ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರೀಲಂಕಾ ಪ್ರವಾಸ: ಟಿ20 ಸರಣಿಗೆ ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯ ನಾಯಕ

ಏಕದಿನ ಸರಣಿಗೆ ಅಲಭ್ಯ
Published 16 ಜುಲೈ 2024, 13:31 IST
Last Updated 16 ಜುಲೈ 2024, 13:31 IST
ಅಕ್ಷರ ಗಾತ್ರ

ನವದೆಹಲಿ: ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯ ಅವರು ಶ್ರೀಲಂಕಾ ವಿರುದ್ಧ ಜುಲೈ 27ರಂದು ಆರಂಭವಾಗುವ ಮೂರು ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿಗೆ ನಾಯಕರಾಗಿದ್ದಾರೆ. ಆದರೆ ನಂತರ ನಡೆಯುವ ಏಕದಿನ ಸರಣಿಗೆ ಅವರು ಲಭ್ಯರಿರುವುದಿಲ್ಲ.

‌ಟಿ20 ಪಂದ್ಯಗಳು ಜುಲೈ 27, 28 ಮತ್ತು 30ರಂದು ಪೆಲ್ಲೆಕೆಲ್ಲೆಯಲ್ಲಿ ನಡೆಯಲಿವೆ. ಮೂರು ಏಕದಿನ ಪಂದ್ಯಗಳು, ಆಗಸ್ಟ್‌ 2, 4 ಮತ್ತು 7ರಂದು ನಿಗದಿಯಾಗಿವೆ.

ಟಿ20 ವಿಶ್ವಕಪ್‌ ಗೆದ್ದ ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರಾದ ಪಾಂಡ್ಯ, ಏಕದಿನ ಸರಣಿಗೆ ‘ವೈಯಕ್ತಿಕ ಕಾರಣ’ಗಳಿಂದ ಅಲಭ್ಯರಾಗಿದ್ದಾರೆ. ‌

‘ಪಾಂಡ್ಯ ಸಂಪೂರ್ಣವಾಗಿ ಫಿಟ್‌ ಆಗಿದ್ದು, ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ’ ಎಂದು ಬಿಸಿಸಿಐನ  ಮೂಲವೊಂದು ಪಿಟಿಐಗೆ ತಿಳಿಸಿದೆ. ಇತ್ತೀಚಿನ ವಿಶ್ವಕಪ್‌ ಫೈನಲ್ ನಂತರ ರೋಹಿತ್‌ ಶರ್ಮಾ ಅವರು ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.

ಟಿ20 ತಂಡದ ಉಪನಾಯಕ ಯಾರೆಂದು ಸ್ಪಷ್ಟವಾಗಿಲ್ಲ. ಜಿಂಬಾಬ್ವೆ ವಿರುದ್ಧ 4–1ರಲ್ಲಿ ಸರಣಿ ಗೆದ್ದ ತಂಡದ ನಾಯಕರಾಗಿದ್ದ ಶುಭಮನ್ ಗಿಲ್ ಮತ್ತು ಕಳೆದ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಗೆ ನಾಯಕರಾಗಿದ್ದ ಸೂರ್ಯಕುಮಾರ್ ಯಾದವ್‌ ಇವರಲ್ಲಿ ಒಬ್ಬರು ಉಪನಾಯರಾಗುವ ಸಾಧ್ಯತೆ ದಟ್ಟವಾಗಿದೆ.

ಏಕದಿನ ಸರಣಿಗೆ ಪಾಂಡ್ಯ ಅವರು ಈಗಾಗಲೇ ವಿರಾಮ ಕೇಳಿದ್ದಾರೆ. ನಾಯಕ ರೋಹಿತ್ ಶರ್ಮಾ ಅವರಿಗೂ ಮಾಹಿತಿ ನೀಡಿದ್ದಾರೆ ಎಂದು ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.

ಏಕದಿನ ಸರಣಿಗೆ ನಾಯಕಪಟ್ಟ ಕೆ.ಎಲ್‌.ರಾಹುಲ್‌ ಅಥವಾ ಗಿಲ್‌ ಇವರಲ್ಲಿ ಒಬ್ಬರಿಗೆ ಒಲಿಯಬಹುದು.

ದುಲೀಪ್‌–ವಲಯ ಆಯ್ಕೆ ಸಮಿತಿ ಇಲ್ಲ:

ರಾಷ್ಟ್ರೀಯ ತಂಡದ ಕರ್ತವ್ಯದಲ್ಲಿಲ್ಲದ ವೇಳೆ, ಭಾರತ ತಂಡದ ಪ್ರಮುಖ ಆಟಗಾರರೂ ದೇಶಿಯ ಟೂರ್ನಿಯಲ್ಲಿ ಆಡಬೇಕೆಂದು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಹೇಳಿದ್ದಾರೆ. ಇದರ ನಡುವೆಯೂ ಅಪವಾದವೆನ್ನುವಂತೆ ರೋಹಿತ್, ವಿರಾಟ್ ಕೊಹ್ಲಿ, ಜಸ್‌ಪ್ರೀತ್ ಬೂಮ್ರಾ ಅವರಂಥ ಆಟಗಾರರಿಗೆ ರಿಯಾಯಿತಿ ದೊರೆತಿದೆ.

ಆದರೆ ಟೆಸ್ಟ್‌ ಪರಿಣತ ಆಟಗಾರರು, ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್‌ ಸರಣಿಗೆ ಪೂರ್ವಭಾವಿಯಾಗಿ ಆಗಸ್ಟ್‌ನಲ್ಲಿ ನಡೆಯಲಿರುವ ದುಲೀಪ್‌ ಟ್ರೋಫಿಯಲ್ಲಿ ಒಂದೆರಡು ಪಂದ್ಯಗಳನ್ನಾದರೂ ಆಡಬೇಕು ಎಂದು ಬಿಸಿಸಿಐ ಬಯಸಿದೆ. ಈ ಬಾರಿ ದುಲೀಪ್‌ ಟ್ರೋಫಿಗೆ ವಲಯ ಮಟ್ಟದ ಆಯ್ಕೆ ಸಮಿತಿ ಇರುವುದಿಲ್ಲ. ರಾಷ್ಟ್ರೀಯ ಆಯ್ಕೆ ಸಮಿತಿಯೇ ದುಲೀಪ್‌ ಟ್ರೋಫಿಗೆ ತಂಡಗಳ ಆಯ್ಕೆ ಮಾಡಲಿದೆ.

ಟೆಸ್ಟ್‌ ತಂಡಕ್ಕೆ ರೇಸ್‌ನಲ್ಲಿರುವವರನ್ನು ದುಲೀಪ್‌ ಟ್ರೋಫಿ ಆಯ್ಕೆ ಮಾಡಲಾಗುವುದು. ರೋಹಿತ್‌, ವಿರಾಟ್ ಮತ್ತು ಬೂಮ್ರಾ ಅವರಿಗೆ ಸಂಬಂಧಿಸಿದಂತೆ ಆಡಬೇಕೇ, ಬೇಡವೇ ಎಂಬುದನ್ನು ಅವರಿಗೆ ಬಿಡಲಾಗುವುದು ಎಂದು ಮೂಲವೊಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT