ್ಳಬೇಕಾಗಿದೆ.

–ಚಾವಲ್ಮನೆ ಸುರೇಶ್ ನಾಯಕ್, ಹಾಲ್ಮತ್ತೂರು, ಕೊಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT