ಭಾನುವಾರ, 22 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Duleep Trophy: ಭಾರತ ‘ಎ’ ತಂಡಕ್ಕೆ ದುಲೀಪ್ ಟ್ರೋಫಿ

ಕೊನೆಯ ಲೀಗ್ ಪಂದ್ಯದಲ್ಲಿ ‘ಸಿ’ ತಂಡದ ಮೇಲೆ ಸುಲಭ ಗೆಲುವು
Published : 22 ಸೆಪ್ಟೆಂಬರ್ 2024, 14:23 IST
Last Updated : 22 ಸೆಪ್ಟೆಂಬರ್ 2024, 14:23 IST
ಫಾಲೋ ಮಾಡಿ
Comments

ಅನಂತಪುರ: ತನುಷ್ ಕೋಟ್ಯಾನ್ (47ಕ್ಕೆ3) ಮತ್ತು ಪ್ರಸಿದ್ಧ ಕೃಷ್ಣ (50ಕ್ಕೆ3) ಅವರ ಪರಿಣಾಮಕಾರಿ ದಾಳಿಯ ನೆರವಿನಿಂದ ಭಾರತ ‘ಎ’ ತಂಡ ಭಾನುವಾರ ದುಲೀಪ್ ಟ್ರೋಫಿ ಕ್ರಿಕೆಟ್‌ ಟೂರ್ನಿ ಪಂದ್ಯದಲ್ಲಿ ಭಾರತ ‘ಸಿ’ ತಂಡವನ್ನು 132 ರನ್‌ಗಳಿಂದ ಸೋಲಿಸಿ ಚಾಂಪಿಯನ್ ಪಟ್ಟಕೇರಿತು.

ಈ ಪಂದ್ಯಕ್ಕೆ ಮೊದಲು 2 ಪಂದ್ಯಗಳಿಂದ 6 ಪಾಯಿಂಟ್ಸ್ ಮಾತ್ರ ಗಳಿಸಿದ್ದ ಮಯಂಕ್ ಅಗರವಾಲ್ ಸಾರಥ್ಯದ ‘ಎ’ ತಂಡ ಈ ಗೆಲುವಿನಿಂದ ಮೂರು ಪಂದ್ಯಗಳಿಂದ 12 ಪಾಯಿಂಟ್ಸ್‌ ಕಲೆಹಾಕಿ ಸಂಭ್ರಮಿಸಿತು.

ಸಾಯಿ ಸುದರ್ಶನ್ ಅವರ ಹೋರಾಟದ ಶತಕ ‘ಸಿ’ ತಂಡದ ಪರಾಭವವನ್ನು ತಪ್ಪಿಸಲಾಗಲಿಲ್ಲ.

ಪಂದ್ಯದ ನಾಲ್ಕನೇ ಹಾಗೂ ಅಂತಿಮ ದಿನವಾದ ಭಾನುವಾರ ಗೆಲುವಿಗೆ 350 ರನ್‌ಗಳ ಗುರಿಯೆದುರಿಸಿದ ಭಾರತ ‘ಸಿ’ ತಂಡ 81.5 ಓವರುಗಳಲ್ಲಿ 217 ರನ್‌ಗಳಿಗೆ ಆಲೌಟ್ ಆಯಿತು.‌ ತನುಷ್‌, ಪ್ರಸಿದ್ಧ ಅವರಿಗೆ ಬೆಂಬಲ ನೀಡಿದ ಇನ್ನೊಬ್ಬ ವೇಗಿ ಅಕಿಬ್ ಖಾನ್ 26 ರನ್ನಿಗೆ 2 ವಿಕೆಟ್‌ ಪಡೆದರು.

ಆರಂಭ ಆಟಗಾರನಾಗಿ ಬಡ್ತಿ ಪಡೆದ  ವೈಶಾಖ್ ವಿಜಯಕುಮಾರ್‌ ರನ್‌ಔಟ್‌ ಆದರು. ಆಗ ಮೊತ್ತ 36. ನಾಯಕ ಋತುರಾಜ ಗಾಯಕವಾಡ (44, 93ಎ, 4x5) ಮತ್ತು ಸಾಯಿ ಸುದರ್ಶನ್ (111, 206ಎ, 4x12) ಎರಡನೇ ವಿಕೆಟ್‌ಗೆ 77 ರನ್‌ ಸೇರಿಸಿದರು. ಆದರೆ ನಂತರ ವಿಕೆಟ್‌ಗಳು ನಿಯಮಿತವಾಗಿ ಉರುಳತೊಡಗಿದವು.

ಇದಕ್ಕೆ ಮೊದಲು ಭಾರತ ‘ಎ’ ಎರಡನೇ ಇನಿಂಗ್ಸ್‌ಅನ್ನು (ಶನಿವಾರ: 6ಕ್ಕೆ270) 6 ವಿಕೆಟ್‌ಗೆ 282 ರನ್‌ಗಳಾಗಿದ್ದಾಗ ಡಿಕ್ಲೇರ್‌ ಮಾಡಿಕೊಂಡಿತು.

ಸ್ಕೋರುಗಳು: ಭಾರತ ‘ಎ’: 297; ಭಾರತ ‘ಸಿ’: 234; ಎರಡನೇ ಇನಿಂಗ್ಸ್‌: ಭಾರತ ‘ಎ’: 66 ಓವರುಗಳಲ್ಲಿ 6 ವಿಕೆಟ್‌ಗೆ 286 ಡಿಕ್ಲೇರ್ಡ್‌ (ರಿಯಾನ್ ಪರಾಗ್‌ 73, ಶಾಶ್ವತ್ ರಾವತ್ 53, ಕುಮಾರ ಕುಶಾಗ್ರ 42; ಗೌರವ್ ಯಾದವ್‌ 68ಕ್ಕೆ4); ಭಾರತ ‘ಸಿ‘: 81.5 ಓವರುಗಳಲ್ಲಿ 217 (ಋತುರಾಜ ಗಾಯಕವಾಡ 44, ಸಾಯಿ ಸುದರ್ಶನ್ 111; ಪ್ರಸಿದ್ಧ ಕೃಷ್ಣ 50ಕ್ಕೆ3, ಅಕಿಬ್‌ ಖಾನ್‌ 26ಕ್ಕೆ2, ತನುಷ್‌ ಕೋಟ್ಯಾನ್ 26ಕ್ಕೆ2). ಭಾರತ ‘ಎ’: 6 ಅಂಕ.

ಅರ್ಷದೀಪ್‌ ಆದಿತ್ಯ ದಾಳಿಗೆ ಕುಸಿದ ‘ಬಿ’ ತಂಡ

ವೇಗದ ಬೌಲರ್ ಅರ್ಷದೀಪ್ ಸಿಂಗ್ (40ಕ್ಕೆ6) ಮತ್ತು ಆದಿತ್ಯ ಠಾಕ್ರೆ (59ಕ್ಕೆ4) ಅವರ ದಾಳಿಗೆ ಭಾರತ ‘ಬಿ’ ತರಗೆಲೆಗಳಂತೆ ಉದುರಿತು. ಭಾರತ ‘ಡಿ’ ತಂಡ ದುಲೀಪ್‌ ಟ್ರೋಫಿ ಕ್ರಿಕೆಟ್ ಟೂರ್ನಿ ಪಂದ್ಯದ ಅಂತಿಮ ದಿನವಾದ ಭಾರತ ‘ಡಿ’ ತಂಡ 257 ರನ್‌ಗಳಿಂದ ‘ಬಿ’ ತಂಡವನ್ನು ಸೋಲಿಸಿ ಸಮಾಧಾನಕರ ಗೆಲುವನ್ನು ಪಡೆಯಿತು. ಇದಕ್ಕೆ ಮೊದಲು 5 ವಿಕೆಟ್‌ಗೆ 244 ರನ್‌ಗಳೊಡನೆ ದಿನದಾಟ ಮುಂದುವರಿಸಿದ ಭಾರತ ‘ಡಿ’ ತಂಡದ ಎರಡನೇ ಇನಿಂಗ್ಸ್‌ 305 ರನ್‌ಗಳಿಗೆ ಕೊನೆಗೊಂಡಿತು. ಇದರಿಂದಾಗಿ ಗೆಲುವಿಗೆ ಸುಮಾರು 70 ಓವರುಗಳಲ್ಲಿ 373 ರನ್ ಗಳಿಸುವ ಗುರಿಯನ್ನು ‘ಬಿ’ ತಂಡ ಎದುರಿಸಿತು. ನಂತರ ಅರ್ಷದೀಪ್ ಮತ್ತು ಆದಿತ್ಯ ಅವರು ಬದಲಾವಣೆಯಿಲ್ಲದೇ ಬೌಲಿಂಗ್‌ ಮಾಡಿ ಅಭಿಮನ್ಯು ಈಶ್ವರನ್ ಸಾರಥ್ಯದ ‘ಬಿ’ ತಂಡದ ಆಟಕ್ಕೆ ಬೇಗನೇ ತೆರೆಯೆಳೆದರು. ಸೂರ್ಯಕುಮಾರ್ ಯಾದವ್ (16) ಮತ್ತೆ ನಿರಾಶೆ ಮೂಡಿಸಿದರು. ಮುಶೀರ್ ಖಾನ್ ಕೂಡ ಖಾತೆ ತೆರೆಯಲಿಲ್ಲ. ನಿತೀಶ್ ಕುಮಾರ್‌ ರೆಡ್ಡಿ 43 ಎಸೆತಗಳಲ್ಲಿ 40 ರನ್ ಬಾರಿಸಿದ್ದೇ ತಂಡದ ಪರ ಅತ್ಯಧಿಕ ಮೊತ್ತ ಎನಿಸಿತು. ‘ಡಿ’ ತಂಡ ಈ ಪಂದ್ಯದಲ್ಲಿ ಆರು ಪಾಯಿಂಟ್‌ಗಳ ಹೊರತಾಗಿಯೂ ಕೊನೆಯ ಸ್ಥಾನದಲ್ಲೇ ಉಳಿಯಿತು. ಶನಿವಾರ ಅಜೇಯ 90 ರನ್ ಗಳಿಸಿದ್ದ ರಿಕಿ ಭುಯಿ 119 ರನ್ ಹೊಡೆದು ಔಟಾಗದೇ ಉಳಿದು ಟೂರ್ನಿಯಲ್ಲಿ ಎರಡನೇ ಶತಕವನ್ನು ಗಳಿಸಿದರು. ಮೊದಲ ಇನಿಂಗ್ಸ್‌ನಲ್ಲಿ 56 ರನ್ ಗಳಿಸಿದ ಅವರು ಪಂದ್ಯದ ಆಟಗಾರ ಎನಿಸಿದರು. ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಭಾರತ ‘ಡಿ’: 349; ಭಾರತ ಬಿ: 282; ಎರಡನೇ ಇನಿಂಗ್ಸ್‌: ಭಾರತ ‘ಡಿ’: 58.3 ಓವರುಗಳಲ್ಲಿ 305 (ರಿಕಿ ಭುಯಿ 119; ಮುಕೇಶ್ ಕುಮಾರ್ 98ಕ್ಕೆ4 ನವದೀಪ್ ಸೈನಿ 58ಕ್ಕೆ3); ಭಾರತ ಬಿ: 22.2 ಓವರುಗಳಲ್ಲಿ 115 (ನಿತೀಶ್‌ ಕುಮಾರ್‌ ರೆಡ್ಡಿ 40; ಅರ್ಷದೀಪ್ ಸಿಂಗ್‌ 40ಕ್ಕೆ6 ಆದಿತ್ಯ ಠಾಕ್ರೆ 59ಕ್ಕೆ4). ಭಾರತ ‘ಡಿ’ಗೆ 257 ರನ್ ಜಯ 6 ಅಂಕ. ಭಾರತ ‘ಬಿ‘: 0

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT