ಶನಿವಾರ, 29 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

2 ಸಿಕ್ಸ್‌, 6 ಬೌಂಡರಿ; ಒಂದೇ ಓವರ್‌ನಲ್ಲಿ 43 ರನ್ ಬಿಟ್ಟುಕೊಟ್ಟ ಓಲಿ ರಾಬಿನ್ಸನ್‌

Published 26 ಜೂನ್ 2024, 16:40 IST
Last Updated 26 ಜೂನ್ 2024, 16:40 IST
ಅಕ್ಷರ ಗಾತ್ರ

ಹೋವ್‌: ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ವೇಗದ ಬೌಲರ್‌ ಓಲಿ ರಾಬಿನ್ಸನ್‌ ಅವರು ಕೌಂಟಿ ಕ್ರಿಕೆಟ್‌ ಪಂದ್ಯದ ಓವರ್‌ವೊಂದರಲ್ಲಿ ಬರೋಬ್ಬರಿ 43 ರನ್‌ ಬಿಟ್ಟುಕೊಟ್ಟಿದ್ದಾರೆ. ಇದರೊಂದಿಗೆ ಬೇಡದ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡು ಮುಖಭಂಗ ಅನುಭವಿಸಿದ್ದಾರೆ.

ಸಸೆಕ್ಸ್‌ ಹಾಗೂ ಲೀಸೆಸ್ಟೆರ್‌ಶೈರ್‌ ನಡುವಣ ಈ ಟೆಸ್ಟ್‌ ಪಂದ್ಯಕ್ಕೆ ಹೋವ್‌ನ ಕೌಂಟಿ ಕ್ರೀಡಾಂಗಣ ಸಾಕ್ಷಿಯಾಯಿತು.

ಜೂನ್‌ 23ರಂದು ಆರಂಭವಾದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಸಸೆಕ್ಸ್‌, ಮೊದಲ ಇನಿಂಗ್ಸ್‌ನಲ್ಲಿ 442 ರನ್‌ ಗಳಿಸಿ ಆಲೌಟ್‌ ಆಗಿತ್ತು. ಇದಕ್ಕುತ್ತರವಾಗಿ ಲೀಸೆಸ್ಟೆರ್‌ಶೈರ್‌ 275 ರನ್‌ಗಳಿಗೆ ಸರ್ವಪತನ ಕಂಡಿತ್ತು. 167 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್‌ ಆರಂಭಿಸಿದ ಸಸೆಕ್ಸ್‌ ಆರು ವಿಕೆಟ್‌ಗೆ 296 ರನ್‌ ಗಳಿಸಿದ್ದಾಗ ಇನಿಂಗ್ಸ್‌ ಡಿಕ್ಲೇರ್‌ ಘೋಷಿಸಿತು. ಇದರೊಂದಿಗೆ 464 ರನ್‌ಗಳ ಗೆಲುವಿನ ಗುರಿ ನೀಡಿತು.

ಈ ಗುರಿ ಬೆನ್ನತ್ತಿದ ಲೀಸೆಸ್ಟೆರ್‌ಶೈರ್‌ 144 ರನ್‌ ಗಳಿಸುವಷ್ಟರಲ್ಲೇ ಪ್ರಮುಖ ಆರು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಕ್ರೀಸ್‌ಗೆ ಇಳಿದ ಲೂಯಿಸ್‌ ಕಿಂಬೆರ್‌ ಟಿ20 ಶೈಲಿಯಲ್ಲಿ ಬ್ಯಾಟ್‌ ಬೀಸಿದರು.

8ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಅವರು ಸಸೆಕ್ಸ್‌ ಬೌಲರ್‌ಗಳನ್ನು ಕಾಡಿದ ಅವರು ಬರೋಬ್ಬರಿ 243 ರನ್ ಗಳಿಸಿದರು.  127 ಎಸೆತಗಳನ್ನು ಎದುರಿಸಿದ ಅವರ ಇನಿಂಗ್ಸ್‌ನಲ್ಲಿ 20 ಬೌಂಡರಿ ಹಾಗೂ 21 ಸಿಕ್ಸರ್‌ಗಳಿದ್ದವು.

ಒಂದೇ ಓವರ್‌ನಲ್ಲಿ 2 ಸಿಕ್ಸ್, 6 ಬೌಂಡರಿ
ಇನಿಂಗ್ಸ್‌ನ 59ನೇ ಓವರ್‌ ಬೌಲಿಂಗ್‌ ಮಾಡಿದ ರಾಬಿನ್ಸನ್‌ ಎಸೆತಗಳನ್ನು ಕಿಂಬೆರ್‌ ಇನ್ನಿಲ್ಲದಂತೆ ದಂಡಿಸಿದರು. ಸತತ 8 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ ಆರು ಬೌಂಡರಿ ಬಾರಿಸಿದರು. ಕೊನೆಯ ಎಸೆತದಲ್ಲಿ 1 ರನ್ ಗಳಿಸಿದರು. ಈ ಓವರ್‌ನಲ್ಲಿ ರಾಬಿನ್ಸನ್ ಮೂರು ಬಾರಿ ನೋಬಾಲ್ ಎಸೆದ (ಓವರ್‌ಸ್ಟೆಪ್‌ ಹಾಕಿದ) ಕಾರಣ 6 ರನ್ ದಂಡ ತೆತ್ತರು.

ಕೌಂಟಿ ಕ್ರಿಕೆಟ್‌ನಲ್ಲಿ ಪ್ರತಿ ನೋಬಾಲ್‌ಗೆ 2 ರನ್ ದಂಡ ಹಾಕಲಾಗುತ್ತದೆ.

ಹೀಗಾಗಿ, 9 ಎಸೆತಗಳನ್ನು ಕಂಡ ಈ ಓವರ್‌, 134 ವರ್ಷಗಳ ಕೌಂಟಿ ಚಾಂಪಿಯನ್‌ಷಿಪ್‌ ಇತಿಹಾಸದಲ್ಲೇ ದುಬಾರಿ ಎನಿಸಿತು.

ಹೆಚ್ಚು ರನ್‌ ಬಿಟ್ಟುಕೊಟ್ಟ ಅಪಖ್ಯಾತಿ ಇಂಗ್ಲೆಂಡ್‌ನವರೇ ಆದ ಶೋಯಿಬ್‌ ಬಷೀರ್‌ ಅವರದ್ದಾಗಿತ್ತು. ಸರ್ರೇ ಹಾಗೂ ವೊರ್ಸೆಸ್ಟೆರ್‌ಶೈರ್‌ ನಡುವಣ ಪಂದ್ಯದಲ್ಲಿ ಎರಡು ದಿನಗಳ ಹಿಂದಷ್ಟೇ ಅವರು 38 ರನ್ ಬಿಟ್ಟುಕೊಟ್ಟಿದ್ದರು.

ಕಿಂಬೆರ್‌ ಅಬ್ಬರದ ಹೊರತಾಗಿಯೂ ಲೀಸೆಸ್ಟೆರ್‌ಶೈರ್‌ 18 ರನ್‌ ಅಂತರದ ಸೋಲು ಅನುಭವಿಸಿತು. ತಂಡದ ಮೊತ್ತ 445 ರನ್‌ ಆಗಿದ್ದಾಗ, ಕಿಂಬರ್‌ 10ನೇ ವಿಕೆಟ್‌ ರೂಪದಲ್ಲಿ ಪೆವಿಲಿಯನ್‌ ಸೇರಿಕೊಂಡರು. ಇದರೊಂದಿಗೆ ಸಸೆಕ್ಸ್‌ 18 ರನ್‌ಗಳ ಅಂತರದ ಜಯಗಳಿಸಿ ನಿಟ್ಟುಸಿರು ಬಿಟ್ಟಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT