ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಅಂಶುಮಾನ್ ಗಾಯಕವಾಡ್ ಇನ್ನಿಲ್ಲ

ದೀರ್ಘ ಕಾಲದಿಂದ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಕ್ರಿಕೆಟಿಗರ
Published : 31 ಜುಲೈ 2024, 20:04 IST
Last Updated : 31 ಜುಲೈ 2024, 20:04 IST
ಫಾಲೋ ಮಾಡಿ
Comments

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಅಂಶುಮಾನ್ ಗಾಯಕವಾಡ್ (71) ಬುಧವಾರ ನಿಧನರಾದರು. ಅವರು ದೀರ್ಘಕಾಲದಿಂದ ರಕ್ತದ ಕ್ಯಾನ್ಸರ್‌ನಿಂದ ಬಳಲಿದ್ದರು. 

‌ಲಂಡನ್‌ನ ಕಿಂಗ್ಸ್ ಕಾಲೇಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಹೋದ ತಿಂಗಳು ಭಾರತಕ್ಕೆ ಮರಳಿದ್ದರು. ಅವರ ಚಿಕಿತ್ಸೆಗಾಗಿ ಈಚೆಗಷ್ಟೇ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ₹ 1 ಕೋಟಿ ನೆರವು ನೀಡಿತ್ತು. 

ಬಲಗೈ ಬ್ಯಾಟರ್ ಆಗಿದ್ದ ಗಾಯಕವಾಡ್ ಅವರು ಭಾರತ ತಂಡದಲ್ಲಿ 40 ಟೆಸ್ಟ್ ಮತ್ತು 15 ಏಕದಿನ ಪಂದ್ಯಗಳಲ್ಲಿ ಆಡಿದ್ದರು.  206 ಪ್ರಥಮ ದರ್ಜೆ ಪಂದ್ಯಗಳಲ್ಲಿಯೂ ಆಡಿದ್ದರು. 1975 ರಿಂದ 1987ರ ಅವಧಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. 

ಅಂಶುಮನ್ ಅವರು ಭಾರತ ತಂಡದ ಕೋಚ್ ಆಗಿಯೂ ಕಾರ್ಯನಿರ್ವಹಿಸಿದ್ದರು. ಶಾರ್ಜಾದಲ್ಲಿ 1998ರಲ್ಲಿ ನಡೆದಿದ್ದ ಟೂರ್ನಿ ಮತ್ತು 1999ರಲ್ಲಿ ದೆಹಲಿಯಲ್ಲಿ ಅನಿಲ್ ಕುಂಬ್ಳೆ 10 ವಿಕೆಟ್ ಗಳಿಸಿದ್ದ   ಟೆಸ್ಟ್ ಪಂದ್ಯದ ಸಂದರ್ಭದಲ್ಲಿ  ಅಂಶುಮಾನ್ ಕೋಚ್ ಆಗಿದ್ದರು.  ಅವರ ಅವಧಿಯಲ್ಲಿ  ಆಫ್‌ಸ್ಪಿನ್ನರ್ ಹರಭಜನ್ ಸಿಂಗ್ ಅವರೂ  ಪದಾರ್ಪಣೆ ಮಾಡಿದ್ದರು. 

ದಿಟ್ಟ ಬ್ಯಾಟರ್: ಕ್ರಿಕೆಟ್‌ನಲ್ಲಿ ಬ್ಯಾಟರ್‌ಗಳಿಗೆ ಹೆಲ್ಮೆಟ್ ಕಡ್ಡಾಯವಾಗುವ ಮುಂಚಿನ ಕಾಲಘಟ್ಟದಲ್ಲಿ ದಿಟ್ಟ ಆರಂಭಿಕ  ಆಟಗಾರನಾಗಿ ಗುರುತಿಸಿಕೊಂಡಿದ್ದರು. ಅವರು ಸುನಿಲ್ ಗಾವಸ್ಕರ್ ಜೊತೆಗೆ ಇನಿಂಗ್ಸ್‌ ಆರಂಭಿಸುತ್ತಿದ್ದರು. ಆರಂಭಿಕ ಬ್ಯಾಟರ್ ಸ್ಥಾನಕ್ಕಾಗಿ ಅವರು ಚೇತನ್ ಚೌಹಾಣ್‌ ಅವರೊಂದಿಗಿನ ಪೈಪೋಟಿ ಕ್ರಿಕೆಟ್ ವಲಯದಲ್ಲಿ ಈಗಲೂ ಚರ್ಚೆಯ ವಿಷಯವಾಗಿದೆ. 

ಜಲಂಧರ್‌ನಲ್ಲಿ ನಡೆದಿದ್ದ ಟೆಸ್ಟ್‌ನಲ್ಲಿ ಅವರು ಇಮ್ರಾನ್‌ ಖಾನ್ ನಾಯಕತ್ವದ ಪಾಕಿಸ್ತಾನದ ಎದುರು ದ್ವಿಶತಕ ಗಳಿಸಿದ್ದರು. ಆ ಸಮಯದಲ್ಲಿ ಅತಿ ನಿಧಾನಗತಿಯ ದ್ವಿಶತಕವೆಂದು ದಾಖಲಾಗಿತ್ತು. 

1976ರಲ್ಲಿ ಜಮೈಕಾದ ಸಬಿನಾ ಪಾರ್ಕ್‌ನಲ್ಲಿ ವೆಸ್ಟ್ ಇಂಡೀಸ್ ಎದುರಿನ ಟೆಸ್ಟ್‌ನಲ್ಲಿ ದೈತ್ಯ ಬೌಲರ್ ಮೈಕೆಲ್ ಹೋಲ್ಡಿಂಗ್ ಅವರ ಬೌನ್ಸರ್‌ ಗಾಯಕವಾಡ್ ಅವರ ಕಿವಿಗೆ ತಗುಲಿ ಗಾಯವಾಗಿತ್ತು. ಅವರ ಕಿವಿಯಿಂದ ರಕ್ತ ಒಸರಿತ್ತು. ಪಂದ್ಯದ ನೋಡಲು ಬಂದಿದ್ದ ಸ್ಥಳೀಯ ಅಭಿಮಾನಿಗಳು, ‘ಕಿಲ್ ಹಿಮ್ ಮಾನ್‌.. ಕಿಲ್‌ ಹಿಮ್ ಮೈಕಿ ಎಂದು ಕೂಗಿದ್ದರು ’ ಎಂದು ಗಾವಸ್ಕರ್ ಕೆಲವು ಕಾರ್ಯಕ್ರಮಗಳಲ್ಲಿ ನೆನಪಿಸಿಕೊಂಡಿದ್ದಾರೆ. 

ಅಂಶುಮನ್ ಅವರು ರಾಷ್ಟ್ರೀಯ ತಂಡದ ಆಯ್ಕೆಗಾರರಾಗಿ, ಬರೋಡಾ ಕ್ರಿಕೆಟ್ ಸಂಸ್ಥೆಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು. ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸದಸ್ಯರಾಗಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT