ಅದೊಂದು ಕಾಲವಿತ್ತು. ಅಧಿಕಾರ ವಿಕೇಂದ್ರೀಕರಣ ಮತ್ತು ಪಂಚಾಯತ್ ರಾಜ್ ವ್ಯವಸ್ಥೆ ಬಗ್ಗೆ ತುಂಬಾ ನಿರೀಕ್ಷೆ ಹುಟ್ಟಿದ ಕಾಲವದು. ಪಶ್ಚಿಮ ಬಂಗಾಳದಲ್ಲಿ ಜ್ಯೋತಿ ಬಸು, ಕರ್ನಾಟಕದಲ್ಲಿ ರಾಮಕೃಷ್ಣ ಹೆಗಡೆ ಮತ್ತು ನಜೀರ್ ಸಾಬ್ ಅವರು ಅಧಿಕಾರ ವಿಕೇಂದ್ರೀಕರಣದ ಮಹತ್ವ ಹಾಗೂ ಸಾಮರ್ಥ್ಯವನ್ನು ಎತ್ತಿ ತೋರಿಸಿದ್ದರು.

ಸಂವಿಧಾನಕ್ಕೆ 73ನೇ ತಿದ್ದುಪಡಿಯ ಮೂಲಕ ದೇಶದಾದ್ಯಂತ 3 ಹಂತಗಳ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ಬರುವಲ್ಲಿ ಕರ್ನಾಟಕ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಪ್ರೇರಣೆ ನೀಡಿದ್ದವು. ಯುವ ಪ್ರಧಾನಿ ರಾಜೀವ್ ಗಾಂಧಿ, ವಿರೋಧ ಪಕ್ಷಗಳು ಆಡಳಿತದಲ್ಲಿದ್ದ ರಾಜ್ಯಗಳಲ್ಲಿ ನಡೆದ ಅದ್ಭುತ ಪ್ರಯೋಗಗಳನ್ನು ಇಡೀ ದೇಶಕ್ಕೆ ವಿಸ್ತರಿಸುವ ಸೌಜನ್ಯವನ್ನು ತೋರಿಸಿದ್ದರು. ಆದರೆ ಇದೀಗ ಕರ್ನಾಟಕದಲ್ಲಿ ಬಹು ನಿರೀಕ್ಷೆ ಮೂಡಿಸಿದ್ದ ಕೆ.ಆರ್.ರಮೇಶ್ ಕುಮಾರ್ ನೇತೃತ್ವದ ಸಮಿತಿಯು ಸರ್ಕಾರಕ್ಕೆ ಸಲ್ಲಿಸಿದ್ದ ತಿದ್ದುಪಡಿಗಳಿಗೆ ಆಗಿರುವ ಗತಿಯನ್ನು ನೋಡಿದರೆ ನಿರಾಸೆಯಾಗುತ್ತದೆ.

‘ರಾಜ್ಯದಲ್ಲಿ ಗ್ರಾಮ ಸ್ವರಾಜ್ಯದ ಪಥ’ಕ್ಕೆ ಸರಿಯಾದ ದಿಕ್ಕು ತೋರಿಸುವ ನಿಟ್ಟಿನಲ್ಲಿ ಈ ಸಮಿತಿ ಬಹಳ ಗಂಭೀರವಾದ ಪ್ರಯತ್ನವನ್ನು ಮಾಡಿತ್ತು. ಸಮಿತಿ ನೀಡಿದ್ದ ಬಹಳಷ್ಟು ತಿದ್ದುಪಡಿ ಶಿಫಾರಸುಗಳ ಪೈಕಿ ಕೇವಲ ಮೂರನ್ನು ಸದನದಲ್ಲಿ ಮಂಡಿಸಿ ಅನುಮೋದನೆ ಪಡೆದಿರುವುದನ್ನು ಗಮನಿಸಿದರೆ, ಸಮಿತಿಯ ಬಹುತೇಕ ಶಿಫಾರಸುಗಳು ಕಾಯಂ ಆಗಿ ಶೈತ್ಯಾಗಾರ ಸೇರಲಿವೆಯೇ ಎನ್ನುವ ಅನುಮಾನ ಮೂಡಲಾರಂಭಿಸಿದೆ.

ನಮ್ಮ ಆಡಳಿತಗಾರರಿಗೆ ‘ಪಂಚಾಯತ್ ರಾಜ್’ನ ಸಮಗ್ರ ಸುಧಾರಣೆ ಬೇಡ, ಹಾಗಾಗಿ ತೇಪೆ ಹಚ್ಚುವ ಕೆಲಸ ಮಾಡಿದ್ದಾರೆ ಎನ್ನುವ ಸಂಶಯಕ್ಕೂ ಸರ್ಕಾರದ ನಡೆ ಎಡೆ ಮಾಡಿಕೊಟ್ಟಿದೆ. ತಮ್ಮ ವರದಿಯ ಅನುಷ್ಠಾನದ ವಿಷಯದಲ್ಲಿ ಸರ್ಕಾರ ನಡೆದುಕೊಂಡ ರೀತಿಯಿಂದ ಸ್ವತಃ ರಮೇಶ್ ಕುಮಾರ್ ವ್ಯಗ್ರರಾಗಿದ್ದಾರೆ. ಸಮಿತಿಯ ಸದಸ್ಯರಲ್ಲೂ ಅಸಮಾಧಾನದ ಹೊಗೆಯಾಡಲಾರಂಭಿಸಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ, ಹಿರಿಯ ರಾಜಕಾರಣಿ ಎಚ್.ಕೆ.ಪಾಟೀಲರು ನಂಜಯ್ಯನ ಮಠ ಸಮಿತಿ ವರದಿಯ ಅನುಷ್ಠಾನಕ್ಕೆ ಅತೀವ ಆಸಕ್ತಿ ತೋರಿಸಿದರು.

ಈ ನಿಟ್ಟಿನಲ್ಲಿ ಅವರು ತೋರಿದ ತುರಾತುರಿ ರಮೇಶ್ ಕುಮಾರ್ ಸಮಿತಿಯ ಪರವಾಗಿ ಇರಲಿಲ್ಲ ಎನ್ನುವುದು ಸಚಿವರ ಮೇಲಿನ ಗಂಭೀರ ಆರೋಪವಾಗಿದೆ. ರಮೇಶ್ ಕುಮಾರ್ ಸಮಿತಿಯ ವರದಿಯಲ್ಲಿ ಕೆ.ಪಿ.ಆರ್ ಕಾಯ್ದೆ-1993ಕ್ಕೆ ಸಮಗ್ರ ಸುಧಾರಣೆ ತರುವ ಶಿಫಾರಸುಗಳಿವೆ. ಪ್ರಸ್ತುತ ನಮ್ಮ ಶಾಸನಸಭೆಯ ಪ್ರತಿನಿಧಿಗಳಿಗೆ ಇಂತಹ ಸಮಗ್ರ ಸುಧಾರಣೆ ಬೇಕಿಲ್ಲ.

ನಿಜವಾದ ಅರ್ಥದ ಅಧಿಕಾರ ವಿಕೇಂದ್ರೀಕರಣ ಜಾರಿಗೆ ಬಂದರೆ ಶಾಸಕರ ಕಿಮ್ಮತ್ತು ಕಡಿಮೆಯಾಗುತ್ತದೆ ಎನ್ನುವ ಭ್ರಮಾಲೋಕದಲ್ಲಿ ಇರುವ ಶಾಸಕರ ಸಂಖ್ಯೆ ಕಾಂಗ್ರೆಸ್ ಪಕ್ಷದಲ್ಲೂ ದೊಡ್ಡ ಪ್ರಮಾಣದಲ್ಲಿ ಇರುವುದರಿಂದ, ಈ ವರದಿಯನ್ನು ವ್ಯವಸ್ಥಿತವಾಗಿ ಹಿಂದೆ ಸರಿಸುವ ಪ್ರಯತ್ನ ನಡೆದಿದೆ.

ಆದರೆ ಸಚಿವರು ಇದಕ್ಕೆ ಚುನಾವಣೆಯ ನೆಪ ಹೇಳುತ್ತಿದ್ದಾರೆ. ಉಳಿದ ತಿದ್ದುಪಡಿಗಳನ್ನು ಮುಂದಿನ ದಿನಗಳಲ್ಲಿ ಹಂತಹಂತವಾಗಿ ಜಾರಿಗೆ ತರಲಾಗುವುದು ಎಂದು ಹೇಳುತ್ತಾರೆ. ನಂಜಯ್ಯನ ಮಠ ಸಮಿತಿ ವರದಿಯ ಅನುಷ್ಠಾನಕ್ಕೆ ಸಂಬಂಧಿಸಿ ಅವರಿಂದ ಇಂತಹ ನೆಪಗಳು ವ್ಯಕ್ತವಾಗಿಲ್ಲ. ರಮೇಶ್ ಕುಮಾರ್ ನೇತೃತ್ವದ ಸಮಿತಿ ರಾಜ್ಯದ ಗ್ರಾಮ ಪಂಚಾಯಿತಿಗಳ ಸಂಖ್ಯೆಯನ್ನು ಕಡಿಮೆ ಮಾಡುವ ಶಿಫಾರಸು ಮಾಡಿದ್ದರೆ, ನಂಜಯ್ಯನ ಮಠ ಸಮಿತಿ 439 ಹೊಸ ಗ್ರಾಮ ಪಂಚಾಯಿತಿಗಳನ್ನು ಸೃಷ್ಟಿಸಿದೆ. ಈ ಸೃಷ್ಟಿಯ ಹಿಂದೆ ಕೆಲವು ರಾಜಕೀಯ ಹಿತಾಸಕ್ತಿಗಳಿವೆ ಎನ್ನಲಾಗುತ್ತಿದೆ.

ಈ ಹೊಸ ಗ್ರಾಮ ಪಂಚಾಯಿತಿಗಳಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಚುನಾವಣೆಗೆ ಮುಂಚಿತವಾಗಿ ಒದಗಿಸಲು ಸಾಧ್ಯವೇ ಎನ್ನುವ ಪ್ರಶ್ನೆಯಿದೆ. ಆದರೂ ಸರ್ಕಾರ ಇದಕ್ಕೆ ಅನುಮೋದನೆ ನೀಡಿದೆ. ಇದೀಗ ಹಲವು ಜಿಲ್ಲೆಗಳಲ್ಲಿ ಇದಕ್ಕೆ ತಕರಾರುಗಳು ಹುಟ್ಟಿಕೊಂಡಿವೆ. ಹಲವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮತದಾನವನ್ನು ಕಡ್ಡಾಯಗೊಳಿಸುವ ತಿದ್ದುಪಡಿಯಿಂದ ಸರ್ಕಾರ ಮತ್ತು ಚುನಾವಣಾ ಆಯೋಗ ಮುಜುಗರ ಎದುರಿಸುವ ಪ್ರಸಂಗಗಳು ಎದುರಾಗಲಿವೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಕೆಲವು ಗಂಭೀರವಾದ ಪ್ರಶ್ನೆಗಳಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಮಾಡದಿರುವ ಪ್ರಜೆಗಳ ಹಕ್ಕನ್ನು ಮೊಟಕುಗೊಳಿಸಲು ಸಾಧ್ಯವೇ ಎನ್ನುವುದು ಮೊದಲ ಪ್ರಶ್ನೆ.
ಇನ್ನು ಈ ತೀರ್ಮಾನದ ಅನುಷ್ಠಾನ ಎಷ್ಟು ಕಾರ್ಯಸಾಧ್ಯ ಎನ್ನುವ ಪ್ರಶ್ನೆಯೂ ಏಳುತ್ತದೆ.

ಹೊಟ್ಟೆಪಾಡಿಗಾಗಿ ಕೂಲಿ ಅರಸಿಕೊಂಡು ಬೆಂಗಳೂರು, ಹುಬ್ಬಳ್ಳಿ, ಗೋವಾ, ಮಂಗಳೂರು ಮುಂತಾದ ನಗರಗಳಿಗೆ ಕುಟುಂಬ ಸಮೇತರಾಗಿ ವಲಸೆ ಹೋಗಿರುವ ಜನರು, ಇದೀಗ ಕಡ್ಡಾಯವಾಗಿ ತಮ್ಮ ಗ್ರಾಮಗಳಿಗೆ ತೆರಳಿ ಮತದಾನದಲ್ಲಿ ಭಾಗವಹಿಸಲೇಬೇಕು. ಇವರ ಪ್ರಯಾಣ ವೆಚ್ಚವನ್ನು ಭರಿಸುವವರು ಯಾರು? ಪ್ರಬಲರಾಗಿರುವ ಕೆಲವು ಅಭ್ಯರ್ಥಿಗಳು ಇಂತಹವರಿಗಾಗಿ ಪ್ರಯಾಣದ ವ್ಯವಸ್ಥೆ ಮಾಡಿ, ತಮ್ಮ ಪರವಾಗಿ ಮತ ಚಲಾಯಿಸುವಂತೆ ಮಾಡಿದರೆ ಚುನಾವಣಾ ಅಕ್ರಮ ಎನಿಸುವುದಿಲ್ಲವೇ?

ಅದೇ ರೀತಿ ಹಳ್ಳಿಗಳಿಂದ ಬಂದು ನಗರಗಳ ಖಾಸಗಿ ಕಾರ್ಖಾನೆಗಳು, ಕಂಪೆನಿಗಳಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಮತದಾನದ ದಿನ ರಜಾ ಸೌಲಭ್ಯಕ್ಕೆ ಸರ್ಕಾರದಿಂದ ವ್ಯವಸ್ಥೆ ಮಾಡಲು ಸಾಧ್ಯವೇ? ಹಾಗೆಯೇ ಒಂದು ವೇಳೆ ಯಾರಾದರೂ ಮತದಾನ ಮಾಡದೇ ಹೋದರೆ ಅವರ ಮೇಲೆ ಏನು ಕ್ರಮ? ಇಂತಹ ಹಲವು ಪ್ರಶ್ನೆಗಳಿಗೆ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗ ಪರಿಹಾರವನ್ನು ಹುಡುಕಬೇಕಾಗುತ್ತದೆ.

ಸರ್ಕಾರ ಅಂಗೀಕರಿಸಿರುವ ಕೆಲವು ತಿದ್ದುಪಡಿಗಳ ಪೈಕಿ ಎರಡು, ಖಂಡಿತವಾಗಿಯೂ ಗ್ರಾಮ ಪಂಚಾಯಿತಿಗಳಿಗೆ ಶಕ್ತಿ ಕೊಡುವಂತಹವು. ಮೊದಲನೆಯದು, ಗ್ರಾಮ ಪಂಚಾಯಿತಿಯ ಅಧ್ಯಕ್ಷ, ಉಪಾಧ್ಯಕ್ಷರ ಅಧಿಕಾರಾವಧಿಯನ್ನು 30 ತಿಂಗಳಿನಿಂದ 5 ವರ್ಷಗಳ ಪೂರ್ಣಾವಧಿಗೆ ಏರಿಸಲಾಗಿದೆ. ಎರಡನೆಯದು, ಗ್ರಾಮ ಪಂಚಾಯಿತಿ ವಾರ್ಡ್ಗಳ ಮೀಸಲಾತಿ ಆಡಳಿತವನ್ನು ಒಂದು ಅವಧಿಯ ಬದಲಿಗೆ ಎರಡು ಅವಧಿಗಳಿಗೆ, ಅಂದರೆ 10 ವರ್ಷಗಳಿಗೆ ಹೆಚ್ಚಿಸಲಾಗಿದೆ.

ಗ್ರಾಮೀಣ ಪ್ರದೇಶದಲ್ಲಿ ರಾಜಕೀಯ ನಾಯಕತ್ವ ಬೆಳವಣಿಗೆಯ ಸಂದರ್ಭದಲ್ಲಿ ಈ ಎರಡು ತಿದ್ದುಪಡಿಗಳು ಉತ್ತಮ ಪರಿಣಾಮ ನೀಡಲಿವೆ. ಆದರೆ, ಅಧ್ಯಕ್ಷ/ ಉಪಾಧ್ಯಕ್ಷರ ಅವಧಿಗೆ ಸಂಬಂಧಪಟ್ಟಂತೆ ಇನ್ನೂ ಕೆಲವು ನಿಯಮಗಳನ್ನು ರೂಪಿಸಿ ಅನಗತ್ಯವಾಗಿ ರಾಜಕೀಯ ಕಾರಣ ಮತ್ತು ಸ್ವಾರ್ಥಕ್ಕಾಗಿ ನಡೆಯುತ್ತಿದ್ದ ಅವಿಶ್ವಾಸ ಗೊತ್ತುವಳಿಗಳಿಗೆ ಕಡಿವಾಣ ಹಾಕಬೇಕಾಗಿದೆ. ಇನ್ನು ವಾರ್ಡ್ ಮೀಸಲಾತಿಯನ್ನು 10 ವರ್ಷಗಳಿಗೆ ವಿಸ್ತರಿಸುವುದರಿಂದ, ಒಂದು ಬಾರಿ ಗೆದ್ದ ಅಭ್ಯರ್ಥಿಗಳು ದೂರದೃಷ್ಟಿ ಇಟ್ಟುಕೊಂಡು ಕೆಲಸ ಮಾಡುವ ಅವಕಾಶ ಸಿಗುತ್ತದೆ.

ಉತ್ತಮ ಕೆಲಸ ಮಾಡಿ ಜನಮನ್ನಣೆ ಪಡೆದಲ್ಲಿ ಎರಡನೇ ಅವಧಿಗೂ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವ ಅವಕಾಶ ಇದರಿಂದ ಲಭ್ಯವಾಗುತ್ತದೆ. ಹೀಗಾಗಿ ಈ ಎರಡೂ ನಿರ್ಧಾರಗಳನ್ನು ನಾವು ಸ್ವಾಗತಿಸಬೇಕು. ಸಂಪುಟ ಉಪಸಮಿತಿಯ ನಿರ್ಧಾರವನ್ನು ಆಧರಿಸಿ ಸದನ ಅನುಮೋದಿಸಿರುವ ಇನ್ನೊಂದು ತಿದ್ದುಪಡಿ, ನಮ್ಮ ಪುರುಷ ಪ್ರಧಾನ ಮನೋಭಾವಕ್ಕೆ ಸಾಕ್ಷಿಯಾಗಿದೆ. ಇದು ಮಹಿಳಾ ಪ್ರಾತಿನಿಧ್ಯಕ್ಕೆ ಮಿತಿ ಹೇರುವ ತಿದ್ದುಪಡಿ.

ಗ್ರಾಮ ಪಂಚಾಯಿತಿಗಳಲ್ಲಿ ಮಹಿಳಾ ಪ್ರಾತಿನಿಧ್ಯ ಗರಿಷ್ಠ ಶೇ 50ನ್ನು ಮೀರಬಾರದು ಎಂದು ಇದು ಹೇಳುತ್ತದೆ. ಹಿಂದಿನ ಚುನಾವಣೆಯಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ಶೇ 33 ಮಹಿಳಾ ಮೀಸಲಾತಿ ಇದ್ದರೂ ಶೇ 40 ಕ್ಕಿಂತಲೂ ಹೆಚ್ಚು ಮಹಿಳೆಯರು ಆರಿಸಿ ಬಂದಿದ್ದರು. ಅದೇ ರೀತಿ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಶೇ 50 ಮೀಸಲಾತಿ ನಿಯಮದಡಿ ನಡೆದಿದ್ದು, ಈ ವಿಭಾಗದಲ್ಲಿ ಮಹಿಳೆಯರು ಶೇ 55ರಷ್ಟು ಪ್ರಮಾಣದಲ್ಲಿ ಆಯ್ಕೆಯಾಗಿದ್ದರು. ಈ ರೀತಿಯ ಹೆಚ್ಚಳಕ್ಕೆ ಅದರದ್ದೇ ಆದ ಕಾರಣಗಳಿವೆ.

ಒಂದು ತಾಂತ್ರಿಕ ಕಾರಣವಾದರೆ, ಮಹಿಳೆಯರು ಸಾಮಾನ್ಯ ಕ್ಷೇತ್ರದಿಂದ ಗೆಲ್ಲುವುದು ಇನ್ನೊಂದು ಕಾರಣ. ಇದೀಗ ಸರ್ಕಾರ, ಮಹಿಳೆಯರು ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸುವ ಸಾಂವಿಧಾನಿಕ ಅಧಿಕಾರವನ್ನು ಕಿತ್ತುಕೊಳ್ಳಲು ಹೊರಟಿದೆಯೇ ಎನ್ನುವುದು ನಮ್ಮ ಮುಂದಿರುವ ಗಂಭೀರ ಪ್ರಶ್ನೆಯಾಗಿದೆ. ಇಂತಹ ಅನೇಕ ಪ್ರಶ್ನೆಗಳನ್ನು ಸರ್ಕಾರ ತನ್ನ ನಡವಳಿಕೆಯ ಮೂಲಕ ಹುಟ್ಟುಹಾಕಿದೆ. ಜೊತೆಗೆ ರಮೇಶ್ ಕುಮಾರ್ ಸಮಿತಿಯ ಶಿಫಾರಸುಗಳಲ್ಲಿ ಶೇ 98ನ್ನು ಚರ್ಚೆಗೆ ಎತ್ತಿಕೊಳ್ಳದೆ ಇನ್ನಷ್ಟು ಅನುಮಾನಗಳು ಸೃಷ್ಟಿಯಾಗುವಂತೆ ಮಾಡಿದೆ.

ಸಮಿತಿ ತನ್ನ ವರದಿಯನ್ನು ಬೆಳಗಾವಿ ಅಧಿವೇಶನಕ್ಕೂ ಮೊದಲು ಸರ್ಕಾರಕ್ಕೆ ಸಲ್ಲಿಸಿತ್ತು. ವರದಿಯನ್ನು ಸದನದಲ್ಲಿ ಮಂಡಿಸಿ ಚರ್ಚೆಗೆ ಒಳಪಡಿಸಲು ಸಾಕಷ್ಟು ಅವಕಾಶವಿತ್ತು. ಈ ವರದಿಯಲ್ಲಿ ಕೆಲವು ಅಸಂಗತ ವಿಚಾರಗಳೂ ಸೇರಿಕೊಂಡಿವೆ. ಆದರೆ ಪಂಚಾಯತ್ ರಾಜ್ ವ್ಯವಸ್ಥೆಗೆ ಶಕ್ತಿ ಕೊಡುವ ಗಂಭೀರ ಯತ್ನವನ್ನು ಸಮಿತಿಯ ಸದಸ್ಯರು ಕಾಳಜಿಯಿಂದ ಮಾಡಿದ್ದಾರೆ. ಈ ಎಲ್ಲ ಅಂಶಗಳನ್ನೂ ಸದನದಲ್ಲಿ ಚರ್ಚೆಗೆ ತರಬೇಕಿತ್ತು.

ಆರೋಗ್ಯಕರವಾದ ಚರ್ಚೆ ನಡೆದು, ಅಗತ್ಯವಿರುವ ಎಲ್ಲ ತಿದ್ದುಪಡಿಗಳನ್ನೂ ಏಕಗಂಟಿನಲ್ಲಿ ಅನುಮೋದಿಸಿಕೊಳ್ಳುವ ಮೂಲಕ ಪಂಚಾಯತ್ ರಾಜ್ ವ್ಯವಸ್ಥೆಗೆ ಹೊಸ ಚೈತನ್ಯ ಕೊಡಲು ಸಾಧ್ಯವಿತ್ತು. ಆದರೆ ಸರ್ಕಾರದ ನಡವಳಿಕೆ ನಮ್ಮ ನಂಬಿಕೆಯನ್ನು ಬುಡಮೇಲು ಮಾಡಿದೆ. ಅಧಿಕಾರ ವಿಕೇಂದ್ರೀಕರಣದ ಮೇಲೆ ಅತೀವ ನಂಬಿಕೆ ಹೊಂದಿರುವ ಪ್ರತಿಯೊಬ್ಬರಿಗೂ ನಿರಾಸೆಯಾಗಿದೆ.
ಇದು ಕೈಕಟ್ಟಿ ಕುಳಿತುಕೊಳ್ಳುವ ಕಾಲವಲ್ಲ.

ಯಾರೋ ಜನಪರ ರಾಜಕಾರಣಿ ಅಥವಾ ಅಧಿಕಾರಿ ಮಂತ್ರದಂಡ ಬೀಸಿ ನಮ್ಮ ಹಕ್ಕುಗಳನ್ನು ಕೊಡುತ್ತಾನೆಂದು ಕಾಯುತ್ತಾ ಕೂತಿರುವುದೇ ನಮ್ಮ ಪ್ರಧಾನ ಸಮಸ್ಯೆ. ಇಂತಹ ಸ್ಥಿತಿಯಿಂದ ಹೊರಬಂದು ‘ಅಧಿಕಾರ ವಿಕೇಂದ್ರೀಕರಣ’ವನ್ನು ಹಕ್ಕೊತ್ತಾಯದ ಮೂಲಕ ಪಡೆಯುವುದೊಂದೇ ನಮಗಿರುವ ದಾರಿ.

ಕೆ.ಆರ್.ರಮೇಶ್ ಕುಮಾರ್ ನೇತೃತ್ವದ ಸಮಿತಿಯ ವರದಿಯಲ್ಲಿ, ಸರ್ಕಾರ ಅಳವಡಿಸಿಕೊಂಡಿರುವುದನ್ನು ಹೊರತುಪಡಿಸಿ ಉಳಿದ ಶಿಫಾರಸುಗಳು ಹೀಗಿವೆ:
* ಕೆ.ಪಿ.ಆರ್ ಕಾಯ್ದೆ-1993ಕ್ಕೆ ಸಮಗ್ರ ಸುಧಾರಣೆ
* ಗ್ರಾಮ ಪಂಚಾಯಿತಿಗಳ ಸಂಖ್ಯೆ ಕಡಿತ
* ವಾರ್ಡ್ ಮತ್ತು ಗ್ರಾಮ ಸಭೆಗಳ ಸಬಲೀಕರಣ
* ಪಂಚಾಯತ್ ರಾಜ್ ಸಂಸ್ಥೆಗಳಿಗೆ ಹಣಕಾಸು ಆಯೋಗದ ಸಲಹೆಗೆ ಅನುಸಾರವಾಗಿ ಹಣಕಾಸಿನ ಹರಿವು
* ಜಿಲ್ಲಾ ಯೋಜನಾ ಸಮಿತಿಗೆ ಬಲ
* ಆಡಳಿತ ಸುಧಾರಣೆಗೆ ಸಂಬಂಧಿಸಿ ಪ್ರತ್ಯೇಕ ಸಿಬ್ಬಂದಿ ನೇಮಕಾತಿ ಪದ್ಧತಿ ಅಳವಡಿಕೆ, ಚುನಾವಣಾ ಸುಧಾರಣೆ...

(ಲೇಖಕ ಪಂಚಾಯತ್ ರಾಜ್ ತಜ್ಞ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.