ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚುಕ್ ಬುಕ್ ಚುಕ್ ಬುಕ್... ನೆನಪುಗಳ ರೈಲು

Published : 2 ಆಗಸ್ಟ್ 2017, 19:30 IST
ಫಾಲೋ ಮಾಡಿ
Comments

ರೈಲಿನಲ್ಲಿ ಮದುವೆ ಸಂಭ್ರಮ

ನಮ್ಮ ದೊಡ್ಡ ಸೋದರಮಾವನ ಮದುವೆ ಒಂದೇ ವಾರದಲ್ಲಿ ತೀರ್ಮಾನವಾಯಿತು. ಮದುವೆ ಸೀಸನ್ ಇದ್ದ ಸಂದರ್ಭದಲ್ಲಿ ಯಾವ ಗಾಡಿಯ ವ್ಯವಸ್ಥೆ ಆಗಲಿಲ್ಲ. ಸಂಬಂಧಿಕರು ಮಾತ್ರ ರೈಲಿನಲ್ಲಿ ಹೋಗುವುದೆಂದು ಠರಾವ್‌ ಮಾಡಲಾಯಿತು. ಗುಳೇದಗುಡ್ಡ ಸ್ಟೇಷನ್ನಿನಿಂದ ಸುಮಾರು 60 ಜನ ಸಂಬಂಧಿಗಳ ಪಯಣ. ನನಗಾಗ 12 ವರ್ಷ. ಸೊಲ್ಲಾಪುರತನಕ ಮಜವೋ ಮಜ. ರೈಲಿನಲ್ಲಿ ತಿಂಡಿತಿನಿಸುಗಳು ಏನೇನು ಬರುತ್ತವೋ ಅವನ್ನೆಲ್ಲ ತಗೋಳ್ಳೋದು, ತಿನ್ನೋದು! ಕೆಳಗೆ ಕೂತವರ ಮೇಲೆ ತಿಂಡಿ ಚೆಲ್ಲೋದು, ಬೈಸಿಕೊಳ್ಳೋದು!

ಸೊಲ್ಲಾಪುರ ಸ್ಟೇಷನ್ನಿನಲ್ಲಿ ಬೆಳದಿಂಗಳ ಬೆಳಕಿನಲ್ಲಿ ದುಂಡಗೆ ಎಲ್ಲರೂ ಕುಳಿತು ಕಟಿರೊಟ್ಟಿ, ಜುಣುಕ, ಮೊಸರು, ಚಟ್ನಿ, ಮೊಸರನ್ನ, ಬೇಸನ್ ಉಂಡಿ, ಚುರುಮರಿ ಚೂಡಾ ತಿಂದ ಆ ನೆನಪು 30 ವರ್ಷವಾದರೂ ಮಾಸಿಲ್ಲ. ಅಕ್ಕಲಕೋಟೆಯಲ್ಲಿ ಮದುವೆಯಾಯಿತು. ಬರುವಾಗ ರೈಲಿನಲ್ಲಿ ಮದುಮಗಳ ಪಕ್ಕದಲ್ಲಿ ಕುಳಿತುಕೊಳ್ಳಲು ಚಿಕ್ಕವರಿಗೆಲ್ಲಾ ಆಸೆ. ಅವಳನ್ನು ಮಾತಾಡಿಸುವ ಆಸೆ. ಅವಳೋ ಅಷ್ಟು ಬೇಗ ಮದುವೆ ಮಾಡಿದ್ದಕ್ಕೆ ಮುಖ ಗಂಟುಹಾಕಿ ಕುಳಿತುಕೊಂಡಿದ್ದಳು. ಅಳು, ಸಿಟ್ಟು, ಸೆಡುವು ಅವಳ ಮುಖದಲ್ಲಿ ಎದ್ದು ಕಾಣುತ್ತಿತ್ತು. ಕನ್ನಡ ಭಾಷೆ ಬರದ ಫಜೀತಿ ಬೇರೆ. ಮದುಮಕ್ಕಳನ್ನು ಒತ್ತಟ್ಟಿಗೆ ಕೂಡ್ರಿಸಿ ಆಟಗಳನ್ನು ಶುರುಹಚ್ಚಿಕೊಂಡೆವು. ಮದುಮಗಳನ್ನು ನಗಿಸಲು ಶತಪ್ರಯತ್ನ ನಡೆಯಿತು. ಹಾಸ್ಯಚಟಾಕಿಗಳ ಸರಮಾಲೆ ಸಿಡಿಸಿದರೂ ಪ್ರಯೋಜನವಾಗಲಿಲ್ಲ.

ಮದುಮಗ ಸ್ವತಃ ಹಾಡುಗಾರ. ಕೆ.ಎಸ್‌.ನರಸಿಂಹಸ್ವಾಮಿಯವರ ಪ್ರೇಮಕವನಗಳನ್ನು ಸುಶ್ರಾವ್ಯ ಹಾಡತೊಡಗಿದ. ‘ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೇ ಕೋಟಿ ರೂಪಾಯಿ’ ಮಾತ್ರವಲ್ಲದೆ ಜನಪದ ಶೃಂಗಾರ ಕವನಗಳನ್ನು ಹಾವಭಾವದಿಂದ ಹಾಡಿದರೂ ನಮ್ಮ ಮಾಮಿಯಿಂದ ಪ್ರತಿಕ್ರಿಯೆ ಕಾಣಲೇ ಇಲ್ಲ. ದಂಪತಿಗಳಿದ್ದವರು ಒಡಪು ಹಚ್ಚಿ ಹೆಸರು ಹೇಳತೊಡಗಿದಾಗ ಸ್ಪರ್ಧೆಗೆ ಇಳಿದಂತೆ ಸಾಲುಸಾಲಾಗಿ ಹೆಣ್ಣು-ಗಂಡುಮಕ್ಕಳು ಹೇಳತೊಡಗಿದರು. ಹಾಡಿನ ಬಂಡಿ ಹಚ್ಚಿದಾಗ ಎರಡೂ ಗುಂಪಿನವರು ಜೋರುಜೋರಾಗಿ ಹಾಡತೊಡಗಿದಾಗ ಪಕ್ಕದ ಬೋಗಿಯವರು ಬಂದುಹೋದರು. ಇಷ್ಟಾದರೂ ಮದುಮಗಳಿಂದ ಧ್ವನಿ ಕೇಳಲಿಲ್ಲ. ಎಲ್ಲದಕ್ಕೂ ಕೋಲೆಬಸವನಂತೆ ತಲೆ ಅಲ್ಲಾಡಿಸುವಳು. ಇಡೀ ಪ್ರಯಾಣ ಸದ್ದುಗದ್ದಲ, ನಗು, ಹಾಡು, ಹಾಸ್ಯ, ಒಡಪು ತುಂಬಿ ರೈಲಿನಲ್ಲಿ ನಮ್ಮದೇ ಪ್ರಪಂಚ. ನಾಲ್ಕು ಜನ ಅಜ್ಜಿಯಂದಿರ ರಾಗಬದ್ಧವಾದ ಸೋಬಾನದ ಹಾಡುಗಳು, ದೊಡ್ಡಮ್ಮಳ ನಾಟಕಗಳ ಸಂಭಾಷಣೆಗಳು ಇನ್ನೂ ಗುನುಗುಟ್ಟುತ್ತಿವೆ.

–ಡಾ. ಉಮಾ ಅಕ್ಕಿ ಬಾಗಲಕೋಟೆ

***

ಟಿಕೆಟ್‌ ಇಲ್ಲದ ಪ್ರಯಾಣ

ಕೆಲ ವರ್ಷಗಳ ಹಿಂದೆ ನಾವು ದಾವಣಗೆರೆಯಿಂದ ಹರಿಹರಕ್ಕೆ ಪ್ರಯಾಣಿಸಬೇಕಿತ್ತು. 15 ಕಿ.ಮೀ. ಅಂತರದ ಈ ಪ್ರಯಾಣಕ್ಕೆ ಬಸ್ಸಿನಲ್ಲಿ ಅರ್ಧ ಗಂಟೆ ಸಾಕು. ಬಸ್ಸಿನಲ್ಲೇ ಹೊರಡುವ ಯೋಚನೆ ಮಾಡಿ ಮನೆಯಿಂದ ಹೊರಟಿದ್ದ ನಮಗೆ ಅದೇ ಸಮಯದಲ್ಲಿ ರೈಲು ಸಹ ಇದ್ದ ವಿಷಯ ತಿಳಿದು ರೈಲಿನಲ್ಲಿ ಪ್ರಯಾಣಿಸುವ ನಿರ್ಧಾರ ಮಾಡಿದೆವು.

ರೈಲಿನಲ್ಲಿ ಕೇವಲ ಒಂದು ಸ್ಟಾಪ್, ದಾವಣಗೆರೆಯಿಂದ ಹರಿಹರಕ್ಕೆ ಬರಿ 10 ನಿಮಿಷ. ಬಸ್ಸಿನಲ್ಲಿ ಹೋಗುವ ತಾಪತ್ರಯ ತಪ್ಪಿತೆಂಬ ಖುಷಿಯಿಂದ ರೈಲು ನಿಲ್ದಾಣಕ್ಕೆ ಹೆಜ್ಜೆ ಇಟ್ಟರೆ ಅಲ್ಲಿ ಜನವೋ ಜನ. ಸರಿ ಕೇವಲ 10 ನಿಮಿಷ ತಾನೇ ಎಂದುಕೊಂಡು ಒಳಹೊಕ್ಕೆವು. ಟಿಕೆಟ್ ಪಡೆಯಲು ನನ್ನ ತಮ್ಮ ಹೋದವನು ಖಾಲಿ ಕೈಯಲ್ಲಿ ವಾಪಸ್ ಬಂದ. ಟಿಕೆಟ್ ಕೊಡುವ ವ್ಯಕ್ತಿ ಚಿಲ್ಲರೆ ಇಲ್ಲವೆಂದು ಹೇಳಿ ಒಂದು ಸ್ಟಾಪ್‌ಗೆ ಯಾರೂ ಟಿಕೆಟ್ ಕೇಳುವುದಿಲ್ಲ ಹೋಗು ಎಂದಿದ್ದಾರೆ ಎಂದು ಹೇಳಿದ.

ನಾವೂ ಐದು ರೂಪಾಯಿಯ ಟಿಕೆಟ್ ಯಾರೂ ಕೇಳುವುದಿಲ್ಲ ಎಂದುಕೊಂಡು ರೈಲಿಗೆ ಕಾಯುತ್ತ ಕುಳಿತೆವು. ಸಾಕಷ್ಟು ಸಮಯದ ನಂತರವೇ ಬಂತು ರೈಲು. ಹತ್ತಿದರೆ ಅಲ್ಲಿ ಕಾಲಿಡಲು ಜಾಗವಿಲ್ಲದಷ್ಟು ರಷ್‌. ಆದರೂ 10 ನಿಮಿಷ ತಾನೆ, ಬೇಗ ತಲುಪಿಬಿಡುತ್ತೇವೆ ಎಂದುಕೊಂಡು ಹತ್ತಿದೆವು.

ನಿಂತುಕೊಳ್ಳಲು ಜಾಗ ಸಿಕ್ಕಿದ್ದು ಗಬ್ಬುನಾರುತ್ತಿರುವ ಶೌಚಾಲಯದ ಪಕ್ಕದಲ್ಲಿ. ನರಕಯಾತನೆ ಅದು. ಆಗಲೇ ರೈಲಿನಲ್ಲಿ ಹೋಗುವ ಪ್ಲ್ಯಾನ್ ಮಾಡಿದ್ದಕ್ಕೆ ಮನಸ್ಸಿನಲ್ಲೇ ಬೈದುಕೊಳ್ಳೋಕೆ ಶುರು ಮಾಡಿದೆವು. ಇಳಿದು ಹೋಗುವುದಕ್ಕೆ ಈಗ ಸಾಧ್ಯವಿಲ್ಲ. ರೈಲು ಹೊರಟ ಐದು ನಿಮಿಷಕ್ಕೆ ಎಲ್ಲೋ ಬಯಲಲ್ಲಿ ನಿಂತಿತು. ನಮ್ಮ ದುರದೃಷ್ಟಕ್ಕೆ ಕ್ರಾಸಿಂಗ್‌ ಬೇರೆ ಇತ್ತು. ನಮ್ಮ ರೈಲನ್ನು ತುಂಬಾ ಹೊತ್ತು ನಿಲ್ಲಿಸಲಾಯಿತು!

ಇಳಿದು ಹೋಗುವ ಹಾಗೂ ಇಲ್ಲ, ರೈಲ್ಲಿನಲ್ಲಿ ವಾಸನೆ ತಡೆದುಕೊಂಡು ನಿಲ್ಲುವ ಹಾಗೂ ಇಲ್ಲ. ಶೌಚಾಲಯದ ವಾಸನೆ, ಅಲ್ಲಲ್ಲೇ ಉಗುಳುವ ಜನ, ಸೆಕೆ, ಅಂಟಿಕೊಂಡು ನಿಂತಿರುವ ಜನರ ಬೆವರ ವಾಸನೆ. ಹೀಗೆ ಕಷ್ಟಪಟ್ಟು ಒಂದೂವರೆ ಗಂಟೆಯ ಪ್ರಯಾಣ ಮುಗಿಸಿ ರೈಲು ಇಳಿದಾಗ ಸಾಕು ಸಾಕಾಯಿತು.

ನಮ್ಮ ದುರದೃಷ್ಟ ಇಲ್ಲಿಗೇ ಮುಗಿಯಲಿಲ್ಲ. ದೂರದಲ್ಲಿ ನಿರ್ಗಮನ ದ್ವಾರದ ಕಡೆಗೆ ನೋಡಿದರೆ, ಟಿ.ಟಿ. ಟಿಕೆಟ್ ಪರಿಶೀಲಿಸುತ್ತ ನಿಂತಿದ್ದಾರೆ! ನಮಗೆ ತಲೆ ಚಚ್ಚಿಕೊಳ್ಳುವುದೊಂದೇ ಬಾಕಿ. ಸಿಕ್ಕಿಹಾಕಿಕೊಂಡರೆ ಐದು ರೂಪಾಯಿಯ ಟಿಕೆಟ್‌ಗೆ ನೂರಾರು ರೂಪಾಯಿ ದಂಡ ಕಟ್ಟಬೇಕು. ನಾವು ಟಿಕೆಟ್ ಕೊಳ್ಳಲು ಹೋದೆವು. ಆದರೆ ಅವರೇ ಟಿಕೆಟ್ ಕೊಟ್ಟಿಲ್ಲ ಎಂದರೆ ಯಾರೂ ನಂಬುವುದಿಲ್ಲ. ಏನು ಮಾಡುವುದು ತೋಚಲಿಲ್ಲ.

ಸ್ವಲ್ಪ ಹೊತ್ತು ಅಲ್ಲೇ ನಿಂತು, ಕೊನೆಗೆ ಒಂದು ಉಪಾಯ ಮಾಡಿ, ನಿರ್ಗಮನ ದ್ವಾರದ ಕಡೆಗೆ ಹೋಗದೆ, ಹಳಿಯ ಪಕ್ಕದಲ್ಲಿ ಸುಮಾರು 2 ಕಿ.ಮೀ.ಯಷ್ಟು ದೂರ ನಡೆದು ಪಕ್ಕದಲ್ಲಿ ಸಿಗುವ ಬಯಲಿನ ಹಾದಿ ಹಿಡಿದು, ಕಲ್ಲು ಮುಳ್ಳು, ತಗ್ಗು ದಿಣ್ಣೆ ದಾಟಿಕೊಂಡು ಊರು ಸೇರಿದೆವು. ಬಸ್ಸಿನಲ್ಲಿ ಅರ್ಧ ಗಂಟೆಯ ಪ್ರಯಾಣ ಉಳಿಸಲು ಹೋಗಿ ರೈಲಿನಲ್ಲಿ 2 ಗಂಟೆಯ ನಂತರ ನಾನಾ ರೀತಿಯ ಸರ್ಕಸ್ ಮಾಡಿ ಊರು ಸೇರಿದ್ದಾಯ್ತು.

- ಸಂಗೀತಾ ಹಟ್ಟಿ

***

ಕಣ್ಣುಜ್ಜಿ ಎದ್ದಾಗ ಕಂಡ ಹುಡುಗ

ಚಳಿಗಾಲದ ಪ್ರಯಾಣ ಅದಾಗಿತ್ತು. ಡಿಸೆಂಬರಿನ ಪ್ರಾರಂಭ. ರಾಜಧಾನಿ ದೆಹಲಿಯಿಂದ ಬೆಂಗಳೂರಿಗೆ ಸುಮಾರು ಮೂವತ್ತಾರು ಗಂಟೆಗಳ ಚುಕುಬುಕು ಹಾದಿ. ಮೂವರ ಬಳಗ, ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸಿ ಮನೆ ಕಡೆಗೆ ತುಂಬು ಅನುಭವಗಳ ಬುತ್ತಿ ಹೊತ್ತು ನಡೆದ ಸಮಯ. ಪ್ರಶಸ್ತಿಯ ಕನಸು ಭಗ್ನವಾದರೂ ಮೊದಲ ಸಲದ ದೆಹಲಿಯ ಸಾಂಗತ್ಯ, ಬೇರೆ ರಾಜ್ಯಗಳ ವಿದ್ಯಾರ್ಥಿಗಳ ಸಂಗ, ಹೊಸ ವಿಚಾರಗಳ ವಿನಿಮಯದ ಕಾಣಿಕೆಯನ್ನು ನೀಡಿತ್ತು. ಆ ಗುಂಗಿನಲ್ಲೇ ಕರ್ನಾಟಕ ಎಕ್ಸ್‌ಪ್ರೆಸ್ ಸ್ಲೀಪರ್ ಕ್ಲಾಸಿನಲ್ಲಿ ದಾರಿ ಸಾಗಿತ್ತು. ಇದರ ಜೊತೆಗೆ ಕಿಟಕಿಯಿಂದ ಕಾಣಸಿಗುವ ಭಾರತ ದರ್ಶನ ಒಂದು ಕಡೆ ಮನ ಸೂರೆಗೊಳಿಸಿದರೆ, ಇನ್ನೊಂದೆಡೆ ಪ್ರತಿ ಸ್ಟೇಷನ್ನಿನಲ್ಲೂ ಆ ಊರಿನ ಪ್ರತ್ಯೇಕತೆ ಮೆರೆಯುವ ಪಾನೀಯ, ತಿನಿಸುಗಳು ನಾಲಗೆಗೆ ರಸದೌತಣ ನೀಡಿದ್ದವು.

ಮೂವರ ಬಳಗ ಹುಡುಗಿಯರದೇ ಆದುದರಿಂದ ಮಾತಿನ ಶೂನ್ಯತೆ ಮಾಯವಾಗಿ, ಚುಕುಬುಕು ರೀತಿಯಲ್ಲೇ ಬಾನ ಕೆಳಗಿನ ಎಲ್ಲ ವಿಷಯದ ಬಗೆಗಿನ ಹರಟೆ ಜೋರಾಗಿಯೇ ಇತ್ತು. ಇದರ ಪ್ರತಿಯಾಗಿ ಅಕ್ಕಪಕ್ಕದ ಸಹ ಪ್ರಯಾಣಿಕರ ಪರಿಚಯ ಮುಕ್ತವಾಗೇ ಆಯಿತು. ಮೊದಲನೆಯ ದಿನ ಮಾತು, ತಿನಿಸುಗಳ ಸಾಂಗತ್ಯದಲ್ಲಿ ಸಲೀಸಾಗಿಯೇ ಸಾಗಿತು.

ಮನೆಯಲ್ಲಿ ರಾತ್ರಿಯ ನಿದ್ದೆ ತಡವೇ ಆದರೂ, ರೈಲಿನಲ್ಲಿ ಬೇರೆಯವರ ಒಳಿತಿಗಾದರೂ ಲೈಟ್ ಆರಿಸಿ ಹತ್ತರ ಆಸುಪಾಸಿನಲ್ಲಿ ನಿದ್ದೆಗೆ ಜಾರುವುದು ಅನಿವಾರ್ಯವಾಯಿತು. ಕೆಳಗಿನ ಸೈಡ್ ಬರ್ತ್‌ನಲ್ಲಿ ಕಣ್ಣು ಮುಚ್ಚಿ ತೆರೆಯುವ ವೇಳೆಗೆ ರೈಲುಮನೆಯ ನಿತ್ಯ ಕಾರ್ಯಗಳು ಆಗಲೇ ಶುರುವಾಗಿದ್ದವು. ಬೆಳಗಿನ ತಿಂಡಿಯ ಕೂಗು, ಹೊರಗಿನ ಚಿಲ್ಲರೆ ವ್ಯಾಪಾರಿಗಳ ಕಾಫಿ, ಚಾಯ್ ಎಂಬ ದನಿ ಎಲ್ಲರಿಗೂ ಬೆಳಗಿನ ಅಲರಾಂ.

ಕಣ್ಣುಜ್ಜಿ ಕೂರಲು, ಕಾಲ ಬಳಿ 24–25ರ ಆಸುಪಾಸಿನ ಒಬ್ಬ ಯುವಕ ನನ್ನನ್ನೇ ನೋಡುತ್ತಿದ್ದ. ಹಿಂದಿನ ದಿನ ಕಾಣದ ಮುಖ, ಗುರುತು ಪರಿಚಯ ಏನು ಇಲ್ಲ. ನಿದ್ದೆಯಿಂದ ಆಗಷ್ಟೇ ಎದ್ದ ನನಗೆ ಭ್ರಮೆಯೋ ನಿಜವೋ ಎಂಬ ಸಂಶಯ. ಕೆಲ ಕ್ಷಣಗಳ ನಂತರ ಆ ಮಾರಾಯ ಅವನ ಭಾವನೆಗಳ ರೈಲನ್ನು ಹರಿಬಿಟ್ಟ, ಅವನಲ್ಲಿ ಅಡಗಿದ್ದ ಹತಾಶೆ ಹೊರಗೆಡವಿದ. ಮನೆಯಲ್ಲಿ ಹಿರಿಯವ ಅವ, ಕೆಲಸ ಹುಡುಕಲು ಬೆಂಗಳೂರಿಗೆ ಪ್ರಯಾಣ, ತಮ್ಮ ಆಗಲೇ ನೌಕ್ರಿಯಲ್ಲಿದ್ದರಿಂದ ಮನೆಯಲ್ಲಿ ತಾರತಮ್ಯ ಹೆಚ್ಚಾಗಿ ಮನನೊಂದಿದೆ ಈ ಅಪರಿಚಿತನಿಗೆ.

ಇಷ್ಟೆಲ್ಲ ಮಾತುಗಳು ಹೊರಬಂದರೂ ನನ್ನ ಕಡೆಯಿಂದ ಏನನ್ನೂ ಅಪೇಕ್ಷಿಸದೆ, ಗುಡ್ ಮಾರ್ನಿಂಗ್ ಹೇಳಿ ಹೊರಟೇ ಹೋದ. ಇದನ್ನೆಲ್ಲ ಗಮನಿಸುತ್ತಿದ್ದ ನನ್ನ ಬಳಗದವರು ಪ್ರಶ್ನೆಗಳ ಸುರಿಮಳೆಗೈದರು. ಅವಕ್ಕಾಗಿ ಕುಳಿತ ನನ್ನ ಕಂಡು, ಸುಮ್ಮನಾದರು. ನಾನು ಸಹ ಆ ಅಚಾನಕ್ಕಾದ ಸನ್ನಿವೇಶದಿಂದ ಹೊರಬಂದು ಕಿಟಕಿಯ ಹೊರಗೆ ನೋಡುತ್ತಾ ಕುಳಿತೆ. ಬೆಳಗ್ಗಿನ ಚಳಿಗೆ ಬಿಸಿ ಬಿಸಿ ಕಾಫಿ ಜೋಡಿಯಾಗಿತ್ತು. ಆ ಕಾಫಿಯ ಒಂದೊಂದು ಗುಟುಕು, ನನ್ನ ಹೃದಯಕ್ಕೂ ಬಿಸಿ ತಟ್ಟಿಸಿ, ಸಂವಹನ, ಮುಕ್ತ ಮಾತಿನ ಮಹತ್ವವನ್ನು ಹೊರಗೆಡವಿತ್ತು. ಆ ನನ್ನ ಪಯಣ, ನಾ ಕೇಳುಗಳಾಗಿಯೂ ಒಬ್ಬರ ಜೀವನದ ಹತಾಶೆಯಲ್ಲಿ ನೆರವಾಗಲು ಸಾಧ್ಯವೆಂಬ ಸತ್ಯವನ್ನು ತಿಳಿಸಿತು.

– ಭವ್ಯ ಜಾರ್ಜ್ ಶಿವಮೊಗ್ಗ

***

ಭುಸವಾಲ್‌ನ ಕರುಣಾಮಯಿ ಕಳ್ಳರು

ಸುಮಾರು 20 ವರ್ಷಗಳ ಹಿಂದೆ ನಡೆದ ಘಟನೆ ಇದು. ದಸರಾ ಹಬ್ಬದ ರಜಾದಿನಗಳಲ್ಲಿ ಉತ್ತರ ಭಾರತದ ಪ್ರವಾಸ ಮಾಡಲು ಸಂಸಾರ ಸಮೇತವಾಗಿ ಹೊರಟಿದ್ದೆವು. ಭೋಪಾಲ್‌ನಲ್ಲಿರುವ ತಂಗಿಯ ಮನೆಗೆ ಹೋಗಿ ಅಲ್ಲಿಂದ ಪ್ರಯಾಣ ಮುಂದುವರೆಸಲು ನಿರ್ಧರಿಸಿ, ಕರ್ನಾಟಕ ಎಕ್ಸ್‌ಪ್ರೆಸ್‌ನಲ್ಲಿ ಬೆಂಗಳೂರಿನಿಂದ ಹೊರಟೆವು. ಪ್ರಯಾಣದಲ್ಲಿ ಹುಷಾರಾಗಿರುವಂತೆ ಬಂಧು ಮಿತ್ರರೆಲ್ಲಾ ಎಚ್ಚರಿಸಿದ್ದರು. ಎ.ಸಿ. ಬೋಗಿ ತಾನೇ ಎಂದು ಸ್ವಲ್ಪ ನಿರ್ಲಕ್ಷ್ಯದಿಂದಲೇ ಪ್ರಯಾಣ ಮಾಡುತ್ತಿದ್ದೆ.

ಭುಸಾವಾಲ್ ನಿಲ್ದಾಣದಲ್ಲೇ ಕಳ್ಳನೊಬ್ಬ ನನ್ನ ಹೆಂಡತಿಯ ವ್ಯಾನಿಟಿ ಬ್ಯಾಗ್ ಎಗರಿಸಿಬಿಟ್ಟ. ಕೆಲವೇ ನಿಮಿಷಗಳಲ್ಲಿ ರೈಲು ಕೂಡ ಹೊರಟೇಬಿಟ್ಟಿತು. ಅದರಲ್ಲಿ ನನ್ನ ಐಡೆಂಟಿಟಿ ಕಾರ್ಡ್, ಕೆಲವು ದಾಖಲೆಗಳು ಮಾತ್ರವಲ್ಲದೆ ಸ್ವಲ್ಪ ಹಣವಿತ್ತು.

ಸಹಪ್ರಯಾಣಿಕರು ದೂರು ಕೊಡಲು ತಿಳಿಸಿದರು. ಅದರಂತೆ ರೈಲಿನಲ್ಲಿದ್ದ ಅಧಿಕಾರಿಯ ಬಳಿ ತೆರಳಿ ಎಲ್ಲವನ್ನೂ ವಿವರಿಸಿದೆ. ಅವರೂ ಒಂದು ದೂರು ಕೊಡಲು ಹೇಳಿದರು. ಎಲ್ಲವನ್ನೂ ವಿವರವಾಗಿ ಬರೆದುಕೊಟ್ಟು ನನ್ನ ಸೀಟ್‌ನಲ್ಲಿ ಬಂದು ಯೋಚನಾ ಮಗ್ನನಾಗಿ ಕುಳಿತೆ. ಸ್ವಲ್ಪ ಸಮಯದ ನಂತರ ವ್ಯಕ್ತಿಯೊಬ್ಬ ಬಂದು ಅಧಿಕಾರಿಗಳು ಕರೆಯುತ್ತಿದ್ದಾರೆ ಎಂದು ತಿಳಿಸಿದ.

ಅವರು ಒಂದು ಬ್ಯಾಗ್‌ ತೋರಿಸಿ ಇದು ನಿಮ್ಮದಾ ಎಂದು ಕೇಳಿದರು. ನನ್ನ ಹೆಂಡತಿಗೆ ಅದನ್ನು ನೋಡಿ ಬಹಳ ಸಂತೋಷವಾಯಿತು. ಕಳ್ಳ ಬ್ಯಾಗ್‌ನಲ್ಲಿದ್ದ ಹಣ ಮಾತ್ರ ತೆಗೆದುಕೊಂಡು ಅದನ್ನು ಟಾಯ್ಲೆಟ್‌ನಲ್ಲಿ ಬಿಟ್ಟು ಹೋಗಿದ್ದ. ಆನಂತರ ಟಾಯ್ಲೆಟ್‌ಗೆ ಹೋದ ಪ್ರಯಾಣಿಕರು ಗಾಬರಿಯಾಗಿ ಅಧಿಕಾರಿಗೆ ವಿಷಯ ತಿಳಿಸಿದ್ದರಿಂದ ಅವರು ನಮ್ಮನ್ನು ಕರೆಸಿದ್ದರು.

ಪ್ರವಾಸ ಮುಗಿಸಿ 20 ವರ್ಷಗಳಾದರೂ ಈಗಲೂ ನಾವು ಆಗಾಗ್ಗೆ ಈ ಘಟನೆಯನ್ನು ಜ್ಞಾಪಿಸಿಕೊಳ್ಳುತ್ತಿರುತ್ತೇವೆ.

ಕೆ.ಜಿ. ಮಂಜುನಾಥ, ಬೆಂಗಳೂರು

***

ಹಸಗೊಂಡು ಕುಂದರಬ್ಯಾಡ

ಇತ್ತೀಚಿನ ದಿನಗಳಲ್ಲಿ ಕಾಲ ಕೆಟ್ಟಿದೆ, ಮಾನವೀಯತೆಗೆ ಬೆಲೆಯಿಲ್ಲ ಎಂದೆಲ್ಲಾ ಗೊಣಗಾಡುವವರ ಸಂಖ್ಯೆ ಹೆಚ್ಚು. ಇಂಥವರು ಪ್ಯಾಸೆಂಜರ್‌ ಗಾಡಿಯಲ್ಲಿ ಪ್ರಯಾಣಿಸಿದರೆ ಬಹುಶಃ ತಮ್ಮ ಅನಿಸಿಕೆಗಳನ್ನು ಬದಲಿಸಬಲ್ಲರು ಎಂಬ ಆಶಾವಾದಿ ನಾನು.

ಹೀಗೊಮ್ಮೆ ರಾಯಚೂರಿನಿಂದ ಕಲಬುರ್ಗಿಗೆ ಯಾವುದೋ ಕಾರ್ಯ ನಿಮಿತ್ತ ತೆರಳುತ್ತಿರುವಾಗ ನನ್ನ ಮನಸ್ಥಿತಿ ಅಷ್ಟೊಂದು ಸರಿಯಾಗಿರಲಿಲ್ಲ. ಕೃಷ್ಣಾ ಸ್ಟೇಶನ್‌ನಲ್ಲಿ ಒಬ್ಬ ಹೆಣ್ಣುಮಗಳು ಹಾಗೂ ಆಕೆಯ ನಾಲ್ವರು ವಯಸ್ಕ ಗಂಡುಮಕ್ಕಳು ನಾ ಕುಳಿತ ಬೋಗಿಯಲ್ಲಿ ಬಂದರು. ಆ ಬೋಗಿಯಲ್ಲಿ ಜನರೂ ತುಂಬಾ ಕಮ್ಮಿ ಇದ್ದುದರಿಂದಲೋ ಏನೋ ನಾ ಕುಳಿತ ಕಂಪಾರ್ಟ್‌ಮೆಂಟಿನಲ್ಲಿ ಅವರೆಲ್ಲಾ ಬಂದು ಕುಳಿತರು. ಅವರ ಆರ್ಥಿಕ ಬಡತನವನ್ನು ಅವರು ತೊಟ್ಟಿದ್ದ ಸ್ವಚ್ಛ ಆದರೆ ಮಾಸಿದ ಬಟ್ಟೆಗಳು ಹಾಗೂ ಅಲ್ಲಲ್ಲಿ ರಂಧ್ರಗಳಿದ್ದ ಕೈಚೀಲಗಳು ಸಾರಿ ಹೇಳುತ್ತಿದ್ದವು. ಅಕ್ಷರಲೋಕವೂ ಅವರಿಗೆ ಅಪರಿಚಿತವಾಗಿತ್ತು.

ಅವರು ಯಾವುದೇ ಕೀಳರಿಮೆಯಿರದೆ ಅತ್ಯಂತ ಆತ್ಮೀಯತೆಯಿಂದ ನನ್ನನ್ನು ಯಾವ ಊರಿನವನೆಂದೂ ಯಾವ ಊರಿಗೆ ಹೊರಟಿರುವೆಯೆಂದೂ ಮಾತಿಗೆಳೆಯಲು ಪ್ರಯತ್ನಿಸಿ ವಿಫಲರಾದರು. ಬಹುಶಃ ನನ್ನ ಮನಸ್ಥಿತಿ ಗ್ರಹಿಸಿ ತಾವು ತಮ್ಮಷ್ಟಕ್ಕೆ ಮಾತು, ನಗು, ಹರಟೆಗಳಲ್ಲಿ ಮುಳುಗಿದರು. ಮಧ್ಯಾಹ್ನದ ಹೊತ್ತಿಗೆ ಹಸಿವು ತನ್ನ ಪ್ರಾಬಲ್ಯವನ್ನು ಮೆರೆಯಲು ಆರಂಭಿಸಿತು. ರೈಲಿನಲ್ಲಿ ತಿಂಡಿ ತಿನಿಸುಗಳ ಮಾರಾಟಗಾರರ ಸುಳಿವೂ ಇರಲಿಲ್ಲ. ಅಷ್ಟೊತ್ತಿಗೆ ಆ ತಾಯಿ ಮತ್ತು ಮಕ್ಕಳು ತಮ್ಮ ಸಂಭ್ರಮದ ಮಧ್ಯದಲ್ಲಿ ತಮ್ಮ ಮಾಸಿದ ಬಟ್ಟೆಯಲ್ಲಿ ತಂದ ಬುತ್ತಿಯನ್ನು ಬಿಚ್ಚತೊಡಗಿದರು. ಜೋಳದ ರೊಟ್ಟಿ, ಪುಂಡಿ ಪಲ್ಯ, ಖಾರದಪುಡಿ ಇತ್ಯಾದಿ ರಸಾಯನಗಳನ್ನು ತನ್ನ ಮಕ್ಕಳಿಗೆ ಹಚ್ಚಿಕೊಟ್ಟ ಆ ತಾಯಿಯ ದೃಷ್ಟಿ ನನ್ನೆಡೆಗೆ ಹೊರಳಿತು. ‘ನಿನಗೂ ಹಸಿವಾಗಿರಬೇಕು... ಬಾ, ಇವರ ಜೊತಿ ಕುಂತು ಊಟ ಮಾಡು’ ಎಂದು ಅನಿರೀಕ್ಷಿತವಾಗಿ ಕರೆದಳು. ಆ ಧ್ವನಿ ಮಮತೆಯ ಖನಿಯಾಗಿತ್ತು. ಆಕೆಯ ದೃಷ್ಟಿಯಲ್ಲಿ ಅಭೂತಪೂರ್ವ ಕಳೆಯಿತ್ತು. ಕ್ಷಣಾರ್ಧದಲ್ಲಿ ನನ್ನನ್ನೇ ನಾ ಮರೆತು ಅವರೊಡನೆ ಊಟಕ್ಕೆ ಕುಳಿತೆ. ‘ಏನss ಕಷ್ಟ ಇರಲಿ, ಹಸಗೊಂಡು ಸುಮ್ಮನ ಕುಂದರಬಾರದಪಾ ತಗೊ’ ಎಂದು ನನಗೂ ಅವರೊಡನೆ ಊಟ ಬಡಿಸಿದಳು.

ತನಗಾಗಲಿ ಅಥವಾ ತನ್ನ ಮಕ್ಕಳಿಗಾಗಲಿ ಊಟ ಕಡಿಮೆ ಆಗಬಹು ದೇನೋ ಎಂಬ ಕಿಂಚಿತ್‌ ಚಿಂತೆ ಅಥವಾ ಲೆಕ್ಕಾಚಾರವಿಲ್ಲದೆ ನನ್ನನ್ನು ತನ್ನ ಮಕ್ಕಳೊಡನೆ ಕೂರಿಸಿ ಉಣಬಡಿಸಿದ ಆ ತಾಯಿ ಜಾತಿಭೇದದ ಸಂಕುಚಿತತೆ ಹಾಗೂ ಬಡತನ ಸಿರಿತನಗಳ ಮೀರಿದ ಬದುಕಿನ ಅಸಲು ಬಂಡವಾಳವಾದ ಮಾನವೀಯತೆಯನ್ನು ಪರಿಚಯಿಸಿದಳು.

‘ಚಿಂತಿ ಮಾಡಬೇಡ ನೀ ಒಳ್ಳೆಯವ ಇದ್ರ, ಒಳ್ಳೇ ಕೆಲಸ ಮಾಡಿದ್ರ, ಆ ದೇವರು ಆಳಾಗಿ ಬಂದು ನಿನ್ನ ಕಷ್ಟ ಹೋಳು ಮಾಡತಾನ’ ಎಂದು ಸಂತೈಸಿ, ನನ್ನ ಮುಖದಲ್ಲಿ ಮಂದಹಾಸ ಮೂಡಿದ ಮೇಲೆ ನಿಟ್ಟುಸಿರಿಟ್ಟಳು ಆ ತಾಯಿ. ಎಲ್ಲಿಂದಲೋ ಬಂದವ ನಾನು, ಎಲ್ಲಿಂದಲೋ ನನ್ನ ಪ್ರಯಾಣದಲ್ಲಿ ಜತೆಯಾದವರು ಅವರು. ಹಲವು ತಾಸುಗಳ ಪ್ರಯಾಣದಲ್ಲಿ ಬದುಕಿನುದ್ದಕ್ಕೂ ಬತ್ತದೆ ಇರುವ ಬುತ್ತಿ ಕಟ್ಟಿಕೊಟ್ಟವರು ಆ ತಾಯಿ ಹಾಗೂ ಆಕೆಯ ಮಕ್ಕಳು.

–ಡಾ. ವಿ.ಟಿ. ಮಾಗಳದ ಗದಗ

***

ರುದ್ರ ರಮಣೀಯ ನೋಟ

ಮಂಗಳೂರಿನಿಂದ ಬೆಂಗಳೂರಿಗೆ ಹೋಗುವ ಕುಡ್ಲ ಎಕ್ಸಪ್ರೆಸ್‌ ರೈಲಿನಲ್ಲಿ ಪ್ರವಾಸ ಮಾಡಬೇಕು ಅಂತ ನಾವು ಒಂದು ದಿನ ಮಂಗಳೂರಿನಲ್ಲೇ ಉಳಿದುಕೊಂಡಿದ್ದೆವು.

ಆ ರೈಲಿನಲ್ಲಿ ಮಂಗಳೂರು ಜಂಕ್ಷನ್‌ನಿಂದ ಹಾಸನದವರೆಗೂ ಪ್ರಯಾಣ ಮಾಡಿದೆವು. ಈ ದಾರಿಯಲ್ಲಿ ನೀವು ರಾತ್ರಿ ವೇಳೆ ಪ್ರಯಾಣ ಮಾಡಿದರೆ ಪ್ರಕೃತಿಯ ಸುಂದರ, ರೋಚಕ ದೃಶ್ಯಗಳನ್ನು ಅನುಭವಿಸಲು ಸಾಧ್ಯವಿಲ್ಲ. ಹಗಲಿನ ವೇಳೆ ಪ್ರಯಾಣ ಮಾಡಿದರೆ ಅದರ ಮಜವೇ ಬೇರೆ. ರೈಲಿನಲ್ಲಿ ಕುಳಿತ ಕೂಡಲೇ ನನಗೆ ಕುತೂಹಲ ಶುರುವಾಯಿತು. ಪಶ್ಚಿಮ ಘಟ್ಟದ ಆ ರುದ್ರ ರಮಣೀಯ ದೃಶ್ಯಗಳು ಹೇಗಿರಬಹುದು ಎಂಬ ಪ್ರಶ್ನೆ ಕಾಡುತ್ತಿತ್ತು.

ಮಂಗಳೂರಿನ ಕಂಕನಾಡಿಯಿಂದ ಹೊರಟ ರೈಲು ಸುಬ್ರಹ್ಮಣ್ಯ ರಸ್ತೆ ನಿಲ್ದಾಣದಲ್ಲಿ ನಿಂತಿತು. ಅಲ್ಲಿಂದ ‘ಘಾಟ್‌’ ಶುರುವಾಗುತ್ತದೆ. ಮುಂದೆ 30–40 ಕಿ.ಮೀ. ವರೆಗೂ ಎಲ್ಲೂ ನಿಲ್ದಾಣವಿಲ್ಲ. ಇಲ್ಲೇ ಊಟ ತೆಗೆದುಕೊಳ್ಳಿ ಎಂದು ಊಟ ಮಾರುವವರು ಕೂಗುತ್ತಿದ್ದರು. ಜನ ಇಳಿದು ಊಟ ತೆಗೆದುಕೊಳ್ಳಲು ಹೋದರು. ಮತ್ತೆ ರೈಲು ತನ್ನ ಪ್ರಯಾಣವನ್ನು ಶುರುಮಾಡಿತು. ಅಲ್ಲಿಯವರೆಗೂ ನಾನು ಕುತೂಹಲದಿಂದ ಕಾಯುತ್ತಿದ್ದ ದೃಶ್ಯಗಳು ಶುರುವಾದವು. ರೈಲು ಮೊದಲನೇ ಸುರಂಗಮಾರ್ಗದ ಒಳಗಡೆ ಪ್ರವೇಶ ಮಾಡಿದ ಕೂಡಲೇ ರೈಲಿನ ಒಳಗಡೆ ಕತ್ತಲು ಆವರಿಸಿತು. ರೈಲಿನಲ್ಲಿದ್ದ ಜನರು ಖುಷಿಯಿಂದ ಕೂಗಾಡಿದರು, ಶಿಳ್ಳೆ ಹೊಡೆದರು, ಕುಣಿದು ನಲಿದಾಡಿದರು. ಸಕಲೇಶಪುರ ನಿಲ್ದಾಣದವರೆಗೂ ನಾವೆಲ್ಲ ಕತ್ತಲು ಮತ್ತು ಬೆಳಕಿನ ಆಟವನ್ನು ತುಂಬಾ ಸಂತಸದಿಂದ ಅನುಭವಿಸಿದೆವು.

ಸುಬ್ರಹ್ಮಣ್ಯದ ರಸ್ತೆ ನಿಲ್ದಾಣದಿಂದ ಸಕಲೇಶಪುರದವರೆಗೂ 55 ಸುರಂಗ ಮಾರ್ಗಗಳಿವೆ. ಮೊದಲನೇ ಸುರಂಗ ಮಾರ್ಗದಿಂದಲೇ ನಾವು ಪ್ರಕೃತಿಯ ರಮಣೀಯ ದೃಶ್ಯಗಳು ನೋಡಲು ಸಾಧ್ಯ. ಸುತ್ತಮುತ್ತ ಗುಡ್ಡ–ಬೆಟ್ಟಗಳು. ಅದರ ಮಧ್ಯೆ ನಮ್ಮ ರೈಲು ಚಲಿಸುತ್ತಿತ್ತು. ಆ ಗುಡ್ಡಗಳಿಂದ ಜಲಪಾತಗಳು ಬೇರೆ ಹರಿಯುತ್ತಿದ್ದವು. ಗುಡ್ಡದ ತುದಿಯಿಂದ ಹಿಡಿದು ಅಡಿಯವರೆಗೂ ನೀರು ತುಂಬಾ ರಭಸವಾಗಿ ಹರಿಯುತ್ತಿತ್ತು. ಆ ಜಲಪಾತಗಳ ಹತ್ತಿರ ರೈಲು ಹೋಗುತ್ತಲೇ ನೀರು ನಮ್ಮ ಮುಖ ಹಾಗೂ ಮೈಯನ್ನು ಚುಂಬಿಸುತ್ತಿತ್ತು. ಇನ್ನೊಂದು ಕಡೆ ಸ್ವರ್ಗವೇ ಧರೆಗಿಳಿದು ಬಂದಿದೆ ಏನೋ ಎಂಬ ಪ್ರಶ್ನೆ ಹುಟ್ಟಿಕೊಂಡಿತು. ಆ ಬಿಳಿಯಾದ ಮೋಡಗಳು ಎತ್ತರ, ಸುಂದರವಾದ ಬೆಟ್ಟ–ಗುಡ್ಡಗಳಿಗೆ ಮುತ್ತು ನೀಡುತ್ತೆವೆಯೋ ಎಂಬಂತೆ ಭಾಸವಾಗುತ್ತಿತ್ತು.

ರೈಲು ಸೇತುವೆ ಮೇಲೆ ಚಲಿಸುವಾಗ ಕೆಳಗಡೆ ನೋಡಿದರೆ ಎಲ್ಲಿ ಬಿದ್ದುಬಿಡುತ್ತೇವೋ ಎಂದು ಆತಂಕ. ಒಂದು ಕಡೆ ಆ ಸೇತುವೆಯನ್ನು ಮರದ ಕಟ್ಟಿಗೆಯಿಂದ ಮಾಡಿದ್ದರು. ಒಂದು ಆಶ್ಚರ್ಯವೆನೆಂದರೆ ಅಂತಹ ಜಾಗದಲ್ಲೂ ಜನ ವಾಸಿಸುತ್ತಿದ್ದರು. ರೈಲಿನ ಮಧ್ಯೆ ಕುಳಿತುಕೊಂಡವರಿಗೆ ರೈಲಿನ ಮೊದಲನೇ ಬೋಗಿಯಿಂದ ಹಿಡಿದು ಕೊನೆಯ ಬೋಗಿಯವರೆಗೂ ರೈಲು ಕಾಣಿಸುತ್ತಿತ್ತು. ಅಷ್ಟು ತಿರುವನ್ನು ರೈಲು ತೆಗೆದುಕೊಂಡಿತ್ತು.

ರೈಲಿನಲ್ಲಿದ್ದವರು ಪೈಪೋಟಿಗೆ ಬಿದ್ದವರಂತೆ ಹೊರಗಿನ ದೃಶ್ಯಗಳನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿಯುತ್ತಿದ್ದರು. ಈ ರೈಲು ಪ್ರಯಾಣದ ಅನುಭವ ನಮ್ಮ ಬದುಕಿನ ಶ್ರೀಮಂತ ನೆನಪುಗಳಲ್ಲಿ ಒಂದಾಗಿ ಜಾಗ ಪಡೆಯಿತು. ನೀವೂ ಮಂಗಳೂರಿನಿಂದ ಬೆಂಗಳೂರಿಗೆ ಹೋಗಬೇಕೆಂದರೆ ಕಾಯ್ದುಕೊಂಡು ಅದೇ ರೈಲಿಗೆ ಹೋಗಿ. ನಿಸರ್ಗದ ರೋಚಕ ದೃಶ್ಯಗಳನ್ನು ನೋಡಿ ಆನಂದಿಸಿ. ಮಿಸ್‌ ಮಾಡಿಕೊಳ್ಳಬೇಡಿ!

–ದೀಪಾಲಿ ಎಸ್‌. ಬೂದಿಹಾಳಮಠ, ರಾಣೆಬೆನ್ನೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT