ಭಾನುವಾರ, 30 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಿಳಾ ಕ್ರಿಕೆಟ್: ಭಾರತ vs ದಕ್ಷಿಣ ಆಫ್ರಿಕಾ ಟೆಸ್ಟ್ ಪಂದ್ಯ ಇಂದಿನಿಂದ

ಸ್ಮೃತಿ, ಪೂಜಾ ಮೇಲೆ ಕಣ್ಣು
Published 27 ಜೂನ್ 2024, 23:30 IST
Last Updated 27 ಜೂನ್ 2024, 23:30 IST
ಅಕ್ಷರ ಗಾತ್ರ

ಚೆನ್ನೈ: ಒಂದು ದಶಕದ ನಂತರ ಭಾರತ ಮತ್ತು ದಕ್ಷಿಣ ಆಫ್ರಿಕಾ ಮಹಿಳಾ ಕ್ರಿಕೆಟ್‌ ತಂಡಗಳು ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭವಾಗಲಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಯುವ ಆಟಗಾರ್ತಿಯರಿಗೆ ಅವಕಾಶ ನೀಡುವತ್ತ ಚಿತ್ತ ನೆಟ್ಟಿದೆ. ಉಮಾ ಚೆಟ್ರಿ, ಪ್ರಿಯಾ ಪೂನಿಯಾ, ಸೈಕಾ ಇಶಾಕ್, ಅರುಂಧತಿ ರೆಡ್ಡಿ ಮತ್ತು ಶಬ್ನಮ್ ಶಕೀಲ್ ಅವರು ಟೆಸ್ಟ್ ಪದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. ಬೆಂಗಳೂರಿನಲ್ಲಿ ಈಚೆಗೆ ನಡೆದ ಏಕದಿನ ಕ್ರಿಕೆಟ್ ಸರಣಿಯಲ್ಲಿ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ತಂಡವು 3–0ಯಿಂದ ಜಯಿಸಿತ್ತು.

2023ರ ಡಿಸೆಂಬರ್‌ನಲ್ಲಿ ಭಾರತ ತಂಡವು ಟೆಸ್ಟ್‌ ಮಾದರಿಯಲ್ಲಿ ಆಡಿತ್ತು. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳ ಎದುರು ತಲಾ ಒಂದು ಟೆಸ್ಟ್ ಪಂದ್ಯ ಆಡಿ ಗೆದ್ದಿತ್ತು. ಆದರೆ ದಕ್ಷಿಣ ಆಫ್ರಿಕಾ ಜೊತೆಗೆ 2014ರಲ್ಲಿ ಆಡಿತ್ತು. ಮೈಸೂರಿನಲ್ಲಿ ನಡೆದಿದ್ದ ಆ ಪಂದ್ಯದಲ್ಲಿ ಭಾರತ ಗೆದ್ದಿತ್ತು.

‘ಮಹಿಳೆಯರಿಗಾಗಿ ಕ್ರಿಕೆಟ್ ಟೆಸ್ಟ್ ಪಂದ್ಯಗಳನ್ನು ಆಯೋಜಿಸುವುದು ಒಳ್ಳೆಯ ಸಂಗತಿ. ಇದರಿಂದಾಗಿ ದ್ವಿಪಕ್ಷೀಯ ಸರಣಿಗಳ  ಮೌಲ್ಯವರ್ಧನೆಯಾಗುತ್ತದೆ’ ಎಂದು ಭಾರತ ತಂಡದ ಕೋಚ್ ಆಮೋಲ್ ಮುಜುಂದಾರ್ ಬುಧವಾರ ಸುದ್ದಿಗಾರಿಗೆ ಹೇಳಿದ್ದಾರೆ.

ಸ್ಮೃತಿ ಮಂದಾನ ಮತ್ತು ಜೆಮಿಮಾ ರಾಡ್ರಿಗಸ್ ಅವರು ಟೆಸ್ಟ್ ಆಡಿರುವ ಅನುಭವಿಗಳು. ಈಚೆಗೆ ಏಕದಿನ ಸರಣಿಯಲ್ಲಿ ಸ್ಮೃತಿ ಎರಡು ಶತಕ ಹೊಡೆದು ವಿಜೃಂಭಿಸಿದ್ದರು. ಹರ್ಮನ್ ಕೂಡ ಉತ್ತಮ ಲಯದಲ್ಲಿದ್ದಾರೆ. ಆದರೆ ಆರಂಭಿಕ ಬ್ಯಾಟರ್ ಶೆಫಾಲಿ ವರ್ಮಾ ಮತ್ತು ಬೌಲಿಂಗ್‌ನಲ್ಲಿ ದೀಪ್ತಿ ಶರ್ಮಾ ಅವರೂ ತಮ್ಮ ಲಯಕ್ಕೆ ಮರಳಲು ಇದು ಒಳ್ಳೆಯ ಅವಕಾಶ. ಪೂಜಾ ವಸ್ತ್ರಕರ್ ಮತ್ತು ಸ್ನೇಹಾ ರಾಣಾ ಅವರು ಎದುರಾಳಿಗಳಿಗೆ ಸವಾಲೊಡ್ಡುವಂತಹ ಬೌಲರ್‌ಗಳು. 

ದಕ್ಷಿಣ ಆಫ್ರಿಕಾ ತಂಡದಲ್ಲಿ ಆಲ್‌ರೌಂಡರ್‌ಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸುನೆ ಲೂಸ್, ಡೆಲ್ಮಿ ಟಕರ್, ಮತ್ತು ತಾಜ್ಮಿನ್ ಬ್ರಿಟನ್ಸ್‌ ಅವರನ್ನು ನಾಯಕಿ ಲೌರಾ ಅಂತಿಮ ಹನ್ನೊಂದರ ಪಟ್ಟಿಯಲ್ಲಿ ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಅನುಭವಿ ಮರಿಜಾನ್ ಕಾಪ್ ಅವರು ಬ್ಯಾಟಿಂಗ್ ವಿಭಾಗದ ಶಕ್ತಿಯಾಗಿದ್ಧಾರೆ.

ಚೆಪಾಕ್ ಕ್ರೀಡಾಂಗಣದಲ್ಲಿ ಇದುವರೆಗೆ ಏಕೈಕ ಮಹಿಳಾ ಟೆಸ್ಟ್ ನಡೆದಿದೆ. 1976ರಲ್ಲಿ ಇಲ್ಲಿ ನಡೆದಿದ್ದ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಪಂದ್ಯವು ಡ್ರಾ ಆಗಿತ್ತು.

ತಂಡಗಳು

ಭಾರತ: ಹರ್ಮನ್‌ಪ್ರೀತ್ ಕೌರ್ (ನಾಯಕಿ) ಸ್ಮೃತಿ ಮಂದಾನ (ಉಪನಾಯಕಿ) ಜೆಮಿಮಾ ರಾಡ್ರಿಗಸ್ ಪ್ರಿಯಾ ಪೂನಿಯಾ ಶೆಫಾಲಿ ವರ್ಮಾ ಶುಭಾ ಸತೀಶ್ ದೀಪ್ತಿ ಶರ್ಮಾ ಪೂಜಾ ವಸ್ತ್ರಕರ್ ಮೇಘನಾ ಸಿಂಗ್ ರಿಚಾ ಘೋಷ್ (ವಿಕೆಟ್‌ಕೀಪರ್) ಉಮಾ ಚೆಟ್ರಿ (ವಿಕೆಟ್‌ಕೀಪರ್) ಸ್ನೇಹಾ ರಾಣಾ ಸೈಕಾ ಇಶಾಕ್ ರಾಜೇಶ್ವರಿ ಗಾಯಕವಾಡ‌ ಅರುಂಧತಿ ರೆಡ್ಡಿ ರೇಣುಕಾ ಠಾಕೂರ್ ಸಿಂಗ್

ದಕ್ಷಿಣ ಆಫ್ರಿಕಾ: ಲೌರಾ ವೊಲ್ವಾರ್ಟ್ (ನಾಯಕಿ) ಅನೆಕಿ ಬಾಷ್ ತಾಜ್ಮೀನ್ ಬ್ರಿಟ್ಸ್ ನಡೈನ್ ಡಿ ಕ್ಲರ್ಕ್ ಅನೇರಿ ಡರ್ಕೆಸನ್ ಮೀಕೆ ಡಿ ರಿಡರ್ (ವಿಕೆಟ್‌ಕೀಪರ್) ಸಿನಾಲೊ ಜಫ್ತಾ (ವಿಕೆಟ್‌ಕೀಪರ್) ಮರಿಜಾನ್ ಕಾಪ್ ಮಸಾಬತಾ ಕ್ಲಾಸ್ ಸುನೇ ಲೂಸ್ ಎಲಿಜ್ ಮೇರಿ ಮರ್ಜ್ ನಾನಕುಲುಲೆಕೊ ಮ್ಲಾಬಾ ತುಮಿ ಸೆಕುಕುನೆ ನೊಂದುಮಿಸೊ ಸಂಗಾಸೆ ಡೆಲ್ಮಿ ಟಕರ್

ಪಂದ್ಯ ಆರಂಭ: ಬೆಳಿಗ್ಗೆ 9.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT