ತಮ್ಮ ಜಾತಿ ಯಾವುದು ಎಂದು ಗೊತ್ತಿರುವವರು ಮತ್ತು ತಮ್ಮ ಜಾತಿಯ ಜೊತೆ ತಮ್ಮನ್ನು ತಾವು ಗುರುತಿಸಿಕೊಳ್ಳುವವರು ಒಂದು ಸರಳವಾದ ಪ್ರಶ್ನೆಯ ಬಗ್ಗೆ ಯೋಚಿಸಬೇಕು. ನಮ್ಮ ಜಾತಿ ಯಾವುದು ಎಂದು ನಮಗೆ ಹೇಗೆ ಗೊತ್ತಾಗುತ್ತದೆ ಮತ್ತು ನಾವು ಇಂತಹ ಜಾತಿಗೆ ಸೇರಿದ್ದೇವೆ ಎಂಬುದರ ಬಗ್ಗೆ ನಮಗೆ ಎಷ್ಟರ ಮಟ್ಟಿಗೆ ಖಚಿತತೆ ಇರುತ್ತದೆ? ಜಾತಿ ರೂಢಿಗಳ ಮೂಲದಲ್ಲಿ ನಂಬಿಕೆಗಳು ಪರೀಕ್ಷೆಗೊಳಪಡದೆಯೇ ಬೇರುಬಿಟ್ಟಿವೆ.

ಜಾತಿ ಪೀಳಿಗೆಯಿಂದ ಪೀಳಿಗೆಗೆ ಹೇಗೆ ಹರಿಯುತ್ತದೆ? ನಾವು ಒಂದು ಜಾತಿಯೊಳಗೆ ಹುಟ್ಟಿದ್ದೇವೆ ಎಂದು ಏಕೆ ಹೇಳಿಕೊಳ್ಳುತ್ತೇವೆ? ಜಾತಿಯು ಕೇವಲ ಪುರುಷರ ಮೂಲಕವೇ ಏಕೆ ಹರಿಯುತ್ತದೆ? ಅಂತರ್ಜಾತೀಯ ವಿವಾಹಗಳಾದಲ್ಲಿ ಜಾತಿಯು ಏಕೆ ಸಡಿಲವಾಗುತ್ತದೆ? ಈ ನಂಬಿಕೆಗಳಿಗೆ ಆಧಾರವೇನು? ಎಂಬ ಪ್ರಶ್ನಾವಳಿಯೊಂದನ್ನು ನಾವು ಓದುಗರ ಮುಂದೆ ಇಟ್ಟಿದ್ದೆವು. ಇದಕ್ಕೆ ಅನೇಕ ಬಗೆಯ ಉತ್ತರಗಳು ಬಂದಿವೆ.

ನಮಗೆ ನಮ್ಮ ಜಾತಿ ತಿಳಿಯುವುದು ಕುಟುಂಬದ ಮೂಲಕ. ನಮ್ಮ ಕುಟುಂಬಕ್ಕೆ ತಾನು ಇರುವ ಸಮುದಾಯದ ಮುಖಾಂತರ ತನ್ನ ಜಾತಿ ತಿಳಿಯುತ್ತದೆ. ಸಮುದಾಯವು ತನ್ನ ಜಾತಿಯನ್ನು ತನ್ನ ಧರ್ಮದ ಮೂಲಕ ಕಂಡುಕೊಳ್ಳುತ್ತದೆ.

ಒಂದು ಕಾಲ್ಪನಿಕ ಉದಾಹರಣೆಯನ್ನು ಗಮನಿಸಿ. ಒಂದು ಊರಿಗೆ ಗುರುತು ಪರಿಚಯವಿಲ್ಲದ ಹೊಸ ಜನರ ಗುಂಪೊಂದು ಬಂದು ನೆಲೆಗೊಳ್ಳುತ್ತದೆ. ಅವರು ತಮ್ಮನ್ನು ತಾವು ಬ್ರಾಹ್ಮಣರು ಎಂದು ಕರೆದುಕೊಳ್ಳುತ್ತಾರೆ. ಊರಿನಲ್ಲಿ ಮೊದಲಿನಿಂದ ಇರುವವರಿಗೆ ಈ ಗುಂಪಿನ ಜನರು ಬ್ರಾಹ್ಮಣರು ಹೌದೋ ಅಲ್ಲವೋ ಹೇಗೆ ಗೊತ್ತಾಗುತ್ತದೆ? ಸಾಮಾನ್ಯವಾಗಿ ಬ್ರಾಹ್ಮಣರೆಂದು ಗುರುತಿಸಲು ಅಗತ್ಯವಾಗಿರುವ ಸಂಕೇತಗಳನ್ನು ಆ ಊರಿನವರು ಹುಡುಕುತ್ತಾರೆ.

ಅಂದರೆ ಈ ಹೊಸಬರ ಆಚರಣೆಗಳು, ಅವರು ತಿನ್ನುವ ಆಹಾರ, ಅವರು ಮಾತನಾಡುವ ಶೈಲಿ ಅವರು ಧರಿಸಿರುವ ಜನಿವಾರ ಇತ್ಯಾದಿಗಳ ಮೂಲಕ ಜಾತಿಯನ್ನು ಗುರುತಿಸಲಾಗುತ್ತದೆ. ಒಂದು ವೇಳೆ ಈ ಹೊಸಬರ ಗುಂಪು ಬ್ರಾಹ್ಮಣರನ್ನು ಗುರುತಿಸಲು ಬಳಸುವ ಎಲ್ಲಾ ಸಂಕೇತಗಳನ್ನೂ ನಕಲು ಮಾಡಿಬಿಟ್ಟಿದ್ದರೆ ಅವರ ನಿಜ ಜಾತಿ ತಿಳಿಯುವುದೇ ಇಲ್ಲ.

ಇದು ನಾವು ಈ ಹಿಂದೆ ಚರ್ಚಿಸಿದ್ದ `ಸಂಸ್ಕತೀಕರಣ ಪ್ರಕ್ರಿಯೆ'ಯ ಸಾರಾಂಶ. ಇಂಥದ್ದೊಂದು ಪ್ರಕ್ರಿಯೆ ಭಾರತಾದ್ಯಂತ ನಡೆಯುತ್ತಿರುವುದನ್ನು ನೀವು ಕಾಣಬಹುದು. ಈ ಸ್ಥಿತಿ ಒಂದು ಜಾತಿಗೆ ಸೇರಿರುವುದೆಂದರೆ ನಿಜವಾಗಿಯೂ ಏನು ಎಂಬ ಪ್ರಶ್ನೆಯನ್ನು ಹುಟ್ಟು ಹಾಕುತ್ತದೆ.

ಜಾತಿ ಶುದ್ಧತೆಯನ್ನು ಉಳಿಸಿಕೊಂಡು ಹೋಗುವುದು ಮದುವೆಗಳ ಮೂಲಕ, ಅದರಲ್ಲೂ ಹೆಚ್ಚಾಗಿ ಗಂಡು ಮಕ್ಕಳ ಮೂಲಕ. ಮದುವೆಯಾದ ಗಂಡು ಮತ್ತು ಹೆಣ್ಣು ಒಂದೇ ಜಾತಿಗೆ, ಒಂದೇ ಉಪಜಾತಿಗೆ ಸೇರಿದ್ದರೆ ಅವರಿಗೆ ಹುಟ್ಟುವ ಮಗುವು ಕೂಡಾ ಅದೇ ಜಾತಿಗೆ ಸೇರುತ್ತದೆ. ಹೀಗೆ ಆ ಜಾತಿಯ ಶುದ್ಧತೆಯು ಉಳಿಯುತ್ತದೆ ಎಂಬುದು ಒಂದು ಯೋಚನಾ ಕ್ರಮ.

ಆದರೆ ತಂದೆ ತಾಯಿಯರಿಂದ ಮಗುವಿಗೆ ಜಾತಿಯು ಹರಿಯುವುದಾದರೂ ಹೇಗೆ? ಹೆತ್ತವರಿಂದ ಮಕ್ಕಳಿಗೆ ಜಾತಿಯು ಹರಿಯುತ್ತದೆ ಎಂದು ಹಲವು ಜನರು ನಂಬುವಂತಾಗಲು ಜಾತಿಯ ಯಾವ ಅಂಶ ಕಾರಣ? ಜಾತಿಯು ಒಬ್ಬರಿಂದ ಮತ್ತೊಬ್ಬರಿಗೆ ಹರಿಯುವುದು ಜೈವಿಕವಾಗಿಯೋ ಅಥವ ಸಾಂಸ್ಕೃತಿಕವಾಗಿಯೋ?

ಮೊದಲನೆಯದಾಗಿ ಯಾವುದೆಲ್ಲಾ ಹೆತ್ತವರಿಂದ ಮಕ್ಕಳಿಗೆ ಹರಿದು ಬರಲು ಸಾಧ್ಯ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳೋಣ. ಆಧುನಿಕ ವಿಜ್ಞಾನದ ನುಡಿಗಟ್ಟಿನಲ್ಲಿ ಹೇಳುವುದಾದರೆ ಹೆತ್ತವರ ಕೆಲವು ಗುಣದೋಷಗಳು ಮಕ್ಕಳಿಗೆ ಜೀನ್ಗಳ ಮುಖಾಂತರ ಹರಿದು ಬರುತ್ತದೆ. ಆದರೆ ಈ ಗುಣದೋಷಗಳು ದೇಹಕ್ಕೆ ಸಂಬಂಧಿಸಿದ ಲಕ್ಷಣಗಳಾದ ಕಣ್ಣಿನ ಬಣ್ಣ ಮುಂತಾದುವುಗಳಿಗಷ್ಟೇ ಸೀಮಿತವಾಗಿರುತ್ತದೆ.

ಜಾತಿ ಎಂಬುದು ಸಮುದಾಯಕ್ಕೆ ಸಂಬಂಧಿಸಿದ ವಿಚಾರವೇ ಹೊರತು ದೇಹಕ್ಕೆ ಸಂಬಂಧಿಸಿದ್ದಲ್ಲ. ಹಾಗಿದ್ದಾಗ ಜಾತಿಯು ಹೆತ್ತವರಿಂದ ಮಕ್ಕಳಿಗೆ ಹರಿಯುವುದಾದರೂ ಹೇಗೆ? ಇಷ್ಟಾಗಿಯೂ ಜಾತಿ ತಂದೆ ತಾಯಿಗಳಿಂದ ಮಕ್ಕಳಿಗೆ ಹರಿಯುತ್ತದೆ ಎಂಬುದನ್ನು ಸಮರ್ಥಿಸಿಕೊಳ್ಳಬೇಕಿದ್ದರೆ ಜಾತಿಯದ್ದೇ ಒಂದು ಜೀನ್ ಇದೆ ಎಂಬ ಅಸಂಬದ್ಧ ವಾದವೊಂದನ್ನು ಹುಟ್ಟುಹಾಕಬೇಕಷ್ಟೇ. ಇದನ್ನು ಇನ್ನಷ್ಟು ಸ್ಪಷ್ಟಗೊಳಿಸುವುದಕ್ಕಾಗಿ ಮತ್ತೊಂದು ಉದಾಹರಣೆಯನ್ನು ನೋಡೋಣ.

ಧನಿಕ ತಂದೆ-ತಾಯಿಗೆ ಹುಟ್ಟಿದ ಮಗುವು ಶ್ರೀಮಂತ ವರ್ಗಕ್ಕೆ ಸೇರಿದುದು ಎಂದು ಹೇಳಬಹುದು. ಆದರೆ ಮಗುವಿನಲ್ಲಿ ಶ್ರೀಮಂತಿಕೆಯ ವಂಶವಾಹಿಯೇನೂ ಇಲ್ಲ. ಇಲ್ಲಿ ಮಗು ಪ್ರತಿನಿಧಿಸುವ ವರ್ಗ ತನ್ನ ತಂದೆ ತಾಯಿಗಳದ್ದಾಗಿರಬಹುದು. ಆದರೆ ಇದು ಜೈವಿಕವಾಗಿ ದೊರೆತದ್ದಲ್ಲ. ಹಾಗೆಯೇ ಜಾತಿ ಕೂಡಾ ಯಾವ ರೀತಿಯಲ್ಲೂ ಜೈವಿಕವಲ್ಲ, ನೈಸರ್ಗಿಕವಲ್ಲ. ಅದು ಸಾಮಾಜಿಕ ರೂಢಿಗಳ ಪರಿಣಾಮ ಮಾತ್ರ.

ಹೇಗೆ ಬಡತನ ಸಿರಿತನಗಳು ಜೈವಿಕವಲ್ಲವೋ, ನೈಸರ್ಗಿಕವಲ್ಲವೋ ಅದೇ ರೀತಿ ಜಾತಿಯೊಂದಕ್ಕೆ ಸೇರಿರುವುದು ಕೂಡಾ ಜೈವಿಕವಲ್ಲ. ನಾವು ಹುಟ್ಟಿನಿಂದಲೇ ತಾನೇತಾನಾಗಿ ಹೆತ್ತವರ ಜಾತಿಗೆ ಸೇರಿರುತ್ತೇವೆ ಎಂದುಕೊಳ್ಳುವ ಎಲ್ಲರೂ ಈ ನಂಬಿಕೆ ಒಪ್ಪಿಕೊಳ್ಳಲು ಅನುಕೂಲಕರವೂ ಸುಖಕರವೂ ಆದ ಕಥೆ ಮಾತ್ರ ಎಂದು ಅರ್ಥ ಮಾಡಿಕೊಳ್ಳಬೇಕು.

ಒಬ್ಬ ವ್ಯಕ್ತಿಯು ನಿರ್ದಿಷ್ಟ ಜಾತಿಯಲ್ಲಿ ಗುರುತಿಸಿಕೊಳ್ಳಬೇಕಾದರೆ ಕೆಲವು ಗುಣಗಳನ್ನು ಹೊಂದಿರಬೇಕು ಎಂಬುದಕ್ಕೆ ಹಲವು ಪ್ರಾಚೀನ ಪಠ್ಯಗಳಲ್ಲಿ ಪೂರಕ ಸಮರ್ಥನೆಯಿದೆ. ಬ್ರಾಹ್ಮಣ್ಯವನ್ನು ಹೊಂದಿಲ್ಲದವನು ಬ್ರಾಹ್ಮಣನಲ್ಲ ಎಂಬುದನ್ನು ತೋರಿಸುವ ಅಸಂಖ್ಯ ಕಥೆಗಳು ನಮ್ಮ ನಡುವೆ ಇವೆ. ಅದೇ ರೀತಿ ಕೆಲವು ಗುಣಗಳನ್ನು ಹೊಂದಿದ ಶೂದ್ರ ಅಥವ ಅಸ್ಪೃಶ್ಯ ಕೂಡಾ ಬ್ರಾಹ್ಮಣನಿಗೆ ಸಮನಾಗಬಹುದು ಅಥವ ಅವನಿಗಿಂತಲೂ ಹೆಚ್ಚು ಎನಿಸಿಕೊಳ್ಳಬಹುದು ಎಂಬ ಕಥೆಗಳೂ ಇವೆ.

ಈ ಎಲ್ಲಾ ಕಥೆಗಳೂ ನಿರ್ದಿಷ್ಟ ಜಾತಿಗೆ ಸೇರಿರುವುದೆಂದರೆ ನಿರ್ದಿಷ್ಟ ರೀತಿಯ ನಡವಳಿಕೆಗಳು ಮತ್ತು ವರ್ತನೆಗಳನ್ನು ಹೊಂದಿರಬೇಕು ಎಂಬುದನ್ನು ಹೇಳುತ್ತವೆ. ನಾವು ಈ ಮೂಲಭೂತ ವಿಚಾರವನ್ನೇ ಮರೆತು ನಮ್ಮನ್ನು ಹೆತ್ತವರು ಯಾವ ಜಾತಿಗೆ ಸೇರಿದ್ದಾರೋ ಅವರಿಗೆ ಹುಟ್ಟಿದ ಒಂದೇ ಕಾರಣಕ್ಕೆ ನಾವು ಅದೇ ಜಾತಿಗೆ ಸೇರುತ್ತೇವೆ ಎಂದು ಭಾವಿಸಿದ್ದೇವೆ.

ಈಗಿನ ಪರಿಸ್ಥಿತಿ ಹೇಗಿದೆಯೆಂದರೆ ಕೆಲವು ಬ್ರಾಹ್ಮಣರು ಬ್ರಾಹ್ಮಣ್ಯದ ಯಾವ ಅಭ್ಯಾಸಗಳನ್ನೂ ರೂಢಿಸಿಕೊಳ್ಳದಿದ್ದರೂ ತಮ್ಮನ್ನು ತಾವು ಬ್ರಾಹ್ಮಣರೆಂದು ಕರೆದುಕೊಳ್ಳುವ ಮೂಲಕ ತಮಗೆ ಸಿಗಬಹುದಾದ ಎಲ್ಲ ಸಾಮಾಜಿಕ ಲಾಭಗಳನ್ನೂ ಸೆಳೆದುಕೊಳ್ಳುತ್ತಾರೆ. ಸಾಂಪ್ರದಾಯಿಕ ತಿಳುವಳಿಕೆಯ ಪ್ರಕಾರ ವ್ಯಕ್ತಿಯು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರೂ ಆತ ಬ್ರಾಹ್ಮಣನೇ ಅಲ್ಲ.

ಇವತ್ತು ನಮ್ಮಲ್ಲಿ ಎಷ್ಟು ಜನರು ಇದನ್ನು ಒಪ್ಪಿಕೊಳ್ಳುತ್ತಾರೆ? ಈ ಪ್ರಶ್ನೆಯನ್ನು ಬ್ರಾಹ್ಮಣರಿಗೆ ಮಾತ್ರವಲ್ಲ, ಲಿಂಗಾಯಿತರು ಮತ್ತು ಇತರ ಬಲಿಷ್ಠ ಜಾತಿಯವರಿಗೂ ಕೇಳಬಹುದು.

ಈ ರೀತಿಯಲ್ಲಿ ಜಾತಿಯೆಂಬುದು ಪ್ರಬಲ ಜಾತಿಗಳವರಿಗೆ ಒಂದು ಸೌಲಭ್ಯವಾಗಿದ್ದರೆ ಉಳಿದವರಿಗೆ ಇದೊಂದು ಶೋಷಣೆಯಾಗಿದೆ. ಇದು ನಮಗೆ ಗೊತ್ತಿಲ್ಲವೆಂದಲ್ಲ. ನಮಗೆಲ್ಲರಿಗೂ ಇದರ ಅರಿವು ಚೆನ್ನಾಗಿಯೇ ಇದೆ. ಹಾಗೆ ನೋಡಿದರೆ ಈ ಅರಿವೇ ಜಾತಿಗೆ ಎರಡು ಮುಖವಿರುವಂತೆ ಮಾಡಿಬಿಡುತ್ತದೆ.

ಜಾತಿ ಅಸ್ಮಿತೆಯು ಒಟ್ಟೊಟ್ಟಿಗೇ ಎರಡು ರೀತಿಯಲ್ಲಿ ಜಾಗೃತವಾಗಿರುತ್ತದೆ. ಒಂದು ತನಗಾಗಿ ಜಾತಿ ಮತ್ತೊಂದು ಪರರಿಗಾಗಿ ಜಾತಿ. ಜಾತಿ ಪ್ರಜ್ಞೆಯೆಂಬುದು ಈ ಎರಡರ ಒಗ್ಗೂಡುವಿಕೆಯಿಂದ ಉಂಟಾಗುವಂಥದ್ದು. ಇದರಿಂದಾಗಿ ನಾವು ಜಾತಿಯನ್ನು ನಮ್ಮಳಗೆ ಒಂದು ರೀತಿ ಅರ್ಥೈಸಿಕೊಳ್ಳುತ್ತೇವೆ, ಇತರರೆದುರಿಗೆ ಮತ್ತೊಂದು ರೀತಿಯಲ್ಲಿ ತೋರಿಸಿಕೊಳ್ಳುತ್ತೇವೆ.

ಅಂದರೆ ನಾವು ನಮ್ಮನ್ನು ಇತರರೊಂದಿಗೆ ಹೋಲಿಸಿಕೊಂಡಾಗ ಅಥವ ಇತರರೆದುರಿಗೆ ನಮ್ಮನ್ನು ನಾವು ತೋರಿಸಿಕೊಳ್ಳುವಾಗ ಜಾತಿಯನ್ನು ಒಂದು ನಿರ್ದಿಷ್ಟ ರೀತಿಯಲ್ಲಿ ಆವಾಹಿಸಿಕೊಳ್ಳುತ್ತೇವೆ.
ಆದರೆ ನಾವು ಒಬ್ಬರೇ ಇರುವಾಗ ಅಥವ ನಮ್ಮ ಹತ್ತಿರದ ಕುಟುಂಬದವರೊಂದಿಗೆ ಇರುವಾಗ ನಮ್ಮ ಜಾತಿ ನಮಗೆ ಬೇರೆ ರೀತಿಯಲ್ಲೆೀ ಕಾಣುತ್ತದೆ.

ತಮ್ಮನ್ನು ತಾವು ಇತರರೆದುರಿಗೆ ಬ್ರಾಹ್ಮಣರೆಂದೋ ಲಿಂಗಾಯಿತರೆಂದೋ ಕರೆದುಕೊಳ್ಳುವ ಆದರೆ ಆ ಜಾತಿಗಳ ಭಾಗವಾಗಿರಲು ನಿರ್ದಿಷ್ಟವಾದ, ಅನಿವಾರ್ಯವಾದ ಯಾವ ರೂಢಿಗಳನ್ನೂ ಆಚರಿಸದ ಹಲವರನ್ನು ನೀವು ನೋಡಿರಬಹುದು.

ಈ ರೀತಿಯ ಇಬ್ಬಂದಿತನವು ಹಲವು ಬಲಿಷ್ಠ ಜಾತಿಗಳಿಗೆ ಸೇರಿದ ಜಾತಿ ರೂಢಿಗಳಲ್ಲಿ ಕಂಡುಬರುತ್ತದೆ. ಈ ರೀತಿಯ ಅಭ್ಯಾಸಗಳು ಪಟ್ಟಣಗಳಲ್ಲಿರುವ ಕೆಲವು ಬ್ರಾಹ್ಮಣ ಕುಟುಂಬಗಳು ತಮ್ಮ ಕುಲದೇವಸ್ಥಾನಗಳಿಗೆ ಹೋಗುವಾಗ ಆಭಾಸವಾಗಿಯೂ, ತಮಾಷೆಯಾಗಿಯೂ ಕಾಣಿಸಿಕೊಳ್ಳುತ್ತವೆ.

ಇದ್ದಕಿದ್ದಂತೆ, ಆ ಒಂದೇ ದಿನಕ್ಕಾಗಿ ಅವರು ಬ್ರಾಹ್ಮಣ್ಯದ ಸಂಕೇತಗಳನ್ನೆಲ್ಲ ಧರಿಸಿಕೊಂಡುಬಿಡುತ್ತಾರೆ. ಅವತ್ತಿನ ಮಟ್ಟಿಗೆ ಜನಿವಾರವನ್ನು ಧರಿಸಿ, ಆ ತಾತ್ಕಾಲಿಕ ವೇಷದಲ್ಲಿ ದೇವಸ್ಥಾನದ ಗರ್ಭಗುಡಿಯನ್ನೂ ಪ್ರವೇಶಿಸಿಬಿಡುತ್ತಾರೆ. ಈ ರೀತಿಯ ಆಚರಣೆಗಳನ್ನು ಬಹಳ ಹಿಂದಿನ ಕಾಲದಿಂದಲೂ ಹಲವು ಧಾರ್ಮಿಕ ಚರ್ಚೆಗಳು ಜರಿದು ಕಟುವಾಗಿ ವಿರೋಧಿಸುತ್ತಾ ಬಂದಿವೆ. ಆದರೆ ತನಗಾಗಿ ಜಾತಿ ಎಂಬುದಕ್ಕಿಂತ ಪರರಿಗಾಗಿ ಜಾತಿ ಎಂಬುದೇ ಮುಖ್ಯವಾಗಿರುವ, ಬಲವಾಗಿರುವ ಈ ಕಾಲದಲ್ಲಿ ಈ ರೀತಿಯ ಇಬ್ಬಂದಿತನವು ಎಲ್ಲ ಜಾತಿಗಳಲ್ಲೂ ಹೆಚ್ಚುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.