ಮನೆಯಲ್ಲಿ ಇರಲಿ ಕನ್ನಡದ ವಾತಾವರಣ

ಇಂದು (ನ. 1) ಹಿರಿಕಿರಿ ಪುಢಾರಿಗಳೆಲ್ಲ ಗರಿಗರಿ ಬಟ್ಟೆ ಧರಿಸಿ, ಬಾವುಟ ಹಿಡಿದು ಮೆರವಣಿಗೆ ಮಾಡಿ, ಧ್ವಜಾರೋಹಣ ನಡೆಸಿ ಅಲ್ಲಿಗೆ ರಾಜ್ಯೋತ್ಸವವನ್ನು ಮುಗಿಸಿಬಿಡುತ್ತಾರೆ. ರಾಜ್ಯೋತ್ಸವ ಎನ್ನುವುದು ಒಂದು ವಾರ್ಷಿಕ ಜಾತ್ರೆಯಂತೆ ಆಗಿರುವುದು ವಿಪರ್ಯಾಸ. ನವೆಂಬರ್ ಮುಗಿದ ಬಳಿಕ ಕನ್ನಡ ನಾಡು, ನುಡಿಯ ಬಗ್ಗೆ ನಾವ್ಯಾರೂ ತಲೆಕೆಡಿಸಿಕೊಳ್ಳಲು ಹೋಗದಿರುವುದು ದುರದೃಷ್ಟಕರ. ಕನ್ನಡ ನಾಡು- ನುಡಿ ಕುರಿತ ಎಚ್ಚರ ಒಂದು ತಿಂಗಳಿಗೆ ಮಾತ್ರ ಸೀಮಿತವಾಗದಿರಲಿ. ಕನ್ನಡ ಕುರಿತ ಕಾಳಜಿ, ಕಳವಳ ನಿರಂತರವಾಗಿ ನಮ್ಮೆದೆಯೊಳಗಿದ್ದರೆ ನಮ್ಮ ನಾಡು- ನುಡಿಗೆ ದೈನೇಸಿ ಸ್ಥಿತಿ ಒದಗುವ ಸಾಧ್ಯತೆ ಇರುವುದಿಲ್ಲ.

‘ಕನ್ನಡವ ಕಾಪಾಡು ಕನ್ನಡದ ಕಂದಾ, ಕನ್ನಡವ ಕಾಪಾಡು ನನ್ನ ಆನಂದ’ ಎನ್ನುವ ಕವಿವಾಣಿ ನಮ್ಮಲ್ಲಿ ಸದಾ ಜಾಗೃತವಾಗಿರುವಂತೆ ನೋಡಿಕೊಳ್ಳಬೇಕು. ಮನೆಯಲ್ಲಿ ಕನ್ನಡದ ವಾತಾವರಣವನ್ನು ಉಳಿಸಿಕೊಳ್ಳಬೇಕು. ಮಕ್ಕಳು ಯಾವ ಅಳುಕು, ಕೀಳರಿಮೆಯೂ ಇಲ್ಲದೆ ಕನ್ನಡವನ್ನು ಸಹಜವಾಗಿ ಬಳಸುವ ಮನೋಭಾವವನ್ನು ರೂಢಿಸಿಕೊಳ್ಳಲು ಮನೆಯಲ್ಲಿ ಪೂರಕವಾದ ವಾತಾವರಣ ಇರುವಂತೆ ನೋಡಿಕೊಳ್ಳಬೇಕು.

ಭೂಮಿಕಾ ರಂಗಪ್ಪ ದಾಸರಡ್ಡಿ, ಬಿದರಿ

ಅತಿರೇಕದ ವರ್ತನೆ ತರವೇ?

ಕೊಲೆ ಆರೋಪದ ಮೇಲೆ ಜೈಲುಪಾಲಾಗಿದ್ದ ನಟ ದರ್ಶನ್ ಬುಧವಾರ ನಿರ್ದಿಷ್ಟ ಕಾಲಾವಧಿಯ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಇದನ್ನೇ ದೃಶ್ಯ ಮಾಧ್ಯಮಗಳು ಕ್ಷಣಕ್ಷಣಕ್ಕೂ ಆತ ಎಲ್ಲಿದ್ದರು, ಯಾವ ರಸ್ತೆಯಲ್ಲಿ ಬರುತ್ತಿದ್ದರು, ಯಾವ ಮನೆಗೆ ಹೋಗುತ್ತಾರೆ, ಯಾವ ಆಸ್ಪತ್ರೆ ಸೇರುತ್ತಾರೆ ಎಂದೆಲ್ಲ ಬಹುತೇಕ ನೇರಪ್ರಸಾರವನ್ನೇ ಮಾಡಿದವು. ಇದನ್ನು ಒಂದು ಸುದ್ದಿಯಾಗಿ ಪ್ರಸಾರ ಮಾಡಿದರೆ ಸಾಕಲ್ಲವೇ? ಈ ಪರಿಯಲ್ಲಿ ಅನಗತ್ಯ ವೈಭವೀಕರಣ ಬೇಕೇ? ಇದನ್ನು ನೋಡಿದ ಅಭಿಮಾನಿಗಳು ಆತ ಬರುವ ಸ್ಥಳದಲ್ಲಿ ಕಿಕ್ಕಿರಿದರೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗುವುದಿಲ್ಲವೇ?

ಅವರೇನೂ ದೇಶಭಕ್ತರಾಗಿ ಬ್ರಿಟಿಷರಿಂದ ಬಂಧಿತರಾಗಿದ್ದು ಹೊರಬಂದವರಲ್ಲ. ನಟನೆ ಅವರ ವೃತ್ತಿ. ಚಿತ್ರ ಚೆನ್ನಾಗಿದ್ದರೆ ನೋಡಬೇಕು, ಒಳ್ಳೆಯ ವಿಚಾರ ಇದ್ದಲ್ಲಿ ಅಳವಡಿಸಿಕೊಳ್ಳಬೇಕು. ಅದು ಬಿಟ್ಟು ಜಾಮೀನಿನ ಮೇಲೆ ಹೊರ ಬಂದವರ ಪರವಾಗಿ ಪಟಾಕಿ ಹೊಡೆದು ಸಂಭ್ರಮಿಸುವುದು ಅತಿರೇಕದ ವರ್ತನೆಯೇ ಹೌದು. ರಾಜ್ಯೋತ್ಸವದ ಮಾಸ ಇದಾಗಿರುವುದರಿಂದ, ಕನ್ನಡದ ಪರವಾಗಿ ಕೆಲಸ ಮಾಡಿದ, ನಾಡನ್ನು ಕಟ್ಟಿದ, ನಾಡಿನ ಜನರಿಗಾಗಿ ಪ್ರಾಣತ್ಯಾಗ ಮಾಡಿದವರ ಸಾಧನೆಗಳನ್ನು ತೋರಿಸಿದರೆ ಇಂದಿನ ಯುವಕರಿಗೆ ಸ್ಫೂರ್ತಿ ಆದೀತು. ಅದು ಬಿಟ್ಟು ಬರೀ ಟಿಆರ್ಪಿಗಾಗಿ ಇಂತಹವನ್ನು ತೋರಿಸಿದರೆ ಸಮಾಜಕ್ಕೆ ಕಿಂಚಿತ್ತೂ ಉಪಯೋಗವಿಲ್ಲ. ಇಂತಹ ಸೂಕ್ಷ್ಮ ಸಂಗತಿಗಳನ್ನು ದೃಶ್ಯ ಮಾಧ್ಯಮಗಳು ಅರಿಯಬೇಕು.

ಪತ್ತಂಗಿ ಎಸ್. ಮುರಳಿ, ಬೆಂಗಳೂರು

ಧನಕನಕದ ಹೊರೆ ಮತ್ತು ಪ್ರಶಸ್ತಿಯ ನಿಜಮೌಲ್ಯ

ರಾಜ್ಯೋತ್ಸವ ಪ್ರಶಸ್ತಿಗಳು ಪ್ರಕಟವಾಗಿವೆ. ಹಲವಾರು ಅನಾಮಧೇಯ ಹಿರಿಯ ಜೀವಿಗಳನ್ನು ಗುರುತಿಸಿ ಗೌರವಿಸುತ್ತಿರುವುದು ಸಮಾಧಾನಕರ. ಸಾಮಾಜಿಕ ನ್ಯಾಯ, ಪ್ರಾದೇಶಿಕ ಪ್ರಾತಿನಿಧ್ಯ, ರಾಜಕೀಯ, ಒತ್ತಡಗಳು, ಆಕಾಂಕ್ಷಿಗಳ ದಂಡು... ಈ ಎಲ್ಲವುಗಳ ಮಧ್ಯೆ ಆಯ್ಕೆಯ ಕಸರತ್ತು ಸಾಹಸವೇ ಸರಿ. ಈ ಹಿಂದೆ ಆಯ್ಕೆಯಾದಾಗ ‘ನನಗೆ ಪ್ರಶಸ್ತಿ ಬೇಡ, ಹೆಚ್ಚು ಯೋಗ್ಯ ಇರುವ ಇತರರಿಗೆ ಕೊಡಿ’ ಎಂದವರು, ತಾತ್ವಿಕ, ನೈತಿಕ ಕಾರಣಗಳಿಗಾಗಿ ರಾಜ್ಯೋತ್ಸವಪ್ರಶಸ್ತಿ ಬೇಡ ಎಂದವರ ಉದಾಹರಣೆಗಳೂ ಇವೆ. ಅಂತಹ ನಿರಾಕರಣೆಗಳು ಈಗ ಅಪರೂಪ.

ಈಗ ಏನಿದ್ದರೂ ಅರ್ಜಿ ಸಲ್ಲಿಸದವರಿಗಿಂತ, ಪ್ರಶಸ್ತಿ ಬಾಚಿಕೊಳ್ಳಲು ಅರ್ಜಿ ಸಲ್ಲಿಸಿ ಪ್ರತ್ಯಕ್ಷ ಪರೋಕ್ಷ ಒತ್ತಡಗಳನ್ನು ಹೇರುವವರೇ ಹೆಚ್ಚು. ಐದು ಲಕ್ಷ ರೂಪಾಯಿ ಪ್ರಶಸ್ತಿ ಮೊತ್ತ ಮತ್ತು ಇಪ್ಪತ್ತೈದು ಗ್ರಾಂ ಚಿನ್ನದ ಪದಕವು ಪ್ರಶಸ್ತಿಯ ಹಣಕಾಸಿನ ಮೌಲ್ಯವನ್ನೇನೋ ಹೆಚ್ಚಿಸಬಹುದು. ಕೆಲವು ಪ್ರಶಸ್ತಿ ಪುರಸ್ಕೃತರಿಗೆ ಅಂತಹ ಅಗತ್ಯವೂ ಇರಬಹುದು. ಪ್ರಶಸ್ತಿ ಪುರಸ್ಕೃತರ ಸೇವೆ, ಅರ್ಹತೆಯನ್ನು ಸರ್ಕಾರ ಗುರುತಿಸಿ ಗೌರವಿಸುವುದು ಪ್ರಶಸ್ತಿಯ ಧನಕನಕದ ಮೌಲ್ಯಕ್ಕಿಂತ
ಹೆಚ್ಚಿನದು. ಧನಕನಕ ಒಳಗೊಂಡ ಪ್ರಶಸ್ತಿ ಪ್ರದಾನ, ಅದರ ಎಳೆತ, ಸೆಳೆತ ಕೆಲವೊಮ್ಮೆ ಪ್ರಶಸ್ತಿಯಅರ್ಹತೆಯನ್ನೇ ಮರೆಮಾಚುತ್ತವೆ. ಪ್ರಶಸ್ತಿಗಳು ಕೆಲವರಿಗೆ ಭಾರವೆನಿಸುತ್ತವೆ. ಅಂತೆಯೇ ನೊಬೆಲ್ ಪ್ರಶಸ್ತಿತಿರಸ್ಕರಿಸಿದವರೂ ಉಂಟು. ಪ್ರಶಸ್ತಿಯ ಧನಕನಕದ ಭಾರ ಕಡಿಮೆಯಾದಷ್ಟೂ ಪ್ರಶಸ್ತಿಯ ನಿಜಮೌಲ್ಯ ಹೆಚ್ಚುತ್ತದೆ.

ರಾಜ್ಯೋತ್ಸವ ಪ್ರಶಸ್ತಿಯೊಂದಿಗೆ ನೂರು ಜನರಿಗೆ ಸುವರ್ಣ ಮಹೋತ್ಸವ ಪ್ರಶಸ್ತಿಗಳನ್ನು ಘೋಷಿಸಿ ಗೌರವಿಸುತ್ತಿರುವುದು ಸರಿ. ಆದರೆ ಸದರಿ ಪ್ರಶಸ್ತಿ ಪುರಸ್ಕೃತರಿಗೆ ಫಲಕದೊಂದಿಗೆ ₹ 50 ಸಾವಿರ ನಗದು ನೀಡುತ್ತಿರುವುದು ತಾರತಮ್ಯವೆನಿಸಿದರೂ, ಧನಕನಕದ ಹೆಚ್ಚಿನ ಭಾರವಿಲ್ಲದ ಸುವರ್ಣ ಮಹೋತ್ಸವದ ವಿಶೇಷ ಪ್ರಶಸ್ತಿಯು ರಾಜ್ಯೋತ್ಸವ ಪ್ರಶಸ್ತಿಯಷ್ಟೇ ಗೌರವಾರ್ಹವಾದುದು.

ವೆಂಕಟೇಶ ಮಾಚಕನೂರ, ಧಾರವಾಡ

ಬೆಳೆನಷ್ಟ: ರೈತರ ಆತಂಕ ಮಾತ್ರವಲ್ಲ

ಬಾಗಲಕೋಟೆ, ಗದಗ, ಧಾರವಾಡ ಜಿಲ್ಲೆಗಳಲ್ಲಿ ಸಾವಿರಾರು ಹೆಕ್ಟೇರ್ನಲ್ಲಿ ಬೆಳೆದಿದ್ದ ಈರುಳ್ಳಿ ಫಸಲು ಮಳೆಯಿಂದ ನಾಶವಾಗಿರುವ ಕುರಿತ ವರದಿ (ಪ್ರ.ವಾ., ಅ. 30) ಓದಿ ಮನಸ್ಸಿಗೆ ಬಹಳ ನೋವಾಯಿತು. ರೈತ ತಾನು ಬೆಳೆದ ಉತ್ಪನ್ನವನ್ನು ಮಾರಿದಾಗ ಉತ್ತಮವಾದ ದರ ಸಿಕ್ಕಿದರೆ ಖುಷಿಯಾಗುತ್ತಾನೆ. ಇಲ್ಲದಿದ್ದರೆ ಸಂಕಷ್ಟಕ್ಕೆ ಈಡಾಗುತ್ತಾನೆ. ನಿರಂತರವಾಗಿ ಬೆಳೆ ನಷ್ಟವಾದರೆ ಸಾಲದಿಂದ ಆತ ಹೈರಾಣಾಗುತ್ತಾನೆ. ಇದು ರೈತರಷ್ಟೇ ಆತಂಕಪಡುವ ವಿಚಾರವಲ್ಲ. ಆಹಾರ ಸೇವಿಸುವರೆಲ್ಲರೂ ಈ ಬಗ್ಗೆ ಯೋಚಿಸಬೇಕಾಗಿದೆ. ರೈತರ ಬವಣೆ ತಪ್ಪಿಸಲು ಮುಂದಡಿ ಇಡಬೇಕಾಗಿದೆ.

ಕುಂದೂರು ಮಂಜಪ್ಪ, ಹೊಳೆ ಸಿರಿಗೆರೆ, ಹರಿಹರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.